RNI NO. KARKAN/2006/27779|Sunday, September 8, 2024
You are here: Home » breaking news » ಗೋಕಾಕ: ಜಿಲ್ಲಾ ರಚನೆಗಾಗಿ ಎಲ್ಲರೂ ಒಗ್ಗಟ್ಟಿನಿಂದ ಹೋರಾಟ ಮಾಡೋಣ : ಮಾಜಿ ಸಚಿವ ಬಾಲಚಂದ್ರ

ಗೋಕಾಕ: ಜಿಲ್ಲಾ ರಚನೆಗಾಗಿ ಎಲ್ಲರೂ ಒಗ್ಗಟ್ಟಿನಿಂದ ಹೋರಾಟ ಮಾಡೋಣ : ಮಾಜಿ ಸಚಿವ ಬಾಲಚಂದ್ರ 

ಗೋಕಾಕ ಜಿಲ್ಲಾ ರಚನೆಗಾಗಿ ಎಲ್ಲರೂ ಒಗ್ಗಟ್ಟಿನಿಂದ ಹೋರಾಟ ಮಾಡೋಣ : ಮಾಜಿ ಸಚಿವ ಬಾಲಚಂದ್ರ

ಗೋಕಾಕ ಫೆ 7: ಗೋಕಾಕನ್ನು ಜಿಲ್ಲಾ ಕೇಂದ್ರವನ್ನಾಗಿ ರಚಿಸುವಂತೆ ಸರ್ಕಾರವನ್ನು ಆಗ್ರಹಪಡಿಸಲು ನಾಳೆ ಗುರುವಾರ ಮುಂ. 11 ಗಂಟೆಗೆ ನಗರದ ಸಂಗೊಳ್ಳಿ ರಾಯಣ್ಣಾ ವೃತ್ತದಿಂದ ಬೃಹತ್ ಮೆರವಣಿಗೆ ಮೂಲಕ ತಹಶೀಲ್ದಾರರಿಗೆ ಮನವಿ ಸಲ್ಲಿಸಲಾಗುವುದು ಎಂದು ನಿಯೋಜಿತ ಗೋಕಾಕ ಜಿಲ್ಲಾ ರಚನೆ ಚಾಲನಾ ಸಮೀತಿಯ ನೇತೃತ್ವ ವಹಿಸಿಕೊಂಡಿರುವ ಮುರುಘರಾಜೇಂದ್ರ ಮಹಾಸ್ವಾಮಿಗಳು ಹೇಳಿದರು.
ನಗರದ ಶೂನ್ಯ ಸಂಪಾದನ ಮಠದಲ್ಲಿ ಬುಧವಾರದಂದು ನಡೆದ ನಿಯೋಜಿತ ಗೋಕಾಕ ಜಿಲ್ಲಾ ರಚನೆ ಚಾಲನಾ ಸಮೀತಿಯ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡುತ್ತಿದ್ದರು.


ತಾಲೂಕಿನ ಎಲ್ಲ ಜನಪ್ರತಿನಿಧಿಗಳು, ನ್ಯಾಯವಾದಿಗಳು, ವರ್ತಕರು, ಕನ್ನಡಪರ ಸಂಘಟನೆಗಳು, ಸಾಹಿತಿಗಳು ಹಾಗೂ ಸಮಸ್ತ ಜನತೆ ನಾಳಿನ ಮೆರವಣಿಗೆಯಲ್ಲಿ ಪಕ್ಷಾತೀತವಾಗಿ ಪಾಲ್ಗೊಂಡು ಜಿಲ್ಲಾ ರಚನಾ ಹೋರಾಟಕ್ಕೆ ಬೆಂಬಲ ನೀಡುವಂತೆ ಮನವಿ ಮಾಡಿಕೊಂಡರು.
ಗೋಕಾಕ ಜಿಲ್ಲೆಯಾಗಬೇಕಾದರೆ, ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ, ಶಾಸಕರಾದ ಸತೀಶ ಜಾರಕಿಹೊಳಿ ಹಾಗೂ ಬಾಲಚಂದ್ರ ಜಾರಕಿಹೊಳಿ ಅವರ ಪಾತ್ರ ಅಪಾರವಾಗಿದೆ. ಅವರುಗಳು ಮನಸ್ಸು ಮಾಡಿದ್ದಾದರೆ, ಖಂಡಿತವಾಗಿಯೂ ಗೋಕಾಕ ಜಿಲ್ಲೆಯಾಗುವುದರಲ್ಲಿ ಯಾವುದೇ ಅನುಮಾನಗಳಿಲ್ಲ. ನಾವೆಲ್ಲರೂ ಜಾರಕಿಹೊಳಿ ಸಹೋದರರ ಮೇಲೆ ನಂಬಿಕೆ ಇಡೋಣ. ಅವರ ಹೆಗಲಿಗೆ ಜಿಲ್ಲೆಯನ್ನಾಗಿಸುವ ಹೊಣೆಯನ್ನು ಹೊರಿಸೋಣ. ಅವರ ಮುಂದಾಳತ್ವದಲ್ಲಿ ಮುಖ್ಯಮಂತ್ರಿಗಳ ಬಳಿ ನಿಯೋಗವನ್ನು ಫೆ. 16 ನಂತರ ಒಯ್ಯೋಣ. ಗೋಕಾಕ ಜಿಲ್ಲಾ ರಚನೆಗಾಗಿ ಪಕ್ಷಾತೀತವಾಗಿ ಹೋರಾಟ ಮಾಡೋಣ ಎಂದರು.
ಮೂಡಲಗಿ ತಾಲೂಕಿನ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಬಾಲಚಂದ್ರ ಜಾರಕಿಹೊಳಿ ಅವರನ್ನು ಶ್ಲಾಘಿಸಿದ ಅವರು, ಈ ಹೋರಾಟ ಎಂದಿಗೂ ನಿಲ್ಲಬಾರದು. ಜಿಲ್ಲಾ ರಚನೆಗಾಗಿ ಕಳೆದ 3-4 ದಶಕಗಳಿಂದ ಹೋರಾಟ ಮಾಡಿಕೊಂಡು ಬರುತ್ತಿದ್ದೇವೆ. ಆದರೆ ಇದುವರೆಗೂ ಜಿಲ್ಲೆಯ ಕನಸು ನನಸಾಗಿಲ್ಲ. ಗೋಕಾಕ ಜಿಲ್ಲೆಯಾದರೆ ಅದು ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಂದ ಮಾತ್ರ ಸಾಧ್ಯವಿದೆ. ದಿಟ್ಟ ನಿರ್ಧಾರ ತೆಗೆದುಕೊಳ್ಳುವ ಶಕ್ತಿ ಸಿದ್ಧರಾಮಯ್ಯನವರಿಗೆ ಮಾತ್ರವಿದೆ. ಅದಕ್ಕಾಗಿ ನಾಳೆ ಗುರುವಾರದಂದು ತಹಶೀಲ್ದಾರ ಮೂಲಕ ಸಿಎಂ ಅವರಿಗೆ ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು.
ಖ್ಯಾತ ಜಾನಪದ ಸಾಹಿತಿ ಡಾ.ಸಿ.ಕೆ. ನಾವಲಗಿ ಮಾತನಾಡಿ, ಗೋಕಾಕ ಜಿಲ್ಲೆಯಿಂದ ಬೆಳಗಾವಿಗೆ ಯಾವುದೇ ತೊಂದರೆಯಾಗುವುದಿಲ್ಲ. ಒಗ್ಗಟ್ಟಿನ ಹೋರಾಟದಿಂದ ಮಾತ್ರ ಜಿಲ್ಲಾ ರಚನೆ ಸಾಧ್ಯವಿದೆ. ಬೆಳಗಾವಿ ಜಿಲ್ಲಾ ವಿಭಜನೆಯಿಂದ ಬೆಳಗಾವಿಯಲ್ಲಿ ಮರಾಠಿಗರ ಪ್ರಾಬಲ್ಯ ಹೆಚ್ಚಾಗುತ್ತದೆ ಎಂಬುದರಲ್ಲಿ ಯಾವುದೇ ಹುರುಳಿಲ್ಲ. ಈ ವಾದವನ್ನು ನಾವು ಒಪ್ಪಿಕೊಳ್ಳುವುದಿಲ್ಲ ಎಂದರು.
ಘಟಪ್ರಭಾದ ರಾಮಣ್ಣಾ ಹುಕ್ಕೇರಿ ಮಾತನಾಡಿ, ಜಾರಕಿಹೊಳಿ ಸಹೋದರರು ಕಾಮಧೇನು, ಕಲ್ಪವೃಕ್ಷವಿದ್ದಂತೆ. ಜಿಲ್ಲೆ ಮಾಡಿಸುವ ಶಕ್ತಿ ಇವರಿಗಿದೆ. ಮುಖ್ಯಮಂತ್ರಿಗಳನ್ನು ಮನವೊಲಿಸಿ ಗೋಕಾಕನ್ನು ಜಿಲ್ಲೆಯನ್ನಾಗಿಸುವಂತೆ ಬೆಂಗಳೂರಿಗೆ ನಿಯೋಗವನ್ನು ಕರೆದೊಯ್ಯುವಂತೆ ಸಲಹೆ ನೀಡಿದರು.
ಹಿರಿಯ ನ್ಯಾಯವಾದಿ ಬಿ.ಆರ್. ಕೊಪ್ಪ, ಮಾಜಿ ನಗರಾಧ್ಯಕ್ಷ ಸಿದ್ದಲಿಂಗ ದಳವಾಯಿ, ಜಿಪಂ ಮಾಜಿ ಅಧ್ಯಕ್ಷ ಬಸಗೌಡ ಪಾಟೀಲ, ಕರವೇ ಅಧ್ಯಕ್ಷರಾದ ಬಸವರಾಜ ಖಾನಪ್ಪನವರ, ಕಿರಣ ಡಮಾಮಗರ, ವಕೀಲರ ಸಂಘದ ಮಾಜಿ ಅಧ್ಯಕ್ಷ ಸಿ.ಡಿ. ಹುಕ್ಕೇರಿ, ಮುಂತಾದವರು ಮಾತನಾಡಿ, ಜೆ.ಎಚ್. ಪಟೇಲ ನಂತರ ಗಟ್ಟಿ ನಿರ್ಧಾರ ತೆಗೆದುಕೊಳ್ಳುವ ಮುಖ್ಯಮಂತ್ರಿಯೆಂದರೆ ಅದು ಈಗಿರುವ ಸಿಎಂ ಸಿದ್ಧರಾಮಯ್ಯ. ಜಾರಕಿಹೊಳಿ ಸಹೋದರರ ನೇತೃತ್ವದಲ್ಲಿ ಹೋರಾಟವನ್ನು ತೀವ್ರಗೊಳಿಸೋಣ. ಜಾರಕಿಹೊಳಿ ಅವರೇ ಜಿಲ್ಲೆಗೆ ದೊಡ್ಡ ಶಕ್ತಿಯಾಗಿದ್ದಾರೆಂದು ಹೇಳಿದರು.
ನಗರಾಧ್ಯಕ್ಷ ತಳದಪ್ಪ ಅಮ್ಮಣಗಿ, ಮಾಜಿ ನಗರಾಧ್ಯಕ್ಷ ಎಸ್.ಎ.ಕೋತವಾಲ, ಎಪಿಎಂಸಿ ಅಧ್ಯಕ್ಷ ಅಡಿವೆಪ್ಪ ಕಿತ್ತೂರ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಶಿವಾನಂದ ಡೋಣಿ, ನೀಲಕಂಠ ಕಪ್ಪಲಗುದ್ದಿ, ಎಲ್.ಎನ್. ಬೂದಿಗೊಪ್ಪ, ವಕೀಲರ ಸಂಘದ ಪದಾಧಿಕಾರಿಗಳು, ವರ್ತಕರು, ನಗರಸಭೆ ಸದಸ್ಯರು, ಜನಪ್ರತಿನಿಧಿಗಳು ಹಾಗೂ ವಿವಿಧ ಸಂಘ-ಸಂಸ್ಥೆಗಳ ಮುಖಂಡರುಗಳು ಉಪಸ್ಥಿತರಿದ್ದರು.

ಬಾಲಚಂದ್ರ ಜಾರಕಿಹೊಳಿ, ಶಾಸಕರು :
ಗೋಕಾಕ ಜಿಲ್ಲೆಯಾಗುವ ಕಾಲ ಕೂಡಿ ಬಂದಿದ್ದು, ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಜಿಲ್ಲಾ ರಚನೆಗಾಗಿ ಎಲ್ಲರೂ ಒಗ್ಗಟ್ಟಿನಿಂದ ಹೋರಾಟ ಮಾಡೋಣ.
ಬೆಳಗಾವಿ ಜಿಲ್ಲಾ ವಿಂಗಡಣೆಗೆ ಯಾವುದೇ ಅಭ್ಯಂತರವಿಲ್ಲವೆಂದು ಮುಖ್ಯಮಂತ್ರಿಗಳೇ ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ಗೋಕಾಕ ಜಿಲ್ಲಾ ರಚನೆಯನ್ನು ಸಿದ್ಧರಾಮಯ್ಯನವರು ಮಾಡೇ ಮಾಡುತ್ತಾರೆಂಬ ವಿಶ್ವಾಸ ನನಗಿದೆ.
ಬೆಳಗಾವಿ ಅಖಂಡ ಜಿಲ್ಲೆಯಾಗಿರಬೇಕೆಂಬುದು ಕೆಲವರ ವೈಯಕ್ತಿಕ ವಾದವಾಗಿದೆ. ಆದರೆ ಬೆಳಗಾವಿ ಅತೀ ದೊಡ್ಡ ಜಿಲ್ಲೆಯಾಗಿದ್ದರಿಂದ ಇನ್ನೂ ಹೆಚ್ಚಿನ ಅಭಿವೃದ್ಧಿಗಾಗಿ ಜಿಲ್ಲೆಯನ್ನು ವಿಂಗಡಿಸಬೇಕಾಗಿದೆ. ಆಡಳಿತಾತ್ಮಕ ದೃಷ್ಟಿಯಿಂದ ಗೋಕಾಕ ಜಿಲ್ಲೆಯಾಗುವುದು ಅತ್ಯವಶ್ಯವಾಗಿದೆ. ಹಿಂದಿನ ಎಲ್ಲ ಕಹಿ ಘಟನೆಗಳನ್ನು ಮರೆತು ಎಲ್ಲರೂ ಒಂದಾಗಿ-ಒಗ್ಗಟ್ಟಾಗಿ ಹೋರಾಡಿದರೆ ಮಾತ್ರ ಜಿಲ್ಲಾ ಕನಸು ನನಸಾಗಲಿದೆ. ಫೆ. 16 ರ ನಂತರ ಬೆಂಗಳೂರಿಗೆ ತೆರಳಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಒಕ್ಕೋರಲಿನಿಂದ ಮನವಿ ಮಾಡಿಕೊಳ್ಳಲಾಗುವುದು. ಇದಕ್ಕೆ ಮುರುಘರಾಜೇಂದ್ರ ಮಹಾಸ್ವಾಮಿಗಳು ಹೋರಾಟದ ನೇತೃತ್ವ ವಹಿಸಿಕೊಳ್ಳಲಿ. ಸಚಿವ ರಮೇಶ ಜಾರಕಿಹೊಳಿ ಹಾಗೂ ಶಾಸಕ ಸತೀಶ ಜಾರಕಿಹೊಳಿ ಅವರನ್ನು ಭೇಟಿ ಮಾಡಿ ಜಿಲ್ಲಾ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಮೇಲೆ ಒತ್ತಡ ಹೇರಲು ಎಲ್ಲರೂ ವಿನಂತಿಸಿಕೊಳ್ಳೋಣ. ಗೋಕಾಕ ಜಿಲ್ಲಾ ರಚನೆಗಾಗಿ ನಾನು ಎಂತಹ ತ್ಯಾಗಕ್ಕೂ ಸಿದ್ಧ.

ಈರಪ್ಪ ಕಡಾಡಿ, ಜಿಪಂ ಮಾಜಿ ಅಧ್ಯಕ್ಷ :

ಗೋಕಾಕ ಜಿಲ್ಲೆಗಾಗಿ 1973 ರಿಂದ ಹೋರಾಟ ನಡೆಯುತ್ತಲೇ ಬಂದಿದೆ. ಆದರೆ ಇದುವರೆಗೂ ಜಿಲ್ಲೆಯಾಗಿಲ್ಲ. ಅಲ್ಲಿನ ರಾಜಕೀಯ ಮುಖಂಡರ ಒಗ್ಗಟ್ಟಿನಿಂದ ನಮಗಿಂತ ಚಿಕ್ಕೋಡಿಯವರು ಹೋರಾಟವನ್ನು ಚುರುಕುಗೊಳಿಸುತ್ತ ಬರುತ್ತಿದ್ದಾರೆ. ಆಯೋಗಗಳ ವರದಿಯನ್ನು ಸರ್ಕಾರ ಕಡೆಗಣಿಸಿ ಕೊನೆಗೆ ಚಿಕ್ಕೋಡಿಯನ್ನು ಜಿಲ್ಲಾ ಕೇಂದ್ರಕ್ಕೆ ಮುಂಚೂಣಿಗೆ ತಂದಿರುವುದು ಅಲ್ಲಿನ ರಾಜಕೀಯ ಮುಖಂಡರ ಒಗ್ಗಟ್ಟು ಎದ್ದು ಕಾಣುತ್ತದೆ.

ಗೋಕಾಕ ಜಿಲ್ಲಾ ರಚನೆಗಾಗಿ ಎಲ್ಲರೂ ಒಂದಾಗಿ ಹೋರಾಟ ಮಾಡುತ್ತಿರುವುದರಿಂದ ಜಿಲ್ಲಾ ರಚನೆಗೆ ಆನೆಬಲ ಬಂದಂತಾಗಿದೆ. ಜಾರಕಿಹೊಳಿ ಬಂಧುಗಳು ಸರ್ಕಾರದ ಮಟ್ಟದಲ್ಲಿ ಪ್ರಭಾವಿಯಾಗಿರುವುದರಿಂದ ಜಿಲ್ಲೆ ರಚನೆ ಸಾಧ್ಯವಿದೆ. ಬೆಳಗಾವಿಯಲ್ಲಿ ಎಂಇಎಸ್ ಪ್ರಭಾವ ಕುಗ್ಗುತ್ತಿರುವುದರಿಂದ ಗೋಕಾಕ ಜಿಲ್ಲೆಯಿಂದ ಕನ್ನಡ ಭಾಷೆಗೆ ಹಾನಿಯಾಗುವುದಿಲ್ಲ. ಕನ್ನಡಕ್ಕೆ ಕುತ್ತು ಬಂದಾಗ ಎಲ್ಲರೂ ಹೋರಾಟ ಮಾಡುತ್ತೇವೆ. ಚಿಕ್ಕೋಡಿಕ್ಕಿಂತಲೂ ನಾವುಗಳು ಹೋರಾಟವನ್ನು ತೀವ್ರಗೊಳಿಸೋಣ. ಒಗ್ಗಟ್ಟಿನಿಂದ ಹೋರಾಡೋಣ. ಮುರುಘರಾಜೇಂದ್ರ ಮಹಾಸ್ವಾಮಿಗಳು ಗೋಕಾಕ ಜಿಲ್ಲಾ ರಚನೆಗಾಗಿ ಯಾವುದೇ ಜವಾಬ್ದಾರಿ ನೀಡಿದರೂ ನಿಭಾಯಿಸುವೆ.

Related posts: