ಮೂಡಲಗಿ:ಯಾದವಾಡದಲ್ಲಿ ನಿರ್ಮಿಸುವ ಕಲ್ಯಾಣ ಮಂಟಪಕ್ಕೆ ನೆರವನ್ನು ದೊರಕಿಸಿಕೊಡಲಾಗುವುದು: ಶಾಸಕ ಬಾಲಚಂದ್ರ
ಯಾದವಾಡದಲ್ಲಿ ನಿರ್ಮಿಸುವ ಕಲ್ಯಾಣ ಮಂಟಪಕ್ಕೆ ನೆರವನ್ನು ದೊರಕಿಸಿಕೊಡಲಾಗುವುದು: ಶಾಸಕ ಬಾಲಚಂದ್ರ
ಮೂಡಲಗಿ ಜ 28: ಯಾದವಾಡದಲ್ಲಿ ನಿರ್ಮಿಸಲು ಉದ್ಧೇಶಿಸಿರುವ ಸುಸಜ್ಜಿತವಾದ ಕಲ್ಯಾಣ ಮಂಟಪ ನಿರ್ಮಾಣಕ್ಕೆ ಅಗತ್ಯವಿರುವ ಎಲ್ಲ ನೆರವನ್ನು ದೊರಕಿಸಿಕೊಡಲಾಗುವುದು. ದಾನಿಗಳು ಸಹ ಮುಂದೆ ಬಂದು ಇಂತಹ ಸಾಮಾಜಿಕ ಕಾರ್ಯಕ್ಕೆ ತನು-ಮನ-ಧನದ ಸಹಾಯ ನೀಡುವಂತೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಕೋರಿದರು.
ಸಮೀಪದ ಯಾದವಾಡ ಗ್ರಾಮದಲ್ಲಿ ಶನಿವಾರ ರಾತ್ರಿ ಗ್ರಾಮ ಪಂಚಾಯತಿಯಿಂದ ನಡೆದ 3.05 ಕೋಟಿ ರೂ.ಗಳ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ನೆರವೇರಿಸಿ ಅವರು ಮಾತನಾಡಿದರು.
ಯಾದವಾಡ ಗ್ರಾಮದ ಅಭಿವೃದ್ಧಿಗಾಗಿ ಕಳೆದ 14 ವರ್ಷಗಳ ಅವಧಿಯಲ್ಲಿ ನೂರಾರು ಕೋಟಿ ರೂ.ಗಳ ಅನುದಾನದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ನೆರವೇರಿಸಲಾಗಿದೆ. ಗ್ರಾಮಕ್ಕೆ ಅಗತ್ಯವಿರುವ ಕುಡಿಯುವ ನೀರಿನ ಯೋಜನೆಗಾಗಿ 2.50 ಕೋಟಿ ರೂ.ಗಳ ಅನುದಾನ ಬಿಡುಗಡೆಯಾಗಿದೆ. ಮಾರ್ಚ ತಿಂಗಳೊಳಗೆ ಯಾದವಾಡ ಹಾಗೂ ಕಾಮನಕಟ್ಟಿ ಗ್ರಾಮ ಪಂಚಾಯತಿ ವ್ಯಾಪ್ತಿಯ ನಾಗರೀಕರಿಗೆ ಕುಡಿಯುವ ನೀರು ದೊರಕಲಿದೆ ಎಂದು ಹೇಳಿದರು.
ಹೊಲದ ರಸ್ತೆಗಳು ಹಾಗೂ ದುರಸ್ತಿಯಲ್ಲಿರುವ ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಆಧ್ಯತೆ ನೀಡಲಾಗುತ್ತಿದೆ. ಈಗಾಗಲೇ ಎರಡೂ ಕಾಮಗಾರಿಗಳನ್ನು ಆರಂಭಿಸಲಾಗಿದ್ದು, ಪ್ರಗತಿಯಲ್ಲಿವೆ. ಮಹಿಳೆಯರಿಗಾಗಿ ಸಾಮೂಹಿಕ ಶೌಚಾಲಯಗಳನ್ನು ತಿಂಗಳೊಳಗೆ ನಿರ್ಮಿಸಿಕೊಡಲಾಗುವುದು ಎಂದು ಹೇಳಿದರು.
ಸದ್ಗುರು ಬಸಪ್ಪಜ್ಜನವರ ತತ್ವಗಳು ಇಂದಿನ ಪೀಳಿಗೆಗೆ ಅಗತ್ಯವಾಗಿವೆ. ಮೂಲ ಮುಧೋಳ ತಾಲೂಕಿನ ಬೆಳಗಲಿ ಗ್ರಾಮದವರಾದ ಬಸಪ್ಪಜ್ಜ ಅವರು ಯಾದವಾಡ ಗ್ರಾಮದಲ್ಲಿ ನೆಲೆಸಿ ಅನೇಕ ಪವಾಡಗಳನ್ನು ಸೃಷ್ಟಿಸಿ ಭಕ್ತ ಸಮೂಹವನ್ನು ಹೊಂದಿದ್ದರು ಎಂದು ಸ್ಮರಿಸಿಕೊಂಡರು.
ಸಾನಿಧ್ಯವನ್ನು ಪತ್ರಿಮಠದ ಶಿವಾನಂದ ಮಹಾರಾಜರು ವಹಿಸಿದ್ದರು.
ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತ ಅಧ್ಯಕ್ಷ ಯಲ್ಲಪ್ಪಗೌಡ ನ್ಯಾಮಗೌಡ ವಹಿಸಿದ್ದರು.
ಜಿಪಂ ಸದಸ್ಯ ಗೋವಿಂದ ಕೊಪ್ಪದ, ಶಂಕರ ಬೆಳಗಲಿ, ಕಾಮನಕಟ್ಟಿ ಗ್ರಾಪಂ ಅಧ್ಯಕ್ಷೆ ಶಿವಕ್ಕಾ ಮೇತ್ರಿ, ತಾಪಂ ಸದಸ್ಯ ಸದಾಶಿವ ದುರಗನ್ನವರ, ಮುಖಂಡರಾದ ಪರ್ವತಗೌಡ ಪಾಟೀಲ, ಬಿ.ಎಚ್. ಪಾಟೀಲ, ರಂಗಪ್ಪ ಇಟ್ಟನ್ನವರ, ವೆಂಕಪ್ಪ ಕೇರಿ, ಬಸಪ್ಪ ಕೆಂಜೋಳ, ಸುರೇಶ ಸಾವಳಗಿ, ಸತ್ತೆಪ್ಪ ಚಿಪ್ಪಲಕಟ್ಟಿ, ಲಕ್ಷ್ಮಣ ಪಾಟೀಲ(ಯರಗಟ್ಟಿ), ಬಸು ಕೇರಿ, ಮಲ್ಲಪ್ಪ ಚಕ್ಕೆನ್ನವರ, ಮಂಜು ರೂಢಗಿ, ಎಂ.ಎಸ್. ದಂತಾಳಿ, ಹನೀಫ ರಕೀಪದಾರ, ಬಸು ಹಿಡಕಲ್, ಕಲ್ಲಪ್ಪ ಗಾಣಗಿ, ಬಸು ಭೂತಾಳಿ, ಲಕ್ಷ್ಮಣ ಮಂಟೂರ, ಗೌಡಪ್ಪ ಗುರಡ್ಡಿ, ಎಂ.ಎಸ್. ಥರಕಾರ, ರಾಜುಗೌಡ ಪಾಟೀಲ, ಬೀರಪ್ಪ ಮುಗಳಖೋಡ, ಮಲ್ಲಪ್ಪ ಮಾಳೇದ, ಯಾದವಾಡ-ಕಾಮನಕಟ್ಟಿ ಗ್ರಾಮ ಪಂಚಾಯತಗಳ ಸದಸ್ಯರುಗಳು, ಗ್ರಾಕುನೀಸ ಯೋಜನೆಯ ಎಇಇ ಎಂ.ಜಿ. ರೇವಣಕರ, ಎಇ ಇಮ್ತಿಯಾಜಅಹ್ಮದ ದಫೆದಾರ, ಪಿಡಿಓ ಐ.ಬಿ. ಮುದ್ದವ್ವಗೋಳ, ಮುಂತಾದವರು ಉಪಸ್ಥಿತರಿದ್ದರು.
ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಇದೇ ಸಂದರ್ಭದಲ್ಲಿ 2.50 ಕೋಟಿ ರೂ. ವೆಚ್ಚದ ಯಾದವಾಡ-ಕಾಮನಕಟ್ಟಿ ಗ್ರಾಮಗಳ ನೀರು ಸರಬರಾಜು ಪುನಶ್ಚೇತನ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದರು. 16.25 ಲಕ್ಷ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿದ ರಾಜೀವ ಗಾಂಧಿ ಸೇವಾ ಕೇಂದ್ರ, 8 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ ಅಂಗನವಾಡಿ ಕಟ್ಟಡ, ನರೇಗಾ ಯೋಜನೆಯಡಿಯಲ್ಲಿ 18 ಲಕ್ಷ ರೂ. ವೆಚ್ಚದ ಯಾದವಾಡ ಗ್ರಾಮದ ತೇರಿನ ಬೈಲ್ ಆವರಣದಲ್ಲಿ ಕಾಂಕ್ರೀಟ್, 9 ಲಕ್ಷ ರೂ. ವೆಚ್ಚದ ತೇರಿನ ಬೈಲ್ ಸುತ್ತ ಚರಂಡಿ ನಿರ್ಮಾಣ, 4 ಲಕ್ಷ ರೂ. ವೆಚ್ಚದ ಬಸಯ್ಯಜ್ಜನ ಗುಡಿ ಹತ್ತಿರ ಒಳಕಟ್ಟ ಬಾವಿ ಸಮತಟ್ಟು ಕಾಮಗಾರಿಗಳನ್ನು ಉದ್ಘಾಟಿಸಿದರು.
ಬಾಲಚಂದ್ರ ಜಾರಕಿಹೊಳಿ, ಶಾಸಕ : “ಸ್ಥಳೀಯ ಜಿ.ಎನ್.ಎಸ್ ಸಂಯುಕ್ತ ಪದವಿಪೂರ್ವ ಮಹಾವಿದ್ಯಾಲಯದ ಕೊಠಡಿಗಳ ನಿರ್ಮಾಣಕ್ಕೆ 10 ಲಕ್ಷ ರೂ.ಗಳನ್ನು ನೀಡಲಾಗುವುದು. ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ ನೀಡಲಾಗುವ ಈ ಅನುದಾನವನ್ನು ಕೊಠಡಿಗಳ ನಿರ್ಮಾಣಕ್ಕೆ ಬಳಕೆ ಮಾಡಿಕೊಳ್ಳಬೇಕು. ಯಾದವಾಡ ಭಾಗದಲ್ಲಿ ಶೈಕ್ಷಣಿಕವಾಗಿ ಹೆಸರುವಾಸಿಯಾಗಿರುವ ವಿದ್ಯಾವರ್ಧಕ ಸಂಘದ ಕಾರ್ಯ ಪ್ರಶಂಸನೀಯ. ಇಲ್ಲಿ ಕಲಿಯುವ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಹೆಮ್ಮೆಯ ಸಾಧನೆಗೈಯುವ ಮೂಲಕ ಗ್ರಾಮಕ್ಕೆ ಕೀರ್ತಿ ತರುವಂತಾಗಲಿ. ಭಾರತದ ಭವಿಷ್ಯ ಇರುವುದು ವಿದ್ಯಾರ್ಥಿಗಳ ಕೈಯಲ್ಲಿ.”