ಮೂಡಲಗಿ:ಅಮವಾಸ್ಯೆ ದಿನ ವಿರೋಧಿಗಳು ಮನೆ ಹಿಡಿಯಲಿದ್ದಾರೆ : ಶಾಸಕ ಬಾಲಚಂದ್ರ
ಅಮವಾಸ್ಯೆ ದಿನ ವಿರೋಧಿಗಳು ಮನೆ ಹಿಡಿಯಲಿದ್ದಾರೆ : ಶಾಸಕ ಬಾಲಚಂದ್ರ
ಮೂಡಲಗಿ ಮೇ 3 : ಕ್ಷೇತ್ರದ ಪ್ರಗತಿಯನ್ನು ಸಹಿಸದ ವಿರೋಧಿಗಳು ಕೇವಲ ಭಾಷಣಗಳನ್ನು ಮಾಡುತ್ತಾ ನನ್ನ ವಿರುದ್ಧ ಟೀಕೆಗಳಲ್ಲಿ ತೊಡಗಿದ್ದಾರೆ. ಟೀಕೆಗಳನ್ನು ಮಾಡುತ್ತಾ ಹೋದರೆ ಜನರ ಮನಸ್ಸನ್ನು ಪರಿವರ್ತನೆ ಮಾಡಲು ಆಗುವದಿಲ್ಲ. ಜನರ ಹಾಗೂ ದೇವರ ಆಶೀರ್ವಾದ ನನ್ನ ಮೇಲಿರುವವರೆಗೂ ನನಗೆ ಸೋಲೇ ಇಲ್ಲ. ಅಮವಾಸ್ಯೆ ದಿನ ವಿರೋಧಿಗಳು ಮನೆ ಹಿಡಿಯಲಿದ್ದಾರೆಂದು ಶಾಸಕ ಹಾಗೂ ಬಿಜೆಪಿ ಅಭ್ಯರ್ಥಿಯಾಗಿರುವ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ತಾಲೂಕಿನ ತುಕ್ಕಾನಟ್ಟಿ ಗ್ರಾಮದಲ್ಲಿ ಚುನಾವಣಾ ಪ್ರಚಾರ ನಡೆಸಿ, ಮಾತನಾಡಿದ ಅವರು, ವಿರೋಧಿಗಳ ಆಟ ಇನ್ನೇನ್ನಿದ್ದರೂ ಕೇವಲ 9 ದಿನ ಮಾತ್ರ. ಬಾಕಿ ಇದ್ದು, 10ನೇ ದಿನಕ್ಕೆ ಅಂದರೆ ಮೇ-12 ರಂದು ವಿರೋಧಿಗಳಿಗೆ ಮತದಾರರು ತಕ್ಕಪಾಠ ಕಲಿಸಿ ಅವರನ್ನು ಮನೆಗೆ ಕಳಿಸಲಿದ್ದಾರೆಂದು ತಿಳಿಸಿದರು.
ಕಳೆದ 2 ದಶಕಗಳಿಂದ ಈ ಕ್ಷೇತ್ರದಲ್ಲಿ ಎಲ್ಲ 78 ಹಳ್ಳಿಗಳ ಜನರೊಂದಿಗೆ ಭಾವನಾತ್ಮಕ ಹಾಗೂ ಸೌಹಾರ್ಧಯುತ ಒಡನಾಟ ಹೊಂದಿದ್ದೇನೆ. ಜನರು ಕೂಡಾ ನನ್ನನ್ನು ಕುಟುಂಬ ಸದಸ್ಯರಂತೆ ನೋಡಿಕೊಂಡು ಬರುತ್ತಿದ್ದಾರೆ. ಮನೆಗೆ ಮಗನಂತೆ ಎಲ್ಲರೂ ಆಶೀರ್ವಾದ ಮಾಡುತ್ತಾ ನನ್ನ ಹಾಗೂ ಕ್ಷೇತ್ರದ ಏಳ್ಗೆಗೆ ಹರಿಸುತ್ತಿದ್ದಾರೆ. ವಿರೋಧಿಗಳು ಏಷ್ಟೇ ಅಪಪ್ರಚಾರ ಹಾಗೂ ಸುಳ್ಳು ವದಂತಿಗಳನ್ನು ಹಬ್ಬಿಸುತ್ತಿದ್ದರೂ ಜನರ ಮನಸ್ಸನ್ನು ಬದಲಾಯಿಸಲು ಎಂದಿಗೂ ಸಾಧ್ಯವಿಲ್ಲ ಅಷ್ಟೊಂದು ಪ್ರೀತಿ ವಿಶ್ವಾಸವನ್ನು ನನ್ನ ಮೇಲಿಟ್ಟಿದ್ದಾರೆ. ಅವರಿಗೆ ಎಂದೆಂದೂ ನಾನು ಚಿರಋಣಿಯಾಗಿರುವೆ. 2018ರ ಚುನಾವಣೆಯ ಮತದಾನ ಏಣಿಕೆಯು ಅಮವಾಸ್ಯೆಯಂದು ನಿಗದಿಯಾಗಿದ್ದು, ಜ್ಯೋತಿಷಿಗಳ ಪ್ರಕಾರ ಮಂಗಳವಾರದಂದು ಒಳ್ಳೆಯ ಮುಹೂರ್ತವಿದ್ದು, ಯಾರು ಒಳ್ಳೆಯದನ್ನು ಬಯಸುತ್ತಾರೆಯೋ ಅವರಿಗೆ ದೇವರು ಒಲಿಯುತ್ತಾನೆ. ಜನರಿಗೆ ಒಳಿತನ್ನು ಬಯಸುವವರು ಮಾತ್ರ ಈ ಚುನಾವಣೆಯಲ್ಲಿ ಜಯ ಗಳಿಸುತ್ತಾರೆ. ಹೀಗಾಗಿ ಕಪಟ ನಾಟಕ ಮಾಡುತ್ತಾ ಜನರನ್ನು ವಂಚಿಸುತ್ತಿರುವ ಜೆಡಿಎಸ್-ಕಾಂಗ್ರೇಸ್ ಅಭ್ಯರ್ಥಿಗಳ ಸೋಲು ಕಟ್ಟಿಟ್ಟ ಬುತ್ತಿಯೆಂದು ಹೇಳಿದರು.
ತುಕ್ಕಾನಟ್ಟಿ ಗ್ರಾಮದ ಸರ್ವಾಂಗೀಣ ಅಭಿವೃದ್ದಿಗೆ ಹಲವಾರು ಜನೋಪಯೋಗಿ ಕಾಮಗಾರಿಗಳನ್ನು ಅನುಷ್ಠಾನಗೊಳಿಸುವ ಮೂಲಕ ಜನರ ನ್ಯಾಯಯುತ ಬೇಡಿಕೆಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸಿದ್ದೇನೆ. ಕೋಟ್ಯಾಂತರ ರೂ.ಗಳ ಅನುದಾನದ ವಿವಿಧ ಅಭಿವೃದ್ದಿಪರ ಕಾಮಗಾರಿಗಳನ್ನು ಜಾರಿಗೊಳಿಸಿದ್ದೇನೆ. ಮೇ-12 ರಂದು ನಡೆಯುವ ಚುನಾವಣೆಯಲ್ಲಿ ಕಮಲ ಗುರ್ತಿಗೆ ತಮ್ಮ ಅಮೂಲ್ಯವಾದ ಮತ ನೀಡಿ ಜನಸೇವೆಗೆ ಅವಕಾಶ ಕಲ್ಪಿಸಿಕೊಡುವಂತೆ ಮತದಾರರನ್ನು ಕೋರಿದರು.
ಕೆಲಸ ನೋಡಿ ಮತ ಕೊಡಿ: ಅರಭಾಂವಿ ಕ್ಷೇತ್ರದಲ್ಲಿ ಸಾವಿರಾರು ಕೋಟಿ ರೂ.ಗಳ ವೆಚ್ಚದಲ್ಲಿ ಕಾಮಗಾರಿಗಳನ್ನು ಮಾಡಿದ್ದರಿಂದ ನಿಮ್ಮ ಬಳಿ ಮತಯಾಚಿಸುತ್ತಿದ್ದೇನೆ. ಕೆಲಸ ಮಾಡಿದ್ದರಿಂದಲೇ ಮತ ಕೇಳುವ ಹಕ್ಕು ನನಗಿದೆ. ಬೇರೆಯವರಂತೆ ಬಂದು- ನಾಪತ್ತೆಯಾಗುವ ಜಾಯಮಾನ ನನ್ನದಲ್ಲ, ಅಭಿವೃದ್ದಿ ಕಾರ್ಯಗಳನ್ನು ಅನುಷ್ಠಾನ ಮಾಡಲಿಕ್ಕೆ ಜನರ ಕುಂದು ಕೊರತೆಗಳನ್ನು ನೀಗಿಸಲಿಕ್ಕೆ ಎನ್‍ಎಸ್‍ಎಫ್ ಅತಿಥಿಗೃಹದ ಬಾಗಿಲು ಸದಾ ತೆರೆದಿರುತ್ತದೆ. ಕಷ್ಟಕಾರ್ಪಣ್ಯಗಳನ್ನು ಹೇಳಿಕೊಂಡು ಬರುವವರಿಗೆ ತಕ್ಷಣವೇ ಪರಿಹಾರ ನೀಡಲಾಗುತ್ತಿದೆ. ಜನರಿಗಾಗಿಯೇ ನಮ್ಮ ಸೇವೆ ಯಾವತ್ತೂ ಮುಂದುವರಿಯಲಿದೆ. ಜನರ ಆಶೀರ್ವಾದವೇ ನಮಗೆ ಎಂದೆಂದಿಗೂ ಶ್ರೀರಕ್ಷೆಯಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮುಖಂಡರಾದ ಅಶೋಕ ಪಾಟೀಲ, ಮಲ್ಲಪ್ಪ ಪಾಟೀಲ, ಸಿದ್ದಪ್ಪ ಹಮ್ಮನವರ, ತಾಪಂ ಸದಸ್ಯ ಪರಶುರಾಮ ಗದಾಡಿ, ಬಸವಂತ ಕಮತಿ, ಪ್ರಕಾಶ ಬಾಗೇವಾಡಿ, ಲಗಮಪ್ಪ ಬೋಜ, ವಸಂತ ಹಮ್ಮನವರ, ಅಜ್ಜಪ್ಪ ಮನ್ನಿಕೇರಿ, ಗುರುನಾಥ ಕಂಕಣವಾಡಿ, ಸೋಮು ಹುಲಕುಂದ, ಯಲ್ಲಪ್ಪ ಹುಲಕುಂದ, ವೀರಭದ್ರ ನಾವಿ, ಅಶೋಕ ಅಂಬಲಿ, ಪುಂಡಲೀಕ ಸಂಗ್ಗಾನಟ್ಟಿ, ಮಾರುತಿ ಹಾದಿಮನಿ, ಭೀಮಪ್ಪ ಕಂಕಣವಾಡಿ, ಸೈಯದ್ ನದಾಫ, ಮೌನೇಶ ಪತ್ತಾರ, ರಾಮಪ್ಪ ಗದಾಡಿ, ಲಕ್ಕಪ್ಪ ಹಾದಿಮನಿ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.
ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ತುಕ್ಕಾನಟ್ಟಿ ಗ್ರಾಮದಲ್ಲಿ ಮತಯಾಚಿಸಿದ ಬಳಿಕ ಜೋಕಾನಟ್ಟಿ, ಗುಜನಟ್ಟಿ, ತಿಗಡಿ, ಸುಣಧೋಳಿ, ಬೈರನಟ್ಟಿ, ಪಿ.ವಾಯ್.ಹುಣಶ್ಯಾಳ, ಬೀಸನಕೊಪ್ಪ, ಹೊಸಟ್ಟಿ ಹಾಗೂ ಲಕ್ಷ್ಮೇಶ್ವರ ಗ್ರಾಮಗಳಲ್ಲಿ ಪ್ರಚಾರ ನಡೆಸಿ ಮತಯಾಚಿಸಿದರು.