ಮೂಡಲಗಿ:ಕುಲಗೋಡ ವಿತರಣಾ ಕಾಲುವೆ ಮೂಲಕ ನೀರು ಹರಿಸಲು ಅಗತ್ಯ ಕ್ರಮ :ಶಾಸಕ ಬಾಲಚಂದ್ರ
ಕುಲಗೋಡ ವಿತರಣಾ ಕಾಲುವೆ ಮೂಲಕ ನೀರು ಹರಿಸಲು ಅಗತ್ಯ ಕ್ರಮ :ಶಾಸಕ ಬಾಲಚಂದ್ರ
ಮೂಡಲಗಿ ಮಾ 28 : ಸುಣಧೋಳಿ ಹಾಗೂ ಸುತ್ತಲಿನ ರೈತರ ಜಮೀನುಗಳಿಗೆ ಜಿಆರ್‍ಬಿಸಿಯ ಕುಲಗೋಡ ವಿತರಣಾ ಕಾಲುವೆ ಮೂಲಕ ನೀರನ್ನು ಶಾಶ್ವತವಾಗಿ ಹರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಇತ್ತೀಚೆಗೆ ತಾಲೂಕಿನ ಸುಣಧೋಳಿ ಗ್ರಾಮದಲ್ಲಿರುವ ಸೊಗಲ ಶಾಖಾ ಮಠಕ್ಕೆ ಭೇಟಿ ನೀಡಿ ಸತ್ಕಾರ ಸ್ವೀಕರಿಸಿ ಮಾತನಾಡುತ್ತಿದ್ದ ಅವರು, ಈಗಾಗಲೇ 2-3 ನೀರು ರೈತರ ಜಮೀನುಗಳಿಗೆ ಹರಿದಿದೆ. ಮುಂದೆಯೂ ನೀರು ಹರಿಯಲಿದೆ. ರೈತಾಪಿ ವರ್ಗದವರ ಹಿತಕ್ಕೆ ಅನುಗುಣವಾಗಿ ಕೆಲಸ ನಿರ್ವಹಿಸಲಾಗುತ್ತಿದೆ ಎಂದು ಹೇಳಿದರು.
ಕುಲಗೋಡ ಟೇಲ್‍ಎಂಡ್ ಭಾಗದ ಹೊನಕುಪ್ಪಿ, ಸುಣಧೋಳಿ, ಲಕ್ಷ್ಮೇಶ್ವರ, ಹೊಸಟ್ಟಿ, ಭೈರನಟ್ಟಿ ಗ್ರಾಮಗಳಿಗೆ ಹಿಡಕಲ್ ಜಲಾಶಯದಿಂದ ಬಿಡಲಾಗುವ ನೀರು ಸತತವಾಗಿ ರೈತರಿಗೆ ಹರಿಸಲಾಗುವುದು. ಎಷ್ಟೇ ಕಷ್ಟಗಳು ಎದುರಾದರೂ ರೈತರಿಗೆ ನೀರು ಕೊಡುವುದನ್ನು ಮರೆಯುವುದಿಲ್ಲವೆಂದು ಹೇಳಿದರು.
ಇಲ್ಲಿಯ ಸೊಗಲ ಶಾಖಾ ಮಠ ನಿಸರ್ಗದಿಂದ ಕೂಡಿದ ಮಠವಾಗಿದೆ. ಈ ಮಠಕ್ಕೆ ಬಂದರೆ ಮನಸ್ಸು ಅತ್ಯಂತ ಶಾಂತಿಯಿಂದ ಕೂಡಿರುತ್ತದೆ. ಈ ಮಠ ಈ ಭಾಗದಲ್ಲಿ ಭಕ್ತರಿಗೆ ಧಾರ್ಮಿಕತೆಯನ್ನು ಉಣಿಸುತ್ತಿದೆ. ಇಲ್ಲಿನ ಶರಣರು ಮಠದ ಏಳ್ಗೆಗಾಗಿ ದುಡಿಯುತ್ತಿದ್ದಾರೆ ಎಂದು ಹೇಳಿದರು.
ಸುಣಧೋಳಿ ಗ್ರಾಮಸ್ಥರು ಅಭಿವೃದ್ಧಿಗಾಗಿ ತಮ್ಮ ವೈಮನಸ್ಸುಗಳನ್ನು ಬದಿಗಿಡಬೇಕು. ಗ್ರಾಮ ಪಂಚಾಯತ ಸದಸ್ಯರು ಈ ದಿಸೆಯಲ್ಲಿ ಕಾರ್ಯಪ್ರವೃತ್ತರಾಗಿ ಗ್ರಾಮದ ಅಭಿವೃದ್ಧಿಗಾಗಿ ದುಡಿಯಬೇಕು. ಚುನಾವಣೆ ಬಂದಾಗ ಮಾತ್ರ ರಾಜಕೀಯ ಮಾಡಬೇಕು. ಚುನಾವಣೆ ಮುಗಿದ ಬಳಿಕ ಎಲ್ಲರೂ ಒಂದಾಗಿ-ಒಗ್ಗಟ್ಟಾಗಿ ತಮ್ಮಲ್ಲಿರುವ ಭಿನ್ನಾಭಿಪ್ರಾಯಗಳನ್ನು ಮರೆತು ಗ್ರಾಮದ ಒಳತಿಗಾಗಿ ಶ್ರಮಿಸುವಂತೆ ತಿಳಿಸಿದರು.
ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನು ಮಠದಿಂದ ಚಿದಾನಂದ ಅವಧೂತ ಸ್ವಾಮಿಗಳು ಸತ್ಕರಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕಲ್ಲೋಳಿಯ ಯುವ ಮುಖಂಡ ಭಗವಂತ ಪತ್ತಾರ, ಚುನಾವಣೆಗೆ ಕೆಲವೇ ದಿನಗಳು ಬಾಕಿ ಇರುವಾಗ ಈ ಭಾಗದ ಶ್ರೇಯೋಭಿವೃದ್ಧಿಗಾಗಿ, ಕ್ಷೇತ್ರವನ್ನು ನಂದನವನವನ್ನಾಗಿ ಮಾಡುತ್ತಿರುವ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನು ರಾಜ್ಯದಲ್ಲಿಯೇ ಅತ್ಯಧಿಕ ಮತಗಳ ಅಂತರದಿಂದ ಗೆಲ್ಲಿಸಲಿಕ್ಕೆ ಎಲ್ಲರೂ ಪ್ರಯತ್ನಿಸಿ ದುಡಿಯಬೇಕು. ಈ ಚುನಾವಣೆಯಲ್ಲಿ ಬಾಲಚಂದ್ರ ಜಾರಕಿಹೊಳಿ ಅವರಿಗೆ ಎದುರಾಳಿಗಳು ಯಾರೂ ಇಲ್ಲ. ವಿರೋಧ ಪಕ್ಷಗಳ ಅಭ್ಯರ್ಥಿಗಳು ಈ ಚುನಾವಣೆಯಲ್ಲಿ ತಮ್ಮ ಠೇವಣಿಯನ್ನು ಕಳೆದುಕೊಳ್ಳುವುದು ನಿಶ್ಚಿತವಾಗಿದೆ ಎಂದು ಹೇಳಿದರು.
ಸುಣಧೋಳಿ ಗ್ರಾಪಂ ಅಧ್ಯಕ್ಷ ಚಂದ್ರಶೇಖರ ಸಿದ್ಧಾಪೂರ, ಎಪಿಎಂಸಿ ನಿರ್ದೇಶಕ ರೇವಣ್ಣಾ ಕಣಕಿಕೋಡಿ, ತಾಪಂ ಸದಸ್ಯ ರಮೇಶ ಗಡಗಿ, ಮೂಡಲಗಿ ಪುರಸಭೆ ಸದಸ್ಯ ಸಂತೋಷ ಸೋನವಾಲ್ಕರ, ಜಿಪಂ ಮಾಜಿ ಸದಸ್ಯ ಪರಮೇಶ್ವರ ಹೊಸಮನಿ, ಮಾಜಿ ಗ್ರಾಪಂ ಅಧ್ಯಕ್ಷ ಭೀಮಪ್ಪ ಹೂವಣ್ಣವರ, ಗುರುರಾಜ ಪಾಟೀಲ, ಕಲ್ಲಪ್ಪ ಕಮತಿ, ಶಿವಲಿಂಗಪ್ಪ ಮದಭಾವಿ, ಸುರೇಶ ಸಣ್ಣಕ್ಕಿ, ಮಹಾದೇವ ಹಾರೂಗೇರಿ, ಸಿದ್ಧಾರೂಢ ಕಮತಿ, ಮುರಿಗೆಪ್ಪ ಪಾಟೀಲ, ರಾಮಣ್ಣಾ ಬೆಣ್ಣಿ, ಬಸು ಬಿ.ಪಾಟೀಲ, ಶಿದ್ಲಿಂಗ ದೇವನಗಳ, ಮುಂತಾದವರು ಉಪಸ್ಥಿತರಿದ್ದರು.