ಗೋಕಾಕ:ಹಳ್ಳಿಗಳಲ್ಲಿರುವ ಮತದಾರರು ತಪ್ಪದೇ ಮತದಾನ ಮಾಡಬೇಕು: ಬಿ.ಎಫ್.ದಳವಾಯಿ
ಹಳ್ಳಿಗಳಲ್ಲಿರುವ ಮತದಾರರು ತಪ್ಪದೇ ಮತದಾನ ಮಾಡಬೇಕು: ಬಿ.ಎಫ್.ದಳವಾಯಿ
ಗೋಕಾಕ (ಬೆಟಗೇರಿ) ಮಾ 26 : ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ 18 ವರ್ಷ ವಯಸ್ಸು ಪೊರೈಸಿದ ಯುವಕರು, ಮತದಾರ ಯಾದಿಯಲ್ಲಿ ಹೆಸರು ನೊಂದಣಿಯಾಗಿರುವ ಹಳ್ಳಿಗಳಲ್ಲಿರುವ ಸಾರ್ವಜನಿಕರು ತಪ್ಪದೇ ಮತದಾನ ಮಾಡಬೇಕು. ಮತದಾನ ಪ್ರತಿಯೊಬ್ಬರ ಹಕ್ಕು ಮತ್ತು ಕರ್ತವ್ಯವಾಗಿದೆ. ತಮ್ಮ ಮತ ಅಮೂಲ್ಯವಾಗಿದೆ. ಹೀಗಾಗಿ ಎಲ್ಲ ಮತದಾರರು ಕಡ್ಡಾಯವಾಗಿ ಮತದಾನ ಮಾಡಬೇಕು ಎಂದು ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮ ಪಂಚಾಯ್ತಿ ಪಿಡಿಒ ಬಿ.ಎಫ್ ದಳವಾಯಿ ಹೇಳಿದರು.
ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮ ಪಂಚಾಯ್ತಿ ಹಾಗೂ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಗಂಡು ಮತ್ತು ಹೆಣ್ಣು ಮಕ್ಕಳ ಶಾಲೆಗಳ ಸಹಯೋಗದೊಂದಿಗೆ ಇತ್ತೀಚಿಗೆ ಮತದಾನ ಕುರಿತು ನಡೆದ ಜಾಗೃತ ಜಾಥಾ ಮತ್ತು ಮತದಾನ ತಿಳುವಳಿಕೆ ಕರ ಪತ್ರ ವಿತರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸ್ಥಳೀಯರು ತಮ್ಮ ಅಕ್ಕ, ಪಕ್ಕದ ಸ್ನೇಹಿತರಿಗೆ, ಬಂಧು, ಬಳಗದವರಿಗೆ ಮತದಾರರ ಯಾದಿಯಲ್ಲಿ ಹೆಸರು ನೊಂದಾಯಿಸುವಂತೆ ಹಾಗೂ ಮತದಾನ ಮಹತ್ವದ ಕುರಿತು ಜಾಗೃತಿ ಮೂಡಿಸಬೇಕು. ಚುನಾವಣಾ ಗುರುತಿನ ಚೀಟಿ ಪಡೆಯುವಂತೆ ಸಲಹೆ ನೀಡಬೇಕು ಎಂದರು.
ಈಗಾಗಲೇ ನಗರ, ಪಟ್ಟಣ, ಹಳ್ಳಿಗಳಲ್ಲಿ ಸರ್ಕಾರ ಮತದಾನದ ತಿಳುವಳಿಕೆ ಮೂಡಿಸಲು ಹಲವಾರು ಪ್ರಾಯೋಗಿಕ ಪ್ರಯತ್ನಗಳ ಮೂಲಕ ಪ್ರಯತ್ನಿಸುತ್ತಿದೆ. ಆದ ಕಾರಣ ಹಳ್ಳಿಗಳಲ್ಲಿಯ ಪ್ರಜ್ಞಾವಂತ ಯುವಕರು ಸ್ಥಳೀಯ ಜನರಿಗೆ ಮತ ಚಲಾಯಿಸುವಂತೆ ತಿಳುವಳಿಕೆ ಮೂಡಿಸಬೇಕು. ಸಾಕಷ್ಟು ಜನರು ಹಲವಾರು ಕಾರಣಗಳಿಂದ ಮತ ಚಲಾಯಿಸದೇ ದೂರ ಉಳಿಯುತ್ತಿದ್ದು, ಈ ಸಲ ತಮಗೆ ಯೋಗ್ಯವಲ್ಲದ ಅಭ್ಯರ್ಥಿಗಳಿದ್ದರೆ ನೋಟಾ ಮತ ಚಲಾಯಿಸುವ ವ್ಯವಸ್ಥೆ ಮತದಾನ ಯಂತ್ರದಲ್ಲಿರುತ್ತದೆ ಆದ್ದರಿಂದ ಎಲ್ಲರೂ ತಪ್ಪದೇ ಮತ ಚಲಾಯಿಸಬೇಕೆಂದು ಪಿಡಿಒ ಬಿ.ಎಫ್. ದಳವಾಯಿ ಅಭಿಪ್ರಾಯ ವ್ಯಕ್ತಪಡಿಸಿದರು.
ಗ್ರಾಮದ ಪ್ರಮುಖ ಬೀದಿಗಳಲ್ಲಿ ಮತದಾನ ಕುರಿತು ಕರ ಪತ್ರ ಹಂಚುತ್ತಾ, ಘೋಷಣೆ ಕೂಗುತ್ತಾ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಶಾಲಾ ಮಕ್ಕಳಿಂದ ಜಾಗೃತಿ ಜಾಥಾ ನಡೆದ ಬಳಿಕ ಶಾಲಾ ಮಕ್ಕಳಿಗೆ ಸಿಹಿ ವಿತರಿಸಲಾಯಿತು.
ಗ್ರಾಪಂ ಅಧ್ಯಕ್ಷ ಲಕ್ಷ್ಮಣ ಚಂದರಗಿ, ಸದಸ್ಯರಾದ ಸುಭಾಷ ಕರೆಣ್ಣವರ, ಬಸಪ್ಪ ಕೋಣಿ, ಮಲ್ಲಪ್ಪ ಪಣದಿ, ಕಲ್ಲಪ್ಪ ಆವಲಿ, ಪರಪ್ಪ ಮೇಳೆಣ್ಣವರ, ಮಹಾಂತೇಶ ಕಂಬಾರ, ರಾಮಣ್ಣ ದಂಡಿನ, ಸುರೇಶ ಬಾನಸಿ, ವಿಠಲ ಚಂದರಗಿ, ಗೌಡಪ್ಪ ಮಾಳೇದ, ಮೆಳೆಪ್ಪ ಹರಿಜನ, ಶಾಲೆಯ ಮುಖ್ಯ ಶಿಕ್ಷಕ ವೈ.ಸಿ. ಶೀಗಿಹಳ್ಳಿ, ಆರ್.ಬಿ.ಬೆಟಗೇರಿ, ಶಿಕ್ಷಕರು, ಮಕ್ಕಳು, ಇತರರು ಇದ್ದರು.