ಗೋಕಾಕ:ತಮ್ಮಲ್ಲಿ ಇರುವ ಪ್ರತಿಭೆಯನ್ನು ಇತರರಿಗೆ ಕಾಣುವಂತೆ ಪ್ರದರ್ಶಿಸಬೇಕು: ಡಾ. ಶ್ರೀನಿವಾಸ ಪಾಟೀಲ
ತಮ್ಮಲ್ಲಿ ಇರುವ ಪ್ರತಿಭೆಯನ್ನು ಇತರರಿಗೆ ಕಾಣುವಂತೆ ಪ್ರದರ್ಶಿಸಬೇಕು: ಡಾ. ಶ್ರೀನಿವಾಸ ಪಾಟೀಲ
ಗೋಕಾಕ ಮೇ 5 : ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕೌಶಲ್ಯಗಳಿಗೆ ಹೆಚ್ಚಿನ ಪ್ರಾಮುಖ್ಯತೆ ಇದ್ದು ವಿದ್ಯಾರ್ಥಿಗಳು ಅವುಗಳ ಸದುಪಯೋಗದಿಂದ ತಮ್ಮ ಭವಿಷ್ಯವನ್ನು ಉಜ್ವಲಗೊಳಿಸಿ ಕೊಳ್ಳಬೇಕೆಂದು ಹುಬ್ಬಳ್ಳಿಯ ಐಇಎಮ್‍ಎಸ್‍ಬಿ ಸ್ಕೂಲಿನ ನಿರ್ದೇಶಕ ಡಾ. ಶ್ರೀನಿವಾಸ ಪಾಟೀಲ ಹೇಳಿದರು.
ಶನಿವಾರದಂದು ನಗರದ ಶೂನ್ಯ ಸಂಪಾದನಾ ಮಠದ ಶ್ರೀ ಸಿದ್ಧಲಿಂಗೇಶ್ವರ ಬಿಸಿಎ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ನಿಮ್ಮ ಜೀವನ ರೂಪಿಸಿಕೊಳ್ಳುವ ಶಿಲ್ಪಗಳು ನೀವೇ ಆಗಿದ್ದು ಧನಾತ್ಮಕ ಚಿಂತನೆಯಿಂದ ಸಮಯಕ್ಕೆ ಮಹತ್ವ ನೀಡಿ ಕಠಿಣ ಪರಿಶ್ರಮದಿಂದ ಕಾರ್ಯಪ್ರವೃತ್ತರಾದರೆ ಯಶಸ್ಸು ನಿಶ್ಚಿತ. ಎಲ್ಲರಲ್ಲೂ ಪ್ರತಿಭೆ ಇದ್ದು ಅದನ್ನು ಇತರರಿಗೆ ಕಾಣುವಂತೆ ಪ್ರದರ್ಶಿಸಬೇಕು. ಮಾನಸಿಕವಾಗಿ, ದೈಹಿಕರಾಗಿ ಸದೃಢರಾಗಿ ತಮ್ಮಲ್ಲಿರುವ ಕೌಶಲ್ಯದ ಸದುಪಯೋಗದಿಂದ ಸಾಧಕರಾಗಿ ಸಮಾಜಕ್ಕೆ ಒಳ್ಳೆಯ ಕೊಡುಗೆ ನೀಡಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ವೇದಿಕೆ ಮೇಲೆ ಸಂಸ್ಥೆ ಆಡಳಿತಾಧಿಕಾರಿ ಎ.ಸಿ.ಗವಿಮಠ, ನಿರ್ದೇಶಕ ದಯಾನಂದ ಮೂಡಲಗಿಮಠ, ಪ್ರಾಚಾರ್ಯ ಎನ್.ಸಿ.ಹಿರೇಮಠ, ವಿದ್ಯಾರ್ಥಿ ಪ್ರತಿನಿಧಿ ವಿನಯ ಖಾರೇಪಾಟಣ ಇದ್ದರು.
ವಿದ್ಯಾರ್ಥಿಗಳಾದ ಧೀರಜ ಸ್ವಾಗತಿಸಿದರು. ಜ್ಯೋತಿ ನಿರೂಪಿಸಿದರು. ಶಂಕರ ವಂದಿಸಿದರು.