ರಾಯಬಾಗ: ಅಕ್ರಮ ಸರಾಯಿ ಮಾರಾಟ ತಡೆಗೆ ಆಗ್ರಹ: ಮೇಖಳಿ ಗ್ರಾಮದ ಮಹಿಳೆಯರಿಂದ ತಹಶೀಲ್ದಾರಗೆ ಮನವಿ
ಅಕ್ರಮ ಸರಾಯಿ ಮಾರಾಟ ತಡೆಗೆ ಆಗ್ರಹ: ಮೇಖಳಿ ಗ್ರಾಮದ ಮಹಿಳೆಯರಿಂದ ತಹಶೀಲ್ದಾರಗೆ ಮನವಿ
ರಾಯಬಾಗ ಮೇ 19 : ತಾಲೂಕಿನ ಮೇಖಳಿ ಗ್ರಾಮದಲ್ಲಿ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿ, ಅವ್ಯಾಹವಾಗಿ ನಡೆಯುತ್ತಿರುವ ಅಕ್ರಮ ಸರಾಯಿ ಮಾರಾಟವನ್ನು ತಡೆಯಬೇಕೆಂದು ಒತ್ತಾಯಿಸಿ
ಗ್ರಾಮದ ಮಹಿಳೆಯರು, ವಿವಿಧ ಸಂಘಟನೆಗಳ ಸಂಯುಕ್ತಾಶ್ರಯದಲಿ ಮಂಗಳವಾರ ದಂದು ಗ್ರಾಮ ಪಂಚಾಯತ ಕಾರ್ಯಾಲಯಕ್ಕೆ ಬೀಗ ಜಡಿದು ಪ್ರತಿಭಟಿಸಲಾಯಿತು.
ಗ್ರಾಮದ ಕಿರಾಣಿ ಅಂಗಡಿ, ಪಾನ್ ಶಾಪ್ ಅಂಗಡಿಗಳಲ್ಲಿ ಅಕ್ರಮ ಸಾರಾಯಿ ಮಾರಾಟ ಮಾಡುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಯಾವದೇ ಕಠಿಣ ಕ್ರಮ ಕೈಗೊಳ್ಳದೆ, ಪರೋಕ್ಷವಾಗಿ ಅಕ್ರಮ ಸಾರಾಯಿ ಮಾರಾಟ ಮಾಡಲು ಕುಮ್ಮಕ್ಕು ನೀಡುತ್ತಿದ್ದಾರೆಂದು ಮಹಿಳೆಯರು ಆರೋಪಿಸಿದರು. ಯುವಕರು ದುಡಿದ ಹಣವನ್ನು ಸಾರಾಯಿ ಕುಡಿಯಲು ವ್ಯಯಿಸುತ್ತಿದ್ದು, ನಮ್ಮ ಸಂಸಾರಗಳು ಬೀದಿ ಪಾಲಾಗುತ್ತಿವೆ. ಕೂಡಲೇ ಅಧಿಕಾರಿಗಳು ಗ್ರಾಮದಲ್ಲಿ ಅಕ್ರಮ ಸಾರಾಯಿಯನ್ನು ಬಂದ ಮಾಡಿಸಬೇಕೆಂದು ಮಹಿಳೆಯರು ಒತ್ತಾಯಿಸಿದ್ದರಲ್ಲದೆ ಗ್ರಾಮದಲ್ಲಿ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ಸಾರ್ವಜನಿಕ ಶೌಚಾಲಯ, ಚರಂಡಿ ವ್ಯವಸ್ಥೆ, ಬೀದಿ ದೀಪ ಅವಳವಡಿಕೆ, ತೋಟಪಟ್ಟಿಗಳಲ್ಲಿ ಕುಡಿಯುವ ನೀರಿನ ಪೂರೈಕೆ, ಸರ್ಕಾರಿ ಆರೋಗ್ಯ ಉಪಕೇಂದ್ರ, ಶುದ್ಧ ಕುಡಿಯುವ ನೀರಿನ ಘಟಕ, ರಸ್ತೆಗಳ ಡಾಂಬರೀಕರಣ ಸೇರಿದಂತೆ ಇನ್ನು ಹಲವಾರು ಸಮಸ್ಯೆಗಳಿಂದ ಗ್ರಾಮ ವಂಚಿತವಾಗಿದ್ದು, ಈ ಎಲ್ಲ ಸೌಕರ್ಯಗಳನ್ನು ಗ್ರಾಮಕ್ಕೆ ಕಲ್ಪಿಸಿ ಕೊಡುವಂತೆ ಸಂಬಂದಪಟ್ಟ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಸಲ್ಲಿಸಿದರೂ ಯಾವುದೆ ಪ್ರಯೋಜವಾಗಲ್ಲ ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಮನವಿ ಸ್ವೀಕರಿಸಲು ಗ್ರಾಮಲೇಕ್ಕಾಧಿಕಾರಿ ಎಮ್.ವಿ.ದಶವಂತ ಮುಂದಾದಾಗ ಇದಕ್ಕೆ ಒಪ್ಪದ ಪ್ರತಿಭಟನಾಕಾರರು ರಾಯಬಾಗ ತಹಶೀಲ್ದಾರ ಬರುವವರೆಗೆ ಪ್ರತಿಭಟನೆ ಹಿಂಪಡೆಯುವುದಿಲ್ಲವೆಂದು ಹಟ ಹಿಡಿದ್ದರಿಂದ ಪ್ರತಿಭಟನಾಕಾರರನ್ನು ಸಮಾಧಾನ ಪಡಿಸಲು ಬಂದ ಪಿಡಿಓ ಬಿ.ಎಸ್.ಕಾಂಬಳೆ ಅವರನ್ನು ಪ್ರತಿಭಟನಾಕಾರರು ಘೇರಾವ ಹಾಕಿದ ಘಟನೆ ನಡೆಯಿತು. ವಿಷಯ ತಿಳಿದು ಮಧ್ಯಾಹ್ನ ಗ್ರಾಮಕ್ಕೆ ಆಗಮಿಸಿದ ರಾಯಬಾಗ ತಹಶೀಲ್ದಾರ ಕೆ.ಎನ್.ರಾಜಶೇಖರ, ಗ್ರಾಮದಲ್ಲಿರುವ ಸಮಸ್ಯೆಗಳಿಗೆ ತ್ವರಿತವಾಗಿ ಪರಿಹಾರ ಒದಗಿಸಲಾಗುವುದು. ಅಕ್ರಮ ಸಾರಾಯಿ ಮಾರಾಟ ಮಾಡುವವರ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಅಬಕಾರಿ ಅಧಿಕಾರಿಗಳಿಗೆ ಸೂಚಿಸುವುದಾಗಿ ಹೇಳಿದರು. ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಇರುವ ತೋಟಪಟ್ಟಿಗಳಿಗೆ ಇನ್ನು ಹೆಚ್ಚಿನ ನೀರಿನ ಟ್ಯಾಂಕರ್ ಮೂಲಕ ಸರಬರಾಜು ಮಾಡುವುದಾಗ ಭರವಸೆ ನೀಡಿದ ನಂತರ ಪ್ರತಿಭಟನಾಕಾರರ ತಮ್ಮ ಪ್ರತಿಭಟನೆ ಹಿಂಪಡೆದರು.
ತಾಲೂಕಾ ವೈದ್ಯಾಧಿಕಾರಿ ಎಮ್.ಎಸ್.ಕೊಪ್ಪದ ಮಾತನಾಡಿ, ಗ್ರಾಮದ ಸರ್ಕಾರಿ ಆರೋಗ್ಯ ಉಪಕೇಂದ್ರದಲ್ಲಿ ನಡೆಯುತ್ತಿರುವ ಅನೈತಿಕ ಚಟುವಟಿಕೆಗಳ ಕುರಿತು ಪರಿಶೀಲನೆ, ಆಸ್ಪತ್ರೆಯನ್ನು ಸ್ವಚ್ಛಗೊಳಿಸುವಂತೆ ಪಿಡಿಓ ಅವರಿಗೆ ಸೂಚಿಸಿ, ವಾರದಲ್ಲಿ ಒಂದು ದಿನ ಒಬ್ಬರು ವೈದ್ಯರನ್ನು ಕಳಿಸಿಕೊಡುವುದಾಗಿ ಭರವಸೆ ನೀಡಿದರು.
ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಡಿ.ಎಂ.ಜಕ್ಕಪ್ಪಗೋಳ, ನಿಂಗಪ್ಪಾ ಪೂಜಾರಿ, ಯಲ್ಲಪ್ಪಾ ನಾಯಿಕ, ಪುಂಡಲೀಕ ಪೂಜಾರಿ, ಸಂಜು ದೇಸಾಯಿ, ಸುಖದೇವ ನಾಯಿಕ, ರೇಣುಕಾ ನಾಯಿಕ, ಸೇವಂತಿ ಪೂಜಾರಿ, ಸಿದ್ದವ್ವಾ ಬಟನೂರೆ ಸೇರಿದಂತೆ ಗ್ರಾಮಸ್ಥರು, ಮಹಿಳೆಯರು ವಿವಿಧ ಸಂಘಟನೆಯ ಕಾರ್ಯಕರ್ತರು ಉಪಸ್ಥಿತರಿದ್ದರು.
ವರದಿ: ರಂಜೀತ.ಕಾಂಬಳೆ