ಮೂಡಲಗಿ:ಶಾಸಕ ಬಾಲಚಂದ್ರರನ್ನು ಒಂದು ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲ್ಲಿಸಲಿಕ್ಕೆ ಕಾರ್ಯಕರ್ತರು ಶ್ರಮಿಸಬೇಕು : ಗೋವಿಂದ
ಶಾಸಕ ಬಾಲಚಂದ್ರರನ್ನು ಒಂದು ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲ್ಲಿಸಲಿಕ್ಕೆ ಕಾರ್ಯಕರ್ತರು ಶ್ರಮಿಸಬೇಕು : ಗೋವಿಂದ ಕೊಪ್ಪದ
ಮೂಡಲಗಿ ಮಾ 31 : ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನು ಮೇ 12 ರಂದು ನಡೆಯಲಿರುವ ಸಾರ್ವತ್ರಿಕ ಚುನಾವಣೆಯಲ್ಲಿ ಒಂದು ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲ್ಲಿಸಲಿಕ್ಕೆ ಕಾರ್ಯಕರ್ತರು ಶ್ರಮಿಸಬೇಕೆಂದು ಯಾದವಾಡ ಜಿಪಂ ಸದಸ್ಯ ಗೋವಿಂದ ಕೊಪ್ಪದ ಹೇಳಿದರು.
ತಾಲೂಕಿನ ಕುಲಗೋಡ ಗ್ರಾಮದಲ್ಲಿ ಶುಕ್ರವಾರದಂದು ಜರುಗಿದ ಯಾದವಾಡ ಜಿಪಂ ವ್ಯಾಪ್ತಿಯ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಕಾರ್ಯಕರ್ತರು ತಮ್ಮಲ್ಲಿನ ಸಣ್ಣ-ಪುಟ್ಟ ವ್ಯತ್ಯಾಸಗಳನ್ನು ಬದಿಗಿಟ್ಟು ಅರಭಾವಿ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತಿರುವ ಬಾಲಚಂದ್ರ ಜಾರಕಿಹೊಳಿ ಅವರ ದಾಖಲೆಯ ಗೆಲುವಿಗೆ ಒಂದಾಗಿ ದುಡಿಯುವಂತೆ ಕೋರಿದರು.
ರಾಜ್ಯದಲ್ಲಿ ಈ ಬಾರಿ ಬಿಜೆಪಿಯು ಅಧಿಕಾರಕ್ಕೆ ಬರಲಿದ್ದು, ಸರ್ಕಾರದಲ್ಲಿ ಬಾಲಚಂದ್ರ ಜಾರಕಿಹೊಳಿ ಅವರು ಸಂಪುಟ ಸಚಿವರಾಗಿ ನಿಯುಕ್ತಿಗೊಳ್ಳಲಿದ್ದಾರೆ. ಕಳೆದ 14 ವರ್ಷಗಳಿಂದ ಕ್ಷೇತ್ರದ ಎಲ್ಲ ಸಮುದಾಯಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಾಮಾಜಿಕ ನ್ಯಾಯವನ್ನು ಪರಿಪಾಲನೆ ಮಾಡುತ್ತಿರುವ ಶಾಸಕರು ರಾಜ್ಯ ಕಂಡ ಅತ್ಯಂತ ಶ್ರೇಷ್ಠ ಸಂಸದೀಯಪಟು ಎಂದು ಬಣ್ಣಿಸಿದರು.
ಇಂದಿನಿಂದ ನಮ್ಮ ಕಾರ್ಯಕರ್ತರು ಪ್ರತಿಯೊಬ್ಬ ಮತದಾರರನ್ನು ಸಂಪರ್ಕಿಸಿ ಬಿಜೆಪಿಗೆ ಮತ ಹಾಕಲು ಪ್ರೇರೇಪಿಸಬೇಕು. ಶಾಸಕ ಬಾಲಚಂದ್ರ ಜಾರಕಿಹೊಳಿ ಹಾಗೂ ಪಕ್ಷದ ಸಾಧನೆಗಳನ್ನು ಜನರಿಗೆ ತಲುಪಿಸಬೇಕು. ಪ್ರತಿಶತ 100ರಷ್ಟು ಮತದಾನವಾಗಲು ಕಾರ್ಯಕರ್ತರು ದುಡಿಯಬೇಕೆಂದು ತಿಳಿಸಿದರು.
ಶಿಕ್ಷಣ, ನೀರಾವರಿ, ರಸ್ತೆಗಳು, ಕುಡಿಯುವ ನೀರು, ಆರೋಗ್ಯ ಮುಂತಾದ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿರುವ ಶಾಸಕರು, ನೀರಾವರಿ ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆ ಮಾಡುತ್ತಿದ್ದಾರೆ. ಈಗಾಗಲೇ ಶೈಕ್ಷಣಿಕ ಕ್ಷೇತ್ರದಲ್ಲಿ ಮೂಡಲಗಿ ವಲಯ ರಾಜ್ಯದಲ್ಲಿಯೇ ಹೆಮ್ಮೆಯ ಸಾಧನೆ ಮಾಡಿದೆ ಎಂದು ಹೇಳಿದರು.
ಅರಭಾವಿ ಮಂಡಲ ಬಿಜೆಪಿ ಅಧ್ಯಕ್ಷ ಸುಭಾಸ ಪಾಟೀಲ ಮಾತನಾಡಿ, ಅರಭಾವಿ ಕ್ಷೇತ್ರದಲ್ಲಿ 5 ಜಿಪಂ, 18 ತಾಪಂ, 1 ಪುರಸಭೆ, 3 ಪಟ್ಟಣ ಪಂಚಾಯತ ಹಾಗೂ 34 ಗ್ರಾಮ ಪಂಚಾಯತಗಳಲ್ಲಿ ಕಮಲ ಅರಳಿದೆ. ಇದಕ್ಕೆ ಬಾಲಚಂದ್ರ ಜಾರಕಿಹೊಳಿ ಅವರ ಸಂಘಟನಾ ಚಾತುರ್ಯವೇ ಕಾರಣವಾಗಿದೆ. 281 ಮತಗಟ್ಟೆಗಳಿದ್ದು, ಪ್ರತಿ ಬೂತ್ ಮಟ್ಟದಲ್ಲಿ ಪಕ್ಷದಿಂದ ಸಭೆಗಳನ್ನು ನಡೆಸಿ ಕಾರ್ಯಕರ್ತರಿಗೆ ನಿರ್ದೇಶನ ನೀಡಲಾಗಿದೆ. ರಾಜ್ಯದಲ್ಲಿಯೇ ನವ ಇತಿಹಾಸ ಸೃಷ್ಟಿಸಲು ಈ ಬಾರಿ ನಮ್ಮ ಕ್ಷೇತ್ರಕ್ಕೆ ಸುವರ್ಣಾವಕಾಶವಿದ್ದು, ಇದನ್ನು ಸದುಪಯೋಗಪಡಿಸಿಕೊಳ್ಳಲು ಬಾಲಚಂದ್ರ ಜಾರಕಿಹೊಳಿ ಅವರನ್ನು ಅತ್ಯಧಿಕ ಮತಗಳ ಅಂತರದಿಂದ ದಿಗ್ವಿಜಯ ಸಾಧಿಸಲು ಹಾಗೂ ರಾಜ್ಯದಲ್ಲಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ರಚಿಸಲು ಶ್ರಮಿಸುವಂತೆ ಮನವಿ ಮಾಡಿಕೊಂಡರು.
ಅರಭಾವಿ ಕ್ಷೇತ್ರದ ಹಳ್ಳೂರ, ತುಕ್ಕಾನಟ್ಟಿ, ವಡೇರಹಟ್ಟಿ, ಕೌಜಲಗಿ, ಮೆಳವಂಕಿ ಹಾಗೂ ಯಾದವಾಡ ಜಿಲ್ಲಾ ಪಂಚಾಯತಿ ವ್ಯಾಪ್ತಿಯ ಕಾರ್ಯಕರ್ತರ ಸಭೆಗಳು ಯಶಸ್ವಿಯಾಗಿ ನಡೆದವು. ಎಲ್ಲ ಸಭೆಗಳಲ್ಲೂ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನು ಪ್ರಚಂಡ ಬಹುಮತದಿಂದ ಆರಿಸಿ ಕಳುಹಿಸಲು ಅನುಸರಿಸಬೇಕಾದ ಕಾರ್ಯತಂತ್ರಗಳನ್ನು ಹೆಣೆಯಲಾಯಿತು. 25 ದಿನಗಳವರೆಗೆ ಮುಖಂಡರು ಮತ್ತು ಕಾರ್ಯಕರ್ತರು ಚುನಾವಣೆ ಪ್ರಚಾರದಲ್ಲಿ ಭಾಗಿಯಾಗಿ ದುಡಿಯುವಂತೆ ಕೋರಲಾಯಿತು. ಬಾಲಚಂದ್ರ ಜಾರಕಿಹೊಳಿ ಅವರ ಶಕ್ತಿ ಸಾಮಥ್ರ್ಯವನ್ನು ಇಡೀ ರಾಜ್ಯಕ್ಕೆ ತೋರಿಸಿಕೊಡಲು ಲಕ್ಷಕ್ಕೂ ಅಧಿಕ ಮತಗಳ ಅಂತರದ ಗೆಲುವಿಗೆ ಮಾರ್ಗೊಪಾಯಗಳನ್ನು ಹಾಕಿಕೊಳ್ಳಲಾಯಿತು. 6 ಜಿಪಂ ವ್ಯಾಪ್ತಿಯ ಸಭೆಗಳಲ್ಲಿ ಸುಮಾರು 4 ಸಾವಿರಕ್ಕೂ ಅಧಿಕ ಕಾರ್ಯಕರ್ತರು ಪಾಲ್ಗೊಂಡಿದ್ದರು.
ತಾಪಂ ಸದಸ್ಯರಾದ ಸದಾಶಿವ ದುರಗನ್ನವರ, ಪರಶುರಾಮ ಗದಾಡಿ, ಶಾಂತಪ್ಪ ಹಿರೇಮೇತ್ರಿ, ಮಹಾದೇವ ಹುಚ್ಚನ್ನವರ, ಶಿವಬಸು ಜುಂಜರವಾಡ, ಹಣಮಂತ ತೇರದಾಳ, ಗೋಪಾಲ ಕುದರಿ, ಬಸವರಾಜ ಹುಕ್ಕೇರಿ, ಪ್ರಮುಖರಾದ ಬಸವಂತ ಕಮತಿ, ಎಂ.ಕೆ. ಕುಳ್ಳೂರ, ಹಣಮಂತ ತೇರದಾಳ, ಎ.ಎ. ಪರುಶೆಟ್ಟಿ, ಬಸಗೌಡ ಪಾಟೀಲ, ವಿಠ್ಠಲ ಪಾಟೀಲ, ಮಲ್ಲು ಪಾಟೀಲ, ಶಿವನಗೌಡ ಪಾಟೀಲ, ಎಂ.ಆರ್. ಭೋವಿ, ಭೂತಪ್ಪ ಗೊಡೇರ, ಅಶೋಕ ಖಂಡ್ರಟ್ಟಿ, ಸಂಜು ಹೊಸಕೋಟಿ, ಕೆಂಪಣ್ಣಾ ಮುಧೋಳ, ರಾಮಣ್ಣಾ ಮಹಾರಡ್ಡಿ, ಎಂ.ಐ. ನೀಲನ್ನವರ, ಅಶೋಕ ನಾಯಿಕ, ಎಂ.ಎಂ. ಪಾಟೀಲ, ಯಲ್ಲಪ್ಪಗೌಡ ನ್ಯಾಮಗೌಡ, ಸುಭಾಸ ವಂಟಗೋಡಿ, ನಾಗಪ್ಪ ಮಂಗಿ, ವಿಠ್ಠಲ ಸವದತ್ತಿ, ನೀಲಪ್ಪ ಕೇವಟಿ, ಬಾಬು ನಾಯಿಕ, ನಿಜಾಮಸಾಬ ಜಮಾದಾರ, ಜನಪ್ರತಿನಿಧಿಗಳು, ಸಹಕಾರಿಗಳು, ಬಿಜೆಪಿ ಪದಾಧಿಕಾರಿಗಳು ಉಪಸ್ಥಿತರಿದ್ದರು.