RNI NO. KARKAN/2006/27779|Saturday, October 19, 2024
You are here: Home » breaking news » ಮೂಡಲಗಿ:ಮನುಷ್ಯನಿಗೆ ಮಾನಸಿಕ ನೆಮ್ಮದಿ ನೀಡುವ ಶಕ್ತಿಯು ಯೋಗದಲ್ಲಿದೆ : ವೆಂಕಟೇಶ ಮುರನಾಳ

ಮೂಡಲಗಿ:ಮನುಷ್ಯನಿಗೆ ಮಾನಸಿಕ ನೆಮ್ಮದಿ ನೀಡುವ ಶಕ್ತಿಯು ಯೋಗದಲ್ಲಿದೆ : ವೆಂಕಟೇಶ ಮುರನಾಳ 

ಇಲ್ಲಿಯ ಲಕ್ಷ್ಮಣ ಅಡಿಹುಡಿ ಶಾಲಾ ಆವರಣದಲ್ಲಿ ಜರುಗಿದ ವಿಶ್ವ ಯೋಗ ದಿನಚರಣೆಯಲ್ಲಿ ಗಣ್ಯರು ಯೋಗಭ್ಯಾಸದಲ್ಲಿ ತೊಡಗಿರುವುದು.

ಮನುಷ್ಯನಿಗೆ ಮಾನಸಿಕ ನೆಮ್ಮದಿ ನೀಡುವ ಶಕ್ತಿಯು ಯೋಗದಲ್ಲಿದೆ : ವೆಂಕಟೇಶ ಮುರನಾಳ

ಮೂಡಲಗಿ ಜೂ 21 : ಮನುಷ್ಯನಿಗೆ ಮಾನಸಿಕ ನೆಮ್ಮದಿಯನ್ನು ನೀಡುವ ಅಪೂರ್ವ ಶಕ್ತಿಯು ಯೋಗದಲ್ಲಿದೆ ಎಂದು ಮೂಡಲಗಿ ವೃತ್ತ ನೀರಿಕ್ಷಕ ವೆಂಕಟೇಶ ಮುರನಾಳ ಹೇಳಿದರು.
ಅವರು ಸ್ಥಳೀಯ ಎಲ್. ವಾಯ್. ಅಡಿಹುಡಿ ಶಾಲಾ ಆವರಣದಲ್ಲಿ ಶ್ರೀ ಮಂಜುನಾಥ ಶಿಕ್ಷಣ ಸಂಸ್ಥೆ, ಶ್ರೀ ಮಂಜುನಾಥ ಸೈನಿಕ ತರಭೇತಿ ಕೇಂದ್ರ, ಗಾರ್ಡನ್ ಅಭಿವೃದ್ದಿ ಸಂಸ್ಥೆ, ಬೆಳಗಾವಿ ನೆಹರು ಯುವ ಕೇಂದ್ರ, ಯುವ ಜೀವನ ಸೇವಾ ಸಂಸ್ಥೆ, ಕರ್ನಾಟಕ ಪತ್ರಕರ್ತರ ಸಂಘ ಮೂಡಲಗಿ ಘಟಕ, ಮೂಡಲಗಿ ತಾಲೂಕು ಪ್ರೇಸ್ ಅಸೋಸಿಯೆಶನ್ ಇವುಗಳ ಸಹಯೋಗದಲ್ಲಿ ಗುರುವಾರ ಏರ್ಪಡಿಸಿದ್ದ ವಿಶ್ವ ಯೋಗ ದಿನಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತ, ಯೋಗ ಕೇವಲ ಆಸನಾಭ್ಯಾಸವಲ್ಲ ಮನುಷ್ಯನಲ್ಲಿ ಅಡಗಿರುವ ದೈವತ್ವವನ್ನು ಜಾಗೃತಗೊಳಿಸಿ ನಮ್ಮ ಜೀವನದ ಗುರಿಯತ್ತ ನಮ್ಮನ್ನು ಕೈ ಹಿಡಿದು ಮುನ್ನಡೆಸುತ್ತದೆ. ಅದಕ್ಕಾಗಿ ನಾವು ಯೋಗಕ್ಕೆ ಶರಣಾಗಬೇಕು. ಇಂದಿನ ವೇಗದ ವ್ಯವಸ್ಥೆಯಲ್ಲಿ ಮನುಷ್ಯನ ದೇಹ ಮತ್ತು ಮನಸ್ಸಿನ ಮೇಲೆ ಸಾಕಷ್ಟು ಒತ್ತಡ ಬೀಳುತ್ತಿದ್ದು, ಅಂಥ ಒತ್ತಡದಿಂದ ಮುಕ್ತರಾಗಲು ನಿತ್ಯ ಯೋಗವನ್ನು ರೂಢಿಸಿಕೊಳ್ಳುವುದು ಅವಶ್ಯವಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ತಾಲೂಕ ದಂಡಧಿಕಾರಿ ಡಾ. ಮೋಹನ ಭಸ್ಮೆ ಮಾತನಾಡಿ, ವಿಶ್ವಕ್ಕೆ ಭಾರತ ಕೊಟ್ಟ ಕೊಡುಗೆ ಯೋಗ. ಯೋಗೋ ರಕ್ಷತಿ ರಕ್ಷಿತಃ ಎಂಬ ಉಕ್ತಿಯಂತೆ ಮಾನವ ಸಂಕುಲವನ್ನು ರಕ್ಷಿಸುವಲ್ಲಿ ಯೋಗವು ಅತ್ಯಂತ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಯೋಗಾಭ್ಯಾಸವನ್ನು ರೂಢಿಸಿಕೊಳ್ಳುವುದರಿಂದ ಆರೋಗ್ಯ ರಕ್ಷಣೆ ಹಾಗೂ ರೋಗಗಳನ್ನು ನಿಯಂತ್ರಿಸಬಹುದು ಎಂದರು.
ಯೋಗ ಶಿಕ್ಷಕ ಎಸ್.ಎಲ್ ಜೋಡಟ್ಟಿ ಮಾತನಾಡಿ, ಯೋಗವನ್ನು ಪುಸ್ತಕದಿಂದ ಓದಿ ಕಲಿಯದೆ ಗುರುವಿನ ಮೂಲಕ ಕಲಿತು ಅಭ್ಯಾಸ ಮಾಡಿದರೆ ಆರೋಗ್ಯವಂತರಾಗಿ ಸದೃಡ ಬದುಕು ಪಡೆಯಲು ಸಾಧ್ಯವಿದೆ. ಬಾಲ್ಯದಿಂದಲೇ ಯೋಗಭ್ಯಾಸವನ್ನು ರೂಢಿಸಿಕೊಂಡರೆ ಮುಪ್ಪಿನಲ್ಲೂ ಯುವಕರಂತೆ ಬಾಳಬಹುದು ಎಂದು ಹೇಳಿದರು.
ಕರ್ನಾಟಕ ರಾಜ್ಯ ಯುವ ಒಕ್ಕೂಟಗಳ ಬೆಳಗಾವಿ ಜಿಲ್ಲಾಧ್ಯಕ್ಷ ಸಿದ್ದಣ್ಣ ದುರದುಂಡಿ ಮಾತನಾಡಿ, ರೋಗ ಬಂದ ಮೇಲೆ ಯೋಗ ಮಾಡುವ ಬದಲು ರೋಗ ಬರದಂತೆ ಇಂದಿನಿಂದಲೇ ಯೋಗ ಮಾಡಿ ಆರೋಗ್ಯವಂತರಾಗಿ ಎಂದು ಕರೆ ನೀಡಿದರು.
ಬಳೊಬಾಳದ ಜಿಎಚ್‍ಪಿಎಸ್ ಶಾಲೆಯ ದೈಹಿಕ ಶಿಕ್ಷಕ ಬಸು ಬಡವನ್ನಿ ನೇತೃತ್ವದಲ್ಲಿ ವಿದ್ಯಾರ್ಥಿಗಳಿಂದ ಯೋಗ ಪ್ರದರ್ಶನ ಜರುಗಿತು.
ಪಿ.ಎಸ್.ಐ ಸಂಗಮೇಶ ದಿಡಿಗಿನಾಳ, ಶ್ರೀ ಮಂಜುನಾಥ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಲ್.ವಾಯ್ ಅಡಿಹುಡಿ, ಎಲ್.ಸಿ. ಗಾಡವಿ, ವಿ.ಎಚ್.ಬಾಲರೆಡ್ಡಿ, ಕೃಷ್ಣ ಗಿರೆನ್ನವರ, ಸುಧೀರ ನಾಯರ್, ಸುಭಾಸ್ ಗೊಡ್ಯಾಗೋಳ, ಈರಪ್ಪ ಢವಳೇಶ್ವರ, ಶಿವಾನಂದ ಹಿರೇಮಠ, ರಮೇಶ ಉಪ್ಪಾರ, ರಾಮಣ್ಣ ಮಂಟೂರ, ಮಂಜು ಕುಂಬಾರ ಮತ್ತಿತರರು ಭಾಗವಹಿಸಿದ್ದರು.
ಫೋಟೋ ಕ್ಯಾಪ್ಸನ್> ಮೂಡಲಗಿ: ಇಲ್ಲಿಯ ಲಕ್ಷ್ಮಣ ಅಡಿಹುಡಿ ಶಾಲಾ ಆವರಣದಲ್ಲಿ ಗಾರ್ಡನ್ ಅಭಿವೃದ್ದಿ ಸಂಸ್ಥೆ ಹಮ್ಮಿಕೊಂಡಿದ್ದ ವಿಶ್ವ ಯೋಗ ದಿನಚರಣೆಯಲ್ಲಿ ಮೂಡಲಗಿ ತಾಲೂಕ ದಂಡಧಿಕಾರಿ ಡಾ. ಮೋಹನ ಭಸ್ಮೆ ಮಾತನಾಡಿದರು

Related posts: