ಗೋಕಾಕ:ಕೌಜಲಗಿ ಪಟ್ಟಣದ ಅಭಿವೃದ್ಧಿಗೆ ಸರ್ಕಾರದಿಂದ 3.77 ಕೋಟಿ ರೂ.ಗಳ ಅನುದಾನ : ಶಾಸಕ ಬಾಲಚಂದ್ರ
ಕೌಜಲಗಿ ಪಟ್ಟಣದ ಅಭಿವೃದ್ಧಿಗೆ ಸರ್ಕಾರದಿಂದ 3.77 ಕೋಟಿ ರೂ.ಗಳ ಅನುದಾನ : ಶಾಸಕ ಬಾಲಚಂದ್ರ
ಗೋಕಾಕ ಫೆ 9 : ಕೌಜಲಗಿ ಪಟ್ಟಣದ ಅಭಿವೃದ್ಧಿಗೆ ಸರ್ಕಾರದಿಂದ 3.77 ಕೋಟಿ ರೂ.ಗಳ ಅನುದಾನದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಇತ್ತೀಚೆಗೆ ಕೌಜಲಗಿಯಲ್ಲಿ ವಿವಿಧ ಅಭಿವೃದ್ಧಿಪರ ಕಾಮಗಾರಿಗಳನ್ನು ನೆರವೇರಿಸಿ ಅವರು ಮಾತನಾಡಿದರು.
ಸರ್ಕಾರಿ ಪದವಿ ಪೂರ್ವ ಮಹಾವಿದ್ಯಾಲಯದ ಹೆಚ್ಚುವರಿ ಕಟ್ಟಡಕ್ಕಾಗಿ 1 ಕೋಟಿ ರೂ, ಕೌಜಲಗಿ-ಹೊನಕುಪ್ಪಿ ರಸ್ತೆ ಸುಧಾರಣೆಗೆ 30 ಲಕ್ಷ ರೂ, ಕೌಜಲಗಿ-ಕಳ್ಳಿಗುದ್ದಿ ರಸ್ತೆ ಸುಧಾರಣೆಗೆ 30 ಲಕ್ಷ ರೂ, ಎಸ್‍ಸಿಪಿ ಯೋಜನೆಯಡಿ ಚರಂಡಿ ನಿರ್ಮಾಣಕ್ಕೆ 20 ಲಕ್ಷ ರೂ, ಅಂಬೇಡ್ಕರ ಭವನ ನಿರ್ಮಾಣಕ್ಕೆ 50 ಲಕ್ಷ ರೂ.ಗಳು ಸೇರಿದಂತೆ 2.30 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ ಎಂದರು. ಈ ಕಾಮಗಾರಿಗಳಿಗೆ ಬಾಲಚಂದ್ರ ಜಾರಕಿಹೊಳಿ ಅವರು ಗುದ್ದಲಿ ಪೂಜೆ ನೆರವೇರಿಸಿದರು.
ಉದ್ಘಾಟನೆ : 50 ಲಕ್ಷ ರೂ, ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿದ ಸರ್ಕಾರಿ ಪದವಿ ಪೂರ್ವ ಮಹಾವಿದ್ಯಾಲಯ ಕಟ್ಟಡ ಕಾಮಗಾರಿ, 17 ಲಕ್ಷ ರೂ. ವೆಚ್ಚದ ಸರ್ಕಾರಿ ಪ್ರಾಥಮಿಕ ಶಾಲೆಯ 5 ಕೊಠಡಿಗಳ ನವೀಕರಣ ಕಾಮಗಾರಿ, ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ 4 ಲಕ್ಷ ರೂ. ವೆಚ್ಚದ ಬಸ್ ತಂಗುದಾನ, 3 ಲಕ್ಷ ರೂ. ವೆಚ್ಚದ ಕಳ್ಳಿಗುದ್ದಿ ರಸ್ತೆಗೆ ಬಸ್ ತಂಗುದಾನ, 3 ಲಕ್ಷ ರೂ. ವೆಚ್ಚದ ಮುಖ್ಯ ರಸ್ತೆಗಳ ಸ್ವಾಗತ ಕಮಾನುಗಳು ಹಾಗೂ 64 ಲಕ್ಷ ರೂ. ವೆಚ್ಚದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ನರೇಗಾ ಯೋಜನೆಯಡಿ ನೂತನವಾಗಿ ನಿರ್ಮಿಸಿದ 8 ಅಂಗನವಾಡಿ ಕಟ್ಟಡಗಳನ್ನು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಇದೇ ಸಂದರ್ಭದಲ್ಲಿ ಉದ್ಘಾಟಿಸಿದರು.
ಜಿಪಂ ಸದಸ್ಯರಾದ ಶಕುಂತಲಾ ಪರುಶೆಟ್ಟಿ, ಶಶಿಕಲಾ ಸಣ್ಣಕ್ಕಿ, ಧಾರವಾಡ ಕೃಷಿ ವಿವಿಯ ವ್ಯವಸ್ಥಾಪನ ಮಂಡಳಿ ಸದಸ್ಯ ಡಾ.ರಾಜೇಂದ್ರ ಸಣ್ಣಕ್ಕಿ, ಮಾದರಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಅಶೋಕ ಪರುಶೆಟ್ಟಿ, ಪಿಎಲ್‍ಡಿ ಬ್ಯಾಂಕ್ ನಿರ್ದೇಶಕರಾದ ಎಂ.ಆರ್.ಭೋವಿ, ಅಶೋಕ ಉದ್ದಪ್ಪನವರ, ಗ್ರಾಪಂ ಅಧ್ಯಕ್ಷ ರಾಯಪ್ಪ ಬಳೋಲದಾರ, ತಾಪಂ ಸದಸ್ಯರಾದ ಶಾಂತಪ್ಪ ಹಿರೇಮೇತ್ರಿ, ಲಕ್ಷ್ಮಣ ಮಸಗುಪ್ಪಿ, ಪಿಕೆಪಿಎಸ್ ಅಧ್ಯಕ್ಷ ಮಹೇಶ ಪಟ್ಟಣಶೆಟ್ಟಿ, ಶಿವಾನಂದ ಲೋಕನ್ನವರ, ಸುಭಾಸ ಕೌಜಲಗಿ, ಡಿ.ಜೆ. ಮುಲ್ತಾನಿ, ಅರಭಾವಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ವಾಯ್.ಎಂ. ಗುಜನಟ್ಟಿ, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಸಿ. ಗಂಗಾಧರ, ಮುಂತಾದವರು ಉಪಸ್ಥಿತರಿದ್ದರು.