RNI NO. KARKAN/2006/27779|Thursday, December 12, 2024
You are here: Home » breaking news » ಮೂಡಲಗಿ:ಎಲ್ಲರೂ ಒಗ್ಗೂಡಿ ಒಂದಾದರೆ ಮಾತ್ರ ಗ್ರಾಮಗಳು ಸುಧಾರಣೆಯಾಗುವವು : ಶಾಸಕ ಬಾಲಚಂದ್ರ

ಮೂಡಲಗಿ:ಎಲ್ಲರೂ ಒಗ್ಗೂಡಿ ಒಂದಾದರೆ ಮಾತ್ರ ಗ್ರಾಮಗಳು ಸುಧಾರಣೆಯಾಗುವವು : ಶಾಸಕ ಬಾಲಚಂದ್ರ 

ಎಲ್ಲರೂ ಒಗ್ಗೂಡಿ ಒಂದಾದರೆ ಮಾತ್ರ ಗ್ರಾಮಗಳು ಸುಧಾರಣೆಯಾಗುವವು : ಶಾಸಕ ಬಾಲಚಂದ್ರ

ಮೂಡಲಗಿ ಜ 25 : ಗ್ರಾಮಸ್ಥರ ಒಗ್ಗಟ್ಟಿನಿಂದ ತಿಗಡಿ ಗ್ರಾಮದಲ್ಲಿ ಅಭಿವೃದ್ಧಿ ಕಾರ್ಯಗಳು ನೆರವೇರುತ್ತಿವೆ. ಪ್ರತಿ ಗ್ರಾಮಗಳಲ್ಲೂ ಇಂತಹ ಒಗ್ಗಟ್ಟು ಮೂಡಿದರೆ ಎಲ್ಲ ಗ್ರಾಮಗಳು ಅಭಿವೃದ್ಧಿಯಾಗುವವು. ಎಲ್ಲರೂ ಒಗ್ಗೂಡಿ ಒಂದಾದರೆ ಮಾತ್ರ ಗ್ರಾಮಗಳು ಸುಧಾರಣೆಯಾಗುವವು ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಸಮೀಪದ ತಿಗಡಿ ಗ್ರಾಮದಲ್ಲಿ ಬುಧವಾರದಂದು ವಿವಿಧ ಕಾಮಗಾರಿಗಳನ್ನು ನೆರವೇರಿಸಿ ಅವರು ಮಾತನಾಡಿದರು.
ಈ ಮೊದಲು ತಳಕಟ್ನಾಳ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿದ್ದ ತಿಗಡಿ ಗ್ರಾಮಸ್ಥರು ಪ್ರತ್ಯೇಕ ಪಂಚಾಯತಿ ರಚನೆ ಸಂಬಂಧ ಸುಮಾರು ವರ್ಷಗಳಿಂದ ಬೇಡಿಕೆ ಸಲ್ಲಿಸುತ್ತ ಬಂದಿದ್ದರು. ಪ್ರತ್ಯೇಕ ತಿಗಡಿ ಗ್ರಾಮ ಪಂಚಾಯತಿಯನ್ನು ರಚಿಸಿರುವುದರಿಂದ ಗ್ರಾಮಸ್ಥರ ಬೇಡಿಕೆಗಳಿಗೆ ಸ್ಪಂದನೆ ಮಾಡಲಾಗಿದೆ. ಹೊಸ ಗ್ರಾಮ ಪಂಚಾಯತಿ ಕಟ್ಟಡಕ್ಕೆ 40 ಲಕ್ಷ ರೂ. ಅನುದಾನ ಮಂಜೂರಾಗಿದ್ದು, ನ್ಯಾಯಾಲಯದಿಂದ ಜಾಗೆಯ ಸಂಬಂಧ ತಡೆಯಾಜ್ಞೆ ಬಂದಿರುವುದರಿಂದ ಕಾಮಗಾರಿ ವಿಳಂಬವಾಗಲಿದೆ. ಪ್ರಕರಣ ಇತ್ಯರ್ಥವಾದ ಬಳಿಕ ತಿಗಡಿ ಗ್ರಾಮದಲ್ಲಿ ಹೊಸ ಪಂಚಾಯತಿ ಕಟ್ಟಡಕ್ಕೆ ಗುದ್ದಲಿ ಪೂಜೆ ನೆರವೇರಿಸಲಾಗುವುದು ಎಂದು ಹೇಳಿದರು.
ತಿಗಡಿ ಗ್ರಾಮಸ್ಥರ ಆಶಯದಂತೆ ಗ್ರಾಮದಲ್ಲಿ ಹೊಸ ಸರ್ಕಾರಿ ಪ್ರೌಢ ಶಾಲೆಯನ್ನು ಆರಂಭಿಸಲಾಗಿದೆ. ಇದರ ಹೊಸ ಪ್ರೌಢ ಶಾಲಾ ಕಟ್ಟಡವನ್ನು ನಿರ್ಮಾಣ ಮಾಡಲಾಗುವುದು. ಕ್ಷೇತ್ರದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಒತ್ತು ನೀಡಿ ಶಿಕ್ಷಣದ ಅಮೂಲಾಗ್ರ ಬದಲಾವಣೆಗೆ ಶ್ರಮಿಸಲಾಗುತ್ತಿದೆ. ಸಮಾಜದ ಒಳತಿಗಾಗಿ ಶಿಕ್ಷಣ ಪ್ರಮುಖ ಅಸ್ತ್ರವಾಗಿದ್ದು, ಪ್ರತಿಯೊಬ್ಬರೂ ಅಕ್ಷರ ಜ್ಞಾನ ಹೊಂದಿ ಸಮಾಜದಲ್ಲಿ ಉತ್ತಮ ಸತ್ಪ್ರಜೆಗಳಾಗಿ ಬದುಕುವಂತೆ ತಿಳಿಸಿದರು.
ಹಿಂದೆಂದೂ ಕಾಣದ ಅಭಿವೃದ್ಧಿ ಕಳೆದ 14 ವರ್ಷಗಳಿಂದ ನಡೆಯುತ್ತಿದೆ. ಗ್ರಾಮಸ್ಥರ ಬೇಡಿಕೆಗಳಿಗೆ ಸ್ಪಂದಿಸುವ ಮೂಲಕ ಸರ್ಕಾರದಿಂದ ಸಿಗಬೇಕಿರುವ ಎಲ್ಲ ಸೌಲಭ್ಯಗಳನ್ನು ದೊರಕಿಸಿಕೊಡುವಲ್ಲಿ ಮಹತ್ತರ ಪಾತ್ರ ವಹಿಸಲಾಗಿದೆ. ತಿಗಡಿ ಗ್ರಾಮದ ಅಭಿವೃದ್ಧಿಗೆ ಹೆಚ್ಚಿನ ಆಧ್ಯತೆ ನೀಡಲಾಗುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದ ಸಾನಿಧ್ಯವನ್ನು ಸುಣಧೋಳಿಯ ಶಿವಾನಂದ ಸ್ವಾಮಿಗಳು ವಹಿಸಿ, ಬಾಲಚಂದ್ರ ಜಾರಕಿಹೊಳಿ ಹಾಗೂ ಜನರ ನಡುವಿನ ಸಂಬಂಧ ಅವಿನಾಭಾವದಿಂದ ಕೂಡಿದೆ. ಎಲ್ಲ ಜನರನ್ನು ಪ್ರೀತಿ ಆದರದಿಂದ ನೋಡಿಕೊಂಡು ಸಹೋದರತ್ವದಿಂದ ಎಲ್ಲ ಸಮಾಜದವರನ್ನು ಒಂದುಗೂಡಿಸಿ ಅಭಿವೃದ್ಧಿಗೆ ಕಾರಣರಾಗಿದ್ದಾರೆ. ಇಂತಹ ಜನಪರ ಹಾಗೂ ಕೊಡುಗೈ ದಾನಿ ಶಾಸಕರನ್ನು ಮತದಾರರು ಪಡೆದಿರುವುದು ಹೆಮ್ಮೆಯ ಸಂಗತಿ. ಬಾಲಚಂದ್ರ ಅವರು ತಾಯಿ-ತಂದೆಯವರನ್ನು ಸದಾ ಸ್ಮರಿಸಿಕೊಂಡು ಅವರ ನೆರಳಿನಲ್ಲಿ ಬದುಕುತ್ತಿರುವ ಇವರ ಕಾರ್ಯ ಶ್ಲಾಘನೀಯ ಹಾಗೂ ಮಾದರಿ ಕೆಲಸವೆಂದು ಪ್ರಶಂಸಿಸಿದರು.
ಅಧ್ಯಕ್ಷತೆಯನ್ನು ತಿಗಡಿ ಗ್ರಾಪಂ ಅಧ್ಯಕ್ಷೆ ಕಮಲವ್ವ ಹರಿಜನ ವಹಿಸಿದ್ದರು.
ಧುರೀಣ ಎ.ಎ. ಪರುಶೆಟ್ಟಿ, ಜಿಪಂ ಮಾಜಿ ಸದಸ್ಯ ಪರಮೇಶ್ವರ ಹೊಸಮನಿ, ತಾಪಂ ಸದಸ್ಯ ರಮೇಶ ಗಡಗಿ, ಘಯೋಮನೀಬಸ ಸಂಘದ ಅಧ್ಯಕ್ಷ ಅಶೋಕ ಖಂಡ್ರಟ್ಟಿ, ಮುಖಂಡರಾದ ವಾಯ್.ಆರ್. ಪಾಟೀಲ, ಹನಮಂತ ಅಂಬಿ, ಅಶೋಕ ಪೂಜೇರಿ, ಸಿದ್ರಾಯಿ ಬಿರಡಿ, ನಾಗಪ್ಪ ಪಾಟೀಲ, ಗ್ರಾಪಂ ಉಪಾಧ್ಯಕ್ಷ ಹನಮಂತ ಪೂಜೇರಿ, ವಿರುಪಾಕ್ಷಿ ಮೆನಸಿ, ದುಂಡಪ್ಪ ಹುಚ್ಚನ್ನವರ, ಯಲ್ಲಪ್ಪ ಹೂಲಿಕಟ್ಟಿ, ಇಸ್ಮಾಯಿಲ ಲಾಡಖಾನ, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಸಿ. ಗಂಗಾಧರ, ಅರಭಾವಿ ಶಿಶು ಅಭಿವೃದ್ಧಿ ಮತ್ತು ಯೋಜನಾ ಅಧಿಕಾರಿ ವಾಯ್.ಎಂ.ಗುಜನಟ್ಟಿ, ಪಿಡಿಓ ರಂಗಪ್ಪ ಗುಜನಟ್ಟಿ, ತಿಗಡಿ ಗ್ರಾಪಂ ಸದಸ್ಯರು, ಪ್ರಮುಖರು ಉಪಸ್ಥಿತರಿದ್ದರು.
ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಇದೇ ಸಂದರ್ಭದಲ್ಲಿ ತಲಾ 8 ಲಕ್ಷ ರೂ. ವೆಚ್ಚದ ತಿಗಡಿ ಮತ್ತು ತೋಕರಟ್ಟಿ ಗ್ರಾಮದಲ್ಲಿ ನಿರ್ಮಿಸಿದ ಅಂಗನವಾಡಿ ಕಟ್ಟಡಗಳನ್ನು ಉದ್ಘಾಟಿಸಿದರು. 4 ಲಕ್ಷ ರೂ. ವೆಚ್ಚದ ರಂಗಮಂದಿರ ಹಾಗೂ ದುರ್ಗಾದೇವಿ ದೇವಸ್ಥಾನದ ನೂತನ ಕಟ್ಟಡಕ್ಕೆ ಗುದ್ದಲಿ ಪೂಜೆ ನೆರವೇರಿಸಿದರು.

Related posts: