ಗೋಕಾಕ:ಸರ್ವಾಧಿಕಾರ ಮನೋಭಾವನೆಯನ್ನು ಅನುಸರಿಸಿದರೆ ಇನ್ನುಮುಂದೆ ಸಹಿಸುವುದಿಲ್ಲ : ಅಶೋಕ ಪೂಜಾರಿ
ಸರ್ವಾಧಿಕಾರ ಮನೋಭಾವನೆಯನ್ನು ಅನುಸರಿಸಿದರೆ ಇನ್ನುಮುಂದೆ ಸಹಿಸುವುದಿಲ್ಲ : ಅಶೋಕ ಪೂಜಾರಿ
ಗೋಕಾಕ ಮೇ 17 : ರೈತಪರ ನಿಲುವು ಹೊಂದಿರುವ ಬಿ.ಜೆ.ಪಿ. ಪಕ್ಷದ ಹಿರಿಯ ಮುಖಂಡ ಮಾನ್ಯ ಬಿ.ಎಸ್. ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುತ್ತಲೇ ಚುನಾವಣಾ ವಾಗ್ದಾನದಂತೆ ರೈತರ ಸಾಲಮನ್ನಾ ಮಾಡಿರುವ ನಿರ್ಣಯವನ್ನು ತುಂಬುಹೃದಯದಿಂದ ಸ್ವಾಗತಿಸಿರುವ ಬಿ.ಜೆ.ಪಿ. ಮುಖಂಡ ಅಶೋಕ ಪೂಜಾರಿ ಮುಖ್ಯಮಂತ್ರಿ ಹುದ್ದೆಯ ಪದಗ್ರಹಣ ಮಾಡಿದ ಅವರನ್ನು ಅಭಿನಂದಿಸಿದ್ದಾರೆ.
ನಗರದಲ್ಲಿ ಇಂದು ತಮ್ಮ ಕಾರ್ಯಾಲಯದಲ್ಲಿ ಕರೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ಗೋಕಾಕ ವಿಧಾನಸಭಾ ಕ್ಷೇತ್ರದಲ್ಲಿ ಜನತಾ ಜನಾರ್ಧನರು ನೀಡಿರುವ ತೀರ್ಪನ್ನು ಮನಃಪೂರ್ವಕವಾಗಿ ಒಪ್ಪಿಕೊಳ್ಳುತ್ತೇನೆ. ಮತ್ತೊಂದು ಅವಧಿಗೆ ಶಾಸಕರಾಗಿ ಆಯ್ಕೆಯಾಗಿರುವ ರಮೇಶ ಜಾರಕಿಹೊಳಿ ಅವರನ್ನು ಅಭಿನಂದಿಸುತ್ತೇನೆ. ಅವರು ಮುಂದಿನ ದಿನಗಳಲ್ಲಿ ಕೈಗೊಳ್ಳುವ ಜನಪರ ಕಾರ್ಯಗಳಿಗೆ ಸಹಕಾರ ನೀಡುತ್ತೇವೆ. ಆದರೆ ಸರ್ವಾಧಿಕಾರ ಮನೋಭಾವನೆಯ ಧಮನಕಾರಿ ನೀತಿಯನ್ನು ಅನುಸರಿಸಿದರೆ ಇನ್ನುಮುಂದೆ ಸಹಿಸುವುದಿಲ್ಲ. ಅಂತಹ ವ್ಯವಸ್ಥೆಯನ್ನು ಉಗ್ರವಾಗಿ ಪ್ರತಿಭಟಿಸುತ್ತೇವೆ ಎಂದು ತಿಳಿಸಿದರು.
ಗೋಕಾಕ ಕ್ಷೇತ್ರದಲ್ಲಿ ಕಾಂಗ್ರೇಸ್ ಪಕ್ಷದ ವಿಜಯ ನೈತಿಕವಾಗಿ ಪಡೆದಿದ್ದಲ್ಲ. ಮತದಾರರಿಗೆ ಭಾರೀ ಪ್ರಮಾಣದ ಹಣ ಹಂಚಿಕೆ ಮಾಡಿ ಮತ ಖರೀದಿಯ ಮೂಲಕ ಮತ್ತು ಮತದಾರರನ್ನು ಹೆದರಿಸಿ ತಮ್ಮ ಪರವಾಗಿ ಮತ ಚಲಾಯಿಸುವಂತೆ ಒತ್ತಡ ಹೇರುವ ಮೂಲಕ ಮತ ಪಡೆದು ಆಯ್ಕೆಯಾಗಿದ್ದಾರೆ. ತಾವು ಹಾಗೂ ತಮ್ಮ ಪಕ್ಷ ಕೇಂದ್ರ ಮತ್ತು ರಾಜ್ಯ ಚುನಾವಣಾ ಆಯೋಗಗಳನ್ನು ಅನೇಕ ಬಾರಿ ವಿನಂತಿಸಿ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗೆ ಒತ್ತಾಯಿಸಿದ್ದರೂ ಸಹ ಗೋಕಾಕ ಕ್ಷೇತ್ರದ ಚುನಾವಣಾ ಪ್ರಕ್ರಿಯೆ ಅತ್ಯಂತ ಕೀಳುಮಟ್ಟದ್ದಾಗಿತ್ತು. ಮತದಾರರಿಗೆ ಕೊನೆಯ ಎರಡು ದಿನ ಹಾಡೇ ಹಗಲು ರಾಜಾರೋಷವಾಗಿ ಕ್ಷೇತ್ರದಾದ್ಯಂತ ಹಣ ಹಂಚಿಕೆ ಮಾಡಿದರೂ ಚುನಾವಣಾ ಅಧಿಕಾರಿಗಳು ನಿಷ್ಕ್ರೀಯರಾಗಿ ಅವರಿಗೆ ಸಹಕಾರ ನೀಡಿದ್ದು ಇಡೀ ಪ್ರಜಾಪ್ರಭುತ್ವ ವ್ಯವಸ್ಥೆಯ ಅಣಕು ಪ್ರದರ್ಶನವಾಗಿತ್ತು. ಮತದಾರರನ್ನು ಹೆದರಿಸುವದಂತೂ ಮಿತಿಮೀರಿ ನಡೆಯಿತು ಎಂದು ಆಪಾದಿಸಿರುವ ಅವರು ಈ ಎಲ್ಲ ಅವ್ಯವಹಾರಗಳ ದಾಖಲಾತಿ ತಮ್ಮಲ್ಲಿ ಇದ್ದು ಮುಂದಿನ ದಿನಗಳಲ್ಲಿ ಸೂಕ್ತ ನ್ಯಾಯಾಲಯದಲ್ಲಿ ಈ ಕುರಿತು ಪ್ರಕರಣ ದಾಖಲಿಸುವುದಾಗಿ ಹೇಳಿದರು.
ಇಲ್ಲಿಯವರೆಗೂ ತಾವು ಮೌಲ್ಯಗಳಿಗೆ ಪೂರಕವಾದ ರಾಜಕಾರಣ ಮಾಡಿದ್ದೇನೆ. ಚುನಾವಣೆಯಲ್ಲಿ ವಾಮ ಮಾರ್ಗಗಳನ್ನು ಅನುಸರಿಸಿಲ್ಲ. ಎಂದೂ ಮತ ಪಡೆಯಲು ಮತದಾರರಿಗೆ ಹಣ ಹಂಚಿಕೆ ಮಾಡಿಲ್ಲ. ಆದರೆ ಸತತ ಮೂರು ಚುನಾವಣೆಗಳಲ್ಲಿ ಇಂತಹ ಸ್ಥಿತಿಯನ್ನು ನೋಡಿ ರೋಸಿಹೋಗಿರುವ ನಾವು ಮುಂದಿನ ದಿನಗಳಲ್ಲಿ ಯಾವ ರೀತಿಯ ರಾಜಕಾರಣಕ್ಕೆ ಸಜ್ಜಾಗಬೇಕು ಎಂಬ ತುಮುಲ ಮನಸ್ಥಿತಿಯಲ್ಲಿ ಇದ್ದೇವೆ. ಅನಿವಾರ್ಯವಾಗಿ ಇಂದಿನ ವ್ಯವಸ್ಥೆಗೆ ಪೂರಕವಾದ ರಾಜಕಾರಣಕ್ಕೆ ಅಣಿಯಾಗಬೇಕೇ? ಎಂಬ ಚಿಂತನೆ ಮನದಲ್ಲಿ ಕಾಡುತ್ತಿದೆ ಎಂದು ಹೇಳಿದ ಅವರು ಒಂದು ಕಡೆ ಮೌಲ್ಯಯುತ ರಾಜಕಾರಣ, ಇನ್ನೊಂದೆಡೆ ವಾಸ್ತವ ರಾಜಕೀಯ ವ್ಯವಸ್ಥೆಯ ನಡುವೆ ಸಿಲುಕಿ ಗೊಂದಲಮಯ ಸನ್ನಿವೇಶ ನಿರ್ಮಾಣವಾಗಿದೆ ಎಂದು ಮಾರ್ಮಿಕವಾಗಿ ಹೇಳಿದರು. ಇದೇ ಸಂದರ್ಭದಲ್ಲಿ ಇಂತಹ ಭೃಷ್ಟ ವ್ಯವಸ್ಥೆಯ ಚುನಾವಣೆಯ ನಡುವೆಯೂ ಸುಮಾರು 76 ಸಾವಿರ ಮತಗಳನ್ನು ತಮ್ಮ ಪರವಾಗಿ ಮತ ಚಲಾಯಿಸಿರುವ ಮತದಾರರಿಗೆ ಕೃತಜ್ಞತೆ ಸಲ್ಲಿಸಿದರು.
ಚುನಾವಣೆಯ ಸೋಲಿನ ಆತ್ಮವಿಮರ್ಶೆ ಮಾಡಿಕೊಳ್ಳಲು ಇದೇ ಸೋಮವಾರ ದಿ.21-05-2018 ರಂದು ಮುಂಜಾನೆ 11-00 ಗಂಟೆಗೆ ನಗರದ ‘ಜ್ಞಾನಮಂದಿರ’ ಆಧ್ಯಾತ್ಮ ಕೇಂದ್ರದಲ್ಲಿ ಗೋಕಾಕ ವಿಧಾನಸಭಾ ಕ್ಷೇತ್ರದ ಬಿ.ಜೆ.ಪಿ. ಪಕ್ಷದ ಮುಖಂಡರು, ಪದಾಧಿಕಾರಿಗಳು, ಕಾರ್ಯಕರ್ತರು ಮತ್ತು ಅಭಿಮಾನಿಗಳ ಸಭೆ ಕರೆಯಲಾಗಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಬಿ.ಜೆ.ಪಿ. ನಗರ ಘಟಕದ ಅಧ್ಯಕ್ಷ ಶಶಿಧರ ದೇಮಶೆಟ್ಟಿ, ಮುಖಂಡರುಗಳಾದ ಶಾಮಾನಂದ ಪೂಜೇರಿ, ಸುನೀಲ ಮುರ್ಕಿಭಾಂವಿ, ಸದಾಶಿವ ಗುದಗಗೋಳ, ಸಿ.ಬಿ. ಗಿಡ್ಡನವರ ಮುಂತಾದವರು ಉಪಸ್ಥಿತಿರಿದ್ದರು.