ಗೋಕಾಕ:ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸಲು ಅಧಿಕಾರಿಗಳು ಮುತುವರ್ಜಿ ವಹಿಸಬೇಕು : ಸಚಿವ ರಮೇಶ
ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸಲು ಅಧಿಕಾರಿಗಳು ಮುತುವರ್ಜಿ ವಹಿಸಬೇಕು : ಸಚಿವ ರಮೇಶ
ಗೋಕಾಕ ಜು 7 : ಸರ್ಕಾರಿ ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಮುತುವರ್ಜಿ ವಹಿಸಬೇಕೆಂದು ಪೌರಾಡಳಿತ ಸಚಿವ ರಮೇಶ ಜಾರಕಿಹೊಳಿ ಅವರು ಸಲಹೆ ನೀಡಿದರು.
ಶನಿವಾರದಂದು ನಗರದ ತಾಪಂ ಸಭಾ ಭವನದಲ್ಲಿ ತಾಲೂಕಾ ಪಂಚಾಯತಿ ಸದಸ್ಯರು ಆಯೋಜಿಸಿದ್ದ ಸನ್ಮಾನ ಸಮಾರಂಭದಲ್ಲಿ ಸತ್ಕಾರ ಸ್ವೀಕರಿಸಿ ಮಾತನಾಡಿದ ಅವರು, ಜನ ಸಾಮಾನ್ಯರ ಆಶೋತ್ತರಗಳಿಗೆ ಸ್ಪಂದಿಸಿ, ಜನಪ್ರತಿನಿಧಿಗಳು ಸರ್ಕಾರ ಯೋಜನೆಗಳನ್ನು ಅವರಿಗೆ ತಲುಪಿಸಲು ಶ್ರಮಿಸಬೇಕು. ಈ ಕಾರ್ಯಕ್ಕೆ ಅಧಿಕಾರಿಗಳು ಕೂಡಾ ಸಹಕಾರ ನೀಡಬೇಕೆಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಸತಿ ನಿಲಯಗಳಲ್ಲಿ ಅಧ್ಯಯನ ಮಾಡಿ 2017-18 ಸಾಲಿನ ಎಸ್‍ಎಸ್‍ಎಲ್‍ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ 15 ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಮಂಜೂರಾದ ತಲಾ 10 ಸಾವಿರ ರೂಗಳ ಪ್ರೋತ್ಸಾಹ ಧನ ಚೆಕ್‍ಗಳನ್ನು ಸಚಿವರು ವಿತರಿಸಿದರು.
ವೇದಿಕೆ ಮೇಲೆ ಜಿಪಂ ಸದಸ್ಯರಾದ ಟಿ.ಆರ್.ಕಾಗಲ, ಮಡ್ಡೆಪ್ಪ ತೋಳಿನವರ, ತಾಪಂ ಅಧ್ಯಕ್ಷೆ ಸುನಂದಾ ಕರದೇಸಾಯಿ, ಉಪಾಧ್ಯಕ್ಷ ಯಲ್ಲಪ್ಪ ನಾಯಿಕ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಎಫ್.ಜಿ.ಚಿನ್ನನವರ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿಸ್ತರಣಾಧಿಕಾರಿ ಆರ್.ಕೆ.ಬಿಸಿರೊಟ್ಟಿ ಇದ್ದರು. ಎ.ಜಿ.ಕೋಳಿ ಸ್ವಾಗತಿಸಿ ವಂದಿಸಿದರು.