RNI NO. KARKAN/2006/27779|Friday, November 22, 2024
You are here: Home » breaking news » ಘಟಪ್ರಭಾ:ನಿಷ್ಕ್ರೀಯಗೊಂಡ ಜಲ ನಿರ್ಮಲ ಘಟಕಗಳು!!

ಘಟಪ್ರಭಾ:ನಿಷ್ಕ್ರೀಯಗೊಂಡ ಜಲ ನಿರ್ಮಲ ಘಟಕಗಳು!! 

ನೀರು ಶುದ್ಧೀಕರಣಕಾಗಿ ನಿರ್ಮಿಸಲಾದ ಬೃಹತ ಆಕಾರದ ನೀರಿನ ಟ್ಯಾಂಕಗಳು ಕಪ್ಪಿಮಾಸ ಹಾಗೂ ಕಸ ಕಡ್ಡಿಗಳಿಂದ ತುಂಬಿರುವುದು.

ನಿಷ್ಕ್ರೀಯಗೊಂಡ ಜಲ ನಿರ್ಮಲ ಘಟಕಗಳು!!

ಮಲ್ಲಾಪೂರ ಪಿ.ಜಿ ಹಾಗೂ ಧುಪದಾಳ ಅವಳಿ ಗ್ರಾಮಗಳ ಜನರಿಗೆ ಕುಡಿಯಲು ಕಲುಷಿತ ನೀರೇ ಗತಿ

ಘಟಪ್ರಭಾ ಜೂ 25 : ಇಲ್ಲಿಯ ಮಲ್ಲಾಪೂರ ಪಿ.ಜಿ ಹಾಗೂ ಧುಪದಾಳ ಅವಳಿ ಗ್ರಾಮಗಳ ಜನರಿಗೆ ಶುದ್ಧ ಕುಡಿಯುವ ನೀರಿಗಾಗಿ ನಿರ್ಮಿಸಲಾದ ಜಲ ನಿರ್ಮಲ ಘಟಕಗಳು ಸಂಪೂರ್ಣ ನಿಷ್ಕ್ರೀಯಗೊಂಡು ಜನರು ಕಲುಷಿತ ನೀರು ಕುಡಿಯುವ ಪರಿಸ್ಥಿತಿ ನಿರ್ಮಾಣವಾಗಿದೆ.
ಈ ಹಿಂದೆ ಮಲ್ಲಾಪೂರ ಪಿ.ಜಿ ಪಟ್ಟಣ ಪಂಚಾಯತಿ ಗ್ರಾಮ ಪಂಚಾಯತಿಯಾಗಿದ್ದ ಸಮಯದಲ್ಲಿ ಸುಮಾರು 1.65 ಕೋಟಿಗೂ ಹೆಚ್ಚು ಹಣ ಖರ್ಚು ಮಾಡಿ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣ ಮಾಡಲಾಗಿತ್ತು. ಕೆಲ ದಿನಗಳ ನಂತರ ನಿರ್ವಹಣೆ ಇಲ್ಲದೆ ಈ ಘಟಕ ಕಾರ್ಯ ಸ್ಥಗಿತಗೊಂಡಿತು. ನಂತರ ಮಲ್ಲಾಪೂರ ಪಿ.ಜಿ ಪಟ್ಟಣ ಪಂಚಾಯತಿಯಾಗಿ ಮೇಲ್ದರ್ಜೆಗೇರಿತು. ಪಂಚಾಯತಿ ಮೇಲ್ದರ್ಜೆಗೆರಿದ್ದರೂ ಕೂಡಾ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಜನತೆಗೆ ಕಲುಷಿತ ನೀರು ಕುಡಿಯುವ ಕಾಟ ತಪ್ಪಿಲ್ಲ.
ಕೆಲ ವರ್ಷಗಳ ಹಿಂದೆ ಧುಪಾದಾಳ ಗ್ರಾಮ ಪಂಚಾಯತಿ ವ್ಯಾಪ್ತಿಯ ಜನರಿಗೆ ಶುದ್ಧ ಕುಡಿಯುವ ನೀರು ಪೂರೈಸಲು ಸುಮಾರು 1.25 ಕೋಟಿ ವೆಚ್ಚದಲ್ಲಿ ಜಲ ನಿರ್ಮಲ ಘಟಕವನ್ನು ಸ್ಥಾಪಿಸಲಾಗಿತ್ತು. ಅದು ಕೂಡಾ ಸಮರ್ಪಕ ನಿರ್ವಹಣೆ ಕಾಣದೆ ನಿಷ್ಕ್ರಿಯೆಗೊಂಡಿದೆ.

ಮಲ್ಲಾಪೂರ ಪಿ.ಜಿ ಪಟ್ಟಣ ಪಂಚಾಯತಿ ಶುದ್ಧ ನೀರಿನ ಘಟಕವು ಗುಬ್ಬಲ ಗುಡ್ಡ ಹಿಂಭಾಗದಲ್ಲಿದ್ದು ನಿರ್ವಹಣೆ ಇಲ್ಲದೇ ನಿಷ್ಕ್ರೀಯಗೊಂಡಿದೆ.

ಸರ್ಕಾರ ಕೋಟಿ ಗಟ್ಟಲೆ ಹಣ ಖರ್ಚು ಮಾಡಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ನಿರ್ಮಿಸಿದರೂ ಸಮರ್ಪಕ ನಿರ್ವಹಣೆ ಇಲ್ಲದೆ ಈ ಎರಡೂ ಘಟಕಗಳು ಈಗ ಸಂಪೂರ್ಣ ಹಾಳಾಗಿವೆ. ಧುಪದಾಳ ಗ್ರಾಮದ ಚರ್ಚದ ಹತ್ತಿರ ಹಾಗೂ ಮಲ್ಲಾಪೂರ ಪಿ.ಜಿಯ ಗುಬ್ಬಲ ಗುಡ್ಡದ ಹಿಂದೆ ಜಲ ಶುದ್ಧಿಕರಣಕ್ಕಾಗಿ ನಿರ್ಮಿಸಿದ ಭೃಹತ್ ಆಕಾರದ ಟ್ಯಾಂಕಗಳಲ್ಲಿ ಕಸ ಕಡ್ಡಿ ತುಂಬಿ ಗಿಡಗಳು ಬೆಳದಿವೆ. ಅಲ್ಲದೇ ಕಪ್ಪಿಮಾಸ ಕೂಡಾ ತುಂಬಿದೆ. ಇದರ ಬಗ್ಗೆ ಅಧಿಕಾರಿಗಳು ನಿರ್ಲಕ್ಷ್ಯ ತೋರಿಸುತ್ತಿದ್ದು, ಅನೇಕ ಬಾರಿ ಸಾರ್ವಜನಿಕರು ಮೌಖಿಕವಾಗಿ ಕಛೇರಿಗೆ ಹೋಗಿ ಅಧಿಕಾರಿಗಳಿಗೆ ತಿಳಿಸಿದರೂ ಯಾವುದೇ ಪ್ರಯೋಜನವಾಗಿಲ್ಲ.
ಧುಪದಾಳ ಗ್ರಾಮ ಪಂಚಾಯತಿಯ ಶುದ್ಧ ಕುಡಿಯುವ ಜಲ ನಿರ್ಮಲ ಘಟಕದ ಟ್ಯಾಂಕ ಒಡೆದು ಬಹಳಷ್ಟು ನೀರು ಪೋಲಾಗುತ್ತಿದೆ. ಆದರೆ ಪಂಚಾಯತಿಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಇತ್ತ ಕಡೆಗೆ ಗಮನ ಕೂಡದೆ ನಿರ್ಲಕ್ಷ್ಯ ತೋರಿಸುತ್ತಿದ್ದಾರೆ.

ಧುಪದಾಳ ಗ್ರಾ.ಪಂ ವ್ಯಾಪ್ತಿಯಲ್ಲಿ ನೀರು ಶುದ್ಧೀಕರಣಕಾಗಿ ನಿರ್ಮಿಸಲಾದ ಬೃಹತ ಆಕಾರದ ನೀರಿನ ಟ್ಯಾಂಕ ಒಡೆದು ನೀರು ಪೋಲಾಗುತ್ತಿರುವುದು.

ಟ್ಯಾಂಕಗಳನ್ನು ಸ್ವಚ್ಛಗೊಳಿಸಿ ಶುದ್ಧ ನೀರನ್ನು ಸರಬರಾಜು ಮಾಡಬೇಕಿದ್ದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಘಟಪ್ರಭಾ ನದಿಯಿಂದ ಸರಬರಾಜು ಆಗುತ್ತಿರುವ ನೀರನ್ನು ನೇರವಾಗಿ ಗ್ರಾಮ ಹಾಗೂ ಪಟ್ಟಣದಲ್ಲಿ ಸರಬರಾಜು ಮಾಡುತ್ತಿದ್ದಾರೆ. ಮಳೆಗಾಲದಲ್ಲಿ ನದಿಗೆ ಹೊಸ ನೀರು ಬರುತ್ತಿದ್ದು, ನೀರು ಸಂಪೂರ್ಣ ಕಲುಷಿತವಾಗಿದೆ. ಈ ಬಗ್ಗೆ ಕಿಂಚಿತ್ತು ಕಾಳಜಿ ವಹಿಸದ ಅಧಿಕಾರಿಗಳು ಕಲುಷಿತ ನೀರನ್ನು ಕುಡಿಯಲು ನೇರವಾಗಿ ಮನೆಗಳಿಗೆ ನಳಗಳ ಮೂಲಕ ಹರಿದು ಬಿಡುತ್ತಿದ್ದಾರೆ. ಇದರಿಂದ ಈ ಅವಳಿ ಗ್ರಾಮಗಳಲ್ಲಿ ರೋಗಗಳು ಹರಡುವ ಭೀತಿ ಎದುರಾಗಿದ್ದು ಜನರು ಭಯಭೀತರಾಗಿದ್ದಾರೆ. ಕುಡಿಯಲು ಬಿಡಲಾಗುತ್ತಿರುವ ನೀರಿನಲ್ಲಿ ವಿಪರೀತ ವಾಸನೆಯ ಜತೆಗೆ ಮಣ್ಣು ಮಿಶ್ರಿತ ನೀರಿನ ಬಣ್ಣ ಸಂಪೂರ್ಣ ಕೆಂಪಾಗಿದ್ದರೂ ಕೂಡಾ ಇದೇ ನೀರನ್ನು ಕುಡಿಯುವುದು ಜನರಿಗೆ ಅನಿವಾರ್ಯವಾಗಿದೆ.
ಅಲ್ಲದೆ ಪ್ರತಿಸಲ ಮಳೆಗಾಲ ಬಂದಾಗ ಹೊಸ ನೀರನ್ನು ಕಾಯಿಸಿ ಆರಿಸಿ ಕುಡಿಯುವಂತೆ ಅಧಿಕಾರಿಗಳು ಜನರಲ್ಲಿ ಜಾಗೃತಿಗಾಗಿ ಡಂಗೂರ ಸಾರುತ್ತಿದ್ದರು. ಆದರೆ ಈ ಬಾರಿ ಅದನ್ನು ಕೂಡಾ ಮಾಡದ ಅಧಿಕಾರಿಗಳು ತಮ್ಮ ನಿಷ್ಕಾಳಜಿಯನ್ನು ತೋರಿದ್ದಾರೆ.
ಕೋಟಿಗಟ್ಟಲೆ ದುಡ್ಡು ಖರ್ಚು ಮಾಡಿ ನಿರ್ಮಿಸಿದ ಜಲ ನಿರ್ಮಲ ಘಟಕಗಳನ್ನು ಸ್ವಚ್ಛಗೊಳಿಸಿ ಶುದ್ಧ ಕುಡಿಯುವ ನೀರನ್ನು ಸರಬರಾಜು ಮಾಡಬೇಕೆಂಬುದು ಜನರ ಆಗ್ರಹವಾಗಿದೆ.

“ಮಲ್ಲಾಪೂರ ಪಿ.ಜಿ ಪಟ್ಟಣಕ್ಕೆ ಇರುವ ಶುದ್ಧ ಕುಡಿಯುವ ನೀರಿನ ಜಲ ನಿರ್ಮಲ ಘಟಕದ ಕಾರ್ಯ ಸ್ಥಗಿತಗೊಂಡಿದೆ. ಇದರಿಂದ ತೊಂದರೆಯಾಗತ್ತಿದೆ. ಈ ಘಟಕ ಚಿಕ್ಕದಾಗಿದ್ದು, ಪಟ್ಟಣದ ಜನ ಸಂಖ್ಯೆಗೆ ಸಾಕಾಗುವುದಿಲ್ಲ. ಶುದ್ಧ ಕುಡಿಯುವ ನೀರನ್ನು ಸರಬರಾಜು ಮಾಡುವ ಬಗ್ಗೆ ಅತೀ ಶೀಘ್ರದಲ್ಲಿ ಕ್ರಮ ಕೊಳ್ಳಲಾಗುವದು”.
ಕೆ.ಭೀ.ಪಾಟೀಲ ಮುಖ್ಯಾಧಿಕಾರಿಗಳು ಮಲ್ಲಾಪೂರ ಪಿ.ಜಿ ಪ,ಪಂ

“ಧುಪದಾಳ ಗ್ರಾಮಕ್ಕೆ ಶುದ್ಧ ಕುಡಿಯುವ ನೀರು ಸರಬರಾಜು ಮಾಡುವ ಜಲ ನಿರ್ಮಲ ಘಟಕವು ಕಾರ್ಯ ಸ್ಥಗಿತಗೊಂಡಿದೆ ಎಂದು ತಿಳಿದು ಬಂದಿದೆ. ಅಧಕ್ಷರು ಹಾಗೂ ಸದಸ್ಯರ ಸಭೆ ಕರೆದು ಶುದ್ಧ ಕುಡಿಯುವ ನೀರನ್ನು ಸರಬರಾಜು ಮಾಡುವ ಬಗ್ಗೆ ಅತೀ ಶೀಘ್ರದಲ್ಲಿ ಕ್ರಮ ಕೊಳ್ಳಲಾಗುವುದು”.
ಎಸ್.ಬಿ ಸುಣಗಾರ ಪಿಡಿಓ ಗ್ರಾ.ಪಂ ಧುಪದಾಳ.

Related posts: