RNI NO. KARKAN/2006/27779|Friday, October 18, 2024
You are here: Home » breaking news » ಮೂಡಲಗಿ:ಹಿಡಕಲ್ ಜಲಾಶಯದಿಂದ ಸಿಬಿಸಿ ಕಾಲುವೆಗಳಿಗೆ ನೀರು ಹರಿಸುವಂತೆ ಶಾಸಕ ಬಾಲಚಂದ್ರ ಮನವಿ

ಮೂಡಲಗಿ:ಹಿಡಕಲ್ ಜಲಾಶಯದಿಂದ ಸಿಬಿಸಿ ಕಾಲುವೆಗಳಿಗೆ ನೀರು ಹರಿಸುವಂತೆ ಶಾಸಕ ಬಾಲಚಂದ್ರ ಮನವಿ 

ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಹಣಮಾಪೂರ(ಕಲ್ಲೋಳಿ) ಗ್ರಾಮದಲ್ಲಿ ಸೋಮವಾರದಂದು ಜರುಗಿದ ಜಡಿಸಿದ್ಧೇಶ್ವರ ಜಾತ್ರಾ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಹಿಡಕಲ್ ಜಲಾಶಯದಿಂದ ಸಿಬಿಸಿ ಕಾಲುವೆಗಳಿಗೆ ನೀರು ಹರಿಸುವಂತೆ ಶಾಸಕ ಬಾಲಚಂದ್ರ ಮನವಿ

ಮೂಡಲಗಿ 25 : ಸಾರ್ವಜನಿಕರು ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿಗಾಗಿ ಕೂಡಲೇ ಹಿಡಕಲ್ ಜಲಾಶಯದಿಂದ ಘಟಪ್ರಭಾ ಎಡದಂಡೆ, ಬಲದಂಡೆ ಹಾಗೂ ಸಿಬಿಸಿ ಕಾಲುವೆಗಳಿಗೆ ನೀರು ಹರಿಸುವಂತೆ ಅರಭಾವಿ ಶಾಸಕ ಹಾಗೂ ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ ಅವರು ಪೌರಾಡಳಿತ ಸಚಿವ ರಮೇಶ ಜಾರಕಿಹೊಳಿ ಅವರಲ್ಲಿ ಮನವಿ ಮಾಡಿಕೊಂಡರು.
ತಾಲೂಕಿನ ಹಣಮಾಪೂರ(ಕಲ್ಲೋಳಿ) ಗ್ರಾಮದಲ್ಲಿ ಸೋಮವಾರದಂದು ಜಡಿಸಿದ್ಧೇಶ್ವರ ಜಾತ್ರಾ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಆಗದೇ ಇರುವದರಿಂದ ರೈತರ ಹಿತದೃಷ್ಟಿಯಿಂದ ನೀರನ್ನು ಹರಿಸುವಂತೆ ಈಗಾಗಲೇ ಜಿಲ್ಲಾಧಿಕಾರಿಗಳನ್ನು ಕೋರಲಾಗಿದೆ ಎಂದು ಹೇಳಿದರು.

ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನು ಹಣಮಾಪೂರ(ಕಲ್ಲೋಳಿ) ಗ್ರಾಮದಲ್ಲಿ ಸೋಮವಾರದಂದು ಜರುಗಿದ ಜಡಿಸಿದ್ಧೇಶ್ವರ ಜಾತ್ರಾ ಮಹೋತ್ಸವದಲ್ಲಿ ಸತ್ಕರಿಸಲಾಯಿತು.

ಹಿಡಕಲ್ ಜಲಾಶಯದಲ್ಲಿ ಈಗಾಗಲೇ 5 ಟಿಎಂಸಿ ನೀರು ಸಂಗ್ರಹವಿದೆ. ಜನ ಹಾಗೂ ಜಾನುವಾರುಗಳ ಹಿತವನ್ನು ಗಮನದಲ್ಲಿಟ್ಟು ಘಟಪ್ರಭಾ ಎಡದಂಡೆ ಹಾಗೂ ಬಲದಂಡೆ ಕಾಲುವೆಗಳಿಗೆ ತಲಾ ಒಂದು ಟಿಎಂಸಿ ಮತ್ತು ಸಿಬಿಸಿ ಕಾಲುವೆಗೆ ಅರ್ಧ ಟಿಎಂಸಿ ನೀರನ್ನು ಕೂಡಲೇ ಹರಿಸುವಂತೆ ಸಚಿವರನ್ನು ಆಗ್ರಹಪಡಿಸಿದ ಅವರು, ರೈತರ ಹಿತವೇ ನಮಗೆ ಮುಖ್ಯವಾಗಿದೆ ಎಂದು ಹೇಳಿದರು.
ಅರಭಾವಿ ಕ್ಷೇತ್ರದ ಜನರ ಆಶೀರ್ವಾದದಿಂದ ಸತತ 5ನೇ ಬಾರಿಗೆ ಶಾಸಕನಾಗಿ ಆಯ್ಕೆಯಾಗಿದ್ದೇನೆ. ನಿಮ್ಮಗಳ ಋಣ ನನ್ನ ಮೇಲಿದೆ. ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವ ಮೂಲಕ ಋಣ ತೀರಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಕ್ಷೇತ್ರದಲ್ಲಿ ಬಾಕಿ ಉಳಿದಿರುವ ಕಾಮಗಾರಿಗಳನ್ನು ಪೂರ್ಣಗೊಳಿಸುವ ಪ್ರಯತ್ನ ನಡೆಸುತ್ತೇನೆ. ಜನರ ಪ್ರೀತಿ-ವಿಶ್ವಾಸಕ್ಕೆ ಚ್ಯುತಿ ತರದೇ ಎಲ್ಲ ವರ್ಗಗಳ ಆಶಯದಂತೆ ಸರ್ವತೋಮುಖ ಪ್ರಗತಿಗೆ ದುಡಿಯುತ್ತೇನೆಂದು ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಭಾರತ ದೇಶ ವಿಶ್ವದಲ್ಲಿಯೇ ವಿವಿಧತೆಯಲ್ಲಿ ಏಕತೆ ಮೆರೆಯುತ್ತಿರುವ ಭಾವೈಕ್ಯತೆಯ ರಾಷ್ಟ್ರವಾಗಿದೆ. ಎಲ್ಲ ಧರ್ಮಿಯರು ಒಂದಾಗಿ ಒಗ್ಗಟ್ಟಾಗಿ ಬದುಕುತ್ತಿರುವುದು ಏಕತೆಯ ಸಂಕೇತವಾಗಿದೆ. ವಿಶ್ವದಲ್ಲಿಯೇ ನಮ್ಮ ದೇಶ ಜಾತ್ಯಾತೀತ ರಾಷ್ಟ್ರವಾಗಿದೆ ಎಂದು ಹೇಳಿದರು.
ಸಾನಿಧ್ಯವನ್ನು ಸುಣಧೋಳಿಯ ಶಿವಾನಂದ ಸ್ವಾಮಿಗಳು ಹಾಗೂ ಕಂಕಣವಾಡಿಯ ಮಾರುತಿ ಶರಣರು ಮಾತನಾಡಿ, ಶಾಸಕ ಬಾಲಚಂದ್ರ ಜಾರಕಿಹೊಳಿ ಅವರಂತಹ ಹೃದಯವೈಶಾಲ್ಯದ ಜನಪ್ರತಿನಿಧಿಯನ್ನು ಪಡೆದಿರುವುದು ಅರಭಾವಿ ಕ್ಷೇತ್ರದ ಜನರ ಪುಣ್ಯ. ಬಾಲಚಂದ್ರ ಜಾರಕಿಹೊಳಿ ಅವರ ಜನಪರ ಸೇವೆಯನ್ನು ಕೊಂಡಾಡಿದರು.
ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನು ಇದೇ ಸಂದರ್ಭದಲ್ಲಿ ಜಾತ್ರಾ ಮಹೋತ್ಸವ ಸಮೀತಿಯಿಂದ ಸ್ವಾಮೀಜಿಗಳು ಸತ್ಕರಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಬಸವಂತ ದಾಸನವರ, ರಾವಸಾಬ ಬೆಳಕೂಡ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ನೀಲಕಂಠ ಕಪ್ಪಲಗುದ್ದಿ, ಸುಭಾಸ ಕುರಬೇಟ, ಎಪಿಎಂಸಿ ಮಾಜಿ ಅಧ್ಯಕ್ಷ ಮಲ್ಲಪ್ಪ ಹೆಬ್ಬಾಳ, ತಾಪಂ ಮಾಜಿ ಸದಸ್ಯ ಅಶೋಕ ಮಕ್ಕಳಗೇರಿ, ಕಲ್ಲಪ್ಪ ಇಟ್ನಾಳ, ರಾಮಲಿಂಗ ದಾಸನವರ, ಮಾರುತಿ ಖಾನಪ್ಪನವರ, ರುದ್ರಪ್ಪ ಕುಂಬಾರ, ಶಿವಪ್ಪ ದಳವಾಯಿ, ಅಶೋಕ ಆಡಿನವರ, ಮಹೇಶ ನಂದಿಮಠ, ರಾಮಪ್ಪ ದಾಸನವರ, ಶಿವಪ್ಪ ಪರಸನ್ನವರ, ವೀರನಗೌಡ ಪಾಟೀಲ, ಬಸಪ್ಪ ಯಾದಗೂಡ, ಭೀಮಶೆಪ್ಪ ಗೋರೋಶಿ, ಉಮೇಶ ಬೂದಿಹಾಳ ಹಾಗೂ ಗಣ್ಯರು ಉಪಸ್ಥಿತರಿದ್ದರು.

Related posts: