ಗೋಕಾಕ:ಸಾಧಕರ ಸಾಧನೆಗಳು ಇತರರಿಗೆ ಮಾದರಿಯಾಗಲಿ : ಶಂಕರ ಹೆಗಡೆ
ಸಾಧಕರ ಸಾಧನೆಗಳು ಇತರರಿಗೆ ಮಾದರಿಯಾಗಲಿ : ಶಂಕರ ಹೆಗಡೆ
ಗೋಕಾಕ ಜೂ 15 : ಜೀವನದಲ್ಲಿ ಸಾಧನೆ ಮಾಡಿದ ಸಾಧಕರನ್ನು ಸತ್ಕರಿಸುವುದರಿಂದ ಇನ್ನು ಹೆಚ್ಚಿನ ಸಾಧನೆಗೆ ಪ್ರೋತ್ಸಾಹಹಿಸುವುದರೊಂದಿಗೆ ಇತರರಿಗೂ ಮಾದರಿಯಾಗುತ್ತದೆ ಎಂದು ಇಲ್ಲಿಯ ಜೀವ ವಿಮಾ ನಿಗಮದ ಮುಖ್ಯ ವ್ಯವಸ್ಥಾಪಕ ಶಂಕರ ಹೆಗಡೆ ಹೇಳಿದರು.
ಶುಕ್ರವಾರದಂದು ನಗರದ ಗುರುವಾರ ಪೇಠಯ ಶ್ರೀ ಲಕ್ಷ್ಮೀದೇವಿ ದೇವಸ್ಥಾನದ ಆವರಣದಲ್ಲಿ ಸತತ 6ನೇ ಬಾರಿಗೆ ಎಮ್‍ಡಿಆರ್‍ಟಿಗೆ(ಮಿಲಿಯನ್ ಡಾಲರ್ ರೌಂಡ್ ಟೇಬಲ್)ಗೆ ಆಯ್ಕೆಯಾದ ಜೀವ ವಿಮಾ ಪ್ರತಿನಿಧಿ ಮಲ್ಲಪ್ಪ ಮದಿಹಳ್ಳಿ ಅವರಿಗೆ ಭಾರತೀಯ ಜೀವ ವಿಮಾ ನಿಗಮ ಗೋಕಾಕ ಶಾಖೆ ಹಾಗೂ ಗುರುವಾರ ಪೇಠೆಯ ನಿವಾಸಿಗಳು ಹಮ್ಮಿಕೊಂಡ ಸತ್ಕಾರ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು.
ಬಡತನದಲ್ಲಿಯೇ ಬೆಳೆದು, ಅವಿರತ ಶ್ರಮ ಹಾಗೂ ಇಲ್ಲಿಯ ಜನತೆಯ ಪ್ರೋತ್ಸಾಹ, ಭಗೀರಥ ಪ್ರಯತ್ನದಿಂದ ಮಲ್ಲಪ್ಪ ಮದಿಹಳ್ಳಿ ಅವರು ಈ ಸಾಧನೆಯನ್ನು ಮಾಡಿದ್ದು ನಮ್ಮೆಲ್ಲರಿಗೆ ಸಂತಸ ತಂದಿದೆ. ಇದೇ ಜೂ 24 ರಿಂದ 27 ರ ವರಗೆ ಅಮೇರಿಕಾದ ಲಾಸ್ ಏಂಜಲೀಸ್‍ನಲ್ಲಿ ಜರುಗುವ ಜಗತ್ತಿನ 70 ದೇಶಗಳ 5 ಜೀವ ವಿಮಾ ಕಂಪನಿಗಳ ಒಕ್ಕೂಟದ ಜಾಗತಿಕ ವಿಶ್ವ ಸಮ್ಮೇಳನದಲ್ಲಿ ಮದಿಹಳ್ಳಿ ಅವರಿಗೆ ಭಾಗವಹಿಸುವ ಭಾಗ್ಯ ಸಿಕ್ಕಿರುವುದು ಇಲ್ಲಿಯ ಜನತೆಯ ಆಶೀರ್ವಾದವೇ ಕಾರಣವಾಗಿದೆ ಎಂದು ಹೇಳಿದರು.
1956 ರಲ್ಲಿ ರಾಷ್ಟ್ರೀಕರಣಗೊಂಡ ಭಾರತೀಯ ಜೀವ ವಿಮಾ ನಿಗಮವು ಯಾವುದೇ ಒಂದು ಕಪ್ಪು ಚುಕ್ಕೆ ಇಲ್ಲದೇ ಕಾರ್ಯ ನಿರ್ವಹಿಸುತ್ತಾ ಸಾಮಾಜಿಕ ಕಳಕಳಿಯ ಕಾರ್ಯಗಳಿಗೆ ಸರ್ಕಾರಕ್ಕೆ ನೆರವನ್ನು ನೀಡುತ್ತಿದೆ. ಸಮಾಜದ ಎಲ್ಲ ವರ್ಗದವರ ಕುಟುಂಬಗಳ ಭದ್ರತೆಗಾಗಿ ಹಲವಾರು ಪಾಲಸಿಗಳೊಂದಿಗೆ ವಿಶ್ವಾಸದ ಕಾರ್ಯ ಮಾಡುತ್ತಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಉಪ ಶಾಖಾಧಿಕಾರಿ ಮಲ್ಲಿಕಾರ್ಜುನ ನಿಲಗುಂದ, ಎಪಿಎಮ್‍ಸಿ ಅಧ್ಯಕ್ಷ ಅಡಿವೆಪ್ಪ ಕಿತ್ತೂರ, ನಗರ ಸಭೆ ಸದಸ್ಯರಾದ ಸುರೇಶ ಬಡೆಪ್ಪಗೋಳ, ಭೀಮಶಿ ಭರಮನ್ನವರ, ಮಾಜಿ ಸದಸ್ಯರಾದ ರಾಮಣ್ಣ ತಳ್ಳಿ, ಶಂಕರ ಧರೆನ್ನವರ, ಮುಖಂಡರುಗಳಾದ ಭೀಮಪ್ಪ ಶಿಂಗಳಾಪೂರ, ಬಸಪ್ಪ ರಂಕನಕೊಪ್ಪ, ಪಿ.ಎಲ್.ಶಿಂಗಳಾಪೂರ, ಲಕ್ಷ್ಮಣ ತಳ್ಳಿ, ಕಲ್ಲೋಳೆಪ್ಪ ತಹಶೀಲದಾರ, ವಾಯ್.ಎಲ್.ಹೆಜ್ಜೆಗಾರ, ಇದ್ದರು. ಲಕ್ಷ್ಮಣ ಮಲ್ಲಾಪೂರೆ ಸ್ವಾಗತಿಸಿ ವಂದಿಸಿದರು.