ಬೆಳಗಾವಿ:ಸಿದ್ದರಾಮಯ್ಯ ಸರಕಾರದಲ್ಲಿ ಶಾಸಕರ ಭತ್ಯೆಗೆ ಖರ್ಚಾಗಿದ್ದು 235.95 ಕೋಟಿ : ಭೀಮಪ್ಪ ಗಡಾದ ಮಾಹಿತಿ
ಸಿದ್ದರಾಮಯ್ಯ ಸರಕಾರದಲ್ಲಿ ಶಾಸಕರ ಭತ್ಯೆಗೆ ಖರ್ಚಾಗಿದ್ದು 235.95 ಕೋಟಿ : ಭೀಮಪ್ಪ ಗಡಾದ ಮಾಹಿತಿ
ಬೆಳಗಾವಿ ಅ 7 : ಸಿದ್ದರಾಮಯ್ಯ ನೇತೃತ್ವದ ಸರಕಾರದ ಐದು ವರ್ಷ ಆಡಳಿತ ಅವಧಿಯಲ್ಲಿ ಶಾಸಕರು ಮತ್ತು ಪರಿಷತ್ ಸದಸ್ಯರಿಗೆ ವೇತಪ ಮತ್ತು ಭತ್ಯೆ ಹೆಸರಿನಲ್ಲಿ ಸುಮಾರು 235.95 ಕೋಟಿ ರೂ ವೆಚ್ಚವಾಗಿರುವ ಮಾಹಿತಿಯನ್ನು ಇಂದು ಬೆಳಗಾವಿಯಲ್ಲಿ ಆರ್.ಟಿ ಐ ಕಾರ್ಯಕರ್ತ ಭೀಮಪ್ಪ ಗಡಾದ ಬಹಿರಂಗ ಪಡಿಸಿದ್ದಾರೆ
ಐದು ವರ್ಷದ ಅವಧಿಯಲ್ಲಿ ಶಾಸಕರ ವೇತನ, ಪ್ರಯಾಣ ಭತ್ಯೆ, ವಿದೇಶಿ ಪ್ರವಾಸ, ವೈದ್ಯಕೀಯ ವೆಚ್ಚ ಹಾಗೂ ರೈಲ್ವೆ ಪ್ರಯಾಣಕ್ಕೆ 203.17 ಕೋಟಿ ಹಾಗೂ ಪರಿಷತ್ ಸದಸ್ಯರಿಗೆ 32.78 ಕೋಟಿ ರೂ. ವೆಚ್ಚ ಮಾಡಿರುವ ಮಾಹಿತಿ ಆರ್ಟಿಐನಿಂದ ತಿಳಿದುಬಂದಿದೆ.
ಸಚಿವಾಲಯ ಅಧಿಕಾರಿಗಳು ನೀಡಿರುವ ಅಧಿಕೃತ ಮಾಹಿತಿ ಪ್ರಕಾರ ಐದು ವರ್ಷದ ಅವಧಿಯಲ್ಲಿ ಶಾಸಕರ ವೇತನ, ಇತರ ಭತ್ಯೆಗೆ 90.24 ಕೋಟಿ, ವಸತಿಗೆ 63.68 ಲಕ್ಷ, ವಿದೇಶ ಪ್ರವಾಸ, ರೈಲ್ವೆ, ಅಧಿವೇಶನ ಭತ್ಯೆಗೆ 106.43 ಕೋಟಿ, ವೈದ್ಯಕೀಯ ವೆಚ್ಚಕ್ಕೆ 5.86 ಕೋಟಿ ವೆಚ್ಚ ಮಾಡಲಾಗಿದೆ. ವಿಧಾನ ಪರಿಷತ್ ಸದಸ್ಯರ ವೇತನ, ದೂರವಾಣಿ, ಕ್ಷೇತ್ರ ಮತ್ತು ಅಂಚೆ ಭತ್ಯೆಗೆ 28.63 ಕೋಟಿ, ವೈದ್ಯಕೀಯಕ್ಕೆ 3.22 ಕೋಟಿ ರೂ. ವೆಚ್ಚ ಮಾಡಲಾಗಿದೆ ಎಂಬ ಮಾಹಿತಿ ಸಿಕ್ಕಿದೆ.
ತಿಂಗಳಿಗೆ ಶಾಸಕರ ವೆಚ್ಚ ಎಷ್ಟು ಗೊತ್ತಾ?: ಶಾಸಕರ ಪ್ರತಿ ತಿಂಗಳ ವೆಚ್ಚ ಬರೋಬ್ಬರಿ 2 ಲಕ್ಷ ರೂ.! ವೇತನ- 25000, ದೂರವಾಣಿ- 20,000, ಕ್ಷೇತ್ರ ಭತ್ಯೆ- 40,000, ಅಂಚೆ ವೆಚ್ಚ- 5000, ಆಪ್ತ ಸಹಾಯಕರ ಕೊಠಡಿ ಸೇವಕರ ಭತ್ಯೆ 10,000 ಸೇರಿ ಮಾಸಿಕ ಸಂಬಳ 1 ಲಕ್ಷ ರೂ. ದೊರೆಯುತ್ತದೆ. ಇನ್ನು ಪ್ರಯಾಣ ಭತ್ಯೆ- ಪ್ರತಿ ಕಿಮೀಗೆ 25 ರೂ, ರಾಜ್ಯ ಪ್ರವಾಸದ ದಿನಭತ್ಯೆ 2000 ರೂ, ಹೊರ ರಾಜ್ಯದ ಪ್ರವಾಸ 2500ರೂ, ಹೋಟೆಲ್ ವಾಸ್ತವ್ಯಕ್ಕೆ 5000 ಹಾಗೂ ಸ್ಥಳೀಯ ಸಾರಿಗೆಯಲ್ಲಿ ರಾಜ್ಯ ಪ್ರವಾಸಕ್ಕೆ 1500 ವೆಚ್ಚ ಮಾಡಲಾಗುತ್ತಿದೆ. ಇದಕ್ಕೆ ಮಿತಿ ಇಲ್ಲ ಎಂಬುದು ಗಮನಾರ್ಹ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಭೀಮಪ್ಪ ಗಡಾದ, ಶಾಸಕರ ಭತ್ಯೆಯ ಹೆಸರಲ್ಲಿ ತೆರಿಗೆ ಹಣ ಪೋಲಾಗುತ್ತಿದೆ. ಸಭಾಧ್ಯಕ್ಷರು ಇದರ ನಿಯಂತ್ರಣಕ್ಕೆ ಕ್ರಮ ವಹಿಸಬೇಕು. ಇಲ್ಲವಾದರೆ ಶಾಸಕರ ವಿರುದ್ಧ ಜನರೇ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.