RNI NO. KARKAN/2006/27779|Friday, October 18, 2024
You are here: Home » breaking news » ಗೋಕಾಕ:ಶಾಲಾ ಪ್ರಾರಂಭೋತ್ಸವಕ್ಕೆ ನಡೆದಿದೆ ಭರದ ಸಿದ್ದತೆ

ಗೋಕಾಕ:ಶಾಲಾ ಪ್ರಾರಂಭೋತ್ಸವಕ್ಕೆ ನಡೆದಿದೆ ಭರದ ಸಿದ್ದತೆ 

ಗ್ರಾಮದ ಪತ್ರೇಪ್ಪನ ತೋಟದ ಸರ್ಕಾರಿ ಕಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವ ಹಾಗೂ ಅಕ್ಷರ ಜಾತ್ರೆಯ ಭವ್ಯ ಆಚರಣೆಗೆ ಶಾಲಾ ಕೊಠಡಿಗಳ ಸ್ವಚ್ಛತೆ, ಅಕ್ಷರಗಳಿಂದ ಶೃಂಗಾರಗೊಳಿಸುವ ಕಾರ್ಯ ಭರದಿಂದ ಸಾಗಿದೆ.

ಶಾಲಾ ಪ್ರಾರಂಭೋತ್ಸವಕ್ಕೆ ನಡೆದಿದೆ ಭರದ ಸಿದ್ದತೆ

ಬೆಟಗೇರಿ ಮೇ 26 : ಪ್ರಸಕ್ತ 2018-19 ನೇ ಸಾಲಿನ ಶೈಕ್ಷಣಿಕ ವರ್ಷಾರಂಭದ ಪ್ರಯುಕ್ತ ರಂದು ಮೂಡಲಗಿ ಶೈಕ್ಷಣಿಕ ವಲಯ ವ್ಯಾಪ್ತಿಯ ಬೆಟಗೇರಿ ಸಿಆರ್‍ಸಿ ವಲಯ ವ್ಯಾಪ್ತಿಯ ಎಲ್ಲ ಹಳ್ಳಿಗಳಲ್ಲಿಯ ಶಾಲೆಗಳಲ್ಲಿ ಇದೇ ಸೋಮವಾರ ಮೇ.28 ರಂದು ಶಾಲಾ ಪ್ರಾರಂಭೋತ್ಸವ ಹಾಗೂ ಇದೇ ಮಂಗಳವಾರ ಮೇ.29 ರಂದು ಅಕ್ಷರಜಾತ್ರೆಯ ಅಕ್ಷರ ಬಂಡಿ ವಿನೂತನ ಭವ್ಯ ಕಾರ್ಯಕ್ರಮ ನಡೆಯಲಿದೆ.
     ಶಾಲಾ ಕೊಠಡಿಗಳ ಸ್ವಚ್ಛತೆ, ಸಣ್ಣಪುಟ್ಟ ದುರಸ್ಥಿ, ಕೊಠಡಿಗಳಲ್ಲಿ ಅಕ್ಷರದ ಶೃಂಗಾರ, ಮಕ್ಕಳ ದಾಖಲಾತಿ, ಹಾಜರಾತಿ ಕುರಿತು ಶಾಲೆಯ ಮುಖ್ಯೋಪಾಧ್ಯಾಯರು, ಶಿಕ್ಷಕ ಸಮುದಾಯ, ಎಸ್.ಡಿ.ಎಮ್.ಸಿ, ಚುನಾಯಿತ ಪ್ರತಿನಿಧಿಗಳು ಅಗತ್ಯ ಕ್ರಮಕೈಗೊಳ್ಳುವ ಕೆಲಸ ಭರದಿಂದ ಸಾಗಿದೆ.
     ಮಂಗಳವಾರ ಮೇ.29 ರಂದು ತಮ್ಮೂರಿನ ಪ್ರಮುಖ ಬೀದಿಗಳಲ್ಲಿ ಅಕ್ಷರ ಬಂಡಿಯ ಯಾತ್ರೆ ನಡೆಯಲಿದ್ದು, ಅಕ್ಷರ ಬಂಡಿ ಮತ್ತು ಎತ್ತುಗಳನ್ನು ಅಕ್ಷರ, ಜ್ಯೂಲ್, ರೆಬ್ಬನ್‍ಗಳಿಂದ ಶೃಂಗರಿಸಿ, ಶಾಲೆಯ ಮುಖ್ಯ ಶಿಕ್ಷಕ ಬಂಡಿಯ ಯಜಮಾನನಾಗಿ, ಬಂಡಿಗಳಲ್ಲಿ ಶಾಲಾ ಮಕ್ಕಳನ್ನು ಕೂಡ್ರಿಸಿ, ಶಾಲಾ ಪ್ರಾರಂಭ, ಮಕ್ಕಳ ದಾಖಲಾತಿ ಸೇರಿದಂತೆ ಹಲವಾರು ಶಿಕ್ಷಣ ಘೋಷವಾಕ್ಯಗಳು ಝೆಂಕರಿಸಲಿವೆ. ಬಳಿಕ ಶಾಲಾ ಮಕ್ಕಳಿಗೆ ಪುಸ್ತಕ, ಸಿಹಿ ವಿತರಣೆ ಜರುಗಲಿದೆ.
     ಆದ್ದರಿಂದ ಬೆಟಗೇರಿ ಸಿಆರ್‍ಸಿ ವಲಯ ವ್ಯಾಪ್ತಿಯ ಎಲ್ಲ ಶಾಲೆಗಳಲ್ಲಿ ಶಾಲೆಯ ಎಸ್‍ಡಿಎಮ್‍ಸಿ ಅಧ್ಯಕ್ಷರು, ಸದಸ್ಯರು ಹಾಗೂ ಚುನಾಯಿತ ಗ್ರಾಪಂ, ತಾಪಂ, ವಿವಿಧ ಸಂಘ, ಸಂಸ್ಥೆಗಳ ಪ್ರತಿನಿಧಿಗಳು, ಮಕ್ಕಳ ಪಾಲಕರು, ಶಿಕ್ಷಣ ಪ್ರೇಮಿಗಳು ತಮ್ಮೂರಿನ ಶಾಲೆಯಲ್ಲಿ ನಡೆಯುವ ಅಕ್ಷರ ಜಾತ್ರೆಯ ಅಕ್ಷರ ಬಂಡಿ ವಿನೂತನ ಭವ್ಯ ಕಾರ್ಯಕ್ರಮದಲ್ಲಿ ತಪ್ಪದೇ ಪಾಲ್ಗೊಳ್ಳಬೇಕೆಂದು ಬೆಟಗೇರಿ ವಲಯ ಸಮೂಹ ಸಂಪನ್ಮೂಲ ವ್ಯಕ್ತಿ ಬಿ.ಟಿ.ಪುಂಜಿ ತಿಳಿಸಿದರು.
    ಚಿಕ್ಕೋಡಿ ಡಿಡಿಪಿಐ ಎಮ್ ಜಿ ದಾಸರ ಅವರ ಮಾರ್ಗದರ್ಶನದಂತೆ ಮೂಡಲಗಿ ಶೈಕ್ಷಣಿಕ ವಲಯ ವ್ಯಾಪ್ತಿಯ ಎಲ್ಲ ಶಾಲೆಗಳಲ್ಲಿ ಮೇ 28 ರಂದು ಶಾಲಾ ಸ್ವಚ್ಛತೆ ಹಾಗೂ ಅಗತ್ಯ ಪ್ರಾರಂಭೋತ್ಸವ ಪೂರ್ವ ತಯಾರಿಕೈಗೊಳ್ಳಬೇಕು. ಮೇ 29 ರಂದು ಅಕ್ಷರ ಬಂಡಿ ಎಂಬ ವಿನೂತನ ಕಾರ್ಯಕ್ರಮ ರಾಜ್ಯದಲ್ಲಿಯೇ ಪ್ರಥಮವಾಗಿ ಮಕ್ಕಳನ್ನು ಸರ್ಕಾರಿ ಶಾಲೆಗಳತ್ತ ಆಕರ್ಷಿಸುವ ಕಾರ್ಯಕ್ರಮವಾಗಿದೆ. ಅಲ್ಲದೇ ಮೂಡಲಗಿ ಶೈಕ್ಷಣಿಕ ವಲಯದ ಪ್ರತಿಯೊಂದು ಶಾಲೆಗಳಲ್ಲಿ ಅಕ್ಷರಗಳಿಂದ ತುಂಬಿರುವ ಕಲಿಕಾ ವಾತಾವರಣ ನಿರ್ಮಿಸುವ ನೂತನ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಮೂಡಲಗಿ ಶೈಕ್ಷಣಿಕ ವಲಯ ಬಿಇಒ ಎ.ಸಿ.ಗಂಗಾಧರ ತಿಳಿಸಿದ್ದಾರೆ.
     ಸ್ಥಳೀಯ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಗಂಡು ಮತ್ತು ಹೆಣ್ಣು ಮಕ್ಕಳ ಶಾಲೆಗಳ ಮುಖ್ಯ ಶಿಕ್ಷಕ ವೈ.ಸಿ.ಶೀಗಿಹಳ್ಳಿ, ಆರ್.ಬಿ. ಬೆಟಗೇರಿ, ಪತ್ರೆಪ್ಪನ ತೋಟದ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಬಿ.ಎ.ಕೋಟಿ, ಲಕ್ಷ್ಮೀ ನಗರ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಜಿ.ವೈ.ಹಂಜಿ ಸೇರಿದಂತೆ ಶಿಕ್ಷಕ ವೃಂದ, ಎಸ್.ಡಿ.ಎಮ್.ಸಿ ಅಧ್ಯಕ್ಷರು, ಸದಸ್ಯರು, ಶಿಕ್ಷಣಪ್ರೇಮಿಗಳು, ಇತರರು ಇದ್ದರು.

Related posts: