RNI NO. KARKAN/2006/27779|Friday, November 22, 2024
You are here: Home » breaking news » ಗೋಕಾಕ:ಅರಭಾವಿ ಮತಕ್ಷೇತ್ರ ಕೋಮು-ಸೌಹಾರ್ದತೆಗೆ ಹೆಸರುವಾಸಿಯಾಗಿದೆ : ಶಾಸಕ ಬಾಲಚಂದ್ರ

ಗೋಕಾಕ:ಅರಭಾವಿ ಮತಕ್ಷೇತ್ರ ಕೋಮು-ಸೌಹಾರ್ದತೆಗೆ ಹೆಸರುವಾಸಿಯಾಗಿದೆ : ಶಾಸಕ ಬಾಲಚಂದ್ರ 

ಅರಭಾವಿ ಮತಕ್ಷೇತ್ರ ಕೋಮು-ಸೌಹಾರ್ದತೆಗೆ ಹೆಸರುವಾಸಿಯಾಗಿದೆ : ಶಾಸಕ ಬಾಲಚಂದ್ರ

ಗೋಕಾಕ ಮಾ 8 : ಕಳೆದ 14 ವರ್ಷಗಳ ಅವಧಿಯಲ್ಲಿ ಅರಭಾವಿ ಮತಕ್ಷೇತ್ರದಲ್ಲಿ ಎಲ್ಲ ಧರ್ಮಿಯರು ಸಹೋದರತ್ವದಿಂದ ಬದುಕುತ್ತ ಕೋಮು-ಸೌಹಾರ್ದತೆಗೆ ಹೆಸರುವಾಸಿಯಾಗಿದ್ದಾರೆ. ಇದುವರೆಗೂ ರಾಜ್ಯದಲ್ಲಿಯೇ ಮೂಡಲಗಿ ಪೊಲೀಸ್ ವೃತ್ತ ಕಛೇರಿಯು ಕಾನೂನು ಸುವ್ಯವಸ್ಥೆಯಲ್ಲಿ ಅಗ್ರಸ್ಥಾನ ಕಾಯ್ದುಕೊಳ್ಳುವ ಮೂಲಕ ಸಾರ್ವಜನಿಕರಲ್ಲಿ ಶಾಂತಿ ಮಂತ್ರ ಜಪಿಸುತ್ತಿದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.
ತಾಲೂಕಿನ ಕೌಜಲಗಿ ಪಟ್ಟಣದಲ್ಲಿ ಬುಧವಾರ ರಾತ್ರಿ ಜರುಗಿದ ಅಂಜುಮನ್-ಎ-ಇಸ್ಲಾಂ ಕಮೀಟಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಹಿಂದೂ-ಮುಸ್ಲಿಂ-ಕ್ರೈಸ್ತ ಬಾಂಧವರು ಏಕತೆಯಿಂದ ಬದುಕುತ್ತಿರುವುದು ಒಗ್ಗಟ್ಟಿಗೆ ಸಾಕ್ಷಿ ಎಂದು ಹೇಳಿದರು.
ರಾಜ್ಯದ ಇತಿಹಾಸದಲ್ಲಿಯೇ ನಮ್ಮ ಕ್ಷೇತ್ರದ ಆಯಾ ಧರ್ಮಿಯರು ತಮ್ಮ ಧರ್ಮಾಚರಣೆಯನ್ನು ಆಚರಿಸುತ್ತ ಬರುತ್ತಿದ್ದಾರೆ. ಆದರೆ ಧರ್ಮ ಮತ್ತು ಜಾತಿ ವಿಷಯಕ್ಕೆ ಬಂದರೆ ಎಲ್ಲರೂ ಒಂದಾಗಿ, ಒಗ್ಗಟ್ಟಾಗಿ ಸಮ್ಮಿಲನಗೊಳ್ಳುವ ಮೂಲಕ ಸಾಮರಸ್ಯವನ್ನು ಕಾಪಾಡಿಕೊಂಡು ಬರುತ್ತಿರುವುದು ಹೆಮ್ಮೆಯಾಗಿದೆ. ಸಣ್ಣಪುಟ್ಟ ವಿಷಯಗಳನ್ನು ಹೊರತುಪಡಿಸಿದರೆ ಶಾಂತಿ-ಸುವ್ಯವಸ್ಥೆಗೆ ಪೊಲೀಸ್ ಇಲಾಖೆಯು ಶ್ರಮಿಸುತ್ತಿದೆ ಎಂದು ಹೇಳಿದರು.
ಮುಸ್ಲಿಂ ಬಾಂಧವರು ಶೈಕ್ಷಣಿಕ, ಆರ್ಥಿಕ, ಸಾಮಾಜಿಕವಾಗಿ ಮುಂದೆ ಬರಬೇಕಾದರೆ ಶಿಕ್ಷಣಕ್ಕೆ ಎಲ್ಲರೂ ಒತ್ತು ನೀಡಬೇಕು. ಶಿಕ್ಷಣದಿಂದ ಮಾತ್ರ ಸಮಾಜದ ಏಳ್ಗೆ ಸಾಧ್ಯವೆಂದು ಹೇಳಿದ ಅವರು, ಸಮಾಜಕ್ಕೆ ಅಗತ್ಯವಿರುವ ಎಲ್ಲ ನೆರವನ್ನು ನೀಡುವುದಾಗಿ ಪ್ರಕಟಿಸಿದರು.
ಕಲ್ಮಡ್ಡಿ ಏತ ನೀರಾವರಿ ಅನುಷ್ಠಾನಕ್ಕೆ ಬದ್ಧ : ಕೌಜಲಗಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ರೈತರ ಕೃಷಿ ಚಟುವಟಿಕೆಗೆ ಅನುಕೂಲವಾಗಲು ಕಲ್ಮಡ್ಡಿ ಏತ ನೀರಾವರಿ ಯೋಜನೆಗೆ ಈಗಾಗಲೇ ಸರ್ಕಾರದ ಅನುಮೋದನೆ ಹಂತದಲ್ಲಿದೆ. 125.48 ಕೋಟಿ ರೂ.ಗಳ ಯೋಜನಾ ವರದಿಯ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಜೂನ್ ತಿಂಗಳಲ್ಲಿ ನಡೆಯುವ ಹೊಸ ಸರ್ಕಾರದ ಬಜೆಟ್‍ನಲ್ಲಿ ಈ ಕಾಮಗಾರಿಗೆ ಅನುಮೋದನೆ ಪಡೆದು ಕಾಮಗಾರಿಯನ್ನು ಅಗಸ್ಟ್ ತಿಂಗಳೊಳಗೆ ಪ್ರಾರಂಭಿಸುವುದಾಗಿ ಭರವಸೆ ನೀಡಿದರು.
ತಳಕಟ್ನಾಳ ಗ್ರಾಮದ ಹತ್ತಿರ ಘಟಪ್ರಭಾ ನದಿಯ ನೀರನ್ನು ಜಲಮೂಲವೆಂದು ಪರಿಗಣಿಸಲಾಗಿದ್ದು, ಈ ಯೋಜನೆಗೆ 0.47 ಟಿಎಂಸಿ ನೀರಿನ ಅವಶ್ಯಕತೆ ಇದ್ದು, ಈಗಾಗಲೇ ನೀರು ಕೂಡ ಹಂಚಿಕೆಯಾಗಿದೆ. ಕೌಜಲಗಿ, ಗೋಸಬಾಳ, ಬಿಲಕುಂದಿ ಮತ್ತು ಕಪರಟ್ಟಿ ಗ್ರಾಮಗಳ 2550 ಹೆಕ್ಟರ್ ಪ್ರದೇಶವು ನೀರಾವರಿ ಸೌಲಭ್ಯಕ್ಕೆ ಒಳಪಡಲಿದೆ ಎಂದು ಹೇಳಿದರು.
ಕಳೆದ ತಿಂಗಳಲ್ಲಿ ನಡೆದ ಬಜೆಟ್‍ನಲ್ಲಿ ಈ ಕಾಮಗಾರಿಗೆ ಸರ್ಕಾರವು ಅನುಮೋದನೆ ನೀಡಲಿತ್ತು. ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಸಹ ಈ ಯೋಜನೆಯನ್ನು ಬಜೆಟ್‍ನಲ್ಲಿ ತನ್ನಿ ಎಂದು ಅಧಿಕಾರಿಗಳಿಗೆ ಆದೇಶ ನೀಡಿದ್ದರು. ಆದರೆ ಗೋಕಾಕ ತಾಲೂಕಿನ ಘಟ್ಟಿ ಬಸವೇಶ್ವರ ಏತ ನೀರಾವರಿಗೆ ಅನುಮೋದನೆ ನೀಡಿದ್ದರಿಂದ ಕಲ್ಮಡ್ಡಿ ವಿಷಯವು ನೆನೆಗುದಿಗೆ ಬೀಳಲು ಕಾರಣವಾಯಿತು. ಹೇಗಾದರೂ ಮಾಡಿ ಕಾಮಗಾರಿಯನ್ನು ಅನುಷ್ಠಾನ ಮಾಡಿ ಈ ಭಾಗಕ್ಕೆ ನೀರಾವರಿ ಕಲ್ಪಿಸಿಕೊಡುವ ಆಶಾಭಾವನೆ ವ್ಯಕ್ತಪಡಿಸಿದ ಅವರು, ನೀರಾವರಿ ವಿಷಯದಲ್ಲಿ ರೈತರು ರಾಜಕೀಯ ಬೆರೆಸಬೇಡಿ. ಕೇವಲ ವೋಟಿಗಾಗಿ ಈ ಯೋಜನೆಯನ್ನು ಮಾಡುತ್ತಿಲ್ಲ. ರೈತರ ಹಿತವೇ ನನಗೆ ಮುಖ್ಯವಾಗಿದೆ. ಇದನ್ನು ರೈತ ಬಾಂಧವರು ಅರ್ಥ ಮಾಡಿಕೊಂಡು ಕಲ್ಮಡ್ಡಿ ಏತ ನೀರಾವರಿ ಯೋಜನಾನುಷ್ಠಾನಕ್ಕೆ ಸಹಕಾರ ನೀಡುವಂತೆ ಕೋರಿಕೊಂಡರು.
ಕೌಜಲಗಿ ತಾಲೂಕು ರಚನೆಗೆ ಯತ್ನ : ಕೌಜಲಗಿ ಹಾಗೂ ಸುತ್ತಮುತ್ತಲಿನ ಬಹು ವರ್ಷಗಳ ಪ್ರಮುಖ ಬೇಡಿಕೆಯಾಗಿರುವ ಕೌಜಲಗಿ ಪಟ್ಟಣವನ್ನು ತಾಲೂಕು ಕೇಂದ್ರವನ್ನಾಗಿ ರಚಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಇದರ ಜೊತೆಗೆ ಗೋಕಾಕನ್ನು ಹೊಸ ಜಿಲ್ಲಾ ಕೇಂದ್ರವನ್ನಾಗಿ ರಚಿಸುವಂತೆ ನಮ್ಮ ಹೋರಾಟ ಮುಂದುವರೆಯಲಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕುರುಬರ ಸಂಘದ ರಾಜ್ಯಾಧ್ಯಕ್ಷ ಡಾ.ರಾಜೇಂದ್ರ ಸಣ್ಣಕ್ಕಿ ಮಾತನಾಡಿ, ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಸರ್ಕಾರದ ಅನುದಾನದ ಹೊರತಾಗಿ ಸ್ವಂತ ಖರ್ಚಿನಿಂದ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಸಾಕಷ್ಟು ಜನಪರ ಯೋಜನೆಗಳಿಗೆ ಸ್ವಂತ ದುಡ್ಡನ್ನು ಹಾಕಿ ಜನರಿಗೆ ಅನುಕೂಲ ಕಲ್ಪಿಸಿಕೊಡುತ್ತಿದ್ದಾರೆಂದು ಶ್ಲಾಘಿಸಿದ ಅವರು, ಮುಸ್ಲಿಂ ಬಾಂಧವರು ಒಗ್ಗಟ್ಟಿನಿಂದ ಹೋರಾಡಿ ಸರ್ಕಾರದ ಸವಲತ್ತುಗಳನ್ನು ಪಡೆದುಕೊಳ್ಳುವಂತೆ ತಿಳಿಸಿದರು.
ಭೋವಿ ಸಮಾಜದ ರಾಜ್ಯ ಪ್ರಧಾನ ಕಾರ್ಯದರ್ಶಿ ಕೇಶವ ಭೋವಿ ಮಾತನಾಡಿ, ಕಲ್ಮಡ್ಡಿ ಏತ ನೀರಾವರಿ ಹಾಗೂ ಕೌಜಲಗಿ ತಾಲೂಕು ಕೇಂದ್ರ ರಚನೆಗೆ ಶಾಸಕರಲ್ಲಿ ಮನವಿ ಮಾಡಿಕೊಂಡರು. ಮುಂದಿನ ಚುನಾವಣೆಯಲ್ಲಿ ಬಾಲಚಂದ್ರ ಜಾರಕಿಹೊಳಿ ಅವರ ಕೈಬಲಪಡಿಸಲು ಅತ್ಯಧಿಕ ಮತಗಳನ್ನು ನೀಡಿ ಗೆಲ್ಲಿಸುವಂತೆ ಕೋರಿದರು.
ಮಾದರಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ಅಶೋಕ ಪರುಶೆಟ್ಟಿ, ಪಿಎಲ್‍ಡಿ ಬ್ಯಾಂಕ್ ನಿರ್ದೇಶಕ ಎಂ.ಆರ್.ಭೋವಿ, ಸಮಾಜದ ಮುಖಂಡ ಹುಸೇನಸಾಬ ಮುಲ್ಲಾ, ಗ್ರಾಪಂ ಅಧ್ಯಕ್ಷ ನೀಲಪ್ಪ ಕೇವಟಿ, ತಾಪಂ ಸದಸ್ಯ ಶಾಂತಪ್ಪ ಹಿರೇಮೇತ್ರಿ, ವಾಕರಸಾನಿ ನಿರ್ದೇಶಕ ಅಕ್ಬರ ಮುಲ್ತಾನಿ, ಗ್ರಾಪಂ ಮಾಜಿ ಅಧ್ಯಕ್ಷರಾದ ಮಕ್ತುಮಸಾಬ ಖಾಜಿ, ಅಶೋಕ ಉದ್ದಪ್ಪನವರ, ರಾಯಪ್ಪ ಬಳೋಲದಾರ, ಎಪಿಎಂಸಿ ಮಾಜಿ ನಿರ್ದೇಶಕ ಎಸ್.ಆರ್.ಭೋವಿ, ಪಿಕೆಪಿಎಸ್ ಅಧ್ಯಕ್ಷ ಮಹೇಶ ಪಟ್ಟಣಶೆಟ್ಟಿ, ಅರ್ಬನ್ ಬ್ಯಾಂಕ್ ಮಾಜಿ ಅಧ್ಯಕ್ಷ ಶಿವಾನಂದ ಲೋಕನ್ನವರ, ಸುಭಾಸ ಕೌಜಲಗಿ, ಕಮೀಟಿಯ ಅಧ್ಯಕ್ಷ ಕಾಸೀಮಸಾಬ ಮುಲ್ತಾನಿ, ಆದಮ ಮುಲ್ತಾನಿ, ಡಿ.ಜೆ. ಮುಲ್ತಾನಿ, ಜಾಕೀರ ಜಮಾದಾರ, ಹಾಸೀಮ ನಗಾರ್ಚಿ, ಅಡಿವೆಪ್ಪ ದಳವಾಯಿ, ರಮಜಾನಸಾಬ ಪೋದಿ, ಮಲೀಕ ಹುಣಶ್ಯಾಳ, ಗ್ರಾಪಂ ಸದಸ್ಯರು, ಮುಸ್ಲಿಂ ಸಮಾಜದ ಮುಖಂಡರು ಉಪಸ್ಥಿತರಿದ್ದರು.

Related posts: