RNI NO. KARKAN/2006/27779|Thursday, December 12, 2024
You are here: Home » breaking news » ಘಟಪ್ರಭಾ:ಜನರ ಹೃದಯ ಗೆದ್ದ ಏಕಮೇವ ಶಾಸಕ ಬಾಲಚಂದ್ರ ಜಾರಕಿಹೊಳಿ : ಮಾಜಿ ಸಂಸದ ರಮೇಶ ಕತ್ತಿ

ಘಟಪ್ರಭಾ:ಜನರ ಹೃದಯ ಗೆದ್ದ ಏಕಮೇವ ಶಾಸಕ ಬಾಲಚಂದ್ರ ಜಾರಕಿಹೊಳಿ : ಮಾಜಿ ಸಂಸದ ರಮೇಶ ಕತ್ತಿ 

ಜನರ ಹೃದಯ ಗೆದ್ದ ಏಕಮೇವ ಶಾಸಕ ಬಾಲಚಂದ್ರ ಜಾರಕಿಹೊಳಿ : ಮಾಜಿ ಸಂಸದ ರಮೇಶ ಕತ್ತಿ

ಘಟಪ್ರಭಾ ಮಾ 8 : ರೈತರ ಬೆನ್ನೆಲಬು ಬಿಡಿಸಿಸಿ ಬ್ಯಾಂಕು 3.54 ಲಕ್ಷ ರೈತರಿಗೆ 1538 ಕೋಟಿ ರೂ.ಗಳ ಸಾಲ ವಿತರಿಸಿದ್ದು, ಇದರಲ್ಲಿ 1009 ಕೋಟಿ ರೂ.ಗಳ ಸಾಲ ಮನ್ನಾ ಆಗಿದೆ ಎಂದು ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಹಾಗೂ ಮಾಜಿ ಸಂಸದ ರಮೇಶ ಕತ್ತಿ ಹೇಳಿದರು.
ಸಮೀಪದ ಅರಭಾವಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಹೊಸ ಸಭಾ ಭವನ ಹಾಗೂ ಗೋಡಾವನ ಉದ್ಘಾಟಿಸಿ ಮಾತನಾಡಿದ ಅವರು, ಈ ಬ್ಯಾಂಕು ಪ್ರಗತಿಯಲ್ಲಿ ದೇಶದಲ್ಲಿಯೇ ಎರಡನೇ ಸ್ಥಾನ ಹೊಂದಿದೆ ಎಂದರು.
ಗೋಕಾಕ ತಾಲೂಕಿನ 40,222 ರೈತರಿಗೆ 165 ಕೋಟಿ ರೂ.ಗಳ ಸಾಲ ವಿತರಿಸಿದ್ದು, ಇದರಲ್ಲಿ 123 ಕೋಟಿ ರೂ. ಸಾಲ ಮನ್ನಾ ಆಗಿದೆ. ಆದರೆ ಇದುವರೆಗೂ ಸರ್ಕಾರದಿಂದ ಹಣ ಬಂದಿಲ್ಲ. ಇದೇ ಮಾರ್ಚ ತಿಂಗಳ ಅಂತ್ಯದೊಳಗೆ ಮುಖ್ಯಮಂತ್ರಿಗಳು ಬ್ಯಾಂಕಿಗೆ ಹಣ ಜಮಾ ಮಾಡುವ ಭರವಸೆ ನೀಡಿದ್ದಾರೆ. ಅಲ್ಲದೇ 2017ರ ಜೂನ್ 28 ರಂದು 50 ಸಾವಿರವರೆಗಿನ ರೈತರ ಸಾಲ ಮನ್ನಾ ಮಾಡಿರುವ ಸಿಎಂ ಸಿದ್ಧರಾಮಯ್ಯ ಅವರನ್ನು ಸಮಸ್ತ ರೈತ ಬಾಂಧವರಿಂದ ಅಭಿನಂದಿಸುವುದಾಗಿ ಹೇಳಿದರು.
ದೇಶದಲ್ಲಿಯೇ ಮೊದಲ ಬಾರಿಗೆ ರೈತರಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ ವಿತರಿಸಿದ ಕೀರ್ತಿ ಬಿ.ಎಸ್. ಯಡಿಯೂರಪ್ಪನವರಿಗೆ ಸಲ್ಲುತ್ತದೆ. ರೈತರ ಆರ್ಥಿಕಾಭಿವೃದ್ಧಿಗೆ ಅವರ ಪಾತ್ರ ಅನನ್ಯವಾಗಿದೆ ಎಂದು ಹೇಳಿದರು.
ಅರಭಾವಿಯ ಪಿಕೆಪಿಎಸ್ ಸಾಧನೆಯನ್ನು ವಿವರಿಸಿದ ಅವರು, 2286 ರೈತರಿಗೆ 6.54 ಕೋಟಿ ರೂ.ಗಳ ಸಾಲ ವಿತರಿಸಿದ್ದು, 5.18 ಕೋಟಿ ರೂ.ಗಳ ಸಾಲ ಮನ್ನಾ ಮಾಡಲಾಗಿದೆ. ಅರಭಾವಿ ಹಾಗೂ ಸುತ್ತಲಿನ 5 ಗ್ರಾಮಗಳ ರೈತರ ಒಗ್ಗಟ್ಟಿನಿಂದ ಹುಟ್ಟಿಕೊಂಡಿರುವ ಪಿಕೆಪಿಎಸ್ ಮುಂದಿನ ದಿನಗಳಲ್ಲಿಯೂ ಉತ್ತಮ ಸಾಧನೆ ತೋರಲಿ ಎಂದು ಆಶಿಸಿದರು.
ಬಿಡಿಸಿಸಿ ಬ್ಯಾಂಕ್ ರೈತರ ಅಭಿವೃದ್ಧಿಗೆ ಹುಟ್ಟಿಕೊಂಡಿದ್ದು, ಮುಂಬರುವ ದಿನಗಳಲ್ಲಿ ಜಾರಕಿಹೊಳಿ ಸಹೋದರರ ನೇತೃತ್ವದಲ್ಲಿ ದೇಶದಲ್ಲಿ ನಂ.1 ಸಹಕಾರಿ ಬ್ಯಾಂಕು ಆಗಲಿಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಹೇಳಿದರು.
‘ವಿಕ್ಸ್’ ಹಚ್ಚಿದವರನ್ನು ಎಂದಿಗೂ ಮರೆಯಬೇಡಿ : ಚುನಾವಣೆ ಸಮೀಪಿಸುತ್ತಿರುವಂತೆ ಕೆಲವರು ‘ಲಕ್ಷ್’ ಸೋಪ್ ಹಚ್ಚಿಕೊಂಡು ಪ್ರಚಾರಕ್ಕೆ ಬರುತ್ತಿರುತ್ತಾರೆ. ಅಂತಹವರನ್ನು ಯಾವುದೇ ಕಾರಣಕ್ಕೂ ನಂಬಬೇಡಿ. ಕಳೆದ ಎರಡು ದಶಕಗಳಿಂದ ನಿಮ್ಮ ಸೇವೆಗಾಗಿಯೇ ಹುಟ್ಟಿಕೊಂಡಿರುವ ನಿಸ್ವಾರ್ಥ ಜನಸೇವಕ ಬಾಲಚಂದ್ರ ಜಾರಕಿಹೊಳಿ ಅವರು ಕಷ್ಟಕಾರ್ಪಣ್ಯಗಳಿಗೆ ಸ್ಪಂದಿಸಿ ನಿಮಗೆಲ್ಲ ನೋವಾದಾಗ ‘ವಿಕ್ಸ್’ ಹಚ್ಚಿದ್ದಾರೆ. ಅಂತಹವರನ್ನು ಪ್ರಚಂಡ ಬಹುಮತದಿಂದ ಆಯ್ಕೆ ಮಾಡುವ ಮೂಲಕ ಅಖಂಡ ಸೇವೆಗೆ ಅವಕಾಶ ಒದಗಿಸಿಕೊಡುವಂತೆ ಮನವಿ ಮಾಡಿಕೊಂಡರು. ಚುನಾವಣೆಯಲ್ಲಿ ಗೆಲ್ಲಬಹುದು. ಆದರೆ ಜನರ ಹೃದಯ ಗೆದ್ದ ಏಕಮೇವ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಎಂದು ಗುಣಗಾನ ಮಾಡಿದರು.

ಅರಭಾವಿ ಪಿಕೆಪಿಎಸ್ ಹೊಸ ಸಭಾಭವನ ಉದ್ಘಾಟನಾ ಸಮಾರಂಭದಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಹಾಗೂ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ ಅವರನ್ನು ಆಡಳಿತ ಮಂಡಳಿ ಸದಸ್ಯರು ಬೃಹತ್ ಹೂವಿನ ಹಾರ ಹಾಕಿ ಸತ್ಕರಿಸಿದರು

ಶಾಸಕ ಬಾಲಚಂದ್ರ ಜಾರಕಿಹೊಳಿ ಮಾತನಾಡಿ, ಎಲ್ಲ ಸ್ವಾಮೀಜಿಗಳು ಹೇಳುವಂತೆ ಬಾಲಚಂದ್ರ ಅಂತಹ ಶಾಸಕರನ್ನು ಪಡೆದಿರುವುದು ಜನಗಳ ಪುಣ್ಯ. ಆದರೆ ಅರಭಾವಿ ಕ್ಷೇತ್ರದಂತಹ ಮತದಾರರನ್ನು ಪಡೆದಿರುವುದು ನನ್ನ ಭಾಗ್ಯ. ಇಂತಹ ಜನರು ಯಾರಿಗೂ ಸಿಗುವುದಿಲ್ಲ. ಸಹಕಾರಿ ಕ್ಷೇತ್ರದಲ್ಲಿ ಕತ್ತಿ ಅವರ ಕುಟುಂಬದ ಕೊಡುಗೆಯನ್ನು ಶ್ಲಾಘಿಸಿದ ಅವರು, ಜಾರಕಿಹೊಳಿ-ಕತ್ತಿ ಅವರ ಕುಟುಂಬದ ನೇತೃತ್ವದಲ್ಲಿಯೇ ಬಿಡಿಸಿಸಿ ಬ್ಯಾಂಕು ಮುಂದೆಯೂ ಮುನ್ನಡೆಯಲಿದೆ ಎಂದು ಹೇಳಿದರು.
ರಾಜ್ಯ ಸಹಕಾರಿ ಮಾರಾಟ ಮಂಡಳಿ ಉಪಾಧ್ಯಕ್ಷ ಹಾಗೂ ಹಿರಿಯ ಸಹಕಾರಿ ಬಸಗೌಡ ಪಾಟೀಲ, ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಸುಭಾಸ ಢವಳೇಶ್ವರ, ನಿರ್ದೇಶಕರಾದ ಶಿವಾನಂದ ಡೋಣಿ, ನೀಲಕಂಠ ಕಪ್ಪಲಗುದ್ದಿ, ಅರಭಾವಿ ಪಪಂ ಅಧ್ಯಕ್ಷೆ ಪದ್ಮಾವತಿ ದೇವುಗೋಳ, ಪಿಕೆಪಿಎಸ್ ಅಧ್ಯಕ್ಷ ದೇವೇಂದ್ರ ಅರಭಾವಿ, ಉಪಾಧ್ಯಕ್ಷ ರಾಯಪ್ಪ ಅಂತರಗಟ್ಟಿ, ನಿರ್ದೇಶಕರಾದ ಮುತ್ತೆಪ್ಪ ಝಲ್ಲಿ, ರಾಯಪ್ಪ ಬಂಡಿವಡ್ಡರ, ಲಕ್ಷ್ಮಣ ಕೋಳಿ, ಯಲ್ಲಪ್ಪ ಸತ್ತಿಗೇರಿ, ಬಾಳೇಶ ಜಾಧವ, ದುಂಡಪ್ಪ ಚಿಗರಿತೋಟ, ಸಿದ್ದವ್ವ ಸಿಂಗೋಟಿ, ಉದ್ದವ್ವ ಸಂಪಗಾಂವಿ, ಉಪಸ್ಥಿತರಿದ್ದರು. ಸಂಘದ ಮುಖ್ಯ ಕಾರ್ಯನಿರ್ವಾಹಕ ನಾರಾಯಣ ಜಡಕೀನ ವರದಿ ವಾಚಿಸಿ ವಂದಿಸಿದರು.
ಶಾಸಕ ಬಾಲಚಂದ್ರ ಜಾರಕಿಹೊಳಿ ಹಾಗೂ ರಮೇಶ ಕತ್ತಿ ಅವರನ್ನು ಇದೇ ಸಂದರ್ಭದಲ್ಲಿ ಆಡಳಿತ ಮಂಡಳಿ ಸದಸ್ಯರು ಸತ್ಕರಿಸಿದರು. ಪಿಕೆಪಿಎಸ್‍ನಿಂದ ರೈತರಿಗೆ ಟ್ರ್ಯಾಕ್ಟರ್‍ಗಳನ್ನು ವಿತರಿಸಲಾಯಿತು.

Related posts: