RNI NO. KARKAN/2006/27779|Friday, November 22, 2024
You are here: Home » breaking news » ಮೂಡಲಗಿ:ಕಲ್ಲೋಳಿ ಪಟ್ಟಣದ ಸರ್ವಾಂಗೀಣ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗಿದೆ : ಶಾಸಕ ಬಾಲಚಂದ್ರ

ಮೂಡಲಗಿ:ಕಲ್ಲೋಳಿ ಪಟ್ಟಣದ ಸರ್ವಾಂಗೀಣ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗಿದೆ : ಶಾಸಕ ಬಾಲಚಂದ್ರ 

ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಕಲ್ಲೋಳಿ ಪಟ್ಟಣದಲ್ಲಿ ಗುರುವಾರದಂದು ಗಾಂಧಿ ಮೈದಾನದಲ್ಲಿ ಮತದಾರರನ್ನುದ್ಧೇಶಿಸಿ ಮಾತನಾಡಿದರು.

ಕಲ್ಲೋಳಿ ಪಟ್ಟಣದ ಸರ್ವಾಂಗೀಣ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗಿದೆ : ಶಾಸಕ ಬಾಲಚಂದ್ರ

ಮೂಡಲಗಿ ಮೇ 10 : ಕಲ್ಲೋಳಿ ಪಟ್ಟಣದ ಸರ್ವಾಂಗೀಣ ಅಭಿವೃದ್ಧಿಗೆ ಸರ್ಕಾರದ ವಿವಿಧ ಯೋಜನೆಗಳಡಿ ಅಂದಾಜು 60 ಕೋಟಿ ರೂ.ಗಳ ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ತಾಲೂಕಿನ ಕಲ್ಲೋಳಿ ಪಟ್ಟಣದಲ್ಲಿ ಬೃಹತ್ ರೋಡ್ ಶೋ ನಡೆಸಿ, ನಂತರ ಗಾಂಧಿಮೈದಾನದಲ್ಲಿ ಮಾತನಾಡಿದ ಅವರು, ಈ ಮೊದಲು ಗ್ರಾಮ ಪಂಚಾಯತಿ ಇದ್ದ ಕಲ್ಲೋಳಿಯನ್ನು ಪಟ್ಟಣ ಪಂಚಾಯತಿಯನ್ನಾಗಿ ಮೇಲ್ದರ್ಜೆಗೇರಿಸಲಾಗಿದೆ. ಮೊರಾರ್ಜಿ ದೇಸಾಯಿ ವಸತಿ ಶಾಲೆ, ಪ್ರಾಥಮಿಕ ಆರೋಗ್ಯ ಕೇಂದ್ರ, ಯಾತ್ರಿ ನಿವಾಸ, ಕೆಇಬಿ 110 ಕೆವ್ಹಿ ವಿದ್ಯುತ್ ವಿತರಣಾ ಕೇಂದ್ರ, ಎಸ್‍ಸಿಪಿ ಟಿಎಸ್‍ಪಿ ಯೋಜನೆ, ರಸ್ತೆಗಳ ಸುಧಾರಣೆ ಹಾಗೂ ಜನರಿಗೆ ಅಗತ್ಯವಿರುವ ಎಲ್ಲ ಮೂಲ ಸೌಕರ್ಯಗಳನ್ನು ನೀಗಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆಂದು ಹೇಳಿದರು.
ಎಲ್ಲ ಸಮಾಜಗಳನ್ನು ಒಂದುಗೂಡಿಸಿ ಎಲ್ಲ ಸಮಾಜಗಳ ಹಿತಕ್ಕಾಗಿ ಶ್ರಮಿಸಲಾಗಿದೆ. ಎಲ್ಲ ಸಮಾಜದವರು ಸಹ ನನ್ನನ್ನು ತಮ್ಮ ಪರಿವಾರದ ಸದಸ್ಯರಂತೆ ನೋಡಿಕೊಳ್ಳುತ್ತಿದ್ದಾರೆ. ಅಭಿವೃದ್ಧಿಯಾಗಿಲ್ಲವೆಂದು ಅಪಪ್ರಚಾರ ಮಾಡುತ್ತಿರುವ ವಿರೋಧಿಗಳು ನಿಜ ಸ್ಥಿತಿಯನ್ನು ಅರಿಯಬೇಕೆಂದು ಹೇಳಿದರು.
ವಿರೋಧಿಗಳಿಂದ ಈ ಕ್ಷೇತ್ರದ ಅಭಿವೃದ್ಧಿ ಅಸಾಧ್ಯ. ಕೇವಲ ಟೀಕೆಗಳೇ ಅವರಿಗಿರುವ ಸಾಧನವಾಗಿದೆ. ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಶಕ್ತಿಮೀರಿ ಪ್ರಯತ್ನಿಸಿದ್ದು, ಮುಂದಿನ ದಿನಗಳಲ್ಲಿಯೂ ಅಭಿವೃದ್ಧಿ ಕಾರ್ಯಗಳಿಗೆ ಬದ್ಧನಾಗಿದ್ದೇನೆ. ಜನಸೇವೆಗಾಗಿ ಮತ್ತೊಮ್ಮೆ ಬೆಂಬಲಿಸಿ ಆಶೀರ್ವಾದ ಮಾಡುವಂತೆ ಅವರು ಮನವಿ ಮಾಡಿಕೊಂಡರು.
ಅರಭಾವಿ ಮತಕ್ಷೇತ್ರದಲ್ಲಿ ಎಲ್ಲ ಜಾತಿಯ ಜನರು ಪರಸ್ಪರ ಸಹೋದರತ್ವ ಭಾವನೆಯಿಂದ ಬದುಕುತ್ತಿದ್ದಾರೆ. ಇಲ್ಲಿ ಜಾತಿ ಮುಖ್ಯವಾಗುವುದಿಲ್ಲ. ಆದ್ದರಿಂದಲೇ ಇದೊಂದು ಜಾತ್ಯಾತೀತ ಕ್ಷೇತ್ರವಾಗಿದೆ. ಇಂತಹ ಕ್ಷೇತ್ರವನ್ನು ಪಡೆದಿರುವುದು ನಾನು ಕೂಡ ಧನ್ಯನಾಗಿದ್ದೇನೆ. ಮೇ 12 ರಂದು ನಡೆಯುವ ಚುನಾವಣೆಯಲ್ಲಿ ಶೇಜ್ ನಂ. 2 ಇದ್ದು, ಕಮಲ ಗುರ್ತಿಗೆ ಮತ ಹಾಕಿ ಪ್ರಚಂಡ ಬಹುಮತದಿಂದ ಆಯ್ಕೆ ಮಾಡುವಂತೆ ಮತದಾರರಲ್ಲಿ ಮನವಿ ಮಾಡಿಕೊಂಡರು.
ವಿರೋಧಿಗಳು ಸುಮ್ಮಸುಮ್ಮನೆ ಆಪಾದನೆಯಲ್ಲಿ ತೊಡಗುತ್ತ ಸತ್ಯಕ್ಕೆ ದೂರವಾದ ಸಂಗತಿಗಳನ್ನು ತೇಲಿ ಬಿಡುತ್ತಿದ್ದಾರೆ. ನಿಂದಿಸುವುದೇ ಅವರ ಪರಮ ಗುರಿಯಾಗಿದೆ. ವ್ಯಕ್ತಿಯೊಬ್ಬರನ್ನು ನಿಂದಿಸುವುದರಿಂದ ಸಮಾಜವಾಗಲೀ, ಹಳ್ಳಿಯಾಗಲೀ ಉದ್ಧಾರವಾಗುವುದಿಲ್ಲ. ಅವರಿಗೆ ನಿಜವಾದ ಕಳಕಳಿಯಿಲ್ಲ. ಹೀಗಾಗಿ ಸಾರ್ವಜನಿಕರ ಸಮಸ್ಯೆಗಳನ್ನು ಹೇಗೆ ಆಲಿಸ್ಮತ್ತಾರೆಂದು ಪ್ರಶ್ನಿಸಿದರು.
ರಾಜ್ಯದಲ್ಲಿ ರೈತರ ಹಿತಕ್ಕಾಗಿ ಬಿಜೆಪಿ ಚುನಾವಣೆ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ರೈತರಿಗೆ ಬಂಪರ ಕೊಡಲಾಗಿದೆ. ರಾಷ್ಟ್ರೀಕೃತ ಬ್ಯಾಂಕು ಹಾಗೂ ಸಹಕಾರಿ ಸಂಘಗಳಲ್ಲಿನ ರೈತರ ಒಂದು ಲಕ್ಷ ಒಳಗಿನ ಸಾಲವನ್ನು ಮನ್ನಾ ಮಾಡುತ್ತೇವೆಂದು ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪನವರು ರೈತರಿಗೆ ಭರವಸೆ ನೀಡಿದ್ದು, ಅಧಿಕಾರಕ್ಕೆ ಬಂದ ತಕ್ಷಣ ಪ್ರಣಾಳಿಕೆಯಲ್ಲಿ ನೀಡಿರುವ ಎಲ್ಲ ಆಶ್ವಾಸನೆಗಳು ಈಡೇರಲಿವೆ ಎಂದು ಹೇಳಿದರು.
ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನು ಕಲ್ಲೋಳಿ ಪಟ್ಟಣದವರು ಅದ್ಧೂರಿಯಾಗಿ ಬರಮಾಡಿಕೊಂಡರು. ನಂತರ ರೋಡ್ ಶೋ ಮೂಲಕ ಶಾಸಕರು ಮತಯಾಚಿಸಿ ವಿಜಯದ ಸಂಕೇತ ತೋರಿಸಿದರು.
ಜಿಪಂ ಮಾಜಿ ಅಧ್ಯಕ್ಷ ಬಸಗೌಡ ಪಾಟೀಲ, ಯುವ ಧುರೀಣರಾದ ರಾವಸಾಬ ಬೆಳಕೂಡ, ಸುಭಾಸ ಕುರಬೇಟ, ಪ್ರಭಾಶುಗರ ನಿರ್ದೇಶಕ ಮಹಾಂತೇಶ ಕಪ್ಪಲಗುದ್ದಿ, ಗುತ್ತಿಗೆದಾರ ಬಸು ದಾಸನವರ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ನೀಲಕಂಠ ಕಪ್ಪಲಗುದ್ದಿ, ಅಶೋಕ ಮಕ್ಕಳಗೇರಿ, ಉಮೇಶ ಬೂದಿಹಾಳ, ವಸಂತ ತಹಶೀಲ್ದಾರ, ಬಸು ಯಾದಗೂಡ, ರಾಮಣ್ಣಾ ಕಂಕಣವಾಡಿ, ಅಜೀತ ಬೆಳಕೂಡ, ಮಲ್ಲಪ್ಪ ಹೆಬ್ಬಾಳ, ಭೀಮಶಿ ಖಾನಪ್ಪನವರ, ಭೀಮರಾಯಿ ಕಡಾಡಿ, ದತ್ತು ಕಲಾಲ, ಭಗವಂತ ಪತ್ತಾರ, ಪಟ್ಟಣ ಪಂಚಾಯತಿ ಸರ್ವ ಸದಸ್ಯರು, ಸಹಕಾರಿ ಮುಖಂಡರು, ಬಿಜೆಪಿ ಪದಾಧಿಕಾರಿಗಳು ಉಪಸ್ಥಿತರಿದ್ದರು.

Related posts: