RNI NO. KARKAN/2006/27779|Thursday, November 7, 2024
You are here: Home » breaking news » ಮೂಡಲಗಿ:ಧರ್ಮಗಳ ಬಗ್ಗೆ ಅಭಿಮಾನ ಹೊಂದಿದರೆ ಮಾತ್ರ ಸಹೋದರತ್ವ ಮನೋಭಾವನೆ ಬೆಳೆಯಲು ಸಾಧ್ಯ: ಶಾಸಕ ಬಾಲಚಂದ್ರ

ಮೂಡಲಗಿ:ಧರ್ಮಗಳ ಬಗ್ಗೆ ಅಭಿಮಾನ ಹೊಂದಿದರೆ ಮಾತ್ರ ಸಹೋದರತ್ವ ಮನೋಭಾವನೆ ಬೆಳೆಯಲು ಸಾಧ್ಯ: ಶಾಸಕ ಬಾಲಚಂದ್ರ 

ಧರ್ಮಗಳ ಬಗ್ಗೆ ಅಭಿಮಾನ ಹೊಂದಿದರೆ ಮಾತ್ರ ಸಹೋದರತ್ವ ಮನೋಭಾವನೆ ಬೆಳೆಯಲು ಸಾಧ್ಯ: ಶಾಸಕ ಬಾಲಚಂದ್ರ

ಮೂಡಲಗಿ ಫೆ 17 : ನಮ್ಮ ಧರ್ಮವನ್ನು ಪ್ರೀತಿಸುವುದರ ಜೊತೆಗೆ ಅನ್ಯ ಧರ್ಮಗಳ ಬಗ್ಗೆ ಗೌರವ ನೀಡುವಂತೆ ಶಾಸಕ ಹಾಗೂ ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಸಮೀಪದ ಕಮಲದಿನ್ನಿ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಕ್ರಿಶ್ಚಿಯನ್ ಸಮಾಜ ಏರ್ಪಡಿಸಿದ್ದ ಆತ್ಮೀಕ ಉಜ್ಜೀವನ ಕೂಟಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬೇರೆ-ಬೇರೆ ಧರ್ಮಗಳ ಬಗ್ಗೆ ಅಭಿಮಾನ ಹೊಂದಿದರೆ ಮಾತ್ರ ಸಹೋದರತ್ವ ಮನೋಭಾವನೆ ಬೆಳೆಯಲು ಸಾಧ್ಯವಾಗುತ್ತದೆ ಎಂದರು.
ಎಲ್ಲ ಧರ್ಮಗಳ ಗ್ರಂಥಗಳು ಹೇಳುವಂತೆ ಬೇರೆಯವರು ಕಷ್ಟದಲ್ಲಿದ್ದಾಗ ಅವರಿಗೆ ಸಹಾಯ ನೀಡುವಂತಾಗಬೇಕು. ಕಷ್ಟಕಾರ್ಪಣ್ಯಗಳಿಗೆ ಸ್ಪಂದಿಸುವ ಇಚ್ಛಾಶಕ್ತಿ ಹೊಂದಿರಬೇಕು. ಮತ್ತೊಬ್ಬರಿಗೆ ಒಳ್ಳೆಯದನ್ನು ಮಾಡಬೇಕು. ಕೆಟ್ಟದನ್ನು ಎಂದಿಗೂ ಯಾರಿಗೂ ಬಗೆಯಬಾರದು. ಒಂದು ವೇಳೆ ಕೆಟ್ಟದ್ದನ್ನು ಮಾಡುವ ಪ್ರಸಂಗ ಬಂದರೆ ಆ ಸಂದರ್ಭದಲ್ಲಿ ಮೌನಿಯಾಗಿರಬೇಕೆಂದು ಹೇಳಿದರು.
ಈ ಪೃಥ್ವಿಯ ಮೇಲೆ ನಮ್ಮನ್ನು ಮನುಷ್ಯನನ್ನಾಗಿ ರೂಪಿಸಿರುವುದಕ್ಕೆ ದೇವರಿಗೆ ನಾವು ಕೃತಜ್ಞರಾಗಿರಬೇಕು. ಮನುಷ್ಯನಾಗಿ ಹುಟ್ಟಿದ ನಾವೆಲ್ಲರೂ ಪುಣ್ಯವಂತರು. ಈ ಜನ್ಮ ಸಾರ್ಥಕಪಡಿಸಿಕೊಳ್ಳಲು ಸಮಾಜದಲ್ಲಿ ವಿಧಾಯಕ ಕಾರ್ಯಗಳಿಗೆ ನಮ್ಮ ಸೇವೆ ಮೀಸಲಿರಬೇಕು. ಧಾರ್ಮಿಕ ಮನೋಭಾವನೆಗೆ ಒಳಪಟ್ಟು ಎಲ್ಲ ಧರ್ಮಿಯರನ್ನು, ಎಲ್ಲ ಜನಾಂಗದವರನ್ನು ಒಂದೇ ತಾಯಿಯ ಮಕ್ಕಳೆಂಬ ಪ್ರೀತಿಯನ್ನು ಬೆಳೆಸಿಕೊಂಡು ಅಣ್ಣತಮ್ಮಂದಿರರಂತೆ ಬದುಕಿ ಸಮಾಜಕ್ಕೆ ಮಾರ್ಗದರ್ಶಿಯಾಗಿರಬೇಕೆಂದು ಹೇಳಿದ ಅವರು, ವಿಶ್ವದಲ್ಲಿಯೇ ಭಾರತ ವಿವಿಧತೆಯಲ್ಲಿ ಏಕತೆ ಬಿಂಬಿಸುತ್ತಿರುವ ಏಕೈಕ ರಾಷ್ಟ್ರವಾಗಿದೆ ಎಂದು ತಿಳಿಸಿದರು.
ಕಮಲದಿನ್ನಿ ಕ್ರಿಶ್ಚಿಯನ್ ಸಮಾಜ ಏರ್ಪಡಿಸಿರುವ ಉಜ್ಜೀವನ ಕೂಟಗಳ ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿರುವ ಸಮಾಜ ಬಾಂಧವರನ್ನು ಅಭಿನಂದಿಸಿದ ಅವರು, ಎಲ್ಲ ಬೇಡಿಕೆಗಳನ್ನು ಈಡೇರಿಸುವ ಆಶ್ವಾಸನೆ ನೀಡಿದರು.
ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನು ಇದೇ ಸಂದರ್ಭದಲ್ಲಿ ಸಮಾಜ ಬಾಂಧವರು ಸತ್ಕರಿಸಿದರು.
ವರ್ತಕ ಹನಮಂತ ತೇರದಾಳ, ಮೂಡಲಗಿ ಪುರಸಭೆ ಸದಸ್ಯರಾದ ಸಂತೋಷ ಸೋನವಾಲ್ಕರ, ರಮೇಶ ಸಣ್ಣಕ್ಕಿ, ಸ್ಥಳೀಯರಾದ ಶ್ರೀಕಾಂತ ದಡ್ಡಿಮನಿ, ರಮೇಶ ಹಾದಿಮನಿ, ಯಶವಂತ ದಡ್ಡಿಮನಿ, ಯೋಹಾನ ಮಾರಾಪೂರ, ಮುತ್ತೆಪ್ಪ ಮಾರಾಪೂರ, ಫಾ.ಮ್ಯಾಥ್ಯೂ ಮುಂತಾದವರು ವೇದಿಕೆಯಲ್ಲಿದ್ದರು.

Related posts: