RNI NO. KARKAN/2006/27779|Tuesday, November 5, 2024
You are here: Home » breaking news » ಗೋಕಾಕ:ನನ್ನ ಗೆಲುವು ರಾಜ್ಯದಲ್ಲಿಯೇ ಇತಿಹಾಸ ಸೃಷ್ಠಿಸಲಿದೆ : ಕಾರ್ಯಕರ್ತರ ಸಭೆಯಲ್ಲಿ ಬಾಲಚಂದ್ರ ವಿಶ್ವಾಸ

ಗೋಕಾಕ:ನನ್ನ ಗೆಲುವು ರಾಜ್ಯದಲ್ಲಿಯೇ ಇತಿಹಾಸ ಸೃಷ್ಠಿಸಲಿದೆ : ಕಾರ್ಯಕರ್ತರ ಸಭೆಯಲ್ಲಿ ಬಾಲಚಂದ್ರ ವಿಶ್ವಾಸ 

ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಮಂಗಳವಾರದಂದು ಎನ್‍ಎಸ್‍ಎಫ್ ಅತಿಥಿ ಗೃಹದಲ್ಲಿ ಬಿಜೆಪಿ ಕಾರ್ಯಕರ್ತರ ಸಭೆಯನ್ನು ಉದ್ಧೇಶಿಸಿ ಮಾತನಾಡಿದರು.

ನನ್ನ ಗೆಲುವು ರಾಜ್ಯದಲ್ಲಿಯೇ ಇತಿಹಾಸ ಸೃಷ್ಠಿಸಲಿದೆ : ಕಾರ್ಯಕರ್ತರ ಸಭೆಯಲ್ಲಿ ಬಾಲಚಂದ್ರ ವಿಶ್ವಾಸ

ಗೋಕಾಕ : ಅರಭಾವಿ ಮತಕ್ಷೇತ್ರದಲ್ಲಿ ಕೆಲ ವಿರೋಧಿಗಳು ಭಯದ ವಾತಾವರಣ ಸೃಷ್ಟಿಯಾಗಿದೆ ಎಂದು ಹೇಳುತ್ತಿದ್ದಾರೆ. ಕಳೆದ 14 ವರ್ಷಗಳ ಅವಧಿಯಲ್ಲಿ ಎಲ್ಲ ಸಮಾಜಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಾಮಾಜಿಕ ನ್ಯಾಯಕ್ಕೆ ಆಧ್ಯತೆ ನೀಡಲಾಗಿದೆ. ಅಭಿವೃದ್ಧಿಯಾಗಿಲ್ಲ ಎಂದು ಹೇಳಿಕೊಳ್ಳುತ್ತಿರುವವರು ಒಂದೇ ವೇದಿಕೆಯಡಿ ಬಂದು ಚರ್ಚೆ ನಡೆಸುವಂತೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ವಿರೋಧಿಗಳಿಗೆ ಪಂಥಾಹ್ವಾನ ನೀಡಿದರು.
ಇಲ್ಲಿಯ ಎನ್‍ಎಸ್‍ಎಫ್ ಅತಿಥಿ ಗೃಹದಲ್ಲಿ ಮಂಗಳವಾರದಂದು ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವ ಮುನ್ನ ನಡೆದ ಅರಭಾವಿ ಮಂಡಲ ಬಿಜೆಪಿ ಕಾರ್ಯಕರ್ತರ ಬೃಹತ್ ಸಭೆಯನ್ನುದ್ಧೇಶಿಸಿ ಮಾತನಾಡಿದ ಅವರು, ಎಲ್ಲಿ ನ್ಯಾಯ, ನೀತಿ ಹಾಗೂ ಧರ್ಮ ಇರುತ್ತದೆಯೋ ಅಲ್ಲಿ ಜಯ ಸಿಕ್ಕೇ ಸಿಗುತ್ತದೆ. ನನ್ನ ಗೆಲುವು ರಾಜ್ಯದಲ್ಲಿಯೇ ಇತಿಹಾಸ ಸೃಷ್ಠಿಸಲಿದೆ ಎಂದು ಹೇಳಿದರು.
ಧರ್ಮ ಮತ್ತು ಅಧರ್ಮದ ಮಧ್ಯ ನಡೆಯುತ್ತಿರುವ ಈ ಚಕ್ರವ್ಯೂಹದಲ್ಲಿ ವಿರೋಧಿಗಳು ಎಷ್ಟೇ ಕುತಂತ್ರ ಹಾಗೂ ಗಾಳಿ ಸುದ್ಧಿಗಳನ್ನು ಹರಡಿಸುತ್ತಿದ್ದರೂ ಅವುಗಳಿಗೆ ಕಿವಿಗೊಡದೇ ನನ್ನನ್ನು ಆಶೀರ್ವದಿಸಿ ಹರಿಸುವಂತೆ ಕಾರ್ಯಕರ್ತರನ್ನು ಕೋರಿದರು.

ಅಭಿವೃದ್ಧಿಗಾಗಿ ಬಿಜೆಪಿ ಬೆಂಬಲಿಸಿ: ಕೇಂದ್ರದಲ್ಲಿಯೂ ಬಿಜೆಪಿ ಸರ್ಕಾರ ಇರುವುದರಿಂದ ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಇಲ್ಲಿಯೂ ಸ್ಥಿರ ಸರ್ಕಾರ ನಡೆಯಬೇಕು. ಬಿಜೆಪಿ ಸ್ಪಷ್ಟ ಬಹುಮತದ ಆಧಾರದಲ್ಲಿ ಸ್ವಂತ ಬಲದಿಂದ ಸರ್ಕಾರ ರಚಿಸಲಿದೆ. ಬಿ.ಎಸ್. ಯಡಿಯೂರಪ್ಪನವರು ರಾಜ್ಯದ ಮುಖ್ಯಮಂತ್ರಿಯಾಗಿ ರಾಜ್ಯಭಾರ ನಡೆಸುವರು. ಉತ್ತರ ಕರ್ನಾಟಕ ಸೇರಿದಂತೆ ಸಮಗ್ರ ಅಭಿವೃದ್ಧಿಗಾಗಿ ಅದರಲ್ಲೂ ನೀರಾವರಿ ಕ್ಷೇತ್ರಕ್ಕೆ ಸರ್ಕಾರ ಹೆಚ್ಚು ಒತ್ತು ನೀಡಲಿದೆ. ರೈತರ ಬಾಳು ಹಸನಾಗಲಿದೆ ಎಂದು ಹೇಳಿದರು.

ವಿರೋಧಿಗಳಿಗೆ ತಕ್ಕ ಪಾಠ ಕಲಿಸಿ: ರಾಮರಾಜ್ಯದ ಕನಸು ಹೊತ್ತುಕೊಂಡು ಕಳೆದ ಒಂದೂವರೆ ದಶಕದಿಂದ ಅರಭಾವಿ ಕ್ಷೇತ್ರದಲ್ಲಿ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಿದ್ದೇನೆ. ಜಾತಿ-ಜಾತಿಗಳ ಮಧ್ಯ ವಿಷಬೀಜ ಬಿತ್ತುತ್ತಿರುವವರಿಗೆ ಜನರೇ ತಕ್ಕ ಪಾಠ ಕಲಿಸಬೇಕು. ಅರಭಾವಿ ಕ್ಷೇತ್ರ ಜಾತ್ಯಾತೀತ ಕ್ಷೇತ್ರವಾಗಿದೆ. ಇಲ್ಲಿಯವರೆಗೂ ಒಂದೂ ಜಾತಿ ನಿಂದನೆ ಪ್ರಕರಣ ದಾಖಲಾದ ಉದಾಹರಣೆ ಇಲ್ಲ. ಮನೆಯ ಮಗನಂತೆ ನೋಡಿಕೊಂಡು ಪ್ರತಿಬಾರಿಯೂ ಆಶೀರ್ವದಿಸುತ್ತ ಬರುತ್ತಿರುವ ಮತದಾರರಿಗೆ ಎಷ್ಟು ಕೃತಜ್ಞತೆ ಸಲ್ಲಿಸಿದರೂ ಸಾಲದು. ಇಂತಹವರನ್ನು ಪಡೆದಿರುವುದು ನನ್ನ ಭಾಗ್ಯವೆಂದರು.

ಮನೆಯೊಂದು ಮೂರು ಬಾಗಿಲು: ಚುನಾವಣೆ ಬಂತೆಂದರೆ ವಿರೋಧಿಗಳಿಗೆ ಹಬ್ಬವಾಗಿ ಕಾಣುತ್ತಿದೆ. ಎಂದಿಗೂ ಜನರ ಬಳಿ ಬರದ ಇವರು ಚುನಾವಣೆಗೊಮ್ಮೆ ಜನರು ನೆನಪಾಗುತ್ತಾರೆ. ಇಂತಹವರಿಗೆ ನೀವೇ ಬುದ್ಧಿ ಕಲಿಸಬೇಕು ಎಂದು ಕಿವಿಮಾತು ಹೇಳಿದರು. ವಿರೋಧಿಗಳು ಎಷ್ಟೇ ತಂತ್ರಗಳನ್ನು ರೂಪಿಸಿದರೂ ಅವುಗಳಿಗೆ ಬಗ್ಗುವುದಿಲ್ಲ. ಕಳೆದ 14 ವರ್ಷಗಳ ಅವಧಿಯಲ್ಲಿ ಕೈಗೊಂಡಿರುವ ಜನಪ್ರೀಯ ಕಾರ್ಯಕ್ರಮಗಳನ್ನು ಮುಂದಿಟ್ಟುಕೊಂಡು ಐದನೇ ಬಾರಿಗೆ ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ. ಯಾರೇ ಸ್ಪರ್ಧಿಸಿದರೂ ತಲೆ ಕೆಡಿಸಿಕೊಳ್ಳುವುದಿಲ್ಲ. ಈಗಾಗಲೇ ವಿರೋಧಿ ಗುಂಪಿನಲ್ಲಿ ಮನೆಯೊಂದು ಮೂರು ಬಾಗಿಲುದಂತಾಗಿದೆ ಎಂದು ವ್ಯಂಗ್ಯ ಮಾಡಿದರು.

ನಾಳೆಯಿಂದಲೇ ಪ್ರಚಾರ: ನಾಳೆಯಿಂದಲೇ ಪ್ರತಿ ಹಳ್ಳಿಗಳಿಗೆ ಭೇಟಿ ನೀಡಿ ಮತಯಾಚಿಸಲಿದ್ದೇನೆ. ಪ್ರತಿ ಮತಗಟ್ಟೆಯಲ್ಲಿ ಬಿಜೆಪಿಗೆ ಹೆಚ್ಚಿನ ಮತಗಳು ದೊರಕಲು ಕಾರ್ಯಕರ್ತರು ಶ್ರಮಿಸಬೇಕು. ಮತದಾನದ ಪ್ರತಿಶತ ಹೆಚ್ಚಾಗಲು ನೋಡಿಕೊಳ್ಳುವ ಜವಾಬ್ದಾರಿಯನ್ನು ಕಾರ್ಯಕರ್ತರು ಅರಿತು ಕೆಲಸ ನಿರ್ವಹಿಸುವಂತೆ ಕೋರಿದರು.
ರಾಜ್ಯ ಬಿಜೆಪಿ ಕಾರ್ಯದರ್ಶಿ ಭಾರತಿ ಮಗದುಮ್ಮ, ಕೊಲ್ಹಾಪೂರದ ಮಹೇಶ ಜಾಧವ, ಹಿರಿಯ ಸಹಕಾರಿ ಬಿ.ಆರ್. ಪಾಟೀಲ, ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಸುಭಾಸ ಢವಳೇಶ್ವರ, ಜಿಪಂ ಮಾಜಿ ಅಧ್ಯಕ್ಷ ಬಸಗೌಡ ಪಾಟೀಲ, ಜಿಪಂ ಸದಸ್ಯ ಗೋವಿಂದ ಕೊಪ್ಪದ, ಅರಭಾವಿ ಮಂಡಲ ಬಿಜೆಪಿ ಅಧ್ಯಕ್ಷ ಸುಭಾಸ ಪಾಟೀಲ, ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ಅಪ್ಪಯ್ಯಪ್ಪ ಬಡ್ನಿಂಗಗೋಳ, ವೀರಣ್ಣಾ ಹೊಸೂರ, ಎನ್.ಟಿ. ಫಿರೋಜಿ, ರಾಮಣ್ಣಾ ಹಂದಿಗುಂದ, ಅಶೋಕ ನಾಯಿಕ, ಅಶೋಕ ಉದ್ದಪ್ಪನವರ, ಎಂ.ಆರ್. ಭೋವಿ, ಲಕ್ಷ್ಮಣ ತೆಳಗಡೆ, ಸಾತಪ್ಪ ಜೈನ್, ಸುಧೀರ ವಂಟಗೋಡಿ, ಬಿ.ಡಿ. ಪಾಟೀಲ, ರಮೇಶ ಸಣ್ಣಕ್ಕಿ, ಬಾಬು ನಾಯಿಕ, ಪರ್ವತಗೌಡ ಪಾಟೀಲ, ನಿಜಾಮಸಾಬ ಜಮಾದಾರ, ಜನಪ್ರತಿನಿಧಿಗಳು, ಸಹಕಾರಿಗಳು, ಬಿಜೆಪಿ ವಿವಿಧ ಮೋರ್ಚಾಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

Related posts: