ಮೂಡಲಗಿ:ಭಿನ್ನಾಭಿಪ್ರಾಯಗಳನ್ನು ಮರೆತು ಮೂಡಲಗಿ ಸರ್ವಾಂಗೀಣ ಅಭಿವೃದ್ಧಿಗೆ ಒಂದಾಗಿ : ಶಾಸಕ ಬಾಲಚಂದ್ರ
ಭಿನ್ನಾಭಿಪ್ರಾಯಗಳನ್ನು ಮರೆತು ಮೂಡಲಗಿ ಸರ್ವಾಂಗೀಣ ಅಭಿವೃದ್ಧಿಗೆ ಒಂದಾಗಿ : ಶಾಸಕ ಬಾಲಚಂದ್ರ
ಮೂಡಲಗಿ ಫೆ 10 : ಕಳೆದ 6 ವರ್ಷಗಳಿಂದ ರಕ್ತದಾನ ಶಿಬಿರವನ್ನು ಏರ್ಪಡಿಸುತ್ತಿರುವ ಕೆ.ಎಚ್.ಸೋನವಾಲ್ಕರ ಪ್ರತಿಷ್ಠಾನದ ಕಾರ್ಯ ಶ್ಲಾಘನೀಯವೆಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಪ್ರಶಂಸಿಸಿದರು.
ಇಲ್ಲಿಯ ಕೃಷ್ಣಪ್ಪ ಹ ಸೋನವಾಲ್ಕರ ಸರ್ಕಾರಿ ಪ್ರೌಢ ಶಾಲೆಯಲ್ಲಿ ದಿ. ಕೆ.ಎಚ್.ಸೋನವಾಲ್ಕರ ಅವರ ಜನ್ಮದಿನಾಚರಣೆ ಅಂಗವಾಗಿ ಶನಿವಾರದಂದು ಜರುಗಿದ ಬೃಹತ್ ಐಚ್ಛಿಕ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಅನ್ನದಾನ, ವಿದ್ಯಾದಾನ ಹಾಗೂ ರಕ್ತದಾನ ಶ್ರೇಷ್ಠವಾದ ಕಾರ್ಯಗಳು. ರಕ್ತದಾನದಂತಹ ಶಿಬಿರಗಳು ಗ್ರಾಮೀಣ ಪ್ರದೇಶದಲ್ಲಿಯೂ ನಡೆಯಬೇಕಾಗಿದೆ. ಪಟ್ಟಣದಲ್ಲಿ ಕೆ.ಎಚ್. ಸೋನವಾಲ್ಕರ ಜನ್ಮದಿನದ ನಿಮಿತ್ಯ ಹಮ್ಮಿಕೊಂಡು ಬರುತ್ತಿರುವ ಲಕ್ಷ್ಮೀ ಸೋನವಾಲ್ಕರ ಕುಟುಂಬದ ಕಾರ್ಯ ಮಾದರಿಯಾಗಿದೆ ಎಂದರು.
ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ ಯೋಜನೆಯಡಿ 16 ಹೊಸ ಪ್ರೌಢ ಶಾಲೆಗಳ ಕಟ್ಟಡಗಳ ಮಂಜೂರಾತಿ ದೊರೆತಿದ್ದು, ಈಗಾಗಲೇ ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದರು.
ಮೂಡಲಗಿ ಹೊಸ ತಾಲೂಕು ಪ್ರಾರಂಭವಾಗಿರುವುದರಿಂದ, ತಹಶೀಲ್ದಾರ ಕಛೇರಿ ಸೇರಿದಂತೆ ಇನ್ನೀತರ ಇಲಾಖೆಗಳಲ್ಲಿ ಸಿಬ್ಬಂದಿ ಕೊರತೆಯಿಂದ ವಿಳಂಬವಾಗುತ್ತಿದೆ. 15 ದಿನಗಳೊಳಗಾಗಿ ಪೂರ್ಣ ಪ್ರಮಾಣದಲ್ಲಿ ಸಿಬ್ಬಂದಿಗಳನ್ನು ನಿಯೋಜನೆಗೊಳಿಸಿ ಸಾರ್ವಜನಿಕರಿಗೆ ಆಡಳಿತಾತ್ಮಕವಾಗಿ ಅನುಕೂಲ ಮಾಡಿಕೊಡಲಾಗುವುದು ಎಂದರು.
ಪಟ್ಟಣದ ಮುಖಂಡರು ತಮ್ಮಲ್ಲಿರುವ ಸಣ್ಣಪುಟ್ಟ ವ್ಯತ್ಯಾಸಗಳನ್ನು ಮರೆತು ಮೂಡಲಗಿ ಸರ್ವಾಂಗೀಣ ಅಭಿವೃದ್ಧಿಗೆ ಒಂದಾಗಬೇಕಾಗಿದೆ. ಈ ಕಾರ್ಯಕ್ರಮದಲ್ಲಿ ಎಲ್ಲರೂ ಭಾಗಿಯಾಗುವ ಮೂಲಕ ಏಕತೆಯ ಪ್ರದರ್ಶನ ತೋರಿರುವುದು ಒಗ್ಗಟ್ಟಿನ ಸಂಕೇತವಾಗಿದೆ. ಇದೇ ಒಗ್ಗಟ್ಟು ಮುಂದಿನ ದಿನಗಳಲ್ಲಿಯೂ ಕಾಯ್ದುಕೊಂಡು ಹೋಗುವಂತೆ ಹೇಳಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಎರೆಹೊಸಹಳ್ಳಿ ವೇಮನ ಮಹಾಪೀಠದ ವೇಮನಾನಂದ ಮಹಾಸ್ವಾಮಿಗಳು, ಸ್ಥಳೀಯ ಶಿವಬೋಧರಂಗ ಮಠದ ಶ್ರೀಪಾದಬೋಧ ಸ್ವಾಮಿಗಳು ಹಾಗೂ ಬಾಗೋಜಿಕೊಪ್ಪದ ಶಿವಲಿಂಗ ಮಹಾಸ್ವಾಮಿಗಳು ವಹಿಸಿದ್ದರು.
ಪ್ರತಿಷ್ಠಾನದ ಅಧ್ಯಕ್ಷ ಗೋವಿಂದಪ್ಪ ಸೋನವಾಲ್ಕರ ಈ ಶಿಬಿರದ ಅಧ್ಯಕ್ಷತೆ ವಹಿಸಿದ್ದರು.
ಲಕ್ಷ್ಮೀ ಕೃಷ್ಣಪ್ಪ ಸೋನವಾಲ್ಕರ, ರಾಜೀವಗಾಂಧಿ ವಿವಿಯ ಡೆಪ್ಯುಟಿ ರಜಿಸ್ಟ್ರಾರ್ ಹಾಗೂ ಖ್ಯಾತ ವೈದ್ಯ ಡಾ.ಗಿರೀಶ ಸೋನವಾಲ್ಕರ, ಸಂತೋಷ ಸೋನವಾಲ್ಕರ, ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಸುಭಾಸ ಢವಳೇಶ್ವರ, ವೀರಣ್ಣಾ ಹೊಸೂರ, ನಿಂಗಪ್ಪ ಫಿರೋಜಿ, ಪುರಸಭೆ ಅಧ್ಯಕ್ಷೆ ಕಮಲವ್ವ ಹಳಬರ, ಉಪಾಧ್ಯಕ್ಷ ರವಿ ಸೋನವಾಲ್ಕರ, ಬೆಳಗಾವಿ ಎಸ್‍ಪಿ(ಎಸಿಬಿ) ಅಮರನಾಥ ರೆಡ್ಡಿ, ಬಾಗಲಕೋಟ ತೋಟಗಾರಿಕೆ ವಿವಿಯ ಡಿಡಿ ಡಾ.ರವೀಂದ್ರ ಹಕಾಟೆ, ಹಳ್ಳೂರ ಜಿಪಂ ಸದಸ್ಯೆ ವಾಸಂತಿ ತೇರದಾಳ, ಮೂಡಲಗಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸುಭಾಸ ಸೋನವಾಲ್ಕರ, ಆರ್.ಆರ್. ಪ್ಯಾಟಿಗೌಡರ, ವಿಜಯ ಸೋನವಾಲ್ಕರ, ಡಾ.ಪ್ರವೀಣ ಮುರಗೋಡ, ಸಿಪಿಐ ಮುರನಾಳ, ಪಿಕೆಪಿಎಸ್ ಅಧ್ಯಕ್ಷ ಶ್ರೀಶೈಲ ಬಳಿಗಾರ, ಶಿವನಗೌಡ ಪಾಟೀಲ, ತಾಪಂ ಸದಸ್ಯರಾದ ಶಿವಬಸು ಜುಂಜರವಾಡ, ಹಣಮಂತ ತೇರದಾಳ, ಪ್ರೇಮಾ ಸನದಿ, ಪ್ರಭಾಶುಗರ ನಿರ್ದೇಶಕ ಮಲ್ಲಿಕಾರ್ಜುನ ಕಬ್ಬೂರ, ಜಿಪಂ ಮಾಜಿ ಸದಸ್ಯ ಭೀಮಶಿ ಮಗದುಮ್ಮ, ಪ್ರಾಚಾರ್ಯ ಎಂ.ಎಂ. ದಬಾಡಿ, ಮೂಡಲಗಿ ಪುರಸಭೆ ಸದಸ್ಯರು, ಗಣ್ಯರು ಉಪಸ್ಥಿತರಿದ್ದರು.
ಮೂಡಲಗಿಯ ಕೆ.ಎಚ್.ಸೋನವಾಲ್ಕರ ಪ್ರತಿಷ್ಠಾನ, ಕೆ.ಎಚ್.ಸೋನವಾಲ್ಕರ ಸರ್ಕಾರಿ ಪ್ರೌಢ ಶಾಲೆ, ಲಕ್ಷ್ಮೀ ಶಿಕ್ಷಣ ಸಂಸ್ಥೆ, ಸ್ಪೋಟ್ರ್ಸ್ ಅಸೋಸಿಯೇಷನ್, ಮೂಡಲಗಿ ಶಿಕ್ಷಣ ಸಂಸ್ಥೆಯ ಯುವ ರೆಡ್ ಕ್ರಾಸ್ ಘಟಕ, ಆರೋಗ್ಯ ಘಟಕ ರಾಷ್ಟ್ರೀಯ ಸೇವಾ ಯೋಜನೆ, ಶ್ರೀಪಾದಬೋಧ ಸ್ವಾಮೀಜಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಗೋಕಾಕದ ರೋಟರಿ ರಕ್ತ ಬಂಢಾರ ಇವರ ಜಂಟಿ ಆಶ್ರಯದಲ್ಲಿ ಈ ಶಿಬಿರ ಜರುಗಿತು.