ಗೋಕಾಕ:ಡಾ. ಅಂಬೇಡ್ಕರ್ ಹಾದಿಯಲ್ಲಿ ಸತೀಶ್ ಜಾರಕಿಹೊಳಿ; ಶಾಸಕ ಬಾಲಚಂದ್ರ ಬಣ್ಣನೆ
ಡಾ. ಅಂಬೇಡ್ಕರ್ ಹಾದಿಯಲ್ಲಿ ಸತೀಶ್ ಜಾರಕಿಹೊಳಿ; ಶಾಸಕ ಬಾಲಚಂದ್ರ ಬಣ್ಣನೆ
ಗೋಕಾಕ ಮಾ 5: ಡಾ. ಅಂಬೇಡ್ಕರ ಅವರು ಸಾರಿದ ಶಿಕ್ಷಣ, ಸಂಘಟನೆ ಹಾಗೂ ಹೋರಾಟದ ಮಾರ್ಗದಲ್ಲಿ ಸಹೋದರ-ಶಾಸಕ ಸತೀಶ ಜಾರಕಿಹೊಳಿ ಅವರು ಮುನ್ನುಗ್ಗಿ ನವ ಸಮಾಜದ ಅಭಿವೃದ್ಧಿಗೆ ಹಗಳಿರುಳು ಶ್ರಮಿಸುತ್ತಿರುವುದು ಶ್ಲಾಘನೀಯ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಮೆಚ್ಚುಗೆ ವ್ಯಕ್ತಪಡಿಸಿದರು.
ಇಲ್ಲಿಯ ಎನ್‍ಎಸ್‍ಎಫ್ ಮಾಧ್ಯಮಿಕ ವಸತಿ ಶಾಲೆಯ 10ನೇ ವರ್ಗದ ವಿದ್ಯಾರ್ಥಿಗಳ ಬಿಳ್ಕೋಡುವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸತೀಶ ಅವರು ಸಮಾಜಕ್ಕೆ ಸಲ್ಲಿಸುತ್ತಿರುವ ಸೇವೆಗಳನ್ನು ಮುಕ್ತ ಕಂಠದಿಂದ ಪ್ರಶಂಸಿಸಿದರು.
ಬಡ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದೆನ್ನುವ ಮೂಲ ಉದ್ಧೇಶದಿಂದ ನಾಯಕ ಸ್ಟುಡೆಂಟ್ ಫೆಡರೇಶನ್ ಎಂಬ ಸಂಸ್ಥೆಯನ್ನು ಹುಟ್ಟುಹಾಕಿ ಎಲ್ಲ ಮಕ್ಕಳಿಗೆ ಉಚಿತವಾಗಿ ಶಿಕ್ಷಣ ನೀಡಲು ಮಹತ್ತರ ಪಾತ್ರ ವಹಿಸಿದರು. ‘ಕಲಿಯಿರಿ ಕಲಿಸಿರಿ” ಎಂಬ ಧ್ಯೇಯ ವಾಕ್ಯದೊಂದಿಗೆ ಆರಂಭವಾದ ಸಂಸ್ಥೆಯು ಇಂದು ಎಲ್ಲೆಡೆ ಪಸರಿಸಿ ಶಿಕ್ಷಣ ಕ್ಷೇತ್ರದಲ್ಲಿ ದೊಡ್ಡ ಕ್ರಾಂತಿಯನ್ನೇ ಮಾಡುತ್ತಿದೆ ಎಂದರು.
ನಮ್ಮ ಹೆತ್ತವರು ಹೆಚ್ಚು ಶಿಕ್ಷಣ ಕಲಿಯದಿದ್ದರೂ ಸಮಾಜದಲ್ಲಿ ಪ್ರತಿಯೊಬ್ಬರೂ ಸಾಕ್ಷರವಂತರಾಗಬೇಕೆಂದು ಅವರ ಬಯಕೆಯಾಗಿತ್ತು. ಈ ದಿಸೆಯಲ್ಲಿ ನಮ್ಮ ಕುಟುಂಬವು ಸತೀಶ್ ಅವರ ಸಾರಥ್ಯದಲ್ಲಿ ನಾಯಕ ಸ್ಟುಡೆಂಟ್ ಫೆಡರೆಶನ್ ಹುಟ್ಟುಹಾಕಿ ಬಡ ವಿದ್ಯಾರ್ಥಿಗಳ ಪಾಲಿಗೆ ಕಾಮಧೇನು ಕಲ್ಪವೃಕ್ಷವಾದರು. ಸತೀಶ್ ಶುಗರ್ಸ ಅವಾಡ್ರ್ಸ ಕಾರ್ಯಕ್ರಮದ ಮೂಲಕ ಇಡೀ ರಾಜ್ಯಕ್ಕೆ ವಿದ್ಯಾರ್ಥಿಗಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಹೊರ ಜಗತ್ತಿಗೆ ಗುರುತಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ ಎಂದು ಶ್ಲಾಘಿಸಿದರು.
ಇಂದಿನ ಆಧುನಿಕ ಯುಗದಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯು ಸ್ಪರ್ಧಾ ಮನೋಭಾವನೆಯನ್ನು ಬೆಳೆಸಿಕೊಂಡು ಕಲಿಸಿದ ಶಾಲೆಗೆ ಕೀರ್ತಿ ತರಬೇಕು. ತಂದೆ ತಾಯಿಗೆ ಗೌರವ ನೀಡಿ ಉತ್ತಮ ಸಂಸ್ಕಾರವಂತರಾಗಬೇಕು. ವಿದ್ಯಾರ್ಥಿ ಜೀವನ ಅಮೂಲ್ಯವಾದುದ್ದು. ದುಶ್ಚಟಕ್ಕೆ ಜೋತು ಬೀಳದೇ ಈ ವಿದ್ಯಾರ್ಥಿ ಜೀವನವನ್ನು ಎಂದಿಗೂ ಹಾಳುಮಾಡಿಕೊಳ್ಳಬೇಡಿ. ನಿಮ್ಮ ಮುಂದಿನ ಕಲಿಕೆಯ ದಿನಗಳು ಯಸಸ್ಸು ಕಾಣಲೆಂದು ಹಾರೈಸಿದರು.
ಪ್ರಭಾ ಶುಗರ ಚೇರಮನ್ ಅಶೋಕ ಪಾಟೀಲ,ಎನ್‍ಎಸ್‍ಎಫ್ ಕಾರ್ಯದರ್ಶಿ ಎಸ್.ಎ.ರಾಮಗಾನಟ್ಟಿ, ಜಗದೀಶ ಉಮರಾಣಿ, ಮುಖ್ಯೋಪಾಧ್ಯಾಯ ಮೇಟಿ, ಆರ್.ಡಿ.ಜೋಶಿ, ಪುಡಕಲಕಟ್ಟಿ ಮುಂತಾದವರು ಉಪಸ್ಥಿತರಿದ್ದರು
ಶಾಲೆಯ ಪ್ರಧಾನ ಗುರು ಕೋಳಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.