RNI NO. KARKAN/2006/27779|Friday, December 13, 2024
You are here: Home » breaking news » ಗೋಕಾಕ:ಬೇಂದ್ರೆಯವರ ಭಾವಗೀತೆಗಳು ಆದ್ಯಾತ್ಮಿಕತೆಯ ಜೀವಾಮೃತಗಳಾಗಿವೆ. – ಪ್ರೋ. ಮಹಾನಂದಾ ಪಾಟೀಲ

ಗೋಕಾಕ:ಬೇಂದ್ರೆಯವರ ಭಾವಗೀತೆಗಳು ಆದ್ಯಾತ್ಮಿಕತೆಯ ಜೀವಾಮೃತಗಳಾಗಿವೆ. – ಪ್ರೋ. ಮಹಾನಂದಾ ಪಾಟೀಲ 

ಬೇಂದ್ರೆಯವರ ಭಾವಗೀತೆಗಳು ಆದ್ಯಾತ್ಮಿಕತೆಯ ಜೀವಾಮೃತಗಳಾಗಿವೆ. – ಪ್ರೋ. ಮಹಾನಂದಾ ಪಾಟೀಲ

ಗೋಕಾಕ ಫೆ 1 : ಕಡಿಮೆ ಜೀವಿತಾವದಿ ಇರುವಷ್ಟು ದಿನಗಳಲ್ಲಿ ಬದುಕನ್ನು ಸುಂದರಗೊಳಿಸಬೇಕಾಗಿದ್ದು, ಸರಸ ವಿರಸಗಳನ್ನು ಮರೆತು ಸಮರಸವನ್ನೆ ಜೀವನವನ್ನಾಗಿ ರೂಪಿಸಿಕೊಳ್ಳುವಲ್ಲಿ ಅರ್ಥವಿದೆ ಎಂಬುದು ವರಕವಿ ದ.ರಾ.ಬೇಂದ್ರೆಯವರ ಕಾವ್ಯಾಶಯವಾಗಿದೆ ಎಂದು ಶ್ರೀ ಲಕ್ಷ್ಮಣರಾವ ಜಾರಕಿಹೊಳಿ ಪದವಿ ಮಹಾವಿದ್ಯಾಲಯದ ಉಪನ್ಯಾಸಕಿ ಹಾಗೂ ಲೇಖಕಿ ಮಹಾನಂದಾ ಪಾಟೀಲ ಅಭಿಪ್ರಾಯಪಟ್ಟರು.
ಸಿರಿಗನ್ನಡ ತಾಲೂಕಾ ವೇದಿಕೆ ವತಿಯಿಂದ ನಗರದ ಸರಕಾರಿ ಪ್ರಥಮ ದರ್ಜೆ ಪದವಿ ಮಹಾವಿದ್ಯಾಲಯದಲ್ಲಿ ಜರುಗಿದ ವರಕವಿ ದ.ರಾ.ಬೇಂದ್ರೆ ಜಯಂತಿ ಅಂಗವಾಗಿ ಜರುಗಿದ “ಬೇಂದ್ರೆ ಕಾವ್ಯದಲ್ಲಿ ಭಾವಗೀತೆಗಳ ಸೊಗಸು” ಎಂಬ ವಿಷಯದ ಮೇಲೆ ಉಪನ್ಯಾಸ ನೀಡುತ್ತಿದ್ದರು.
ಕಷ್ಟ ಮತ್ತು ದು:ಖಗಳನ್ನೇ ಹೊತ್ತುಕೊಂಡು ಬದುಕಿದ ಬೇಂದ್ರೆ ಅವುಗಳನ್ನೇ ಗಟ್ಟಿಗೊಳಿಸಿ ಕಾವ್ಯ ಕೃಷಿಯನ್ನು ಬಿತ್ತಿದ್ದು ಅವರ ಕಾವ್ಯಶಕ್ತಿಯ ಗಟ್ಟಿತನಕ್ಕೆ ಸಾಕ್ಷಿಯಾಗಿದೆ. ಭಾವವನ್ನೇ ಮೇಳೈಸಿಕೊಂಡು ಬರೆದ ಅವರ ಭಾವಗೀತೆಗಳು ಅನುಭಾವ ಮತ್ತು ಆದ್ಯಾತ್ಮಿಕತೆಯ ಜೀವಾಮೃತಗಳಾಗಿವೆ.
ಬಡತನದ ಬವಣೆ, ಹಸುವಿನ ಕೂಗು, ಸಾಮಾಜಿಕ ಅನಿಷ್ಟ ಪದ್ದತಿ, ಮೇಲು-ಕೀಳು, ಬಡವ-ಶ್ರೀಮಂತ, ಮುಂತಾದ ನೋವಿನ ಧ್ವನಿಗಳನ್ನು ಅವರ ಕವಿತೆಗಳಾದ ತುತ್ತಿನ ಚೀಲ, ಅಣ್ಣಾವತಾರ, ಪುಟ್ಟ ವಿಧವೆ, ಕುರುಡು ಕಾಂಚಾಣ ಮುಂತಾದ ಕವಿತೆಗಳೆಲ್ಲಿ ಕಾಣಬಹುದಾಗಿದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸರಕಾರಿ ಪ್ರಥಮದರ್ಜೆ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಮಹೇಶ ಕಂಬಾರ,ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣದ ಜತೆಗೆ ಸ್ಪರ್ದಾತ್ಮಕ ಪರೀಕ್ಷೆಗಳ ಹಾಗೂ ಸಾಹಿತ್ಯ ಮತ್ತು ಸಾಂಸ್ಕಂತಿಕಗಳ ಬಗ್ಗೆ ಜ್ಞಾನ ಮೂಡಿಸಲು ವಿಶೇಷ ಗಮನ ನೀಡಲಾಗುತ್ತಿದೆ ಎಂದರು.
ಮುಖ್ಯ ಅತಿಥಿಯಾಗಿದ್ದ ಕರ್ನಾಟಕ ಪತ್ರಿಕಾ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಬಸವರಾಜ ಕುರೇರ ಮಾತನಾಡುತ್ತ, ಸಿರಿಗನ್ನಡ ವೇದಿಕೆಯು ವಿದ್ಯಾರ್ಥಿಗಳಲ್ಲಿ ಸಾಹಿತ್ಯದ ಬಗ್ಗೆ ಹಾಗೂ ಸಾಧಕರ ಕುರಿತು ಅರಿವು ಮೂಡಿಸುವ ನಿಟ್ಟಿನಲ್ಲಿ ಒಳ್ಳೆಯ ಕೆಲಸ ಮಾಡುತ್ತಿದ್ದು, ಎಲ್ಲ ರೀತಿಯ ಸಹಕಾರ ನೀಡುವುದಾಗಿ ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಸಿರಿಗನ್ನಡ ತಾಲೂಕಾ ವೇದಿಕೆ ಅಧ್ಯಕ್ಷರಾದ ಈಶ್ವರ ಮಮದಾಪೂರ- ವಿದ್ಯಾರ್ಥಿಗಳಲ್ಲಿ ನಾಡು-ನುಡಿ ಪರಂಪರೆಯ ಅರಿವು ಅವಶ್ಯಕವಾಗಿದ್ದು ಈ ನಿಟ್ಟಿನಲ್ಲಿ ಸಿರಿಗನ್ನಡ ವೇದಿಕೆಯು ಶ್ರಮಿಸುತ್ತದೆ. ಇಂದಿನ ಆಧುನಿಕ ಹಾಗೂ ತಂತ್ರಜ್ಞಾನದ ಒತ್ತಡದ ನಡುವೆಯೂ ನಾಡು-ನುಡಿಗಾಗಿ ಶ್ರಮಿಸಿದ ವ್ಯಕ್ತಿಗಳ ಪುಸ್ತಕಗಳನ್ನು ಓದುವ ರೂಡಿಯನ್ನು ಇಂದಿನ ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು ಎಂದರು.
ಚಿಂತಕ ಎಂ.ಐ.ಜೋತಾವರ ಪ್ರಾಸ್ತವಿಕ ಮಾತನಾಡಿದರು. ವೇದಿಕೆಯ ಮೇಲೆ ಹಿರಿಯ ಸಾಹಿತಿ ಮಹಾಲಿಂಗ ಮಂಗಿ, ಸರಕಾರಿ ಹೊಸ ಮಾದ್ಯಮಿಕ ಪ್ರೌಢಶಾಲೆಯ ಮುಖ್ಯೋಪಾದ್ಯಾಯರಾದ ಜಿ.ಆರ್.ಮಾಳಗಿ ಉಪಸ್ಥಿತರಿದ್ದರು.
ಶ್ರೀಮತಿ ಜ್ಯೋತಿ ಕುರೇರ ಹಾಗೂ ಸಂಗಡಿಗರಿಂದ ನಾಡಗೀತೆ ಹಾಗೂ ಬೇಂದ್ರೆ ವಿರಚಿತ ಗಾಯನ ಜರುಗಿತು.
ಜ್ಯೋತಿ ಕುರೇರ, ಜನಪದ ಕಲಾವಿದ ಶ್ರದ್ದಾ ಹುಣಶ್ಯಾಳ. ಮಹಾನಂದಾ ಹೊಸಮನಿ, ಜ್ಯೋತಿ ಮಠಪತಿ, ಲಕ್ಷ್ಮೀ ದೇವರಡ್ಡಿ, ಉದ್ದಣ್ಣ ಗೂಡೇರ ಇವರುಗಳು ಬೇಂದ್ರೆಯವರ ವಿರಚಿತ ಹಲವಾರು ಭಾವಗೀತೆಗಳನ್ನು ಹಾಡಿ ರಂಜಿಸಿದರು. ದಿನೇಶ ಜುಗಳಿ ಹಾಗೂ ಅಂಧ ಕಲಾವಿದ ಬಡಿಗೇರ ಸಂಗೀತಕ್ಕೆ ಸಾಥ್ ನೀಡಿದರು.
ಕಲಾವಿದ ನಟರಾಜ ಮಹಾಜನ್, ಕಾಡೇಶಕುಮಾರ, ಪುಷ್ಪಾ ಮುರಗೋಡ, ಬಿ.ಬಿ ಪಟಗುಂದಿ, ರಮೇಶ ರಾಮಗಾನಟ್ಟಿ, ಜಂಗ್ಲಿಖಾನ ತೇರದಾಳ ಮುಂತಾದವರು ಉಪಸ್ಥಿತರಿದ್ದರು.
ರಾಜೇಶ್ವರಿ ಒಡೆಯರ ಸ್ವಾಗತಿಸಿದರು, ಫ್ರೋ ಸುನಂದಾ ಮಾದರ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.

Related posts: