ಘಟಪ್ರಭಾ:ಇಂದಿನಿಂದ ಪ್ರತಿದಿನ 1000 ಕ್ಯೂಸೆಕ್ಸ್ ನೀರನ್ನು ಬಿಡುಗಡೆ
ಇಂದಿನಿಂದ ಪ್ರತಿದಿನ 1000 ಕ್ಯೂಸೆಕ್ಸ್ ನೀರನ್ನು ಬಿಡುಗಡೆ
ಘಟಪ್ರಭಾ ಜೂ 14 : ಸಾರ್ವಜನಿಕರಿಗೆ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿನ ಅನುಕೂಲಕ್ಕೋಸ್ಕರ ಹಿರಣ್ಯಕೇಶಿ ನದಿಯ ಹೆಚ್ಚುವರಿ ನೀರನ್ನು ಧುಪದಾಳ ಜಲಾಶಯದಿಂದ ಘಟಪ್ರಭಾ ಎಡದಂಡೆ ಕಾಲುವೆಗೆ ಇಂದಿನಿಂದ ಪ್ರತಿದಿನ 1000 ಕ್ಯೂಸೆಕ್ಸ್ ನೀರನ್ನು ಬಿಡುಗಡೆ ಮಾಡಲಾಗಿದೆ.
ಶಾಸಕ ಹಾಗೂ ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ ಅವರ ಮನವಿ ಮೇರೆಗೆ ಈ ನೀರನ್ನು ಎಡದಂಡೆ ಕಾಲುವೆಯ ರೈತರಿಗೆ ಬಿಡುಗಡೆ ಮಾಡಲಾಗಿದೆ. ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಸಂಗ್ರಹಿಸಿದ್ದ ಮಳೆ ನೀರನ್ನು ಧುಪದಾಳ ಜಲಾಶಯದಿಂದ ರೈತರ ಅಗತ್ಯತೆಗನುಗುಣವಾಗಿ ನೀರನ್ನು ಬಿಡುಗಡೆ ಮಾಡಲಾಗಿದೆ. ಪ್ರತಿದಿನ ಅಂದಾಜು 700 ರಿಂದ ಸಾವಿರ ಕ್ಯೂಸೆಕ್ಸ್‍ವರೆಗೆ ರೈತರಿಗೆ ನೀರು ದೊರೆಯಲಿದೆ. ಧುಪದಾಳ ಜಲಾಶಯದಲ್ಲಿ ಜಿಎಲ್‍ಬಿಸಿ ಭಾಗದ ರೈತರು ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಬಸವಂತ ಕಮತಿ, ವಿಠ್ಠಲ ಪಾಟೀಲ, ರಾಮಕೃಷ್ಣ ಹೊರಟ್ಟಿ, ಲಕ್ಷ್ಮಣ ಗಣಪ್ಪಗೋಳ, ರೈತ ಮುಖಂಡರಾದ ಭೀಮಶಿ ಗದಾಡಿ, ಗಣಪತಿ ಈಳಿಗೇರ, ಎನ್‍ಎಸ್‍ಎಫ್ ಅತಿಥಿ ಗೃಹದ ದಾಸಪ್ಪ ನಾಯಿಕ, ಶಂಕರ ಕಮತಿ, ರಾಮಚಂದ್ರ ಪಾಟೀಲ, ಸಿದ್ದಪ್ಪ ಚೂಡಪ್ಪಗೋಳ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.
ಬಾಲಚಂದ್ರ ಜಾರಕಿಹೊಳಿ ಅವರಿಗೆ ಅಭಿನಂದನೆ : ನಿರೀಕ್ಷಿತ ಮಟ್ಟದಲ್ಲಿ ಮಳೆ ಆಗದೇ ಇರುವದರಿಂದ ರೈತರ ಹಿತವನ್ನು ಕಾಪಾಡುವ ದೃಷ್ಟಿಯಿಂದ ಘಟಪ್ರಭಾ ಎಡದಂಡೆ ಕಾಲುವೆ ಭಾಗದ ರೈತ ಸಮೂಹಕ್ಕೆ ಹಿರಣ್ಯಕೇಶಿ ನದಿಯಿಂದ ನೀರು ಬಿಡಲು ಪ್ರಾಮಾಣಿಕ ಪ್ರಯತ್ನ ನಡೆಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ ಹಾಗೂ ಸಚಿವ ರಮೇಶ ಜಾರಕಿಹೊಳಿ ಅವರನ್ನು ರೈತ ಬಾಂಧವರು ಅಭಿನಂದಿಸಿದ್ದಾರೆ.