ಬೈಲಹೊಂಗಲ:ಪ್ರಾಮಾಣಿಕತನದ ಹೋರಾಟ ಮಾಡಿದರೆ ಮಾತ್ರ ಯಶಸ್ಸು ಸಿಗುತ್ತದೆ : ಬಸವಸಿದ್ಧಲಿಂಗ ಸ್ವಾಮೀಜಿ
ಪ್ರಾಮಾಣಿಕತನದ ಹೋರಾಟ ಮಾಡಿದರೆ ಮಾತ್ರ ಯಶಸ್ಸು ಸಿಗುತ್ತದೆ : ಬಸವಸಿದ್ಧಲಿಂಗ ಸ್ವಾಮೀಜಿ
ಬೈಲಹೊಂಗಲ ಜು 23 : ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆಗಾಗಿ ಡೊಂಗಿತನ ಮಾಡದೇ, ಸ್ಪಷ್ಟ ನಿಲುವಿನ ಪ್ರಾಮಾಣಿಕತನದ ಹೋರಾಟ ಮಾಡಿದರೆ ಮಾತ್ರ ಯಶಸ್ಸು ಸಿಗುತ್ತದೆಂದು ನೇಗಿನಹಾಳ ಶ್ರೀ ಮಡಿವಾಳೇಶ್ವರ ಮಠದ ಬಸವಸಿದ್ಧಲಿಂಗ ಸ್ವಾಮೀಜಿ ಹೇಳಿದರು.
ಪಟ್ಟಣದ ಬೈಪಾಸ್ ರಸ್ತೆಯಲ್ಲಿರುವ ಶ್ರೀ ವೀರಭದ್ರೇಶ್ವರ ಕಲ್ಯಾಣ ಮಂಟಪದಲ್ಲಿ ರಾಷ್ಟ್ರೀಯ ಬಸವ ದಳ, ಬಸವ ಕೇಂದ್ರ, ಬಸವಾಭಿಮಾನಿಗಳು ಹಾಗೂ ಲಿಂಗಾಯತ ಪರ ಸಂಘಟನೆಗಳ ಆಶ್ರಯದಲ್ಲಿ ರವಿವಾರ ನಡೆದ ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆಗೆ ಮತ್ತು ವಿಶ್ವಶಾಂತಿಗಾಗಿ ಸಾಮೂಹಿಕ ಇಷ್ಟಲಿಂಗ ಪೂಜಾ ಕಾರ್ಯಕ್ರಮದ ಸಾನಿಧ್ಯವಹಿಸಿ ಅವರು ಮಾತನಾಡಿದರು. ಲಿಂಗಾಯತ ಸಮಾಜ ಬಾಂಧವರು ಒಗ್ಗಟ್ಟು ಪ್ರದರ್ಶಿಸಬೇಕು. ಲಿಂಗಾಯತ ಸ್ವತಂತ್ರ ಮಾನ್ಯತೆಗಾಗಿ ನಡೆಯುತ್ತಿರುವ ಹೋರಾಟದಲ್ಲಿ ರಾಜಕೀಯ ಮಾಡಬೇಡಿ. ಲಿಂಗಾಯತ ತತ್ವ ಪಾಲನೆ ಮಾಡುವ ಜನರನ್ನು ಗ್ರಾ.ಪಂ.ಅಧ್ಯಕ್ಷ, ಎಂಎಲ್‍ಎ, ಎಂಪಿ ಸೇರಿದಂತೆ ಇನ್ನೀತರ ಜನಪ್ರತಿನಿಧಿಗಳನ್ನಾಗಿ ಅಂತಹ ವ್ಯಕ್ತಿಗಳನ್ನು ಆರಿಸಿ ತರಬೇಕೆಂದು ಕರೆ ನೀಡಿದರು. ಲಿಂಗಾಯತ ಮಠದ ವಿರಕ್ತ ಮಠಾಧೀಶರು ಬಸವ ತತ್ವ ಅಳವಡಿಸಿಕೊಳ್ಳಬೇಕು. ಆ ಮೂಲಕ ಸಮಾಜದಲ್ಲಿ ಧಾರ್ಮಿಕ, ಆಧ್ಯಾತ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಮಾಡಬೇಕು. ವೈದಿಕ ಪರಂಪರೆ ಬಿಟ್ಟು ವೈಚಾರಿಕತೆ ಬೆಳೆಸಿಕೊಳ್ಳಬೇಕೆಂದರು.
ಮಹಾರಾಷ್ಟ್ರ ಅಲ್ಲಮಗಿರಿ ಅಲ್ಲಮಪ್ರಭು ಯೋಗ ಪೀಠದ ಬಸವಕುಮಾರ ಸ್ವಾಮೀಜಿ ಮಾತನಾಡಿ, 12ನೇ ಶತಮಾನದಲ್ಲಿ ವಿಶ್ವಗುರು ಬಸವಣ್ಣನವರಿಂದ ಸ್ಥಾಪಿಸಲ್ಪಟ್ಟ ವಿನೂತನ, ವಿಶಿಷ್ಠ ಮತ್ತು ಅದ್ಭುತ ಪರಿಕಲ್ಪನೆಯ ಮಾನವ ಮಾತ್ರ ಯಾರಾದರೂ ಜಾತಿ, ಮತ, ಪಂಥ, ವರ್ಗ, ವರ್ಣ ಸ್ತ್ರೀ, ಪುರುಷರೆಂಬ ಭೇದಭಾವ ರಹಿತವಾಗಿ ದೇವಾಯತ ಲಿಂಗಾಯತರಾಗುವ, ಸದ್ಗುರುವಿನಿಂದ ದೀಕ್ಷೆ ಪಡೆದು ಸದಾಕಾಲ ಶರೀರದ ಮೇಲೆ ಇಷ್ಟಲಿಂಗವನ್ನು ಧರಿಸಿ ಈ ಒಂದೇ ಜನ್ಮದಲ್ಲಿ ಮುಕ್ತಿ ಪಡೆಯುವ, ಲಿಂಗಾಂಗ ಸಾಮರಸ್ಯ ಹೊಂದುವ ಸಂಕ್ಷಿಪ್ತ ಸರಳವಾದ ಧರ್ಮ ಲಿಂಗಾಯತ ಧರ್ಮವಾಗಿದೆ ಎಂದರು. ಚನ್ನಬಸವಣ್ಣನವರು ಗರ್ಭದಲ್ಲಿರುವಾಗಲೇ ಅಕ್ಕನಾಗಮ್ಮನಿಗೆ ಗರ್ಭಲಿಂಗಧಾರಣೆ ಹಮ್ಮಿಕೊಳ್ಳಲಾಗಿತ್ತು. ಮಾನವರಿಗೆ ಯಾರು ಸಹಾಯ-ಸಹಕಾರ ಮಾಡಿದಾಗ ಪ್ರತಿಯಾಗಿ ಧನ್ಯವಾದ ಹೇಳುವ ಪರಿಪಾಠವಿದ್ದದು ಸರಿ. ಆದರೆ ನಮಗೆ ಬದುಕಲು ಭೂಮಿ, ನೀರು, ಗಾಳಿ, ಬೆಂಕಿ, ಆಕಾಶವೆಂಬ ಪಂಚಭೂತಗಳನ್ನು, ಈ ಸುಂದರ ಜಗತ್ತನ್ನು ಹಾಗೂ ಯಾವ ವಿಜ್ಞಾನಿ, ತಂತ್ರಜ್ಞಾನಿ ಮಾಡಲಾಗದ ಅತೀ ಶ್ರೇಷ್ಠವಾದ ಮಾನವ ಶರೀರವನ್ನು ಕೊಟ್ಟ ಮಹಾದಾತ-ಮಹಾದಾನಿ ಪರಮಾತ್ಮನಿಗೆ ಕೃತಜ್ಞತೆ ಸಲ್ಲಿಸುವುದೇ ಇಷ್ಟಲಿಂಗ ಪೂಜೆ, ಪ್ರಾರ್ಥನೆ, ಧ್ಯಾನ ಎಂದರು. ಇಂತಹ ಅಪರೂಪದ ಇಷ್ಟಲಿಂಗ ಪೂಜೆಯನ್ನು ವಿಶ್ವ ಕಲ್ಯಾಣಕ್ಕಾಗಿ ಹಾಗೂ ಲಿಂಗಾಯತಕ್ಕೆ ಧರ್ಮ ಮಾನ್ಯತೆ ಹಾಗೂ ಧಾರ್ಮಿಕ ಅಲ್ಪಸಂಖ್ಯಾತ ಮೀಸಲು ಸೌಲಭ್ಯವನ್ನು ಕೇಂದ್ರ ಸರಕಾರದಿಂದ ದೊರಕಿಸಿಕೊಳ್ಳಲು ಸಂಕಲ್ಪ ಮಾಡಿಕೊಂಡು ಇಷ್ಟಲಿಂಗ ಪೂಜೆ ಮಾಡಿದ್ದಾಗಿ ತಿಳಿಸಿದರು. ಬೆಳಗಾವಿಯ ಬಸವಪ್ರಭು ಸ್ವಾಮೀಜಿ ಸಾನಿಧ್ಯವಹಿಸಿದ್ದರು. ಲಿಂಗಾಯತ ಧರ್ಮ ಮಹಾಸಭಾ ರಾಜ್ಯ ಉಪಾಧ್ಯಕ್ಷ ಕೆ.ಬಸವರಾಜ ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೇ ವೇಳೆ ಪ್ರಾರ್ಥನೆ, ಬಸವ ಧ್ವಜಾರೋಹಣ, ಲಿಂಗ ಪೂಜೆ, ವೈಜ್ಞಾನಿಕ ಪ್ರಾತ್ಯಕ್ಷಿಕೆ, ಗರ್ಭಲಿಂಗ ಧಾರಣೆ ನಡೆಯಿತು. 100ಕ್ಕೂ ಹೆಚ್ಚು ಜನರಿಗೆ ಲಿಂಗದೀಕ್ಷೆ ನೀಡಲಾಯಿತು. ಪಂಚಮಸಾಲಿ ಲಿಂಗಾಯತ ಸಮಾಜದ ತಾಲೂಕಾಧ್ಯಕ್ಷ ಶ್ರೀಶೈಲ ಬೋಳಣ್ಣವರ, ಪುರಸಭೆ ಅಧ್ಯಕ್ಷ ರಾಜಶೇಖರ ಮೂಗಿ, ಸದಸ್ಯ ರಾಜು ಜನ್ಮಟ್ಟಿ, ಜಿ.ಪಂ.ಸದಸ್ಯೆ ರೋಹಿಣಿ ಪಾಟೀಲ, ರಾಷ್ಟ್ರೀಯ ಬಸವದಳ ತಾಲೂಕಾಧ್ಯಕ್ಷೆ ವಿಜಯಲಕ್ಷ್ಮೀ ತೋಟಗಿ, ಮಹಾಂತೇಶ ಮತ್ತಿಕೊಪ್ಪ, ಉದ್ಯಮಿ ವಿಜಯ ಮೆಟಗುಡ್ಡ, ಮಹೇಶ ಕೋಟಗಿ, ಚಂದ್ರಶೇಖರ ಕೊಪ್ಪದ, ಶ್ರೀಶೈಲ ಶರಣಪ್ಪನವರ, ಚನ್ನಬಸವ್ವ ಬಿಜಲಿ, ಕಲ್ಯಾಣಪ್ಪ ಪರಮಾದಿ, ಮಹಾಂತೇಶ ತೋರಣಗಟ್ಟಿ, ಬಸವರಾಜ ಜಿಗಜಿನ್ನಿ, ಎಂ.ಎಂ.ಸಂಗೊಳ್ಳಿ, ಅನ್ನಪೂರ್ಣಾ ಹಿರಲಿಂಗಣ್ಣವರ, ಬಸವಣೆಮ್ಮ ಶಿರಣ್ಣವರ, ಶಿವಾನಂದ ಮಾಳಗಿ, ಶ್ರೀಶೈಲ ಆಲದಕಟ್ಟಿ, ಈರಣ್ಣಾ ಸಣ್ಣಮನಿ, ನಿಂಗಪ್ಪಾ ಬೂದಿಹಾಳ, ಶಂಕರ ಚೀಲದ ಉಪಸ್ಥಿತರಿದ್ದರು. ಸಂಚಾರಿ ಬಸವ ಬಳಗದಿಂದ ಸಂಗೀತ ಸೇವೆ ನಡೆಯಿತು. ಸುಧೀರ ವಾಲಿ ಸ್ವಾಗತಿಸಿದರು. ವೀರೇಶ ಹಲಕಿ ನಿರೂಪಿಸಿದರು.
ಲಿಂಗ ಪೂಜೆಯಲ್ಲಿ 5 ನಿರ್ಣಯಗಳ ಮಂಡನೆ:
* ಲಿಂಗಾಯತರ ಎಲ್ಲ ಧಾರ್ಮಿಕ ಕಾರ್ಯಗಳನ್ನು ಬಸವ ತತ್ವ ಪ್ರಕಾರ ನಡೆಸುವಂತೆ ಒತ್ತಾಯ.
* ಬಸವಣ್ಣನವರೇ ಧರ್ಮಗುರು, ವಚನ ಸಾಹಿತ್ಯವೇ ಧರ್ಮಗ್ರಂಥ.
* ಲಿಂಗಾಯತರು ತಪ್ಪದೇ ವಾರಕ್ಕೊಮ್ಮೆ ಸಾಮೂಹಿಕ ಪ್ರಾರ್ಥನೆಯಲ್ಲಿ ಕಡ್ಡಾಯವಾಗಿ ಪಾಲ್ಗೊಳ್ಳಲಿ.
* ಮೂಡಾಚರಣೆ, ಮೂಡನಂಬಿಕೆಯನ್ನು ಒತ್ತಾಯವಾಗಿ ಹೇರುತ್ತಿರುವುದನ್ನು ಲಿಂಗಾಯತರು ವಿರೋಧಿಸಬೇಕು.
* ಬಸವ ಜಯಂತಿಯನ್ನು ಹಳ್ಳಿ ಮತ್ತು ಪಟ್ಟಣಗಳಲ್ಲಿ ಅರ್ಥಪೂರ್ಣವಾಗಿ ಆಚರಿಸುವಂತೆ ಮನವಿ.