ಖಾನಾಪುರ:ಬೀಡಿಯಲ್ಲಿ ರೈತರ ಸಮಸ್ಯೆಗಳ ಕುರಿತ ಚರ್ಚಾ ಸಮಾವೇಶ
ಬೀಡಿಯಲ್ಲಿ ರೈತರ ಸಮಸ್ಯೆಗಳ ಕುರಿತ ಚರ್ಚಾ ಸಮಾವೇಶ
ಖಾನಾಪುರ ಜ 21: ತಾಲೂಕಿನ ಬೀಡಿ ಗ್ರಾಮದ ಪ್ರವಾಸಿ ಮಂದಿರದ ಆವರಣದಲ್ಲಿ ಶನಿವಾರ ರೈತರ ಸಮಸ್ಯೆಗಳ ಕುರಿತು ಚರ್ಚಾ ಸಮಾವೇಶ ಜರುಗಿತು.
ರೈತರ ಕಬ್ಬು ನುರಿಸುತ್ತಿರುವ ರಾಜ್ಯದ ಬೇರೆ ಬೇರೆ ಸಕ್ಕರೆ ಕಾರಖಾನೆಗಳು ಕೆಲವು 2500,2700,3000 ರೂ.ಗಳನ್ನು ಟನ್ ಒಂದಕ್ಕೆ ನೀಡುತ್ತಿದ್ದು ರೈತರಿಗೆ ತುಂಬಾ ನಷ್ಠವಾಗುತ್ತಿದೆ. ಏಕರೂಪದ ಬಿಲ್ ಅಂದರೆ ರೂ.3150 ಪ್ರತಿ ಟನ್ ಕಬ್ಬಿಗೆ ನೀಡಬೇಕು,ಬ್ಯಾಕಿನ ಅಧಿಕಾರಿಗಳು ಸಾಲಮಾಡಿದ ರೈತರ ಬಾಗಿಲಿಗೆ ಬಂದು ಸಾಲ ತುಂಬಲು ಒತ್ತಾಯಿಸುತ್ತಿರುವುದು ಮತ್ತು ಬ್ಯಾಂಕ್ ನೋಟೀಸು ನೀಡಿ ಕಿರುಕುಳ ನೀಡುವುದನ್ನು ತಡೆಯಬೇಕು,ಸಕ್ಕರೆ ಕಾರಖಾನೆಗಳು ಬಾಕಿ ಉಳಿಸಿಕೊಂಡ ಬಿಲ್‍ನ್ನು ಬೇಗ ಕೊಡಿಸಬೇಕು ಮತ್ತು ಕಬ್ಬಿನ ಹಣವನ್ನು ಸಾಲದ ಖಾತೆಗಳಿಗೆ ಮುರಿದುಕೊಳ್ಳುವುದನ್ನು ತಡೆಯಬೇಕು.
ರಾಜ್ಯ ಮತ್ತು ಕೇಂದ್ರ ಸರಕಾರಗಳು ರೈತರ ಸಂಪೂರ್ಣ ಸಾಲವನ್ನು ಮನ್ನಾ ಮಾಡಬೇಕು,ಮಹದಾಯಿ-ಕಳಸಾಬಂಡೂರಿ ಯೋಜನೆಯನ್ನು ಮೂರೂ ಪಕ್ಷಗಳು ತಮ್ಮ ರಾಜಕೀಯ ಲಾಭಕ್ಕೆ ಬಳಸಿಕೊಂಡು ರೈತರ ಹಿತವನ್ನು ಬಲಿಕೊಡಬಾರದು,ಪಕ್ಷಭೇದ ಮರೆತು ಒಂದಾಗಿ ರೈತರ ಬಹುದಿನಗಳ ಬೇಡಿಕೆಯಾದ ಮಹದಾಯಿ ಕುಡಿವ ನೀರಿನ ನಮ್ಮ ಪಾಲು ನಮಗೆ ಸಿಗುವಂತೆ ರಾಜಕೀಯ ಇಚ್ಛಾಶಕ್ತಿಯನ್ನು ಪ್ರದರ್ಶಿಸಬೇಕು ಎಂದು ಜಿಲ್ಲಾ ರೈತ ಸಂಘ ಅಧ್ಯಕ್ಷ ರಾಘವೇಂದ್ರ ನಾಯಕ,ಹಸಿರು ಸೇನೆಯ ಜಿಲ್ಲಾ ಅಧ್ಯಕ್ಷ ಅಶೋಕ ಯಮಕನಮರಡಿ ಮತ್ತು ತಾಲೂಕಾ ಅಧ್ಯಕ್ಷ ಗುರುಲಿಂಗಯ್ಯ ಪೂಜೇರ ಸರಕಾರವನ್ನು ಒತ್ತಾಯಿಸಿದರು. ರೈತರು ಒಕ್ಕೊರಲಿನ ಒಮ್ಮತದ ನಿರ್ಣಯಗಳನ್ನು ಕೈಕೊಂಡು ಸರಕಾರಕ್ಕೆ ಮನವಿ ನೀಡಲು ಸೋಮವಾರ ಜಿಲ್ಲಾಧಿಕಾರಿಗಳಿಗೆ ತಮ್ಮ ಅಳಲು ತೋಡಿಕೊಂಡು ಮನವಿ ಸಲ್ಲಿಸಲು ಹೋಗುವುದಾಗಿ ನಿರ್ಧರಿಸಿದರು.
ಸಭೆಯಲ್ಲಿ ಯಲ್ಲಪ್ಪ ಚನ್ನಾಪೂರ, ಶಿವಾನಂದ ಅಂಬಡಗಟ್ಟಿ, ಶಿವಾನಂದ ಲಗಳಿ, ಗಂಗಪ್ಪ ಹಿರೆಕರ, ವೀರೇಶ ಮಂಡೆದ ಮುಂತಾದ ಅನೇಕ ರೈತರು ಉಪಸ್ಥಿತರಿದ್ದರು.