ಮೂಡಲಗಿ:ಅರಭಾವಿ ಕ್ಷೇತ್ರದ ಅಭಿವೃದ್ಧಿಗೆ ಜಾತ್ಯಾತೀತ ಹಾಗೂ ಪಕ್ಷಾತೀತವಾಗಿ ದುಡಿಯುತ್ತಿದ್ದೇನೆ : ಶಾಸಕ ಬಾಲಚಂದ್ರ
ಅರಭಾವಿ ಕ್ಷೇತ್ರದ ಅಭಿವೃದ್ಧಿಗೆ ಜಾತ್ಯಾತೀತ ಹಾಗೂ ಪಕ್ಷಾತೀತವಾಗಿ ದುಡಿಯುತ್ತಿದ್ದೇನೆ : ಶಾಸಕ ಬಾಲಚಂದ್ರ
ಮೂಡಲಗಿ ಮೇ 9 : ಅರಭಾವಿ ಕ್ಷೇತ್ರದಲ್ಲಿ ಜಾತ್ಯಾತೀತ ಹಾಗೂ ಪಕ್ಷಾತೀತವಾಗಿ ಅಭಿವೃದ್ಧಿಗೆ ದುಡಿಯುತ್ತಿದ್ದೇನೆ. ಎಂದಿಗೂ ಯಾವ ಬೇಧಭಾವವನ್ನು ಮಾಡುತ್ತಿಲ್ಲ. ಕುಟುಂಬದ ಸದಸ್ಯರಂತೆ ಗೌರವ ನೀಡುತ್ತಿರುವ ಅರಭಾವಿ ಕ್ಷೇತ್ರದ ಜನರಿಗೆ ಸದಾ ಋಣಿಯಾಗಿರುವೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಮಂಗಳವಾರದಂದು ನಾಗನೂರ ಪಟ್ಟದಲ್ಲಿ ರೋಡ್ ಶೋ ಮೂಲಕ ಮಾತನಾಡಿದ ಅವರು, ಜನರ ಪ್ರೀತಿ-ವಿಶ್ವಾಸ ಉಳಿಸಿಕೊಂಡು ಸರ್ವಾಂಗೀಣ ಪ್ರಗತಿಗೆ ಶ್ರಮಿಸುತ್ತೇನೆ. ಜನರೇ ನನಗೆ ದೊಡ್ಡ ಶಕ್ತಿಯಾಗಿದ್ದಾರೆಂದು ಹೇಳಿದರು.
ನಾಗನೂರ ಪಟ್ಟಣವೊಂದರಲ್ಲಿಯೇ ಸುಮಾರು 40 ಕೋಟಿಗೂ ಅಧಿಕ ವೆಚ್ಚದಲ್ಲಿ ಅಭಿವೃದ್ಧಿ ಕಾರ್ಯ ಮಾಡಿದ್ದೇನೆ. ಸುಮಾರು 20 ವರ್ಷಗಳಿಂದ ನನ್ನ ಮತ್ತು ನಿಮ್ಮಗಳ ಮಧ್ಯ ಭಾವನಾತ್ಮಕ ಸಂಬಂಧವಿದೆ. ಕೆಲಸ ಮಾಡಿದ್ದರಿಂದಲೇ ನಿಮ್ಮ ಹತ್ತಿರ ಮತ ಕೇಳುತ್ತಿದ್ದೇನೆ. ಬೇರೆಯವರಂತೆ ಐದು ವರ್ಷಗಳಲ್ಲಿ ಕೇವಲ 15 ದಿನ ಬಂದು ಮುಖ ತೋರಿಸಿ ಹೋಗುವವರಿಗೆ ಅಭಿವೃದ್ಧಿ ಬಗ್ಗೆ ಕಿಂಚಿತ್ತು ಕಾಳಜಿ ಇಲ್ಲ. ಬೈದು ಮತ ಕೇಳುವವರಿಗೆ ಈ ಚುನಾವಣೆಯಲ್ಲಿ ನೀವೇ ಬುದ್ಧಿ ಕಲಿಸಬೇಕು. ಮೇ 12 ರಂದು ನಡೆಯುವ ಚುನಾವಣೆಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮನಗಂಡು ನನ್ನನ್ನು ಬೆಂಬಲಿಸಿ ಆಶೀರ್ವಾದ ಮಾಡುವಂತೆ ಮತದಾರರನ್ನು ಕೋರಿದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪನವರು ರೈತರ ಏಳ್ಗೆಗಾಗಿ ಹಲವು ವಿನೂತನ ಕಾರ್ಯಕ್ರಮಗಳನ್ನು ತಮ್ಮ ಪ್ರಣಾಳಿಕೆಯಲ್ಲಿ ಬಿಡುಗಡೆ ಮಾಡಿದ್ದು, ಒಂದು ಲಕ್ಷ ರೂ.ವರೆಗಿನ ರೈತರ ಸಾಲ ಮನ್ನಾ ಮಾಡಲಾಗುವುದು. ಅಧಿಕಾರಕ್ಕೆ ಬಂದ ಒಂದು ದಿನದೊಳಗೆ ನುಡಿದಂತೆ ನಡೆಯುವುದಾಗಿ ಹೇಳಿದ್ದಾರೆ. ರೈತರು ಬಹುದಿನಗಳಿಂದ ಇಂತಹ ಆಶಯವನ್ನು ನಿರೀಕ್ಷಿಸಿದ್ದರು. ಅವರ ನಿರೀಕ್ಷೆಯಂತೆ ಪಕ್ಷ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಕೇಂದ್ರದಲ್ಲಿ ನಮ್ಮದೇ ಸರ್ಕಾರ ಇರುವದರಿಂದ ರಾಜ್ಯದಲ್ಲಿಯೂ ಬಿಜೆಪಿ ಅಧಿಕಾರಕ್ಕೆ ಬಂದರೆ ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಕೇಂದ್ರದಿಂದ ಹೆಚ್ಚಿನ ನೆರವು ಸಿಗಲಿದೆ ಎಂದು ಹೇಳಿದರು.
ರಾಜ್ಯ ಸಹಕಾರಿ ಮಾರಾಟ ಮಂಡಳಿ ಉಪಾಧ್ಯಕ್ಷ ಬಸಗೌಡ ಪಾಟೀಲ(ನಾಗನೂರ) ಮಾತನಾಡಿ, ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಜಾತ್ಯಾತೀತ ವ್ಯಕ್ತಿಯಾಗಿದ್ದು, ಎಲ್ಲ ವರ್ಗಗಳ ಆಶಾ ಕಿರಣರಾಗಿದ್ದಾರೆ. ಎಂದಿಗೂ ಮೇಲು-ಕೀಳು ಎಂಬ ಬೇಧಭಾವ ಮಾಡಿಲ್ಲ. ಲಕ್ಷ ಮತಗಳ ಅಂತರದಿಂದ ಇವರನ್ನು ಗೆಲ್ಲಿಸುವಂತೆ ಕೋರಿಕೊಂಡರು.
ಮುಖಂಡರಾದ ಕೆಂಚನಗೌಡ ಪಾಟೀಲ, ಚಂದ್ರು ಬೆಳಗಲಿ, ಅಲ್ಲಪ್ಪ ಗುಡೆನ್ನವರ, ಶಂಕರ ಹೊಸಮನಿ, ಕೆಂಚಪ್ಪ ಸಕ್ರೆಪ್ಪಗೋಳ, ಪರಸಪ್ಪ ಬಬಲಿ, ಸುಭಾಸ ಪಡದಲ್ಲಿ, ಎ.ಆರ್. ಪಾಟೀಲ, ಸಿದ್ದಪ್ಪ ಯಾದಗೂಡ, ಲಕ್ಷ್ಮಣ ಪಡದಲ್ಲಿ, ಗಜಾನನ ಯರಗಣ್ವಿ, ಮುತ್ತೆಪ್ಪ ಖಾನಪ್ಪನವರ, ಸತ್ತೆಪ್ಪ ಕರವಾಡಿ, ಯಮನಪ್ಪ ಕರಬನ್ನವರ, ಪಟ್ಟಣ ಪಂಚಾಯತಿ ಸದಸ್ಯರು, ಅನೇಕ ಗಣ್ಯರು ಉಪಸ್ಥಿತರಿದ್ದರು.