ಗೋಕಾಕ:ನಿಂದನಾತ್ಮಕ ಪದಗಳನ್ನು ಉಪಯೋಗಿಸಿದವರ ಮೇಲೆ ಮಾನನಷ್ಟ ಮೊಕದ್ದಮೆ : ಶಾಸಕ ಬಾಲಚಂದ್ರ
ನಿಂದನಾತ್ಮಕ ಪದಗಳನ್ನು ಉಪಯೋಗಿಸಿದವರ ಮೇಲೆ ಮಾನನಷ್ಟ ಮೊಕದ್ದಮೆ : ಶಾಸಕ ಬಾಲಚಂದ್ರ
ಮೂಡಲಗಿ ಫೆ 2 : ಮೂಡಲಗಿ ತಾಲೂಕು ರಚನೆಯ ಹೋರಾಟದ ಸಂದರ್ಭದಲ್ಲಿ ಪ್ರಾಮಾಣಿಕರ ಮೇಲೆ ಪ್ರಕರಣ ದಾಖಲಿಸುತ್ತಿಲ್ಲ. ವೇದಿಕೆಯನ್ನು ರಾಜಕೀಯವಾಗಿ ದುರ್ಬಳಕೆ ಮಾಡಿಕೊಂಡು ನನ್ನ ವಿರುದ್ಧ ನಿಂದನಾತ್ಮಕ ಪದಗಳನ್ನು ಉಪಯೋಗಿಸಿದವರ ಮೇಲೆ ಮಾನನಷ್ಟ ಮೊಕದ್ದಮೆ ದಾಖಲಿಸುತ್ತಿದ್ದೇನೆಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಸ್ಪಷ್ಟನೆ ನೀಡಿದರು.
ತಾಲೂಕು ಹೋರಾಟದ ಸಂದರ್ಭದಲ್ಲಿ ಸಾವಿರಾರು ಜನರು ಪಾಲ್ಗೊಂಡಿದ್ದಾರೆ. ಹಲವರು ಪ್ರಾಮಾಣಿಕವಾಗಿ ಹೋರಾಟ ನಡೆಸಿದ್ದಾರೆ. ಆದರೆ ಕೆಲವು ಸ್ವಾರ್ಥ ಸಾಧನೆಗಾಗಿ ವೇದಿಕೆಯನ್ನು ಸಂಪೂರ್ಣವಾಗಿ ದುರ್ಬಳಕೆ ಮಾಡಿಕೊಂಡು ಕೇವಲ ನನ್ನನ್ನೇ ಕೆಟ್ಟ ಶಬ್ದಗಳಿಂದ ಟೀಕಿಸಿರುವ 8 ಜನರ ಮೇಲೆ ಮಾನನಷ್ಟ ಮೊಕದ್ದಮೆ ದಾಖಲಿಸುತ್ತಿದ್ದೇನೆ. ಅವರು ಅವಾಚ್ಯ ಶಬ್ದಗಳಿಂದ ಮಾತನಾಡಿರುವ ಎಲ್ಲ ಆಡಿಯೋ, ವಿಡಿಯೋಗಳು ನನ್ನ ಬಳಿ ಸಂಗ್ರಹವಿದ್ದು, ಸೂಕ್ತ ಸಾಕ್ಷಾಧಾರಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವುದಾಗಿ ಹೇಳಿದ್ದಾರೆ.
34 ದಿನಗಳಿಂದ ನಿರಂತರವಾಗಿ ಯೋಗ್ಯವಲ್ಲದ ಪದಗಳನ್ನು ಬಳಕೆ ಮಾಡಿ ನನ್ನ ಮಾನಹಾನಿ ಮಾಡಿರುವ ವ್ಯಕ್ತಿಗಳನ್ನು ಎಂದಿಗೂ ಬಿಡುವುದಿಲ್ಲ. ಅವರಿಗೆ ಕಾನೂನಿನ ಮೂಲಕ ಉತ್ತರ ನೀಡುತ್ತೇನೆ. ಏಳು ದಿನಗಳ ಒಳಗಾಗಿ ಎಂಟೂ ಜನರಿಗೆ ವಕೀಲರ ಮೂಲಕ ನ್ಯಾಯಾಲಯದಿಂದ ನೋಟಿಸ್ ಜಾರಿಗೊಳಿಸುವುದಾಗಿ ಹೇಳಿರುವ ಅವರು, ಕೇವಲ ಪತ್ರಿಕಾ ಹೇಳಿಕೆಯಿಂದ ಭಯಭೀತರಾಗಿದ್ದೀರಿ. ಇನ್ನು ನೋಟಿಸ್ ಜಾರಿಯಾದರೇ ನಿಮ್ಮ ಗತಿ ಏನಾಗುತ್ತದೆ ಎಂದು ಪ್ರಶ್ನಿಸಿದರು.
ಹೋರಾಟ ಮಾಡಿರುವಷ್ಟು ದಿನ ಎಲ್ಲವನ್ನು ಸಹಿಸಿಕೊಂಡು ಬಂದಿದ್ದೇನೆ. ಕೆಲ ಸ್ವಾರ್ಥಿ ಹೋರಾಟಗಾರರು ಅಶ್ಲೀಲ ಶಬ್ಧಗಳನ್ನು ಉಪಯೋಗಿಸಿ ನನ್ನ ತೇಜೋವಧೆಗೆ ಕಾರಣರಾಗಿದ್ದಾರೆ. ಕೇವಲ ಒಂದೇ-ಒಂದು ಹೇಳಿಕೆಯಿಂದ ಕಂಗಾಲಾಗಿರುವ ನೀವುಗಳು ಸಾಮಥ್ರ್ಯವಿದ್ದರೆ ಪ್ರಕರಣ ಎದುರಿಸಿ ಎಂದು ಸವಾಲೆಸೆದರು.
ಯಾರನ್ನೂ ಹೆದರಿಸುವ ದೃಷ್ಟಿಯಿಂದ ಮೊಕದ್ದಮೆ ಹೂಡುತ್ತಿಲ್ಲ. ಮಾನಹಾನಿಗೆ ಕಾರಣರಾದ 8 ಜನರ ಮೇಲೆ ತಲಾ 3,57,125 ರೂ.ಗಳಂತೆ ಒಟ್ಟು 28.57 ಲಕ್ಷ ರೂ.ಗಳನ್ನು ನ್ಯಾಯಾಲಯಕ್ಕೆ ಭರಣಾ ಮಾಡಿ ಒಟ್ಟು 24 ಕೋಟಿ ರೂ.ಗಳ ಮಾನನಷ್ಟ ಮೊಕದ್ದಮೆ ದಾಖಲು ಮಾಡುತ್ತಿದ್ದೇನೆ ಎಂದರು.
ಈ ಪ್ರಕರಣದಲ್ಲಿ ನಾವು ಗೆದ್ದರೆ 24 ಕೋಟಿ ರೂ.ಗಳನ್ನು ನಮಗೆ ನ್ಯಾಯಾಲಯದ ಮೂಲಕ ಸಂದಾಯ ಮಾಡಬೇಕು. ಇಲ್ಲವೇ ನ್ಯಾಯಾಲಯ ನೀಡುವ ಜೈಲು ಶಿಕ್ಷೆಯನ್ನು ಅನುಭವಿಸಬೇಕು. ದೇಶದ ಕಾನೂನಿನ ಬಗ್ಗೆ ಈ ಪ್ರಕರಣದಿಂದ ಕ್ಷುಲ್ಲಕವಾಗಿ ಮಾತನಾಡುವವರಿಗೆ ಅರಿವು ಮೂಡಲಿದೆ. ಮತ್ತೊಬ್ಬರ ಮನಸ್ಸನ್ನು ನೋಯಿಸಿ ಸತಾಯಿಸುವವರಿಗೆ ಕಾನೂನು ಏನು ಎಂಬುದು ಗೊತ್ತಾಗಲಿದೆ ಎಂದು ಹೇಳಿದರು.
ತಪ್ಪಿತಸ್ಥರಿಗೆ ನ್ಯಾಯಾಲಯ ಶಿಕ್ಷೆ ನೀಡುತ್ತದೆ. ನ್ಯಾಯಾಲಯ ನೀಡುವ ತೀರ್ಪಿಗೆ ಎಲ್ಲರೂ ಬದ್ಧರಿರಬೇಕು. ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ನಾನೇ ಗೆಲ್ಲುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಭಯ ನನಗಲ್ಲ, ನಿಮಗೆ : ಸೋಲುವ ಭೀತಿ ನನಗಿಲ್ಲ. ಜೀವನದಲ್ಲಿ ಎಂದಿಗೂ ಸೋಲು ಅನ್ನುವ ಪದ ನನ್ನ ದಿನಚರಿಯಲ್ಲಿಲ್ಲ. ಜನರ ಆಶೀರ್ವಾದದಿಂದ ಮುಂದಿನ ಚುನಾವಣೆಯಲ್ಲಿ ಜಯ ನನ್ನದೇ. ಸೋಲುವ ಹತಾಶೆಯು ಮುಂದಿನ ದಿನಗಳಲ್ಲಿ ಕಾಡದೇ ವಿರೋಧಿಗಳನ್ನು ಬಿಡಲಾರದು. ಪ್ರತಿ ಸಂದರ್ಭದಲ್ಲೂ ವಿರೋಧಿಗಳಿಗೆ ಭಯ ಆವರಿಸುತ್ತದೆ. ಜನರ ಆಶೀರ್ವಾದ ಇರುವವರೆಗೂ ನಾನು ಯಾರಿಗೂ ಹೆದರುವುದಿಲ್ಲ ಎಂದು ವಿರೋಧಿಗಳಿಗೆ ಸವಾಲು ಹಾಕಿದರು.