ಖಾನಾಪುರ:ಸಂವಿಧಾನದಲ್ಲಿ ಘೋಷಿಸಿರುವ ಕಾನೂನುಗಳನ್ನು ಪ್ರತಿಯೊಬ್ಬರು ಪಾಲಿಸಿ: ಪ್ರವೀಣ ಸಿಂಧೆ
ಸಂವಿಧಾನದಲ್ಲಿ ಘೋಷಿಸಿರುವ ಕಾನೂನುಗಳನ್ನು ಪ್ರತಿಯೊಬ್ಬರು ಪಾಲಿಸಿ: ಪ್ರವೀಣ ಸಿಂಧೆ
ಖಾನಾಪುರ ಫೆ 19 : ಸಮಾಜದಲ್ಲಿ ಶಾಂತಿ ನೆಲೆಸಲು ಸಂವಿಧಾನದಲ್ಲಿ ಘೋಷಿಸಿರುವ ಕಾನೂನುಗಳನ್ನು ಪ್ರತಿಯೊಬ್ಬರು ಪಾಲಿಸಬೇಕು. ಸ್ವಾರ್ಥ,ಸಂಕುಚಿತತೆಯಿಂದ ಅಶಾಂತಿ ಭುಗಿಲೆದ್ದು ದೊಂಬಿ,ಕಲಹ,ಯುದ್ಧಗಳು ಸಂಭವಿಸಿ ಶಿಕ್ಷೆ,ಜೈಲುವಾಸ,ನಷ್ಟ ಅನುಭವಿಸುವಂತಾಗುತ್ತದೆ.ಕಾನೂನು ರಚನೆಯ ಉದ್ದೇಶ ಮತ್ತು ಪಾಲನೆ ಮಹತ್ವ ಅರಿತು ಪಾಲಿಸುವದು ನಮ್ಮ ಕರ್ತವ್ಯ ಎಂದರಿತರೆ ಸುಖೀ ರಾಜ್ಯ ನಿರ್ಮಾಣವಾಗುವುದು ಎಂದು ಚನ್ನಮ್ಮ ಕಿತ್ತೂರು ಸರಕಾರಿ ಪ್ರಥಮದರ್ಜೆ ಕಾಲೇಜು ಸಹಾಯಕ ಪ್ರಾಧ್ಯಾಪಕ ಪ್ರವೀಣ ಸಿಂಧೆ ತಿಳಿಸಿದರು.
ತಾಲೂಕಿನ ಕಕ್ಕೇರಿ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಬೀಡಿಯ ಸರಕಾರಿ ಪ್ರಥಮದರ್ಜೆ ಕಾಲೇಜು ವತಿಯಿಂದ ಆಯೋಜಿಸಲಾಗಿದ್ದ ರಾಷ್ಟ್ರೀಯ ಸೇವಾ ಯೋಜನೆ ಶಿಬಿರದ ಅಂಗವಾಗಿ ಜನಸಾಮಾನ್ಯರಲ್ಲಿ ಕಾನೂನು ಅರಿವು ಕುರಿತು ಶಿಬಿರಾರ್ಥಿಗಳನ್ನುದ್ದೇಶಿಸಿ ಉಪನ್ಯಾಸ ನೀಡಿದರು.
ಕ.ಸಾ.ಪ.ಗೌರವ ಅಧ್ಯಕ್ಷ ಮತ್ತು ನಿವೃತ್ತ ಮುಖ್ಯೋಪಾಧ್ಯಾಯ ಈಶ್ವರ ಸಂಪಗಾವಿ ಅಧ್ಯಕ್ಷತೆ ವಹಿಸಿ,ಸರ್ವರು ಕಾನೂನು ಕೈಗೆ ತೆಗೆದುಕೊಳ್ಳದೆ ಎಲ್ಲರೂ ನೀತಿ,ಧರ್ಮದಿಂದ ನಡೆದುಕೊಂಡರೆ ನಮಗೆ ಕೋರ್ಟು,ಕಚೇರಿ,ಪೋಲೀಸ್,ಜೈಲುಗಳು,ವಕೀಲರ ಅವಶ್ಯಕತೆ ಇರುತ್ತಿರಲಿಲ್ಲ ಎಂದರು.
ಪ್ರಾಧ್ಯಾಪಕರಾದ ಮನೋಹರ ಉಡಚಂಚೆ,ಹನಮಂತಪ್ಪ,ವಿಜಯಕುಮಾರ ಮಲ್ಲಿಕಾರ್ಜುನಮಠ,ಗ್ರಾ.ಪಂ.ಸದಸ್ಯ ಅದೃಶ್ಯಪ್ಪ ಹಂಚಿನಮನಿ,ಇತರ ಸದಸ್ಯರು ಮತ್ತು ಸಿಬ್ಬಂದಿ ಇದ್ದರು