ಅಥಣಿ :ಮೋದಿ ಪ್ರಧಾನಿ ಹುದ್ದೆಗೆ ನಾಲಾಯಕ : ಸಿಎಂ ಸಿದ್ದರಾಮಯ್ಯ ವಾಗ್ದಾಳಿ
ಮೋದಿ ಪ್ರಧಾನಿ ಹುದ್ದೆಗೆ ನಾಲಾಯಕ : ಸಿಎಂ ಸಿದ್ದರಾಮಯ್ಯ ವಾಗ್ದಾಳಿ
ಆಥಣಿ ಫೆ 24: ರಾಜ್ಯ ಸರಕಾರ ಭ್ರಷ್ಟಾಚಾರ ಮಾಡಿದೆ ಎಂದು ಸುಳ್ಳು ಆರೋಪ ಮಾಡುತ್ತಿರುವ ಬಿಜಿಪಿಯವರು ದಾಖಲೆ ಇದ್ದರೆ ಬಹಿರಂಗ ಚರ್ಚೆಗೆ ಬರಬೇಕು ಹೀಗೆ ಆರೋಪಿಸುವ ಪ್ರಧಾನಿ ನರೇಂದ್ರ ಮೋದಿ ಈ ಹುದ್ದೆಗೆ ನಾಲಾಯಕ ಎಂದು ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು
ನಗರದಲ್ಲಿ ನಡೆದ ಜನಾಶೀರ್ವಾದ ಯಾತ್ರೆಯಲ್ಲಿ ಅವರು ಮಾತನಾಡಿದರು. ಉದ್ಯಮಿಗಳಾದ ನೀರವ್ ಮೋದಿ, ಲಲಿತ್ ಮೋದಿ, ವಿಜಯ ಮಲ್ಯ ಅವರು ದೇಶದ ಹಣ ದೋಚಿದ್ದಾರೆ. ಅವರೆಲ್ಲ ಪ್ರಧಾನಿ ಮೋದಿಯವರ ಕುಮ್ಮಕ್ಕಿನಿಂದ ದೇಶ ಲೂಟಿ ಹೊಡೆದಿದ್ದಾರೆ. ಇಂತಹವರ ಬಗ್ಗೆ ಕ್ರಮ ಜರುಗಿಸಿಲ್ಲ ಎಂದು ದೂರಿದರು.
ರೈತರ ಸಾಲ ಮನ್ನಾ ಮಾಡಲು ಕೇಂದ್ರ ಹಣಕಾಸು ಸಚಿವರು ಹಣ ನೀಡಿಲ್ಲ. ಬಿಜೆಪಿಯವರು ರಾಜ್ಯದ ಅಭಿವೃದ್ಧಿ ಬಗ್ಗೆ ಬಹಿರಂಗ ಚರ್ಚೆಗೆ ಬನ್ನಿ. ಕೇಂದ್ರ ಸರ್ಕಾರವು ಶೆ.99ರಷ್ಟು ಭ್ರಷ್ಟ ಸರ್ಕಾರವಾಗಿದೆ. ಬಿಜೆಪಿ ಆಡಳಿತ ಇರುವ ರಾಜ್ಯದಲ್ಲಿ ಸಾಮಾಜಿಕ ನ್ಯಾಯ ಒದಗಿಸಿಲ್ಲ. ರಾಜ್ಯದಲ್ಲಿ ಮೋದಿ ಅವರ ಟೀಂ ತಿಪ್ಪರಲಾಗ ಹಾಕಿದರೂ ಅಧಿಕಾರಕ್ಕೆ ಬರುವುದಿಲ್ಲ. ಮತ್ತೆ ಕಾಂಗ್ರೆಸ್ ಸರ್ಕಾರವೇ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇನ್ನು ಬಾಹುಬಲಿ ಮಹಾಮಸ್ತಾಭಿಷೇಕಕ್ಕೆ 200 ಕೋಟಿ ಹಣವನ್ನು ರಾಜ್ಯ ಸರ್ಕಾರ ನೀಡಿದೆ. ಕೇಂದ್ರ ಸರ್ಕಾರ ಒಂದು ಬಿಡಿಗಾಸು ಹಣ ನೀಡಿಲ್ಲ. ರಾಹುಲ್ ಗಾಂಧಿ ರಾಜ್ಯ ಪ್ರವಾಸದಿಂದ ರಾಜ್ಯದಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾನ ಪಡೆಯಲಿದೆ ಎಂದರು.
ಬಿಜೆಪಿ ನಾಯಕರು ಸಂವಿಧಾನ ಬದಲಾಯಿಸುವ ಹುನ್ನಾರ ನಡೆಸಿದ್ದಾರೆ. ಇಂತಹವರನ್ನು ಮುಂದಿನ ಚುನಾವಣೆಯಲ್ಲಿ ಸೋಲಿಸಬೇಕು. ಜಿಲ್ಲೆಯಲ್ಲಿ 15 ಸ್ಥಾನ ಗೆಲ್ಲಬೇಕಾಗಿದೆ. ಮುಂದಿನ ದಿನಗಳಲ್ಲಿ ಕೆರೆ ತುಂಬಿಸುವ ಯೋಜನೆಗೆ ಚಾಲನೆ ನೀಡಲಾಗುವುದು. ರಾಹುಲ್ ಗಾಂಧಿಯವರು ಮುಂದಿನ ಪ್ರಧಾನಿಯಾಗಲು ಕೈ ಜೋಡಿಸುವಂತೆ ಸಿಎಂ ಕರೆ ನೀಡಿದರು