ಗೋಕಾಕ:ವ್ಯವಸ್ಥಾಪಕ ನಿರ್ದೇಶಕರಾಗಿ ನೇಮಕಗೊಂಡ ಡಾ| ಬಿ.ಎಸ್.ಜಂಬಗಿಗೆ ಸನ್ಮಾನ
ವ್ಯವಸ್ಥಾಪಕ ನಿರ್ದೇಶಕರಾಗಿ ನೇಮಕಗೊಂಡ ಡಾ| ಬಿ.ಎಸ್.ಜಂಬಗಿಗೆ ಸನ್ಮಾನ
ಗೋಕಾಕ ಜ 24 : ಕುರಿ ಕಾಯುವ ಕುರುಬನ ಮಗ ಈಗ ರಾಜ್ಯ ಮಟ್ಟದ ಕುರಿ ಮಹಾ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕರಾಗಿ ಡಾ| ಬಿ.ಎಸ್.ಜಂಬಗಿ ನೇಮಕಗೊಂಡಿದ್ದು ಹೆಮ್ಮೆಯ ವಿಷಯವಾಗಿದೆ ಎಂದು ಕರ್ನಾಟಕ ಪಶುವೈದ್ಯಕೀಯ ಸಂಘ ಬೆಳಗಾವಿಯ ಅಧ್ಯಕ್ಷರಾದ ಡಾ| ಮೋಹನ ಕಮತ ಅವರು ಹೇಳಿದರು.
ಅವರು ಮಂಗಳವಾರದಂದು ಬೆಳಗಾವಿಯ ಪಶು ವೈದ್ಯಕೀಯ ಭವನದಲ್ಲಿ ನಡೆದ ಸನ್ಮಾನ ಸಮಾರಂಭದಲ್ಲಿ ಡಾ| ಬಿ.ಎಸ್.ಜಂಬಗಿ ಅವರನ್ನು ಸನ್ಮಾನಿಸಿ ಮಾತನಾಡಿದರು.
ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಹಾರೂಗೇರಿ ಗ್ರಾಮದವರಾದ ಡಾ| ಬಿ.ಎಸ್.ಜಂಬಗಿ ಅವರು ಗ್ರಾಮೀಣ ಪ್ರದೇಶದಲ್ಲಿ ಬಡ ಕುಟುಂಬದಲ್ಲಿ ಜನಿಸಿದ ಅವರು ಬೆಂಗಳೂರಿನ ಪಶು ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಪಶು ವೈದ್ಯಕೀಯ ಪದವಿಯನ್ನು ಪಡೆದುಕೊಂಡು ಬೆಳಗಾವಿ ಜಿಲ್ಲೆಯಲ್ಲಿ ಕಳೆದ 20 ವರ್ಷಗಳ ಸುಧೀರ್ಘ ಸೇವೆಯನ್ನು ಸಲ್ಲಿಸಿದ್ದು ಈಗ ರಾಜ್ಯ ಮಟ್ಟದ ಕುರಿ ಮಹಾಮಂಡಳಿಯ ವ್ಯವಸ್ಥಾಪಕ ನಿರ್ದೇಶಕರಾಗಿ ಬೆಂಗಳೂರಿನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಪಶು ಇಲಾಖೆಯ ವೈದ್ಯಕೀಯ ಸಿಬ್ಬಂದಿಗಳಿಗೆ ಮಾರ್ಗದರ್ಶಕರಾಗಿದ್ದಾರೆ ಎಂದರಲ್ಲದೇ ಬೆಳಗಾವಿ ಜಿಲ್ಲೆಯ ಅಧಿಕಾರಿಯೊಬ್ಬರು ನೇಮಕಗೊಂಡಿದ್ದು ಹರ್ಷದಾಯಕವಾಗಿದೆ. ಅವರಿಗೆ ಕರ್ನಾಟಕ ಪಶುವೈದ್ಯಕೀಯ ಸಂಘದ ವತಿಯಿಂದ ಅಭಿನಂದನೆ ಸಲ್ಲಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ| ಬಿ.ಎಸ್.ಜಂಬಗಿ ಅವರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವೈದ್ಯಾಧಿಕಾರಿಗಳಿಗೆ ದೊರೆಯುವ ವಿಶೇಷ ಭತ್ಯೆಯನ್ನು ಪಶು ವೈದ್ಯಾಧಿಕಾರಿಗಳಿಗೆ ನೀಡಲು ನಾನು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಬೆಳಗಾವಿ ಜಿಲ್ಲೆಯ ಎಲ್ಲ ಪಶು ವೈದ್ಯಾಧಿಕಾರಿಗಳ ಕಾರ್ಯವನ್ನು ಶ್ಲಾಘಿಸಿದರು.
ಈ ಸಂದರ್ಭದಲ್ಲಿ ಗೌರವಾಧ್ಯಕ್ಷ ಡಾ| ಎ.ಕೆ.ಚಂದ್ರಶೇಖರ, ಡಾ| ಗಾಂವಿ, ಡಾ| ಗಂಗರೆಡ್ಡಿ, ಡಾ| ಕೌಜಲಗಿ ಸೇರಿದಂತೆ ಪಶು ವೈದ್ಯಾಧಿಕಾರಿಗಳು, ಸಿಬ್ಬಂದಿ ವರ್ಗದವರು ಇದ್ದರು.