ಗೋಕಾಕ:ಕೆಎಲ್‍ಇ ಸಂಸ್ಥೆ ಆರೋಗ್ಯವಂತ ಸಮಾಜ ನಿರ್ಮಿಸಲು ಶ್ರಮಿಸುತ್ತಿದೆ : ಡಾ|| ಅರವಿಂದ ತೇನಗಿ
ಕೆಎಲ್‍ಇ ಸಂಸ್ಥೆ ಆರೋಗ್ಯವಂತ ಸಮಾಜ ನಿರ್ಮಿಸಲು ಶ್ರಮಿಸುತ್ತಿದೆ : ಡಾ|| ಅರವಿಂದ ತೇನಗಿ
ಗೋಕಾಕ ಅ 1 : ಕೆಎಲ್‍ಇ ಸಂಸ್ಥೆ ಆರೋಗ್ಯ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಸಮಾಜಕ್ಕೆ ವಿಶಿಷ್ಠ ಕೊಡುಗೆ ನೀಡುತ್ತಾ ಆರೋಗ್ಯವಂತ ಸಮಾಜ ನಿರ್ಮಿಸಲು ಶ್ರಮಿಸುತ್ತಿದೆ ಎಂದು ಕೆಎಲ್‍ಇ ಆಸ್ಪತ್ರೆಯ ನೇತ್ರತಜ್ಞ ಡಾ|| ಅರವಿಂದ ತೇನಗಿ ಹೇಳಿದರು.
ಬುಧವಾರದಂದು ನಗರದ ಕೆಎಲ್‍ಇ ಆಸ್ಪತ್ರೆಯಲ್ಲಿ ಕೆಎಲ್‍ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ|| ಪ್ರಭಾಕರ ಕೋರೆ ಅವರ ಹುಟ್ಟು ಹಬ್ಬದ ನಿಮಿತ್ಯ ಕೆಎಲ್‍ಇ ಸಂಸ್ಥೆಗಳು ಹಮ್ಮಿಕೊಂಡ ಉಚಿತ ನೇತ್ರ ತಪಾಸಣಾ ಹಾಗೂ ಮೋತಿ ಬಿಂದು ಶಸ್ತ್ರಚಿಕಿತ್ಸಾ ಶಿಬಿರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಬೆಳಗಾವಿಯ ಕೆಎಲ್‍ಇ ಆಸ್ಪತ್ರೆಯಲ್ಲಿ ಬಡವರಿಗೆ ವಿವಿಧ ಚಿಕಿತ್ಸೆಗಳನ್ನು ಉಚಿತವಾಗಿ ನೀಡಲು 1100 ಬೆಡ್‍ಗಳ ವ್ಯವಸ್ಥೆ ಕಲ್ಪಿಸಿದ್ದು ಜನತೆ ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರಲ್ಲದೇ ಈ ಶಿಬಿರದಲ್ಲಿ ನೇತ್ರ ತಪಾಸಣೆಯೊಂದಿಗೆ ಉಚಿತ ಲೆನ್ಸ್, ಶಸ್ತ್ರ ಚಿಕಿತ್ಸೆ ಹಾಗೂ ಔಷಧಗಳನ್ನು ನೀಡಲಾಗುವುದು. ಮುಂಬರುವ ದಿನಗಳಲ್ಲಿ ಗೋಕಾಕ ನಗರದಲ್ಲಿ ದಿನದ 24 ಗಂಟೆಗಳ ಕಾಲ ನೇತ್ರ ಚಿಕಿತ್ಸಾ ಘಟಕವನ್ನು ಪ್ರಾರಂಭಿಸಲಾಗುವುದೆಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ನಗರ ಸಭೆಯ ಹಿರಿಯ ಸದಸ್ಯ ಎಸ್.ಎ.ಕೋತವಾಲ ಮಾತನಾಡಿ, ಕೆಎಲ್‍ಇ ಸಂಸ್ಥೆ ದೇಶದಲ್ಲಿ ಅತ್ಯುತ್ತಮ ಹಾಗೂ ಅತಿ ದೊಡ್ಡ ಸಂಸ್ಥೆಯಾಗಿ, ದೇಶ ವಿದೇಶಗಳಲ್ಲಿ ಪ್ರಖ್ಯಾತಿ ಹೊಂದಿ, ಸಮಾಜಕ್ಕೆ ಅದ್ಭುತ ಕೊಡುಗೆಯನ್ನು ನೀಡುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕೆಎಲ್‍ಇ ನಿರ್ದೇಶಕ ಜಯಾನಂದ ಮುನವಳ್ಳಿ ಮಾತನಾಡಿ, ಡಾ|| ಪ್ರಭಾಕರ ಕೋರೆ ಅವರ ಜನ್ಮ ದಿನದ ನಿಮಿತ್ಯವಾಗಿ ನೇತ್ರ ಪ್ರಭಾ ಯೋಜನೆಯನ್ನು ಪ್ರಾರಂಭಿಸಲಾಗಿದ್ದು, ಇಡೀ ಒಂದು ವರ್ಷಗಳ ಕಾಲ ಶಿಬಿರದ ಮೂಲಕ ಮೂಡಲಗಿ ಹಾಗೂ ಗೋಕಾಕ ತಾಲೂಕಿನ 1000 ಜನರಿಗೆ ಉಚಿತ ನೇತ್ರ ಚಿಕಿತ್ಸೆ ನೀಡಲಾಗುವುದು. ಈ ಶಿಬಿರದಲ್ಲಿ 494 ಜನ ನೊಂದಣಿ ಮಾಡಿದ್ದು ಅವರ ನೇತ್ರಗಳನ್ನು ತಪಾಸಿಸಿ ಚಿಕಿತ್ಸೆ ನೀಡಲಾಗುವುದು. ಶಸ್ತ್ರ ಚಿಕಿತ್ಸೆಯ ಅವಶ್ಯಕತೆ ಇರುವವರನ್ನು ಬೆಳಗಾವಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಮಾಡಲಾಗುವುದು ಎಂದು ತಿಳಿಸಿದರು.
ವೇದಿಕೆ ಮೇಲೆ ಇಲ್ಲಿಯ ಜಿಲ್ಲಾ ನ್ಯಾಯಾಧೀಶರಾದ ಮೀನಾಕ್ಷಿ ಬಾನಿ, ಲಯನ್ಸ್ ಸಂಸ್ಥೆಯ ಜಿ.ಎಸ್,ಸಿದ್ದಾಪೂರಮಠ, ನ್ಯಾಯವಾದಿ ಆಯ್.ಎಮ್.ಪಾಟೀಲ, ನೇತ್ರ ತಜ್ಞರಾದ ಡಾ|| ಎಸ್.ಬಿ.ಪಾಟೀಲ, ಡಾ|| ವಿವೇಕ ವಾಣಿ ಇದ್ದರು.
ಸ್ಥಳೀಯ ಕೆಎಲ್‍ಇ ಆಸ್ಪತೆಯ ಡಾ|| ಡಿ.ಜಿ.ಚೌಗಲಾ ಸ್ವಾಗತಿಸಿದರು, ಉಪನ್ಯಾಸಕಿ ಹೇಮಾ ಹಿರೇಮಠ ನಿರೂಪಿಸಿದರು, ಪ್ರಾಚಾರ್ಯ ಎಮ್.ಎ.ಪಾಟೀಲ ವಂದಿಸಿದರು.