RNI NO. KARKAN/2006/27779|Monday, January 6, 2025
You are here: Home » breaking news » ಗೋಕಾಕ:ಮಹಿಳೆಯರಿಗೆ ವಿಧಾನಸಭೆಯಲ್ಲೂ ಶೇ 33 ರಷ್ಟು ಮೀಸಲಾತಿ ಕಲ್ಪಿಸಿ : ಕೇಂದ್ರಕ್ಕೆ ಶಾಸಕ ಬಾಲಚಂದ್ರ ಮನವಿ

ಗೋಕಾಕ:ಮಹಿಳೆಯರಿಗೆ ವಿಧಾನಸಭೆಯಲ್ಲೂ ಶೇ 33 ರಷ್ಟು ಮೀಸಲಾತಿ ಕಲ್ಪಿಸಿ : ಕೇಂದ್ರಕ್ಕೆ ಶಾಸಕ ಬಾಲಚಂದ್ರ ಮನವಿ 

ಮಹಿಳೆಯರಿಗೆ ವಿಧಾನಸಭೆಯಲ್ಲೂ ಶೇ 33 ರಷ್ಟು ಮೀಸಲಾತಿ ಕಲ್ಪಿಸಿ : ಕೇಂದ್ರಕ್ಕೆ ಶಾಸಕ ಬಾಲಚಂದ್ರ ಮನವಿ

ಗೋಕಾಕ ಫೆ 19 : ಎಲ್ಲ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿರುವ ಮಹಿಳೆಯರಿಗೆ ವಿಧಾನಸಭೆಯಲ್ಲೂ ಶೇ 33 ರಷ್ಟು ಮೀಸಲಾತಿ ಕಲ್ಪಿಸಿಕೊಡುವಂತೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಪ್ರಧಾನಿ ನರೇಂದ್ರ ಮೋದಿ ಅವರಲ್ಲಿ ಮನವಿ ಮಾಡಿಕೊಂಡರು.
ಇಲ್ಲಿಯ ಎನ್‍ಎಸ್‍ಎಫ್ ಅತಿಥಿ ಗೃಹದಲ್ಲಿ ಭಾನುವಾರ ಸಂಜೆ ಅರಭಾವಿ ಮಂಡಲ ಮಹಿಳಾ ಮೋರ್ಚಾ ಕಾರ್ಯಕಾರಣಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮಹಿಳೆಯರು ರಾಜಕೀಯವಾಗಿ ಮುಂದೆ ಬರಬೇಕಾದರೆ ಶಾಸನ ಸಭೆಯಲ್ಲೂ ಅವರಿಗೆ ರಾಜಕೀಯ ಅಧಿಕಾರ ಕಲ್ಪಿಸಿಕೊಡಬೇಕು. ಶೇ 33 ರಷ್ಟು ಮೀಸಲಾತಿ ಜಾರಿಗೆ ಬಂದರೆ ರಾಜ್ಯದಲ್ಲಿ 74 ಮಹಿಳೆಯರು ಶಾಸಕರಾಗುತ್ತಾರೆ. ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಈಗಾಗಲೇ ಶೇ 50 ರಷ್ಟು ಮೀಸಲಾತಿ ಕಲ್ಪಿಸಿದಂತೆ ಶಾಸನ ಸಭೆಯಲ್ಲೂ ಮೀಸಲಾತಿ ನೀಡಿ ಮಹಿಳೆಯರಿಗೆ ಹೆಚ್ಚಿನ ಅಧಿಕಾರ ನೀಡುವಂತೆ ಕೇಂದ್ರ ಸರ್ಕಾರವನ್ನು ಕೋರಿದರು.
ಮಹಿಳೆಯರಿಗೆ ಸಿಗಬೇಕಿರುವ ಹಕ್ಕುಗಳನ್ನು ಪಡೆಯಲು ಹೋರಾಟ ನಡೆಸಬೇಕು. ಸರ್ಕಾರ ಸಾಕಷ್ಟು ಯೋಜನೆಗಳನ್ನು ಜಾರಿ ಮಾಡಿದ್ದು, ಅಂತಹ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳುವಲ್ಲಿ ಮಹಿಳೆಯರು ಮುಂದೆ ಬರಬೇಕಾಗಿದೆ. ಅರಭಾವಿ ಮಂಡಲದಿಂದ ಬಿಜೆಪಿಯಿಂದ ಹಮ್ಮಿಕೊಳ್ಳಲಾಗಿರುವ ಮಹಿಳಾ ಸಮಾವೇಶಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಕಾರ್ಯಕರ್ತರನ್ನು ಕಳುಹಿಸಿಕೊಟ್ಟು ಯಶಸ್ಸಿಗೆ ಕೈಜೋಡಿಸುವುದಾಗಿ ತಿಳಿಸಿದರು.
ರಾಜ್ಯ ಬಿಜೆಪಿ ಮಹಿಳಾ ಮೋರ್ಚಾ ಕಾರ್ಯದರ್ಶಿ ಧನಶ್ರೀ ಸರದೇಸಾಯಿ ಜಾಂಬೋಟಿಕರ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿಯವರು ಮಹಿಳೆಯರ ಅಭ್ಯುದಯಕ್ಕೆ ಸಾಕಷ್ಟು ಯೋಜನೆಗಳನ್ನು ಜಾರಿಗೊಳಿಸಿದ್ದು, ಅಂತಹ ಯೋಜನೆಗಳನ್ನು ಪಡೆಯುವಲ್ಲಿ ಮುಂದೆ ಬರಬೇಕು. ಕೇಂದ್ರ ಸರ್ಕಾರದ ಸಾಧನೆಗಳನ್ನು ಜನರ ಮನೆ-ಮನೆ ಬಾಗಿಲಿಗೆ ತಲುಪಿಸುವ ಕೆಲಸ ಮಾಡಬೇಕು. ಉಜ್ವಲಾ ಗ್ಯಾಸ್ ಸಂಪರ್ಕಗಳನ್ನು ಎಲ್ಲ ಬಿಪಿಎಲ್ ಕುಟುಂಬಗಳಿಗೆ ನೀಡಿದ ಕೀರ್ತಿ ಬಿಜೆಪಿಗೆ ಸಲ್ಲುತ್ತದೆ. ಒಬ್ಬ ಮಹಿಳೆಯು 10 ಪುರುಷರಿಗೆ ಸಮವೆಂದು ಸ್ವತಃ ಪ್ರಧಾನಿಯವರೇ ಹೇಳಿದ್ದಾರೆ. ಇದರಿಂದ ಮಹಿಳೆಯರ ಶಕ್ತಿ ಎಷ್ಟು ಎಂಬುದು ಗೊತ್ತಾಗುತ್ತದೆ ಎಂದು ಹೇಳಿದರು.
ಅಧ್ಯಕ್ಷತೆಯನ್ನು ಅರಭಾವಿ ಮಂಡಲ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಸುಲೋಚನಾ ಮರ್ದಿ ವಹಿಸಿದ್ದರು.
ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಗೂಳಪ್ಪ ಹೊಸಮನಿ, ಜಿಲ್ಲಾ ಪಂಚಾಯತ ಸದಸ್ಯರಾದ ಗೋವಿಂದ ಕೊಪ್ಪದ, ಬಸವ್ವ ಕುಳ್ಳೂರ, ಕಸ್ತೂರಿ ಕಮತಿ, ವಾಸಂತಿ ತೇರದಾಳ, ಶಕುಂತಲಾ ಪರುಶೆಟ್ಟಿ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಪ್ರಕಾಶ ಮಾದರ, ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾ ಕಾರ್ಯದರ್ಶಿ ಪ್ರೇಮಾ ಭಂಡಾರಿ, ಹಾಲು ಉತ್ಪಾದಕರ ಪ್ರಕೋಷ್ಠ ಲಕ್ಷ್ಮೀ ಮಾಳೇದ, ಅಶೋಕ ಪರುಶೆಟ್ಟಿ, ಮಹಿಳಾ ಮೋರ್ಚಾ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಅರಭಾವಿ ಮಂಡಲ ಬಿಜೆಪಿ ಅಧ್ಯಕ್ಷ ಸುಭಾಸ ಪಾಟೀಲ ಸ್ವಾಗತಿಸಿದರು.

Related posts: