ಗೋಕಾಕ:ಶಿಕ್ಷಣ ಸಂಸ್ಥೆಗಳಿಂದ ಸರಕಾರದ ನಿಯಮ ಮೀರಿ ಶುಲ್ಕ ವಸೂಲಿ : ಕರವೇ ಪ್ರತಿಭಟನೆ
ಶಿಕ್ಷಣ ಸಂಸ್ಥೆಗಳಿಂದ ಸರಕಾರದ ನಿಯಮ ಮೀರಿ ಶುಲ್ಕ ವಸೂಲಿ : ಕರವೇ ಪ್ರತಿಭಟನೆ
ಗೋಕಾಕ ಜು 19 : ಖಾಸಗಿ ಶಿಕ್ಷಣ ಸಂಸ್ಥೆಗಳು ಮತ್ತು ಅನುದಾನಿತ ಶಾಲೆಗಳಲ್ಲಿ ಸರಕಾರದ ನಿಯಮ ಮೀರಿ ಶುಲ್ಕ ಪಡೆಯುತ್ತಿರುವುದನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಗೋಕಾಕ ತಾಲೂಕಾಧ್ಯಕ್ಷ ಬಸವರಾಜ ಖಾನಪ್ಪನವರ ನೇತೃತ್ವದಲ್ಲಿಂದು ಪ್ರತಿಭಟನೆ ನಡೆಸಲಾಯಿತು.
ಗುರುವಾರ ಮುಂಜಾನೆ ನಗರದ ಶಿಕ್ಷಣಾಧಿಕಾರಿಗಳ ಕಛೇರಿಯಲ್ಲಿ ಸೇರಿದ ಕ.ರ.ವೇ ಕಾರ್ಯಕರ್ತರು ಸರಕಾರದ ನಿಯಮ ಮೀರಿ ಫೀ ವಸೂಲಿ ಮಾಡುತ್ತಿರುವ ಖಾಸಗಿ ಮತ್ತು ಅನುದಾನಿತ ಶಾಲೆಗಳ ವಿರುದ್ದ ಘೋಷಣೆಗಳನ್ನು ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿ ಶಿಕ್ಷಣಾಧಿಕಾರಿ ಕುಲಕರ್ಣಿಯವರ ಮುಖಾಂತರ ಉಪನಿರ್ದೇಶಕರಿಗೆ ಮನವಿ ಅರ್ಪಿಸಿದರು.
ಕಳೆದು ಹಲವು ವರ್ಷಗಳಿಂದ ಗೋಕಾಕ ನಗರದಲ್ಲಿ ತಲೆ ಎತ್ತಿರುವ ಖಾಸಗಿ ಶಿಕ್ಷಣ ಸಂಸ್ಥೆಗಳು ಸರ್ಕಾರದ ನಿಯಮಾನುಸಾರ ಫೀ ತೆಗೆದುಕೊಳ್ಳದೆ ಮಕ್ಕಳಿಂದ ಹೆಚ್ಚಿನ ಫೀ ತೆಗೆದುಕೊಳ್ಳುವ ಪ್ರಕರಣಗಳು ಕಂಡು ಬರುತ್ತಿವೆ. ಇದರಿಂದ ಖಾಸಗಿ ಶಾಲೆಗಳಲ್ಲಿ ದಾಖಲಾತಿ ಪಡೆದಿರುವ ಮಕ್ಕಳು ಶುಲ್ಕ ಭರಿಸಲು ತುಂಬಾ ತೊಂದರೆಯನ್ನು ಅನುಭವಿಸುತ್ತಿದ್ದಾರೆ. ಇದರ ಬಗ್ಗೆ ಪ್ರತಿ ವರ್ಷ ಶೈಕ್ಷಣಿಕ ವರ್ಷ ಆರಂಭದಲ್ಲಿ ಶಿಕ್ಷಣಾಧಿಕಾರಿಗಳ ಗಮನಕ್ಕೆ ತಂದರೂ ಸಹ ಇಲ್ಲಿಯವರೆಗೂ ಯಾವುದೇ ಪ್ರಯೋಜನವಾಗಿಲ್ಲ. ಸರ್ಕಾರದಿಂದ ಅನುದಾನ ಪಡೆದಿರುವ ಗೋಕಾಕ ಶಿಕ್ಷಣ ಸಂಸ್ಥೆ, ಎಲ್.ಇ.ಟಿ., ಶಂಕರಲಿಂಗ ಪಾಯಸಾಗರ ಸೇರಿದಂತೆ ಇನ್ನೂ ಅನೇಕ ಅನುದಾನಿತ ಶಾಲೆಗಳಲ್ಲಿ ಸಹ ಸರ್ಕಾರದಿಂದ ಅನುದಾನ ಪಡೆದು ಸರಕಾರದ ಎಲ್ಲ ಸಹಾಯ ಸವಲತ್ತಗಳನ್ನು ಪಡೆದರೂ ಸಹ ಹೆಚ್ಚು ಶಿಕ್ಷಕರ ಮತ್ತು ಹೆಚ್ಚುವರಿ ಶಾಲಾ ಕೊಠಡಿಗಳ ನೆಪಹೇಳಿ ಸರಕಾರ ನಿಗದಿ ಪಡಿಸಿದ ಫೀ ಗಿಂತ ಹೆಚ್ಚಿನ ಫೀ ಪಡೆದು ಸಾರ್ವಜನಿಕರಿಗೆ ಮೋಸ ಮಾಡುತ್ತಿದ್ದಾರೆ.
ಈ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಆದಷ್ಟು ಬೇಗ ಖಾಸಗಿ ಮತ್ತು ಸರಕಾರಿ ಅನುದಾನಿತ ಶಾಲೆಗಳಿಗೆ ಭೇಟಿ ನೀಡಿ ಇದರ ಬಗ್ಗೆ ಸಮಗ್ರ ತನಿಖೆ ನಡೆಯಿಸಿ ತಪ್ಪಿತಸ್ಥ ಶಿಕ್ಷಣ ಸಂಸ್ಥೆಗಳ ಮೇಲೆ ಕ್ರಮಕೈಗೊಂಡು ಸರಕಾರ ನಿಗದಿ ಪಡಿಸಿದ ಶುಲ್ಕ ಮಾತ್ರ ತೆಗೆದುಕೊಳ್ಳುವಂತೆ ಖಡಕ್ ಎಚ್ಚರಿಕೆ ನೀಡಬೇಕೆಂದು ಸಮಸ್ತ ಸಾರ್ವಜನಿಕರ ಪರವಾಗಿ ಮನವಿಯಲ್ಲಿ ಆಗ್ರಹಿಸಿದೆ. ಇದಕ್ಕೆ ತಪ್ಪಿದ್ದಲ್ಲಿ ಮುಂಬರುವ ದಿನಗಳಲ್ಲಿ ಅಂತಹ ಶಿಕ್ಷಣ ಸಂಸ್ಥೆಗಳ ವಿರುದ್ಧ ಉಗ್ರ ಹೋರಾಟ ಮಾಡಲಾಗುವುದೆಂದು ಕ.ರ.ವೇ ಮನವಿ ಮೂಲಕ ಎಚ್ಚರಿಕೆ ನೀಡಿದೆ.
ಈ ಸಂದರ್ಭದಲ್ಲಿ ಕಾರ್ಯದರ್ಶಿ ಸಾಧಿಕ ಹಲ್ಯಾಳ, ಮುಗುಟ ಪೈಲವಾನ, ಮಹಾದೇವ ಮಕ್ಕಳಗೇರಿ, ದೀಪಕ ಹಂಜಿ, ರೆಹಮಾನ ಮೋಕಾಶಿ, ಸತ್ತೆಪ್ಪ ಗಾಡಿವಡ್ಡರ, ರಮೇಶ ಕಮತೆ, ಬಸು ಗಾಡಿವಡ್ಡರ, ನಿಯಾಜ ಪಟೇಲ, ಮಲ್ಲಪ್ಪಾ ಸೈದಾಪೂರ, ಲಕ್ಕಪ್ಪಾ ನಂದಿ, ಮಲ್ಲಪ್ಪಾ ಸಂಪಗಾರ, ಶಾನೂಲ ದೇಸಾಯಿ, ಶ್ರೀಕಾಂತ ಬಾದರವಾಡಿ, ಸದಾನಂದ ಬಂಬರಗಿ, ಮುತ್ತೆಪ್ಪ ಘೋಡಗೇರಿ, ರಾಜು ಪರಕನಹಟ್ಟಿ, ರವಿ ನಾವ್ಹಿ, ಆನಂದ ಖಾನಪ್ಪನವರ, ರಮೇಶ ಬಿ.ಕೆ., ಅಜೀತ ಮಲ್ಲಾಪೂರ, ವಸಂತ ಹಂಜಿ, ರಾಮ ಕೊಂಗನೊಳ್ಳಿ, ಮಲ್ಲಪ್ಪಾ ತಲೆಪ್ಪಗೋಳ, ಸಂಜು ಗಾಡಿವಡ್ಡರ, ರಾಮಣ್ಣಾ ಸಣ್ಣಲಗಮನ್ನವರ, ಮಲ್ಲೇಶ ಮಡಿವಾಳರ, ದುಂಡಪ್ಪಾ ಖಿಚಡಿ ಸೇರಿದಂತೆ ಇನ್ನೂ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು