ಗೋಕಾಕ: ನೂತನ ಜಿಲ್ಲಾ ಕೇಂದ್ರಕ್ಕೆ ಒತ್ತಾಯಿಸಿ ಮುಖ್ಯಮಂತ್ರಿ ಬಳಿ ನಿಯೋಗ
ಗೋಕಾಕ ನೂತನ ಜಿಲ್ಲಾ ಕೇಂದ್ರಕ್ಕೆ ಒತ್ತಾಯಿಸಿ ಮುಖ್ಯಮಂತ್ರಿ ಬಳಿ ನಿಯೋಗ
ಗೋಕಾಕ ಮಾ 11 : ಗೋಕಾಕನ್ನು ಜಿಲ್ಲಾ ಕೇಂದ್ರವನ್ನಾಗಿ ರಚಿಸುವಂತೆ ಒತ್ತಾಯಿಸಲು ಮಾ.15 ರಂದು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ, ಶಾಸಕ ಮತ್ತು ಮಾಜಿ ಸಚಿವರಾದ ಸತೀಶ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ ಅವರ ನೇತೃತ್ವದಲ್ಲಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಲಿಕ್ಕೆ ನಿಯೋಗವು ತೆರಳಲಿದೆ ಎಂದು ಹೋರಾಟ ಸಮೀತಿಯ ನೇತೃತ್ವ ವಹಿಸಿಕೊಂಡಿರುವ ಶೂನ್ಯ ಸಂಪಾದನ ಮಠದ ಮುರುಘರಾಜೇಂದ್ರ ಮಹಾಸ್ವಾಮಿಗಳು ಹೇಳಿದರು.
ನಿಯೋಜಿತ ಗೋಕಾಕ ಜಿಲ್ಲಾ ಚಾಲನಾ ಹೋರಾಟ ಸಮೀತಿಯ ಸಭೆಯಲ್ಲಿ ಈ ವಿಷಯ ತಿಳಿಸಿದ ಅವರು, ಮುಖ್ಯಮಂತ್ರಿ ಸಿದ್ಧರಾಮಯ್ಯನವರನ್ನು ನಿಯೋಗ ಭೇಟಿ ಮಾಡಿ ಜಿಲ್ಲೆ ರಚನೆ ಸಂಬಂಧ ಚರ್ಚೆ ನಡೆಸಲಾಗುವುದು. ಗೋಕಾಕನ್ನು ಜಿಲ್ಲಾ ಕೇಂದ್ರವನ್ನಾಗಿ ರಚಿಸುವಂತೆ ಮನವಿ ಮಾಡಿಕೊಳ್ಳಲಾಗುವುದು ಎಂದು ಹೇಳಿದರು.
ತಾಲೂಕಿನ ಮಠಾಧೀಶರು, ನ್ಯಾಯವಾದಿಗಳು, ಚಾಲನಾ ಸಮೀತಿಯ ಪ್ರಮುಖರು ಹಾಗೂ ತಾಲೂಕಿನ ಪಕ್ಷಾತೀತ ಮುಖಂಡರುಗಳು ಈ ನಿಯೋಗದಲ್ಲಿದ್ದು, ಈಗಾಗಲೇ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರು ಸಿಎಂ ಸಿದ್ಧರಾಮಯ್ಯನವರ ಭೇಟಿಗೆ ಸಮಯ ನಿಗದಿಪಡಿಸಿದ್ದಾರೆಂದು ಹೇಳಿದರು.
ಸಭೆಯಲ್ಲಿ ಮಾಜಿ ನಗರಾಧ್ಯಕ್ಷ ಎಸ್.ಎ. ಕೋತವಾಲ, ಪ್ರಭಾಶುಗರ ಅಧ್ಯಕ್ಷ ಅಶೋಕ ಪಾಟೀಲ, ನಗರಾಧ್ಯಕ್ಷ ತಳದಪ್ಪ ಅಮ್ಮಣಗಿ, ಎಪಿಎಂಸಿ ಅಧ್ಯಕ್ಷ ಅಡಿವೆಪ್ಪ ಕಿತ್ತೂರ, ವಕೀಲರ ಸಂಘದ ಮಾಜಿ ಅಧ್ಯಕ್ಷ ಸಿ.ಡಿ. ಹುಕ್ಕೇರಿ, ಪರಶುರಾಮ ಭಗತ, ಮತ್ತೀತರರು ಪಾಲ್ಗೊಂಡಿದ್ದರು.