RNI NO. KARKAN/2006/27779|Friday, November 22, 2024
You are here: Home » breaking news » ಘಟಪ್ರಭಾ:ತಾಲೂಕಿಗೆ 13 ವಸತಿ ಶಾಲೆಗಳ ಅರ್ಪಣೆ : ಶಾಸಕ ಬಾಲಚಂದ್ರ ಜಾರಕಿಹೊಳಿ

ಘಟಪ್ರಭಾ:ತಾಲೂಕಿಗೆ 13 ವಸತಿ ಶಾಲೆಗಳ ಅರ್ಪಣೆ : ಶಾಸಕ ಬಾಲಚಂದ್ರ ಜಾರಕಿಹೊಳಿ 

ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಬುಧವಾರ ರಾತ್ರಿ ಕಲ್ಲೋಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ದಶಮಾನೋತ್ಸವ ಸಂಭ್ರಮ ಹಾಗೂ ವಾರ್ಷಿಕ ಸ್ನೇಹ ಸಮ್ಮೇಳನವನ್ನು ಉದ್ಘಾಟಿಸಿದರು

ತಾಲೂಕಿಗೆ 13 ವಸತಿ ಶಾಲೆಗಳ ಅರ್ಪಣೆ : ಶಾಸಕ ಬಾಲಚಂದ್ರ ಜಾರಕಿಹೊಳಿ

ಘಟಪ್ರಭಾ ಮಾ 1 : ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಯಾರಿಗಿಂತಲೂ ಕಡಿಮೆ ಇಲ್ಲ ಎಂಬುದನ್ನು ನಿರೂಪಿಸುತ್ತಿದ್ದಾರೆ. ವಸತಿ ಶಾಲೆಗಳಲ್ಲಿಯೂ ಉತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತಿರುವುದರಿಂದ ವಿದ್ಯಾರ್ಥಿಗಳ ನೈಜ ಪ್ರತಿಭೆ ಹೊರಹೊಮ್ಮುತ್ತಿದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಶ್ಲಾಘಿಸಿದರು.
ಬುಧವಾರ ರಾತ್ರಿ ಸಮೀಪದ ಕಲ್ಲೋಳಿ ಪಟ್ಟಣದ ಹೊರವಲಯದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ದಶಮಾನೋತ್ಸವ ಸಂಭ್ರಮ ಹಾಗೂ 2017-18ನೇ ಸಾಲಿನ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಅವರು, ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಂದು ಶಿಕ್ಷಣದಲ್ಲಿ ಉನ್ನತ ಸಾಧನೆಗೈಯುತ್ತಿರುವುದು ಸಂತಸ ಸಂಗತಿ ಎಂದು ಹರ್ಷ ವ್ಯಕ್ತಪಡಿಸಿದರು.
13 ವಸತಿ ಶಾಲೆಗಳ ಅರ್ಪಣೆ : ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ವಸತಿ ಶಾಲೆಗಳೆಂದರೆ ಕನಸಿನ ಮಾತಾಗಿತ್ತು. ವಿಜಯಪುರ ಹಾಗೂ ಕಿತ್ತೂರ ಸೈನಿಕ ಶಾಲೆಗಳಷ್ಟೇ ವಸತಿ ಶಾಲೆಗಳಾಗಿ ಖ್ಯಾತಿಯಾಗಿದ್ದವು. ಇವುಗಳ ಪ್ರವೇಶಕ್ಕೆ ಪಾಲಕರು ಹರಸಾಹಸ ಪಡುವಂತಹ ಆ ದಿನಗಳು ಇನ್ನೂ ನೆನಪಿಗೆ ಬರುತ್ತಿವೆ. ಆದರೆ ಜನರ ಆಶೀರ್ವಾದ ಹಾಗೂ ದೇವರ ದಯೆಯಿಂದ 2006 ರಲ್ಲಿ ನಾನು ಸಮಾಜ ಕಲ್ಯಾಣ ಸಚಿವನಾದ ನಂತರ ಇಲ್ಲಿಯವರೆಗೆ ಗೋಕಾಕ ತಾಲೂಕಿಗೆ ಒಟ್ಟು 13 ವಸತಿ ಶಾಲೆಗಳನ್ನು ಮಂಜೂರು ಮಾಡಿಸುವ ಮೂಲಕ ಗ್ರಾಮೀಣ ಪ್ರದೇಶಗಳಲ್ಲಿ ಕಲಿಯುವ ಬಡ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಿಕೊಟ್ಟೆ ಎಂದು ಹೇಳಿದರು.

ಬುಧವಾರ ರಾತ್ರಿ ಕಲ್ಲೋಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ದಶಮಾನೋತ್ಸವ ಸಂಭ್ರಮ ಹಾಗೂ ವಾರ್ಷಿಕ ಸ್ನೇಹ ಸಮ್ಮೇಳನವನ್ನು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಉದ್ಘಾಟಿಸಿ ಮಾತನಾಡಿದರು.

ಇದರ ಫಲವಾಗಿ ಕಲ್ಲೋಳಿ, ಕೌಜಲಗಿ, ಯಾದವಾಡ, ನಾಗನೂರ, ಮಲ್ಲಾಪೂರ ಪಿಜಿ, ಹಿರೇನಂದಿ, ರಾಜನಕಟ್ಟಿ, ಗ್ರಾಮಗಳಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳು, ಖನಗಾಂವ ಗ್ರಾಮದಲ್ಲಿ ಕಿತ್ತೂರ ರಾಣಿ ಚನ್ನಮ್ಮಾ ಬಾಲಕೀಯರ ವಸತಿ ಶಾಲೆ, ಅರಭಾವಿ ಪಟ್ಟಣದಲ್ಲಿ ಡಾ.ಬಿ.ಆರ್.ಅಂಬೇಡ್ಕರ ಬಾಲಕೀಯರ ವಸತಿ ಶಾಲೆ, ಗೊಡಚಿನಮಲ್ಕಿ ಗ್ರಾಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ ವಸತಿ ಶಾಲೆ ಹಾಗೂ ತಪಸಿ ಗ್ರಾಮದಲ್ಲಿ ವಾಜಪೇಯಿ ಮಾದರಿ ವಸತಿ ಶಾಲೆ, ಸುಣಧೋಳಿ ಗ್ರಾಮದಲ್ಲಿ ಅಲ್ಪಸಂಖ್ಯಾತರ ವಸತಿ ಶಾಲೆ ಹಾಗೂ ವಡೇರಹಟ್ಟಿ ಗ್ರಾಮದಲ್ಲಿ ಕಸ್ತೂರಿ ಬಾ ವಸತಿ ಶಾಲೆಗಳು ಆರಂಭಗೊಂಡವು. ನಗರ ಪ್ರದೇಶಗಳಿಗಿಂತ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಯಾವುದರಲ್ಲಿಯೂ ಕಡಿಮೆ ಇಲ್ಲದಂತೆ ಅಧ್ಯಯನದಲ್ಲಿ ಮುಂದೆ ಬರುತ್ತಿದ್ದಾರೆ. ಇದಕ್ಕೆಲ್ಲ ಶಿಕ್ಷಕರ ಪರಿಶ್ರಮ ಹಾಗೂ ಪಾಲಕರ ಸಹಕಾರ ಮುಖ್ಯವಾಗಿದೆ. ಶಿಕ್ಷಣಕ್ಕೆ ಇನ್ನೂ ಹೆಚ್ಚಿನ ಒತ್ತು ನೀಡುವ ಮೂಲಕ ಶಿಕ್ಷಣದ ಅಮೂಲಾಗ್ರ ಬದಲಾವಣೆಗೆ ಶ್ರಮಿಸುವಂತೆ ಕರೆ ನೀಡಿದ ಅವರು, ಮಕ್ಕಳಿಗಾಗಿ ಆಸ್ತಿ ಮಾಡದೇ ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ ಅವರಿಗೆ ಅಕ್ಷರ ಜ್ಞಾನ ನೀಡುವಂತೆ ಬಾಲಚಂದ್ರ ಜಾರಕಿಹೊಳಿ ಪಾಲಕ ಸಮುದಾಯವನ್ನು ಕೋರಿದರು.
ಕಲ್ಲೋಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯು ದಶಮಾನೋತ್ಸವವನ್ನು ಆಚರಿಸಿಕೊಳ್ಳುತ್ತಿರುವುದು ಪ್ರಶಂಸನೀಯ. ಈ ವಸತಿ ಶಾಲೆಯ ವಿದ್ಯಾರ್ಥಿಗಳು ಉತ್ತಮ ಸಾಧನೆಗೈಯುತ್ತಿದ್ದಾರೆ. ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ. ನಾವೆಲ್ಲರೂ ಹೆಮ್ಮೆ ಪಡಬೇಕಾಗಿದೆ. ಇದಕ್ಕಾಗಿ ಪ್ರಾಂಶುಪಾಲ ಗಂಗರಡ್ಡಿ ಹಾಗೂ ಸಿಬ್ಬಂದಿ ವರ್ಗದವರಿಗೆ ಶಾಸಕರು ಅಭಿನಂದಿಸಿದರು.
ಅಧ್ಯಕ್ಷತೆಯನ್ನು ಕಲ್ಲೋಳಿ ಪಟ್ಟಣ ಪಂಚಾಯತಿ ಅಧ್ಯಕ್ಷೆ ಕಸ್ತೂರಿ ಕುರಬೇಟ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಬೆಳಗಾವಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ರಾಮನಗೌಡ ಕನ್ನೊಳ್ಳಿ ಮಾತನಾಡಿ, ಮಕ್ಕಳಲ್ಲಿ ಶೈಕ್ಷಣಿಕ ವಾತಾವರಣ ನಿರ್ಮಿಸಲಿಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ. ಜೊತೆಗೆ ಮಕ್ಕಳ ಜ್ಞಾನ ಭಂಡಾರ ವೃದ್ಧಿಸುವಲ್ಲಿ ನಮ್ಮ ವಸತಿ ಶಾಲೆಗಳು ಪೂರಕ ಕೆಲಸ ಮಾಡುತ್ತಿವೆ ಎಂದರು.
ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಎನ್. ಮುನಿರಾಜು, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಡಾ.ಉಮಾ ಸಾಲಿಗೌಡರ, ಜಿಪಂ ಮಾಜಿ ಅಧ್ಯಕ್ಷ ಬಸಗೌಡ ಪಾಟೀಲ, ಯುವ ಧುರೀಣ ರಾವಸಾಬ ಬೆಳಕೂಡ, ಪಪಂ ಉಪಾಧ್ಯಕ್ಷೆ ಕಾಶವ್ವ ಸೊಂಟನವರ, ತಾಪಂ ಮಾಜಿ ಸದಸ್ಯ ಅಶೋಕ ಮಕ್ಕಳಗೇರಿ, ಬಸವರಾಜ ಯಾದಗೂಡ, ಗುತ್ತಿಗೆದಾರ ಬಸವಂತ ದಾಸನವರ, ಸುಭಾಸ ಕುರಬೇಟ, ವಸಂತ ತಹಶೀಲ್ದಾರ, ಬಿ.ಕೆ. ಗಂಗರಡ್ಡಿ, ಚಿಕ್ಕೋಡಿ ಸಾ.ಶಿ.ಇ.ಯ ಶಿಕ್ಷಣಾಧಿಕಾರಿ ಎ.ಸಿ. ಮನ್ನಿಕೇರಿ, ಮೂಡಲಗಿ ಕ್ಷೇತ್ರ ಶಿಕ್ಷಣಾಧಿಕಾರಿ ಎ.ಸಿ. ಗಂಗಾಧರ, ಪ್ರಾಂಶುಪಾಲ ರಾಘವೇಂದ್ರ ಗಂಗರಡ್ಡಿ ಅವರು ಉಪಸ್ಥಿತರಿದ್ದರು.
ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶಾಸಕರು ಬಹುಮಾನಗಳನ್ನು ವಿತರಿಸಿದರು. ವಸತಿ ಶಾಲೆಯ ಶಿಕ್ಷಕ ವೃಂದದವರು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನು ಸತ್ಕರಿಸಿ ಸ್ವಾಮಿ ವಿವೇಕಾನಂದರ ಮೂರ್ತಿಯನ್ನು ನೆನಪಿನ ಕಾಣಿಕೆ ನೀಡಿದರು.

Related posts: