ಘಟಪ್ರಭಾ:ಬಡಿಗವಾಡ ಗ್ರಾಮದ ಅಭಿವೃದ್ಧಿಗೆ 1.58 ಕೋಟಿ ರೂ.ಗಳ ಅನುದಾನ ಬಿಡುಗಡೆ : ಶಾಸಕ ಬಾಲಚಂದ್ರ
ಬಡಿಗವಾಡ ಗ್ರಾಮದ ಅಭಿವೃದ್ಧಿಗೆ 1.58 ಕೋಟಿ ರೂ.ಗಳ ಅನುದಾನ ಬಿಡುಗಡೆ : ಶಾಸಕ ಬಾಲಚಂದ್ರ
ಘಟಪ್ರಭಾ ಜ 27 : ಬಡಿಗವಾಡ ಗ್ರಾಮದ ಅಭಿವೃದ್ಧಿಗೆ 1.58 ಕೋಟಿ ರೂ.ಗಳ ಅನುದಾನ ಬಿಡುಗಡೆ ಮಾಡಿಸಲಾಗಿದೆ ಎಂದು ಶಾಸಕ ಹಾಗೂ ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಸಮೀಪದ ಬಡಿಗವಾಡ ಗ್ರಾಮದ ಲಕ್ಷ್ಮೀದೇವಿ ದೇವಸ್ಥಾನದ ಆವರಣದಲ್ಲಿ ಶುಕ್ರವಾರ ರಾತ್ರಿ ಗ್ರಾಮ ಪಂಚಾಯತಿಯಿಂದ ಜರುಗಿದ 1.58 ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಮುಖ್ಯಮಂತ್ರಿ ಗ್ರಾಮ ವಿಕಾಸ ಯೋಜನೆ ಕಾಮಗಾರಿಗೆ 1 ಕೋಟಿ ರೂ. ಅನುದಾನ ದೊರೆತಿದ್ದು, 3 ತಿಂಗಳೊಳಗೆ ಕಾಮಗಾರಿ ಪೂರ್ಣಗೊಳ್ಳಲಿದೆ. ಕಾಂಕ್ರೀಟ ಹಾಗೂ ಡಾಂಬರೀಕರಣ ರಸ್ತೆ, ಫೆವರ್ ಬ್ರಿಗ್ಸ್, ಸಮುದಾಯ ಭವನ, ಗರಡಿ ಮನೆ, ‘ವ್ಹಿ’ ಮತ್ತು ‘ಯು’ ಸೇಫ್ ಗಟಾರ, ದೇವಸ್ಥಾನದ ಜೀರ್ಣೋದ್ಧಾರ ಸೇರಿದಂತೆ ಇತರೇ ಕಾಮಗಾರಿಗಳು ಈ ಯೋಜನೆಯಲ್ಲಿ ಸೇರಿವೆ ಎಂದು ಹೇಳಿದರು.
2004 ರಿಂದ ಇಲ್ಲಿಯವರೆಗೆ ಅರಭಾವಿ ಮತಕ್ಷೇತ್ರ ಎಲ್ಲ ಕ್ಷೇತ್ರಗಳಲ್ಲಿ ಸರ್ವಾಂಗೀಣ ಅಭಿವೃದ್ಧಿ ಸಾಧಿಸಿದೆ. ಮೊದಲಿನ ಪರಿಸ್ಥಿತಿ ಈಗಿಲ್ಲ. ಜನರಲ್ಲಿ ಜಾಗೃತಿ ಮೂಡುತ್ತಿದೆ. 2004ರಕ್ಕಿಂತ ಮುಂಚೆ ಪರಿಸ್ಥಿತಿಯನ್ನು ಅವಲೋಕಿಸಿದರೆ ಈಗಿನ ಪರಿಸ್ಥಿತಿ ತುಂಬ ಭಿನ್ನವಾಗಿದೆ. ಜನರಿಗೆ ಅಧಿಕಾರಿಗಳೇ ಸೆಲ್ಯುಟ್ ಹೊಡೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದು ಪ್ರಜಾಪ್ರಭುತ್ವಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಆದರೆ ಕೆಲವರು ವಾಕ್ ಸ್ವಾತಂತ್ರ್ಯ ಬಗ್ಗೆ ಮಾತನಾಡುತ್ತಿರುತ್ತಾರೆ. ಇದಕ್ಕಿಂತ ಬೇರೆ ಬೇಕೇ? ವಾಕ್ ಸ್ವಾತಂತ್ರ್ಯ? ಎಲ್ಲರಿಗೂ ಮಾತನಾಡುವ ಹಕ್ಕು ಇದ್ದೇ ಇದೆ. ಅದನ್ನೇ ಕೆಲವರು ದುರ್ಬಳಕೆ ಮಾಡಿಕೊಂಡು ಜನರಿಗೆ ತಪ್ಪು ಸಂದೇಶ ನೀಡುತ್ತಿದ್ದಾರೆ. ಇಂತಹ ಯಾವುದೇ ವದಂತಿಗಳಿಗೆ ಕಿವಿಗೊಡದೇ ಗ್ರಾಮದ ಸರ್ವಾಂಗೀಣ ಅಭಿವೃದ್ಧಿಗೆ ಎಲ್ಲರೂ ದುಡಿಯುವಂತೆ ತಿಳಿಸಿದರು.
ಎಪ್ರೀಲ್-ಮೇ ತಿಂಗಳಲ್ಲಿ ಜರುಗುವ ಸಾರ್ವತ್ರಿಕ ಚುನಾವಣೆಯಲ್ಲಿ ನನ್ನನ್ನು ಆಶೀರ್ವದಿಸಿ ಮತ್ತೇ ತಮ್ಮ ಸೇವೆ ಮಾಡಲು ಅವಕಾಶ ನೀಡುವಂತೆ ಕೋರಿದ ಅವರು, ಇಲ್ಲಿಂದಲೇ ಪ್ರಚಾರ ಕಾರ್ಯ ಆರಂಭಿಸಿರುವುದಾಗಿ ಹೇಳಿದ ಅವರು, ಬಡಿಗವಾಡ ಗ್ರಾಮಸ್ಥರ ಬೇಡಿಕೆಗಳನ್ನು ಹಂತ-ಹಂತವಾಗಿ ಈಡೇರಿಸುವುದಾಗಿ ಭರವಸೆಯಿತ್ತರು.
ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನು ಗ್ರಾಮ ಪಂಚಾಯತಿ ಸಮೀತಿಯವರು ಬೆಳ್ಳಿ ಗಧೆ, ನೆನಪಿನ ಕಾಣಿಕೆ ನೀಡಿ ಹೃದಯಸ್ಪರ್ಶಿಯಾಗಿ ಸತ್ಕರಿಸಿದರು.
ಕಾಮಗಾರಿಗಳಿಗೆ ಚಾಲನೆ : 1 ಕೋಟಿ ರೂ. ವೆಚ್ಚದ ಮುಖ್ಯಮಂತ್ರಿ ಗ್ರಾಮ ವಿಕಾಸ ಯೋಜನೆ ಹಾಗೂ 22 ಲಕ್ಷ ರೂ. ವೆಚ್ಚದ ಎಸ್‍ಸಿಪಿ ಯೋಜನೆಯಡಿ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ, 15 ಲಕ್ಷ ರೂ. ವೆಚ್ಚದ ಅಂಬೇಡ್ಕರ ಭವನ, 8 ಲಕ್ಷ ರೂ. ವೆಚ್ಚದ ಅಂಗನವಾಡಿ ಕಟ್ಟಡ, 13 ಲಕ್ಷ ರೂ. ವೆಚ್ಚದ ಶುದ್ಧ ಕುಡಿಯುವ ನೀರಿನ ಘಟಕವನ್ನು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ವಸತಿ ಯೋಜನೆಯಡಿಯಲ್ಲಿ ಮಂಜೂರಾದ 230 ಫಲಾನುಭವಿಗಳಿಗೆ ಮನೆಗಳ ಆದೇಶ ಪತ್ರಗಳನ್ನು ವಿತರಿಸಿದರು.
ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತಿ ಅಧ್ಯಕ್ಷ ಪರಸಪ್ಪ ಕುಡ್ಡಗೋಳ ವಹಿಸಿದ್ದರು.
ಅತಿಥಿಯಾಗಿದ್ದ ಘಟಪ್ರಭಾ ಕೆಆರ್‍ಎಚ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ರಾಮಣ್ಣಾ ಹುಕ್ಕೇರಿ ಮಾತನಾಡಿ, ಬಾಲಚಂದ್ರ ಜಾರಕಿಹೊಳಿ ಅವರಿಗೆ ಜನರು ನೀಡುತ್ತಿರುವ ಪ್ರೀತಿ-ವಿಶ್ವಾಸ ಹಾಗೂ ಅಭಿಮಾನವನ್ನು ಹಿಂದಿನ 35 ವರ್ಷಗಳ ಡಾ.ರಾಜಕುಮಾರ ಅವರು ನೆನಪಿಗೆ ಬರುತ್ತಾರೆ. ಆವಾಗ ಡಾ.ರಾಜಕುಮಾರ ಅವರನ್ನು ಸ್ಪರ್ಶಿಸಿದರೆ ನಮ್ಮ ಜೀವನ ಪಾವನವಾಯಿತು ಎಂಬಂತೆ ಈಗ ಬಾಲಚಂದ್ರ ಅವರನ್ನು ಮುಟ್ಟಿದರೆ ಹುಟ್ಟಿದ್ದಕ್ಕೆ ಸಾರ್ಥಕವಾಯಿತು ಎಂಬಂತೆ ಅಭಿಮಾನಿಗಳು ಅವರಿಗೆ ಆಗಾಧ ಪ್ರೀತಿ ತೋರುತ್ತಿದ್ದಾರೆ. ಡಾ.ರಾಜ್‍ರಂತಹ ಮಹಾನುಭಾವರು ನಮ್ಮಲ್ಲಿಯೂ ಇದ್ದಾರೆಂಬುದನ್ನು ತೋರಿಸಿಕೊಟ್ಟಿದ್ದಾರೆ. ಬಾಲಚಂದ್ರ ಅವರು ಈ ನಾಡಿನ ವಿಜಯನಗರದ ಅರಸು ಇದ್ದಂತೆ. ಎಲ್ಲ ಸಮಾಜಗಳನ್ನು ಒಂದುಗೂಡಿಸುತ್ತಿರುವ ಏಕೈಕ ನಾಯಕರು. ಇವರಿಗೆ ಯಾವುದೇ ಜಾತಿ-ಮತ-ಪಂಥ ಎಂಬ ಬೇಧಭಾವವಿಲ್ಲ. ಇವರೊಬ್ಬ ಮಹಾನ್ ಶಕ್ತಿ ಎಂದು ಬಣ್ಣಿಸಿದರು.
ಯಲ್ಲಪ್ಪ ಕುಡ್ಡಗೋಳ, ಮಾಳಪ್ಪ ಜಾಗನೂರ, ಶಂಕರ ಕಮತಿ, ಕಲ್ಲಪ್ಪ ಚೌಕಾಶಿ, ಬಸಪ್ಪ ಸನದಿ, ರಾಜೇಂದ್ರ ದೇಶಪಾಂಡೆ, ಡಿ.ಎಂ. ದಳವಾಯಿ, ಯಲ್ಲಪ್ಪ ಮಾಕನ್ನವರ, ಸಿದ್ದಪ್ಪ ಚೂಡಪ್ಪಗೋಳ, ಶಿವು ಕುಡ್ಡೆಮ್ಮಿ, ಶಿವಾನಂದ ಚೌಕಾಶಿ, ಪ್ರಭಾಶುಗರ ನಿರ್ದೇಶಕರಾದ ಶಿವಲಿಂಗ ಪೂಜೇರಿ, ಲಕ್ಷ್ಮಣ ಗಣಪ್ಪಗೋಳ, ರಾಮಣ್ಣಾ ಬಂಡಿ, ಎಪಿಎಂಸಿ ನಿರ್ದೇಶಕ ಶ್ರೀಪತಿ ಗಣೇಶವಾಡಿ, ಹಿಡಕಲ್ ಡ್ಯಾಂ ಮಹಾಮಂಡಳ ಅಧ್ಯಕ್ಷ ಅಶೋಕ ಖಂಡ್ರಟ್ಟಿ, ಮುತ್ತೆಪ್ಪ ಕುಳ್ಳೂರ, ಹಿರಿಯ ಪತ್ರಕರ್ತ ಮಡಿವಾಳಪ್ಪ ಮುಚಳಂಬಿ, ವಸಂತ ರಾಣಪ್ಪಗೋಳ, ಗ್ರಾಮ ಪಂಚಾಯತಿ ಸದಸ್ಯರು, ಅಧಿಕಾರಿಗಳಾದ ಎಫ್.ಜಿ.ಚಿನ್ನನ್ನವರ, ವಾಯ್.ಎಂ. ಗುಜನಟ್ಟಿ, ಎಸ್.ವ್ಹಿ. ಕಲ್ಲಪ್ಪನವರ, ಗುತ್ತಿಗೆದಾರ ರಾಜು ಕಸ್ತೂರಿ, ಮುಖಂಡರು ಉಪಸ್ಥಿತರಿದ್ದರು. ರಾಮಣ್ಣಾ ಭಟ್ಟಿ ಸ್ವಾಗತಿಸಿದರು.
ರಸಮಂಜರಿ ಉದ್ಘಾಟನೆ : ಇದೇ ಸಂದರ್ಭದಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಸಂಗೊಳ್ಳಿ ರಾಯಣ್ಣಾ ಅಭಿಮಾನಿ ಬಳಗ ಹಮ್ಮಿಕೊಂಡಿದ್ದ ರಸಮಂಜರಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.