RNI NO. KARKAN/2006/27779|Thursday, December 12, 2024
You are here: Home » breaking news » ಗೋಕಾಕ:ಕಠಿಣ ಪರಿಶ್ರಮದ ಅಧ್ಯಯನದಿಂದ ಉನ್ನತ ಸ್ಥಾನ ಅಲಂಕರಿಸಬಹುದು : ಆರ್.ರಾಮಚಂದ್ರನ್

ಗೋಕಾಕ:ಕಠಿಣ ಪರಿಶ್ರಮದ ಅಧ್ಯಯನದಿಂದ ಉನ್ನತ ಸ್ಥಾನ ಅಲಂಕರಿಸಬಹುದು : ಆರ್.ರಾಮಚಂದ್ರನ್ 

ಗೋಕಾಕ: 2017-18ನೇ ಸಾಲಿನ ಎನ್ ಎಂ ಎಂ ಎಸ್ ಪರೀಕ್ಷೆಯಲ್ಲಿ ಪಾಸಾಗಿ ವಿದ್ಯಾರ್ಥಿ ವೇತನಕ್ಕೆ ಅರ್ಹತೆ ಪಡೆದ ಸಾಧಕ ವಿದ್ಯಾರ್ಥಿಗಳಿಗೆ ಅಭಿನಂದಿಸುತ್ತಿರುವುದು.

ಕಠಿಣ ಪರಿಶ್ರಮದ ಅಧ್ಯಯನದಿಂದ ಉನ್ನತ ಸ್ಥಾನ ಅಲಂಕರಿಸಬಹುದು : ಆರ್.ರಾಮಚಂದ್ರನ್

ಗೋಕಾಕ ಜೂ 13 : ಆತ್ಮನಂಬಿಕೆಯಿಂದ ಮತ್ತು ಕಠಿಣ ಪರಿಶ್ರಮದ ಅಧ್ಯಯನದಿಂದ ಉನ್ನತ ಸ್ಥಾನ ಮತ್ತು ಹುದ್ದೆಯನ್ನು ಅಲಂಕರಿಸಬಹುದು ಎಂದು ಜಿಲ್ಲಾ ಪಂಚಾಯತ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಆರ್.ರಾಮಚಂದ್ರನ್ ಹೇಳಿದರು.
ಅವರು ಬುಧವಾರದಂದು ನಗರದ ರೋಟರಿ ರಕ್ತ ಭಂಡಾರದ ಸಮುದಾಯ ಭವನದಲ್ಲಿ ಜರುಗಿದ ಉಪ ನಿರ್ದೇಶಕರ ಕಛೇರಿ ಚಿಕ್ಕೋಡಿ, ಕ್ಷೇತ್ರಶಿಕ್ಷಣಾಧಿಕಾರಿಗಳ ಕಾರ್ಯಾಲಯ ಗೋಕಾಕ ಮತ್ತು ಮೂಡಲಗಿ ವಲಯಗಳ ಸಂಯುಕ್ತಾಶ್ರಯದಲ್ಲಿ 2017-18ನೇ ಸಾಲಿನ ಎನ್ ಎಂ ಎಂ ಎಸ್ ಪರೀಕ್ಷೆಯಲ್ಲಿ ಪಾಸಾಗಿ ವಿದ್ಯಾರ್ಥಿ ವೇತನಕ್ಕೆ ಅರ್ಹತೆ ಪಡೆದ ಸಾಧಕ ವಿದ್ಯಾರ್ಥಿಗಳಿಗೆ ಜಿಲ್ಲಾ ಮಟ್ಟದ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಬಡತನವಿದ್ದರೂ ಮಕ್ಕಳಿಗೆ ಶಿಕ್ಷಣ ನೀಡಿ ಅವರ ಉಜ್ವಲ ಭವಿಷ್ಯಕ್ಕಾಗಿ ಶ್ರಮಿಸುತ್ತಿರುವ ಪಾಲಕರ ಅರ್ಪಣೆ,ತ್ಯಾಗ ಶ್ರೇಷ್ಠವಾದದ್ದು. ತಂದೆ ತಾಯಿ ನಂತರದ ಮುಖ್ಯಸ್ಥಾನದಲ್ಲಿ ಶಿಕ್ಷಕರಿದ್ದು ಶಿಲ್ಪಿ ಕಲ್ಲನ್ನು ಮೂರ್ತಿಯನ್ನಾಗಿ ಪರಿವರ್ತಿಸಿದ್ದಂತೆ ನಿಮ್ಮ ಭವಿಷ್ಯವನ್ನು ಉಜ್ವಲಗೊಳಿಸುತ್ತಾರೆ. ವಿದ್ಯಾರ್ಥಿಗಳು ಇವರ ಮಾರ್ಗದರ್ಶನದಲ್ಲಿ ಜ್ಞಾನದ ಹಸಿವು,ಧೈರ್ಯ, ನಿರ್ಧಿಷ್ಟ ಗುರಿಯೊಂದಿಗೆ ಪ್ರಯತ್ನ ಶೀಲರಾದರೆ ಉನ್ನತ ಹುದ್ದೆ ಅಲಂಕರಿಸಿ ಸಮಾಜ ಸೇವೆ ಮಾಡಲು ಸಾಧ್ಯವೆಂದು ಹೇಳಿದರು.
ವಿದ್ಯಾರ್ಥಿಗಳು ಮಾನವೀಯ ಮೌಲ್ಯದೊಂದಿಗೆ ಸರಳ ಸಜ್ಜನಿಕೆ ಹಾಗೂ ಉತ್ತಮ ಸಂಸ್ಕಾರವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಸ್ವಚ್ಛತೆ ಮತ್ತು ಶೌಚಾಲಯಕ್ಕೆ ಹೆಚ್ಚಿನ ಆದ್ಯತೆ ನೀಡಿ ಬದಲಾವಣೆಯ ಮೊದಲ ಹೆಜ್ಜೆ ನೀವುಆಗಬೇಕು. ಇಂದಿನ ತಾಂತ್ರಿಕ ಯುಗದಲ್ಲಿ ಜಾಗೃತರಾಗಿ ಹಿರಿಯರ ಮಾರ್ಗದರ್ಶನದಲ್ಲಿ ನಡೆದು ಉತ್ತಮ ನಾಗರೀಕರಾಗಿರಿ ಎಂದು ಹಾರೈಸಿದರು.
ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ಒಟ್ಟು 263 ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದು ಸಂತಸ ತಂದಿದೆ. ಈ ನಿಟ್ಟಿನಲ್ಲಿ ಪಾಲಕರು ಹಾಗೂ ಶಿಕ್ಷಕರು,ವಿದ್ಯಾರ್ಥಿಗಳನ್ನು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಅಭಿನಂದಿಸಿದರು.
ಅಧ್ಯಕ್ಷತೆಯನ್ನು ಚಿಕ್ಕೋಡಿ ಡಿಡಿಪಿಐ ಎಂ.ಜಿ.ದಾಸರ ವಹಿಸಿದ್ದರು. ವೇದಿಕೆ ಮೇಲೆ ರೋಟರಿ ರಕ್ತ ಭಂಡಾರದ ಕಾರ್ಯದರ್ಶಿ ಸೋಮಶೇಖರ ಮಗದುಮ್, ಕ್ಷೇತ್ರಶಿಕ್ಷಣಾಧಿಕಾರಿಗಳಾದ ಬಿ.ಎಸ್.ಕುಲಕರ್ಣಿ,ಎ.ಸಿ.ಗಂಗಾಧರ, ಶಿಕ್ಷಣಾಧಿಕಾರಿ ಎ.ಸಿ.ಮನ್ನಿಕೇರಿ, ಬಿಸಿಯೂಟ ಯೋಜನಾಧಿಕಾರಿ ಜಿ.ಬಿ.ಬಳಗಾರ, ವಿ.ಎಂ.ಸೋಲೇಗಾವಿ, ಆರ್.ಎಸ್.ಕಡಿ, ಕೆ.ಎಚ್.ಹುದ್ದಾರ, ಎಂ.ಬಿ.ಪಾಟೀಲ ಇದ್ದರು.
ಶಿಕ್ಷಕ ಆರ್.ಎಲ್.ಮಿರ್ಜಿ ನಿರೂಪಿಸಿ,ವಂದಿಸಿದರು.

Related posts: