ಬೆಳಗಾವಿ:ಇನಾಮದಾರ ಬಂಡಾಯಕ್ಕೆ ಬಾಗಿದ ಕಾಂಗ್ರೆಸ್ : ಕಿತ್ತೂರ ಕ್ಷೇತ್ರಕ್ಕೆ ಮತ್ತೊಮ್ಮೆ ಡಿ.ಬಿ ಗೆ ಮಣೆ ಸಾಧ್ಯತೆ
ಇನಾಮದಾರ ಬಂಡಾಯಕ್ಕೆ ಬಾಗಿದ ಕಾಂಗ್ರೆಸ್ : ಕಿತ್ತೂರ ಕ್ಷೇತ್ರಕ್ಕೆ ಮತ್ತೊಮ್ಮೆ ಡಿ.ಬಿ ಗೆ ಮಣೆ ಸಾಧ್ಯತೆ
ಬೆಳಗಾವಿ ಏ 19: ಜಿಲ್ಲೆಯ ಹಿರಿಯ ಕಾಂಗ್ರೇಸ ಧುರೀಣ ಡಿ.ಬಿ.ಇನಾಮದಾರ ರಾಜೀನಾಮೆ ಬೆದರಿಕೆಗೆ ಬಗ್ಗಿರುವ ಕಾಂಗ್ರೆಸ್ ನಾಯಕರು ಹಾಲಿ ಶಾಸಕ ಡಿ.ಬಿ.ಇನಾಮದಾರ ಅವರಿಗೆ ಮತ್ತೊಮ್ಮೆ ಮಣೆ ಹಾಕುವ ಸಾಧ್ಯತೆ ದಟ್ಟವಾಗಿದೆ . ಇಂದು ರಾತ್ರಿಯ ವರೆಗೆ ಡಿ.ಬಿ.ಇನಾಮದಾರ ಗೆ ಕಾಂಗ್ರೇಸ ಟಿಕೆಟ್ ಅಂತಿಮವಾಗಲಿದೆ ಎಂದು ಮೂಲಗಳು ತಿಳಿಸಿವೆ .
ರಾಜ್ಯ ನಾಯಕರು ಟಿಕೆಟ್ ನೀಡುವ ಭರವಸೆ ನೀಡಿದ್ದರಿಂದ ಕಾಂಗ್ರೆಸ್‍ನಲ್ಲೇ ಉಳಿಯುವುದಾಗಿ ಇನಾಮದಾರ್ ನಿರ್ಧರಿಸಿರುವುದಾಗಿ ಶಾಸಕರ ಆಪ್ತ ಮೂಲಗಳು ಖಚಿತ ಪಡಿಸಿವೆ. ಕಿತ್ತೂರು ಕ್ಷೇತ್ರದ ಕಾಂಗ್ರೆಸ್ ಟಿಕೆಟ್‍ಗಾಗಿ ಡಿ.ಬಿ. ಇನಾಮದಾರ್ ಹಾಗೂ ಇವರ ಅಳಿಯ ಬಾಬಾಸಾಹೇಬ್ ಪಾಟೀಲ ಅವರ ನಡುವೆ ಪ್ರಬಲ ಪೈಪೋಟಿ ಇತ್ತು. ಹೀಗಾಗಿಯೇ ಮೊದಲ ಪಟ್ಟಿಯಲ್ಲಿ ಕಿತ್ತೂರು ಹೊರತುಪಡಿಸಿ ಜಿಲ್ಲೆಯ ಎಲ್ಲ ಕ್ಷೇತ್ರಗಳ ಅಭ್ಯರ್ಥಿ ಹೆಸರು ಅಂತಿಮಗೊಳಿಸಲಾಗಿತ್ತು.
ಕೈ ನಾಯಕರ ಈ ನಡೆ ಇಬ್ಬರೂ ನಾಯಕರ ಬೆಂಬಲಿಗರ ಪ್ರತಿಭಟನೆಗೆ ಕಾರಣವಾಗಿತ್ತು. ಆರಂಭದಲ್ಲಿ ಬಿಜೆಪಿ ಕದ ತಟ್ಟಿದ್ದ ಬಾಬಾಸಾಹೇಬ್ ಪಾಟೀಲ ಅವರಿಗೆ ಕಾಂಗ್ರೆಸ್ ರಾಜ್ಯ ನಾಯಕರು ಟಿಕೆಟ್ ನೀಡುವ ಭರವಸೆ ನೀಡಿದ್ದರು. ಇದೀಗ ಮತ್ತೆ ಹಾಲಿ ಶಾಸಕ ಡಿ.ಬಿ.ಇನಾಮದಾರ್ ಅವರಿಗೆ ಟಿಕೆಟ್ ನೀಡುವ ಸಾಧ್ಯತೆ ದಟ್ಟವಾಗಿದ್ದು, ಬಾಬಾಸಾಹೇಬ್ ಪಾಟೀಲ ಅವರ ಮುಂದಿನ ನಡೆಯೂ ಕುತೂಹಲ ಮೂಡಿಸಿದೆ.