RNI NO. KARKAN/2006/27779|Saturday, December 14, 2024
You are here: Home » breaking news » ಮೂಡಲಗಿ:ಅಭಿವೃದ್ಧಿ ಕಾಮಗಾರಿಗಳನ್ನು ಪರಿಗಣಿಸಿ ಮತ್ತೊಮ್ಮೆ ನಿಮ್ಮೆಲ್ಲರ ಸೇವೆ ಮಾಡುವ ಅವಕಾಶ ನೀಡಿ : ಬಾಲಚಂದ್ರ ಮನವಿ

ಮೂಡಲಗಿ:ಅಭಿವೃದ್ಧಿ ಕಾಮಗಾರಿಗಳನ್ನು ಪರಿಗಣಿಸಿ ಮತ್ತೊಮ್ಮೆ ನಿಮ್ಮೆಲ್ಲರ ಸೇವೆ ಮಾಡುವ ಅವಕಾಶ ನೀಡಿ : ಬಾಲಚಂದ್ರ ಮನವಿ 

ಕುಲಗೋಡದ ಯಡಹಳ್ಳಿ ತೋಟದಲ್ಲಿ ಭಾನುವಾರ ರಾತ್ರಿ ಜರುಗಿದ ಕಾರ್ಯಕರ್ತರ ಸಭೆಯಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಮಾತನಾಡಿದರು.

ಅಭಿವೃದ್ಧಿ ಕಾಮಗಾರಿಗಳನ್ನು ಪರಿಗಣಿಸಿ ಮತ್ತೊಮ್ಮೆ ನಿಮ್ಮೆಲ್ಲರ ಸೇವೆ ಮಾಡುವ ಅವಕಾಶ ನೀಡಿ : ಬಾಲಚಂದ್ರ ಮನವಿ
ಮೂಡಲಗಿ ಏ 30 : ಕುಲಗೋಡ ಗ್ರಾಮಕ್ಕೆ ಸರ್ಕಾರದ ವಿವಿಧ ಯೋಜನೆಗಳಡಿ ಕೋಟ್ಯಾಂತರ ರೂ. ಅನುದಾನದಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಜಾರಿಗೊಳಿಸಿದ್ದೇನೆ. ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದರಿಂದ ಈ ಚುನಾವಣೆಯಲ್ಲಿ ತಮ್ಮ ಮತವನ್ನು ನನಗೆ ಚಲಾಯಿಸಿ, ಮತ್ತೊಮ್ಮೆ ನಿಮ್ಮೆಲ್ಲರ ಜನಸೇವೆಗೆ ಅವಕಾಶ ಕೊಡುವಂತೆ ಶಾಸಕ ಹಾಗೂ ಅರಭಾವಿ ಬಿಜೆಪಿ ಅಭ್ಯರ್ಥಿ ಬಾಲಚಂದ್ರ ಜಾರಕಿಹೊಳಿ ಅವರು ಕೋರಿದರು.
ತಾಲೂಕಿನ ಕುಲಗೋಡ ಗ್ರಾಮದಲ್ಲಿ ಭಾನುವಾರ ರಾತ್ರಿ ರಾಜು ಯಡಹಳ್ಳಿ ಅವರ ತೋಟದಲ್ಲಿ ಜರುಗಿದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಕುಲಗೋಡ ಗ್ರಾಮದಲ್ಲಿ ಹಿಂದೆಂದೂ ನಡೆಯದ ಕಾಮಗಾರಿಗಳು ನನ್ನ ಅವಧಿಯಲ್ಲಿ ಅನುಷ್ಠಾನ ಮಾಡಿದ್ದೇನೆಂದು ಹೇಳಿದರು.
ಬಲಭೀಮ ದೇವಸ್ಥಾನದ ಯಾತ್ರಾ ನಿವಾಸಕ್ಕೆ 50 ಲಕ್ಷ ರೂ, ಒಂದುವರೆ ಕೋಟಿ ರೂ ವೆಚ್ಚದ ಸುವರ್ಣ ಗ್ರಾಮೋದಯ ಯೋಜನೆ, 50 ಲಕ್ಷ ರೂ. ವೆಚ್ಚದ ಎಸ್‍ಸಿಪಿ/ಟಿಎಸ್‍ಪಿ ಯೋಜನೆಯಡಿ ಕಾಮಗಾರಿ, ಮೂರು ಸಮುದಾಯ ಭವನಗಳ ನಿರ್ಮಾಣ ಸೇರಿದಂತೆ ಜನರಿಗೆ ಅಗತ್ಯವಿರುವ ಎಲ್ಲ ಮೂಲಭೂತ ಸೌಕರ್ಯಗಳನ್ನು ಒದಗಿಸಿದ್ದೇನೆ. ರಸ್ತೆಗಳ ಅಭಿವೃದ್ಧಿ, ಕುಡಿಯುವ ನೀರಿನ ಯೋಜನೆ, ವಸತಿ ಸೌಲಭ್ಯಗಳನ್ನು ಫಲಾನುಭವಿಗಳಿಗೆ ಮಾಡಿಕೊಟ್ಟಿದ್ದೇನೆ. ಸಾಕಷ್ಟು ಪ್ರಗತಿಪರ ಕಾರ್ಯಗಳನ್ನು ಮಾಡಿಕೊಟ್ಟಿರುವ ನನಗೆ ಈ ಬಾರಿಯೂ ಬಿಜೆಪಿ ಕಮಲದ ಗುರ್ತಿಗೆ ಮತ ಹಾಕುವಂತೆ ಮನವಿ ಮಾಡಿಕೊಂಡರು.
ಒಂದಾಗಿರುವುದಕ್ಕೆ ಹೆಚ್ಚಿನ ಬಲ: ಕೆಲ ಕಾರಣಗಳಿಂದಾಗಿ ನಮ್ಮಿಂದ ದೂರವಿದ್ದ ವಂಟಗೋಡಿ ಗುಂಪಿನವರು ನಮ್ಮ ಜೊತೆ ಬಂದಿರುವುದಕ್ಕೆ ಸಂತಸ ವ್ಯಕ್ತಪಡಿಸಿದ ಅವರು, ರಾಜಕಾರಣದಲ್ಲಿ ಸಣ್ಣಪುಟ್ಟ ವ್ಯತ್ಯಾಸಗಳು ಇರುವುದು ಸ್ವಾಭಾವಿಕ. ಅಂತಹ ವ್ಯತ್ಯಾಸಗಳನ್ನು ಮರೆತು ಈ ಚುನಾವಣೆಯಲ್ಲಿ ಸ್ಥಳೀಯವಾಗಿ ಎಲ್ಲರೂ ಕೂಡಿಕೊಂಡು ಒಗ್ಗಟ್ಟಾಗಿ ಚುನಾವಣೆಯಲ್ಲಿ ಶ್ರಮಿಸುವಂತೆ ಮನವಿ ಮಾಡಿಕೊಂಡ ಅವರು, ವಂಟಗೋಡಿ ಗುಂಪಿನಿಂದ ನಮಗೆ ಇನ್ನೂ ಹೆಚ್ಚಿನ ಬಲ ಬಂದಂತಾಗಿದೆ. ಗ್ರಾಮದಲ್ಲಿ ಎಲ್ಲರೂ ಸೇರಿ ಒಗ್ಗಟ್ಟಾಗಿ ದುಡಿದರೆ ಶೇ 90 ರಷ್ಟು ಮತಗಳು ಬಿಜೆಪಿಗೆ ಬರುತ್ತವೆ. ಪ್ರತಿ ಮನೆಮನೆಗೆ ತೆರಳಿ ಬಿಜೆಪಿ ಸರ್ಕಾರದ ಸಾಧನೆಗಳನ್ನು ವಿವರಿಸಿ ಜನರ ಮನ ಪರಿವರ್ತನೆಗೊಳಿಸಿ ಕಮಲದತ್ತ ವಾಲುವಂತೆ ನೋಡಿಕೊಳ್ಳಬೇಕೆಂದು ಕಾರ್ಯಕರ್ತರಿಗೆ ತಿಳಿಸಿದರು.
ಬಿಜೆಪಿಯಿಂದ ಮಾತ್ರ ಸ್ಥಿರ ಸರ್ಕಾರ: ಅರಭಾವಿ ಕ್ಷೇತ್ರವೂ ಸೇರಿದಂತೆ ರಾಜ್ಯದ ಸಮಗ್ರ ಅಭಿವೃದ್ಧಿ ಬಿಜೆಪಿಯಿಂದ ಮಾತ್ರ ಸಾಧ್ಯ. ಈ ಹಿನ್ನೆಲೆಯಲ್ಲಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ರಚನೆಗೆ ಎಲ್ಲರೂ ಶಕ್ತಿಮೀರಿ ದುಡಿಯಬೇಕು. 125ಕ್ಕೂ ಹೆಚ್ಚು ಸ್ಥಾನಗಳಲ್ಲಿ ಬಿಜೆಪಿ ಜಯಗಳಿಸಲಿದೆ. ಸ್ಪಷ್ಟ ಬಹುಮತದಿಂದ ಸರ್ಕಾರ ರಚನೆಯಾಗಲಿದೆ. ರೈತ ನಾಯಕರಾಗಿರುವ ಯಡಿಯೂರಪ್ಪ ಈ ರಾಜ್ಯದ ಹೊಸ ಮುಖ್ಯಮಂತ್ರಿಯಾಗಲಿದ್ದು, ರೈತ ವರ್ಗದವರ ಹಿತವನ್ನು ಗಮನದಲ್ಲಿಟ್ಟುಕೊಂಡು ನೀರಾವರಿ ಕ್ಷೇತ್ರಕ್ಕೆ ಪ್ರಮುಖ ಪ್ರಾಶಸ್ತ್ಯ ನೀಡಲಿದ್ದಾರೆ. ಕೇಂದ್ರದಲ್ಲಿಯೂ ನರೇಂದ್ರ ಮೋದಿಜೀ ನೇತೃತ್ವದ ಬಿಜೆಪಿ ಸರ್ಕಾರ ಅಸ್ಥಿತ್ವದಲ್ಲಿರುವುದರಿಂದ ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚಿನ ಅನುದಾನ ತರಲು ಬಿಜೆಪಿ ಸರ್ಕಾರ ರಚನೆಯಾದರೆ ಕರ್ನಾಟಕದ ಸಮಗ್ರ ಅಭಿವೃದ್ಧಿಯಾಗುತ್ತದೆ ಎಂದು ಹೇಳಿದರು.
ಭಾಷಣಗಳಿಗೆ ಮಾತ್ರ ಸೀಮಿತ : ಪ್ರತಿ 5 ವರ್ಷಕ್ಕೊಮ್ಮೆ ನಡೆಯುವ ಚುನಾವಣೆಗೆ ಮಾತ್ರ ನಮ್ಮ ವಿರೋಧಿಗಳು ಕ್ಷೇತ್ರಕ್ಕೆ ಕಾಲಿಡುತ್ತಾರೆ. ಅವರಿಂದ ಏನೂ ಆಗದು. ಕೇವಲ ಭಾಷಣಗಳಿಗೆ ಮಾತ್ರ ಅವರ ಕಾರ್ಯ ಸೀಮಿತವಾಗುತ್ತದೆ. ಭಾಷಣದಿಂದ ಕ್ಷೇತ್ರದ ಅಭಿವೃದ್ಧಿಯಾಗುವುದಿಲ್ಲ. ನನ್ನನ್ನೂ ಟೀಕಿಸುವುದರಿಂದ ಜನರು ಕೂಡ ಮರಳಾಗುವುದಿಲ್ಲ. ನನಗೆ ಟೀಕಿಸುತ್ತಿರುವ ಎಲ್ಲ ಪದಗಳು ದೇವರ ಪಾದಕ್ಕೆ ಹಾಕುತ್ತೇನೆ. ಎಲ್ಲ ವರ್ಗದವರನ್ನು ಸಮಾನವಾಗಿ ಕಂಡಿದ್ದೇನೆ. ಅಭಿವೃದ್ಧಿಯಲ್ಲಿ ಎಂದಿಗೂ ಯಾವ ತಾರತಮ್ಯವನ್ನು ಮಾಡಿಲ್ಲ. ಜನರ ಹಿತವೇ ನನಗೆ ಮುಖ್ಯವಾಗಿದೆ. ವಿರೋಧಿಗಳು ಬಂದು ಏನೇ ಮಾತನಾಡಿದರೂ ಅವುಗಳಿಗೆ ಕಿವಿಗೊಡಬೇಡಿ. “ನಮ್ಮ ಚಿತ್ತ ಅಭಿವೃದ್ಧಿಯತ್ತ” ಎಂಬ ವೇದವಾಕ್ಯದಂತೆ ಹೆಚ್ಚಿನ ಅಂತರದ ಜಯಕ್ಕೆ ಶ್ರಮಿಸುವಂತೆ ಕಾರ್ಯಕರ್ತರಲ್ಲಿ ಮನವಿ ಮಾಡಿಕೊಂಡರು.
ಎಪಿಎಂಸಿ ನಿರ್ದೇಶಕ ಅಶೋಕ ನಾಯಿಕ, ಪಿಎಲ್‍ಡಿ ಬ್ಯಾಂಕ್ ನಿರ್ದೇಶಕ ಸುಧೀರ ವಂಟಗೋಡಿ, ಯಾದವಾಡ ಜಿಪಂ ಸದಸ್ಯ ಗೋವಿಂದ ಕೊಪ್ಪದ, ಟಿಎಪಿಸಿಎಂಎಸ್ ಮಾಜಿ ನಿರ್ದೇಶಕ ಬಸನಗೌಡ ಪಾಟೀಲ, ತಾಪಂ ಮಾಜಿ ಸದಸ್ಯ ಸುಭಾಸ ವಂಟಗೋಡಿ, ಎಪಿಎಂಸಿ ಮಾಜಿ ಅಧ್ಯಕ್ಷ ಅಜ್ಜಪ್ಪ ಗಿರಡ್ಡಿ, ಯುವ ಧುರೀಣ ರಾಜು ಯಡಹಳ್ಳಿ, ಜಿಪಂ ಮಾಜಿ ಸದಸ್ಯ ಭೀಮಪ್ಪ ತಟ್ಟಿ, ಈರಣ್ಣಾ ಜಾಲಿಬೇರಿ, ಜಯಾನಂದ ಪಾಟೀಲ, ಜಗದೀಶ ನಾಯಿಕ, ಹನಮಂತ ಯರಗಟ್ಟಿ, ರಾಮಣ್ಣಾ ಕುರಬಚನ್ನಾಳ, ದತ್ತು ಕುಲಕರ್ಣಿ, ರಾಜು ಕೊಪ್ಪದ, ರಾಜು ಯಕ್ಷಂಬಿ, ವೆಂಕಣ್ಣಾ ಚನ್ನಾಳ, ಸೇರಿದಂತೆ ಅನೇಕ ಪ್ರಮುಖರು ಉಪಸ್ಥಿತರಿದ್ದರು.
ಮುಖಂಡ ಪುಟ್ಟಣ್ಣ ಪೂಜೇರಿ ಮಾತನಾಡಿ, ಈ ಚುನಾವಣೆಯಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ದಿಗ್ವಿಜಯ ಸಾಧಿಸಲಿದ್ದಾರೆ. ದೇವರ ಬಗ್ಗೆ ಅಪಾರ ಭಕ್ತಿ ಹೊಂದಿರುವ ಬಾಲಚಂದ್ರ ಜಾರಕಿಹೊಳಿ ಅವರಿಗೆ ನಾವೆಲ್ಲ ನಮ್ಮ ಮತವನ್ನು ಹಾಕುವ ಮೂಲಕ ನವ ಇತಿಹಾಸ ನಿರ್ಮಿಸೋಣ. ಕುಲಗೋಡದಲ್ಲಿ ಎಲ್ಲ ಮುಖಂಡರು ಒಂದಾಗಿರುವುದರಿಂದ ಹೆಚ್ಚಿನ ಮತಗಳು ಕಮಲ ಹೂವಿಗೆ ಲಭಿಸುವಂತೆ ಮಾಡುತ್ತೇವೆಂದು ಹೇಳಿದರು.

Related posts: