ಬೆಳಗಾವಿ:ನಾಡವಿರೋಧಿ ಎಂಇಎಸ ನಾಯಕರ ಬೆವರಿಳಿಸಿದ : ಡಿಸಿ ಜಯರಾಮ
ನಾಡವಿರೋಧಿ ಎಂಇಎಸ ನಾಯಕರ ಬೆವರಿಳಿಸಿದ : ಡಿಸಿ ಜಯರಾಮ
ಬೆಳಗಾವಿ ಮೇ 20: ಜಿಲ್ಲಾಧಿಕಾರಿಗಳ ಸಭೆಯಲ್ಲಿ ಭಾಷಾ ರಾಜಕಾರಣ ಕೆದಕಿದ ನಾಡವಿರೋಧಿ ಎಂಇಎಸ ಮುಖಂಡರಿಗೆ ಜಿಲ್ಲಾಧಿಕಾರಿ ಎನ್ ಜಯರಾಮ ತಕ್ಕ ಉತ್ತರ ನೀಡಿ ಅವರ ಬಾಯಿ ಮುಚ್ಚಿಸಿದ ಘಟನೆ ಜಿಲ್ಲಾಧಿಕಾರಿ ಕಛೇರಿಯಲ್ಲಿ ನಡೆದಿದೆ.
ಸಭೆಯಲ್ಲಿ ಮರಾಠಿ ಭಾಷೆಯಲ್ಲಿ ದಾಖಲೆಗಳನ್ನು ನೀಡಿ ಎಂದು ಎಂಇಎಸ್ ಮುಖಂಡರು ಖ್ಯಾತೆ ತೆಗೆದಿದ್ದಾರೆ. ಮರಾಠಿ ಭಾಷೆಯಲ್ಲಿ ದಾಖಲೆ ಕೇಳುವುದು ನಮ್ಮ ಹಕ್ಕು ನಾಲ್ಕು ವರ್ಷದಿಂದ ನಮ್ಮ ಬೇಡಿಕೆಗೆ ಸ್ಪಂದಿಸುತ್ತಿಲ್ಲ ಎಂದು ಜಗಳ ತೆಗೆದಿದ್ದಾರೆ.
ಈ ವೇಳೆ ಎಂಇಎಸ್ ಮುಖಂಡರನ್ನು ಡಿಸಿ ಎನ್. ಜಯರಾಮ್ ತರಾಟೆಗೆ ತೆಗೆದುಕೊಂಡಿದ್ದಾರೆ. ನಾನು ಮೊದಲು ಕರ್ನಾಟಕದವನು. ಕರ್ನಾಟಕದ ಹಿತ ಕಾಪಾಡುವ ಕೆಲಸ ನನ್ನದು ಎಂದು ಪ್ರತಿಯುತ್ತರ ನೀಡಿದ ಡಿಸಿ ಜಯರಾಮ, ಸಭೆಯಲ್ಲಿ ಹೀರೋ ಆಗಲು ಪ್ರಯತ್ನಿಸದಂತೆ ಎಂಇಎಸ್ ಮುಖಂಡರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಇಷ್ಟಕ್ಕೆ ಸುಮ್ಮನಿರದ ಎಂಇಎಸ್ ಮುಖಂಡ ಕಿರಣ ಠಾಕೂರ್, ನಿಮಗೆ ಕುಡಿಯಲು ನೀರು ಕೊಡುತ್ತಿರುವುದು ನಾವು ಎಂದಿದ್ದಾರೆ. ಕಿರಣ ಠಾಕೂರ್‌ಗೆ ಡಿಸಿ ತಿರುಗೇಟು ನೀಡಿದ್ದು, ನಮಗೆ ಮಹಾರಾಷ್ಟ್ರ ಸರಕಾರ ನೀರು ಬಿಟ್ಟಿದೆ, ನೀವಲ್ಲ ಎಂದರು.
ಈ ವೇಳೆ ನಾವು ಭಾರತೀಯರು ಎಂದ ಎಂಇಎಸ್ ಮುಖಂಡರಿಗೆ ನೀವು ಮೊದಲು ಕರ್ನಾಟಕದವರು ಆಮೇಲೆ ಭಾರತೀಯರು. ನೀವು ನಮ್ಮ ರಾಜ್ಯದಲ್ಲಿದ್ದೀರಿ ಎಂದ ಮೇಲೆ ನೀವು ಕರ್ನಾಟಕದವರೇ. ನಾನು ಕರ್ನಾಟಕ ಸರ್ಕಾರದ ನೌಕರ ಎಂದು ತಿರುಗೇಟು ನೀಡಿದರು.