RNI NO. KARKAN/2006/27779|Saturday, October 19, 2024
You are here: Home » breaking news » ಗೋಕಾಕ:ಡೆಂಗ್ಯೂ ತಡೆಗಟ್ಟಲು ಮುಂಜಾಗೃತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕರವೇ ಪ್ರತಿಭಟನೆ

ಗೋಕಾಕ:ಡೆಂಗ್ಯೂ ತಡೆಗಟ್ಟಲು ಮುಂಜಾಗೃತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕರವೇ ಪ್ರತಿಭಟನೆ 

ಡೆಂಗ್ಯೂ ತಡೆಗಟ್ಟಲು ಮುಂಜಾಗೃತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕರವೇ ಪ್ರತಿಭಟನೆ

ಗೋಕಾಕ ಎ 12: ನಗರದಲ್ಲಿ ಹರಡುತ್ತಿರುವ ಡೆಂಗ್ಯೂ ರೋಗ ತಡೆಗಟ್ಟಲು ಮುಂಜಾಗೃತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆಯ ಗೋಕಾಕ ತಾಲೂಕಾ ಘಟಕ ಕಾರ್ಯಕರ್ತರು ತಾಲೂಕಾಧ್ಯಕ್ಷ ಬಸವರಾಜ ಖಾನಪ್ಪನವರ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿಸಿ ತಾಲೂಕಾ ಆರೋಗ್ಯಾಧಿಕಾರಿ ಹಾಗೂ ನಗರ ಸಭೆ ಪೌರಾಯುಕ್ತರ ಮುಖಾಂತರ ಜಿಲ್ಲಾಧಿಕಾರಿಗಳಿಗೆ ಮನವಿ ಅರ್ಪಿಸಿದರು. ಗುರುವಾರ ಮುಂಜಾನೆ ನಗರದ ಸರಕಾರಿ ಆಸ್ಪತ್ರೆಯ ಆವರಣದಲ್ಲಿ ಸೇರಿದ ಕಾರ್ಯಕರ್ತರು ಡೆಂಗ್ಯೂ ಜ್ವರ ತಡೆಯಲು ವಿಫಲವಾಗುತ್ತಿರುವ ಆರೋಗ್ಯ ಇಲಾಖೆ ಮತ್ತು ನಗರ ಸಭೆ ವಿರುದ್ಧ ಘೋಷಣೆಗಳನ್ನು ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಕಳೆದ ಹಲವು ತಿಂಗಳಿನಿಂದ ನಗರದಲ್ಲಿ ಮಹಾಮಾರಿ ಡೆಂಗ್ಯೂ ಜ್ವರ ವಿಪರೀತವಾಗಿ ಹರಡಿದ್ದು ಇದಕ್ಕೆ ಹಲವು ಜನ ತುತ್ತಾಗಿ ಆಸ್ಪತ್ರೆ ಸೇರಿದ, ಸೇರುತ್ತಿರುವ ಪ್ರಕರಣಗಳು ದಾಖಲಾಗುತ್ತಿವೆ. ಕಳೆದ ಎರಡು ತಿಂಗಳಲ್ಲಿ ನಗರದ ಕಿಲ್ಲಾ ಉಪ್ಪಾರ ಓಣಿ, ಎ.ಪಿ.ಎಂ.ಸಿ. ಅಂಬೇಡ್ಕರ ನಗರ ಸೇರಿದಂತೆ ಹಲವು ಕಡೆ ಡೆಂಗ್ಯೂ ಜ್ವರ ಪ್ರಕರಣಗಳು ಬೆಳಕಿಗೆ ಬಂದು ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಾಗಿ ಗುಣಮುಖರಾಗಿದ್ದಾರಲ್ಲದೆ 3-4 ಪ್ರಕರಣಗಳು ಇಲ್ಲಿ ನಗರದಲ್ಲಿ ಸೂಕ್ತ ಚಿಕಿತ್ಸೆ ದೊರಕದೆ ಬೆಳಗಾವಿಯ ಲೇಕವ್ಯೂ ಮತ್ತು ಕೆ.ಎಲ್.ಇ.ಆಸ್ಪತ್ರೆಗಳಲ್ಲಿ ದಾಖಲಾಗಿ ಚಿಕಿತ್ಸೆ ಪಡೆದುಕೊಂಡು ಬಂದಿದ್ದಾರೆ. ಇಷ್ಟೆಲ್ಲಾ ಪ್ರಕರಣಗಳು ನಡೆದರೂ ಸಹಾ ತಾಲೂಕಾ ಆರೋಗ್ಯಧಿಕಾರಿಗಳಾಗಲಿ, ನಗರಸಭೆಯ ಪೌರಾಯುಕ್ತರಾಗಲಿ ನಗರದಲ್ಲಿ ಇದಕ್ಕೆ ಸಂಬಂಧಿಸಿದಂತೆ ಜಾಗೃತಿಯಾಗಲಿ, ಮುಂಜಾಗ್ರತ ಕ್ರಮವಾಗಿ ತಮ್ಮ ತಮ್ಮ ಇಲಾಖೆಗಳಿಂದ ಯಾವುದೇ ಕ್ರಮ
ಕೈಗೊಳ್ಳದಿರುವುದು ಖಂಡನೀಯ. ಎರಡು ತಿಂಗಳಲ್ಲಿ ಸರಿಸುಮಾರು 10 ರಿಂದ 15 ಡೆಂಗ್ಯೂ ಪ್ರಕರಣಗಳು ಬೆಳಕಿಗೆ ಬಂದರೂ ಸಹ ಇದರ ಅಧಿಕೃತ ಸಂಖ್ಯೆ ಆರೋಗ್ಯ ಇಲಾಖೆಯಲ್ಲಿ ಇಲ್ಲಾ. ಕೇವಲ 6 ಪ್ರಕರಣಗಳು ಮಾತ್ರ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿವೆ. ಖಾಸಗಿ ಆಸ್ಪತ್ರೆಯಲ್ಲಿ ಅಥವಾ ನಗರದಲ್ಲಿರುವ ರಕ್ತ ತಪಾಸಣೆ ಕೇಂದ್ರದವರಾಗಲೀ ಯಾರು ಆರೋಗ್ಯ ಇಲಾಖೆಗೆ ಈ ಕುರಿತು ಮಾಹಿತಿಯನ್ನು ಕಳುಹಿಸಿಲ್ಲಾ. ಸಾರ್ವಜನಿಕರ ಆರೋಗ್ಯವನ್ನು ಕಾಪಾಡಲಿಕ್ಕಾಗಿಯೇ ಇರುವ ಆರೋಗ್ಯ ಇಲಾಖೆ ಮತ್ತು ನಗರಸಭೆಯವರು ಗೋಕಾಕ ನಗರದ ಸಾರ್ವಜನಿಕರೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ. ಈ ಪ್ರಕರಣಗಳನ್ನು ಎರಡು ಇಲಾಖೆಯವರು ಅತ್ಯಂತ ಗಂಭಿರವಾಗಿ ಪರಿಗಣಿಸಿ ನಗರಾದ್ಯಂತ ಸಾರ್ವಜನಿಕರಲ್ಲಿ ಡೆಂಗ್ಯೂ ರೋಗದ ಕುರಿತು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಮುಂಜಾಗ್ರತ ಕ್ರಮವಾಗಿ ನಗರಾಧ್ಯಂತ ಸೊಳ್ಳೆ ಹರಡದಂತೆ ದ್ರವಗಳನ್ನು ಸಿಂಪಡಿಸಿ ಡೆಂಗ್ಯೂ ರೋಗ ಹರಡದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕೆಂದು ಸಮಸ್ತ ಸಾರ್ವಜನಿಕರ ಪರವಾಗಿ ಕರ್ನಾಟಕ ರಕ್ಷಣಾ ವೇದಿಕೆ ಮನವಿಯಲ್ಲಿ ಎಚ್ಚರಿಸಿದೆ.
ಪ್ರತಿಭಟನೆಯಲ್ಲಿ ವೇದಿಕೆ ಕಾರ್ಯದರ್ಶಿ ಸಾಧಿಕ ಹಲ್ಯಾಳ, ಮಹಾದೇವ ಮಕ್ಕಳಗೇರಿ, ರೆಹಮಾನ ಮೊಕಾಶಿ, ಶೆಟ್ಟೆಪ್ಪ ಗಾಡಿವಡ್ಡರ, ಮಲ್ಲು ಸಂಪಗಾರ, ರಮೇಶ ಕಮತಿ, ರಾಮಪ್ಪ ಸಣ್ಣಲಗಮನ್ನವರ, ಬಸು ಹಿಂಡಿ, ಮಾಳಪ್ಪ ಹಣಜಿ, ಅಜಿತ ಮಲ್ಲಾಪುರೆ, ರಾಮ ಕುಡ್ಡೆಮ್ಮಿ, ರವಿ ನಾಂವಿ, ಯಶವಂತ ಗ್ಯಾನಪ್ಪನವರ, ನಿಂಗಪ್ಪ ಜಿರಳಿ, ಶಾನೂಲ ದೇಸಾಯಿ, ಆನಂದ ಗಾಡಿವಡ್ಡರ, ರಾಜು ಗಾಡಿವಡ್ಡರ, ಸದಾ ಗಾಡಿವಡ್ಡರ, ರಮೇಶ ಗಾಡಿವಡ್ಡರ ಸೇರಿದಂತೆ ಇನ್ನೂ ಹಲವಾರು ಕಾರ್ಯಕರ್ತರುಉಪಸ್ಥಿತರಿದ್ದರು.

Related posts: