RNI NO. KARKAN/2006/27779|Saturday, October 19, 2024
You are here: Home » breaking news » ಬೆಳಗಾವಿ:ಪಾಲಿಕೆ ಮೀಸಲಾತಿ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ ಎಂಇಎಸ್

ಬೆಳಗಾವಿ:ಪಾಲಿಕೆ ಮೀಸಲಾತಿ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ ಎಂಇಎಸ್ 

ಪಾಲಿಕೆ ಮೀಸಲಾತಿ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ ಎಂಇಎಸ್

ಬೆಳಗಾವಿ ಫೆ 15: ಸುಮಾರು ಒಂದು ದಶಕದ ನಂತರ ಬೆಳಗಾವಿ ಮಹಾನಗರ ಪಾಲಿಕೆಗೆ ಕನ್ನಡಿಗರು ಮೇಯರ ಆಗಲಿದ್ದಾರೆ ಎಂಬ ಸಂತಸದಲ್ಲಿದ ಕನ್ನಡಿಗರಿಗೆ ಎಂಇಎಸ್ ಅಡ್ಡಗಾಲು ಹಾಕಲು ಮುಂದಾಗಿದೆ . ರಾಜ್ಯ ಸರಕಾರ ಹೊರಡಿಸಿದ ಮೀಸಲಾತಿಯಿಂದ ಕನ್ನಡಿಗರು ಮೇಯರ್ ಆಗ್ತಾರೆ ಅನ್ನೊ ಕಾರಣಕ್ಕೆ ಸರ್ಕಾರ ಹೊರಡಿಸಿದ ಮೀಸಲಾತಿ ಪ್ರಶ್ನಿಸಿ ಎಂಇಎಸ್ ಹೈಕೋರ್ಟ್ ಮೆಟ್ಟಿಲೇರಿದ್ದು, ಇದೇ 20ರಂದು ಅರ್ಜಿಯ ವಿಚಾರಣೆ ನಡೆಯಲಿದೆ. ಈ ಮೂಲಕ ಕನ್ನಡಿಗರಿಗೆ ಒಲಿದ ಮೇಯರ್ ಪಟ್ಟವನ್ನ ಹಿಂಬಾಗಿಲಿನಿಂದ ತಪ್ಪಿಸಲು ಎಂಇಎಸ್ ಹೆಣಗಾಡುತ್ತಿದೆ.

ಬೆಳಗಾವಿ ಮಹಾನಗರ ಪಾಲಿಕೆಯ ಕೊನೆಯ ಅವಧಿಯ ಮೇಯರ್ ಪಟ್ಟ ತಪ್ಪುವುದು ಖಚಿತವಾದ ಬೆನ್ನಲ್ಲೇ ಎಂಇಎಸ್ ಕನ್ನಡಿಗರು ಮೇಯರ್ ಆಗುವ ಕನಸಿಗೆ ಮಣ್ಣೆರಚುವ ತಂತ್ರಕ್ಕೆ ಮುಂದಾಗಿದೆ. ಹೀಗಾಗಿ ಮೇಯರ್ ಹಾಗೂ ಉಪ ಮೇಯರ್ ಹುದ್ದೆಗೆ ಸರ್ಕಾರ ನಿಗದಿಪಡಿಸಿದ್ದ ಮೀಸಲಾತಿ ಪ್ರಶ್ನಿಸಿ ಎಂಇಎಸ್ ಸದಸ್ಯ ರತನ್ ಮಾಸೇಕರ್ ಧಾರವಾಡದ ಹೈಕೋರ್ಟ್ ಪೀಠದಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದಾರೆ. ಮೇಯರ್ ಹಾಗೂ ಉಪ ಮೇಯರ್ ಹುದ್ದೆಗೆ ಸರ್ಕಾರ ಮೀಸಲಾತಿ ಘೋಷಿಸಲು ಬರುವುದಿಲ್ಲ ಎಂಬ ವಾದವನ್ನ ನ್ಯಾಯಾಲಯದ ಮುಂದಿಟ್ಟಿದ್ದಾರೆ. ಫೆ. 8 ರಂದು ರಿಟ್ ಅರ್ಜಿ ಸಲ್ಲಿಸಲಾಗಿದ್ದು, ಇದೇ 20ರಂದು ನ್ಯಾಯಾಲಯದ ಮುಂದೆ ಅರ್ಜಿ ವಿಚಾರಣೆಗೆ ಬರಲಿದೆ.
ಬೆಳಗಾವಿ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಮೇಯರ್ ಹುದ್ದೆಗೆ ಎಸ್‌ಟಿ ಮೀಸಲಾತಿಯನ್ನು ಸರ್ಕಾರ ನಿಗದಿಪಡಿಸಿದ್ದು, ಉಪ ಮೇಯರ್ ಹುದ್ದೆಗೆ ಸರ್ಕಾರ ಹಿಂದುಳಿದ ವರ್ಗ (ಎ) ಮಹಿಳೆಗೆ ಮೀಸಲಾತಿ ನಿಗದಿ ಪಡಿಸಿತ್ತು. ಮೇಯರ್ ಸ್ಥಾನಕ್ಕೇರುವ ಸಿದ್ಧತೆಯಲ್ಲಿ ಕನ್ನಡ ಮತ್ತು ಉರ್ದು ಭಾಷಿಕ ಸದಸ್ಯರು ಇದ್ದರೆ ಇದಕ್ಕೆ ಎಂಇಎಸ್ ತೆಗೆದ ಕ್ಯಾತೆ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದೆ. ಎಂಇಎಸ್ ಮುಂಚೆಯಿಂದಲೂ ಒಂದಿಲ್ಲೊಂದು ಕಿತಾಪತಿ ಮಾಡುತ್ತಲೇ ಬಂದಿದೆ. ಹಿಂಬಾಗಿಲ ರಾಜಕಾರಣ ಮಾಡುತ್ತಿರುವ ಎಂಇಎಸ್‌ಗೆ ನಾವು ಸೊಪ್ಪು ಹಾಕೋದಿಲ್ಲ. ಎಂಇಎಸ್ ಹೊರತು ಪಡಿಸಿ ಮರಾಠಿ ಭಾಷಿಕ ಕೆಲ ಪಾಲಿಕೆ ಸದಸ್ಯರು ನಮ್ಮ ಜೊತೆಗಿದ್ದಾರೆ. ಹೀಗಾಗಿ ಈ ಬಾರಿ ಕನ್ನಡಿಗರಿಂದ ಮೇಯರ್ ಪಟ್ಟವನ್ನ ಕಸಿಯಲು ಸಾಧ್ಯವಿಲ್ಲ ಅಂತ ಮಹಾನಗರ ಪಾಲಿಕೆ ಪ್ರತಿಪಕ್ಷ ನಾಯಕ ಕನ್ನಡದ ರಮೇಶ್ ಗುಡುಗಿದ್ದಾರೆ.

ಒಟ್ನಲ್ಲಿ ಪಾಲಿಕೆಯಲ್ಲಿನ ಅಧಿಕಾರ ಕಳೆದುಕೊಳ್ಳುವ ಭಯದಲ್ಲಿರುವ ಎಂಇಎಸ್ ವಾದಕ್ಕೆ ಸರ್ಕಾರ ತಕ್ಕ ಉತ್ತರ ನೀಡಬೇಕಿದೆ. ಫೆ. 20ರಂದು ಸರ್ಕಾರದ ಪರ ವಕೀಲರು ಸಮರ್ಥ ವಾದ ಮಂಡಿಸಿ ಎಂಇಎಸ್‌ ಮೊಂಡು ವಾದಕ್ಕೆ ಕಡಿವಾಣ ಹಾಕಬೇಕಿದೆ.

Related posts: