ಘಟಪ್ರಭಾ:ಮಾತೃ ಹೃದಯದ ಬಾಲಚಂದ್ರ ಜಾರಕಿಹೊಳಿ ಅವರ ಸೇವೆ ಸ್ಮರಣೀಯ : ಡಾ.ಸಿದ್ಧರಾಮ ಮಹಾಸ್ವಾಮಿಜೀ ಪ್ರಶಂಸೆ
ಮಾತೃ ಹೃದಯದ ಬಾಲಚಂದ್ರ ಜಾರಕಿಹೊಳಿ ಅವರ ಸೇವೆ ಸ್ಮರಣೀಯ : ಡಾ.ಸಿದ್ಧರಾಮ ಮಹಾಸ್ವಾಮಿಜೀ ಪ್ರಶಂಸೆ
ಘಟಪ್ರಭಾ ಮಾ 19 : ಕಣ್ಣಿಗೆ ಕಾಣುವ ಮೊದಲ ದೇವರು ತಾಯಿ-ತಂದೆಯವರನ್ನು ನಿಜವಾದ ದೇವರೆಂದು ಪೂಜಿಸುತ್ತಿರುವ ಈ ಮೂಲಕ ಸಮಾಜಕ್ಕೆ ಒಳಿತಾಗುವ ಸೇವೆ ಸಲ್ಲಿಸುತ್ತಿರುವ ಮಾತೃ ಹೃದಯದ ಬಾಲಚಂದ್ರ ಜಾರಕಿಹೊಳಿ ಅವರ ಸೇವೆ ಸ್ಮರಣೀಯ ಎಂದು ಬೆಳಗಾವಿ ನಾಗನೂರು-ರುದ್ರಾಕ್ಷಿ ಮಠದ ಡಾ.ಸಿದ್ಧರಾಮ ಮಹಾಸ್ವಾಮಿಗಳು ಪ್ರಶಂಸೆ ವ್ಯಕ್ತಪಡಿಸಿದರು.
ಇಲ್ಲಿಗೆ ಸಮೀಪದ ಅರಭಾವಿ ದುರದುಂಡೀಶ್ವರ ಪುಣ್ಯಾರಣ್ಯ ಸಿದ್ಧ ಸಂಸ್ಥಾನ ಮಠದಲ್ಲಿ ಸೋಮವಾರದಂದು ಲಿಂ.ಭೀಮವ್ವಾ ಮತ್ತು ಲಿಂ.ಲಕ್ಷ್ಮಣರಾವ್ ಜಾರಕಿಹೊಳಿ ಅವರ ಸ್ಮರಣಾರ್ಥ 1.50 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಿರುವ ಸಭಾ ಭವನದ ಗುದ್ದಲಿ ಪೂಜೆ ಕಾರ್ಯಕ್ರಮದ ಪಾವನ ಸಾನಿಧ್ಯ ವಹಿಸಿ ಮಾತನಾಡುತ್ತಿದ್ದ ಅವರು, ಇಂತಹ ಮಹಾನುಭಾವರು ತಾಯಿ-ತಂದೆಯವರ ಸ್ಮರಣಾರ್ಥ ಅರಭಾವಿ ಮಠದಲ್ಲಿ ಸುಸಜ್ಜಿತವಾದ ಸಭಾ ಭವನ ನಿರ್ಮಿಸುತ್ತಿರುವುದು ಸಮಾಜಕ್ಕೆ ಮಾದರಿಯಾಗಿದೆ ಎಂದು ಹೇಳಿದರು.
ಜಗತ್ತಿನಲ್ಲಿ ಸಾಕಷ್ಟು ಜನ ಶ್ರೀಮಂತರಿದ್ದರೂ ಅವರಿಗೆ ಸಮಾಜಕ್ಕೆ ಏನನ್ನಾದರೂ ಮಾಡಬೇಕೆಂಬ ಕಲ್ಪನೆ ಮೂಡುವುದಿಲ್ಲ. ಆದರೆ ಬಾಲಚಂದ್ರ ಜಾರಕಿಹೊಳಿ ಅವರು ತಮ್ಮ ತಾಯಿ-ತಂದೆಯವರ ಸ್ಮರಣಾರ್ಥ ಮಾಡುತ್ತಿರುವ ಈ ಕಾರ್ಯಕ್ರಮ ಎಲ್ಲದಕ್ಕೂ ಮಾದರಿಯಾಗಿದೆ. ತಾಯಿ-ತಂದೆಯವರ ಋಣ ತೀರಿಸುವ ಸಂಕಲ್ಪ ತೊಟ್ಟಿರುವ ಬಾಲಚಂದ್ರ ಅವರು ಆದರ್ಶಪ್ರಾಯರಾಗಿದ್ದಾರೆ. ಮಠ-ಮಂದಿರಗಳಿಗೆ ತಮ್ಮ ಕೈಲಾದ ಸಹಾಯ ಮಾಡುತ್ತಿರುವ ಇವರ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಕಾಳಜಿ ಎಷ್ಟು ಬಣ್ಣಿಸಿದರೂ ಸಾಲದು. ಸಮಾಜದ ಒಳತಿಗಾಗಿ ಜನರ ಅಭಿವೃದ್ಧಿಗಾಗಿ ದುಡಿಯುತ್ತಿರುವ ಬಾಲಚಂದ್ರ ಅವರಿಗೆ ಮುಂದಿನ ದಿನಗಳಲ್ಲಿ ಆಯುರಾರೋಗ್ಯಭಾಗ್ಯ ಹಾಗೂ ಉನ್ನತ ಅಧಿಕಾರ ಲಭಿಸಲಿ ಎಂದು ಆಶೀರ್ವದಿಸಿದರು.
ಅರಭಾವಿ ಮಠವು ಉತ್ತರ ಕರ್ನಾಟಕದ ಕೆಲವೇ ಕೆಲವು ಪುಣ್ಯ ಕ್ಷೇತ್ರಗಳಲ್ಲಿ ಒಂದಾಗಿದೆ. ಲಕ್ಷಾಂತರ ಭಕ್ತರನ್ನು ಹೊಂದುತ್ತ, ಭಕ್ತರ ಇಷ್ಠಾರ್ಥಗಳನ್ನು ಈಡೇರಿಸುವ ಪಾವನ ಜ್ಯೋತಿಯಾಗಿದೆ. ದಿನನಿತ್ಯ ಸಾವಿರಾರು ಜನರು ಶ್ರೀಮಠಕ್ಕೆ ಬಂದುಹೋಗುತ್ತಿರುತ್ತಾರೆ. ಇಂತಹ ಪರಂಪರೆಯುಳ್ಳ ಈ ಮಠದ ಏಳ್ಗೆಗೆ ಅದರಲ್ಲೂ ಜಾರಕಿಹೊಳಿ ಕುಟುಂಬದ ಪಾತ್ರವೂ ಮುಖ್ಯವಾಗಿದೆ ಎಂದು ಹೇಳಿದರು.
ದಿ. ಲಕ್ಷ್ಮಣರಾವ್ ಹಾಗೂ ದಿ. ಭೀಮವ್ವಾ ಅವರು ಶ್ರೀಮಠದ ಪರಮ ಭಕ್ತರೂ ಆಗಿದ್ದರು. ಅವರೇ ಸ್ವತಃ ಮುಂದೆ ನಿಂತು ಮಠದ ಜಾತ್ರಾ ಕಾರ್ಯಕ್ರಮವನ್ನು ನಿರ್ವಹಿಸುತ್ತಿದ್ದರು. ಭಕ್ತಾಧಿಗಳಿಗೆ ಮಹಾಪ್ರಸಾದ ವ್ಯವಸ್ಥೆ ಮಾಡುತ್ತ ಈ ಭಾಗದಲ್ಲಿ ಜನಾನುರಾಗಿಯಾಗಿದ್ದರು. ಇಂತಹವರ ನೆನಪಿಗಾಗಿ ಒಂದುವರೆ ಕೋಟಿ ರೂ.ಗಳ ವೆಚ್ಚದಲ್ಲಿ ಸಭಾ ಭವನ ನಿರ್ಮಾಣವಾಗುವುದರ ಮೂಲಕ ಶ್ರೀಮಠದಲ್ಲಿ ಧಾರ್ಮಿಕದ ಜೊತೆಗೆ ಸಾಂಸ್ಕøತಿಕ ವಾತಾವರಣ ನಿರ್ಮಾಣವಾಗಲಿದೆ. ಇದರಿಂದ ಭಕ್ತರಲ್ಲಿ ಅಪಾರ ಸಂತಸ ಉಂಟಾಗಿದೆ ಎಂದು ಹೇಳಿದರು.
ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು, ಅರಭಾವಿ ಮಠದಲ್ಲಿ ಹೆತ್ತವರ ಸ್ಮರಣಾರ್ಥ ಸಭಾ ಭವನವನ್ನು ನಿರ್ಮಿಸುವ ಮೂಲಕ ತಾಯಿ-ತಂದೆಯವರಿಗೆ ಗೌರವ ಸಲ್ಲಿಸಲಾಗುತ್ತಿದೆ. ಜೀವನದುದ್ದಕ್ಕೂ ತಾಯಿ-ತಂದೆಯವರನ್ನೇ ದೇವರೆಂದು ಪೂಜಿಸುತ್ತಿದ್ದೇನೆ. ಕಷ್ಟದಲ್ಲಿರುವ ನಿರ್ಗತಿಕ ಕುಟುಂಬಗಳಿಗೆ ದಾನ ಮಾಡುವ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುತ್ತಿರುವ ನನಗೆ ದೇವರು ಇನ್ನೂ ದಾನ ಮಾಡುವ ಸದ್ಗುಣ ದಯಪಾಲಿಸಲಿ ಎಂದು ಪ್ರಾರ್ಥಿಸಿದರು.
ಮಾಹಿತಿ ತಂತ್ರಜ್ಞಾನ ಎಷ್ಟೇ ಮುಂದುವರೆದಿದ್ದರೂ ಜನರಿಗೆ ದೇವರ ಬಗ್ಗೆ ಇರುವ ನಂಬಿಕೆ, ವಿಶ್ವಾಸ ತಪ್ಪಿಲ್ಲ. ದೇವರನ್ನು ನಂಬಿ ಈಗಲೂ ನಾವು ಬದುಕುತ್ತಿದ್ದೇವೆ. ಹಣ-ಅಧಿಕಾರ ಮುಖ್ಯವಲ್ಲ. ಜನಗಳ ಕಲ್ಯಾಣವೇ ನನಗೆ ಮುಖ್ಯವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ನೇತೃತ್ವವನ್ನು ದುರದುಂಡೀಶ್ವರ ಸಿದ್ಧಸಂಸ್ಥಾನ ಮಠದ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳು ವಹಿಸಿದ್ದರು.
ಅಧ್ಯಕ್ಷತೆಯನ್ನು ಹಂದಿಗುಂದ ವಿರಕ್ತಿಮಠದ ಶಿವಾನಂದ ಮಹಾಸ್ವಾಮಿಗಳು ವಹಿಸಿದ್ದರು.
ಕಡಕೋಳದ ಸಚ್ಚಿದಾನಂದ ಮಹಾಸ್ವಾಮಿಗಳು, ಕಡೋಲಿ ವಿರಕ್ತಿಮಠದ ಗುರುಬಸವಲಿಂಗ ಮಹಾಸ್ವಾಮಿಗಳು, ಹುಕ್ಕೇರಿ ವಿರಕ್ತಿಮಠದ ಶಿವಬಸವ ಮಹಾಸ್ವಾಮಿಗಳು, ಸೇಗುಣಸಿ ವಿರಕ್ತಿಮಠದ ಮಹಾಂತ ದೇವರು, ಸ್ಥಳೀಯ ವೇದಮೂರ್ತಿ ಶಿವಯ್ಯಾ ಹಿರೇಮಠ, ಉಪಸ್ಥಿತರಿದ್ದರು.