RNI NO. KARKAN/2006/27779|Friday, November 22, 2024
You are here: Home » breaking news » ಮೂಡಲಗಿ:ಸ್ವಚ್ಛ ಪರಿಸರದಿಂದ ಆರೋಗ್ಯಯುತ ಜೀವನ ನಡೆಸಲು ಸಾಧ್ಯ; ಸುಧೀರ ನಾಯರ್

ಮೂಡಲಗಿ:ಸ್ವಚ್ಛ ಪರಿಸರದಿಂದ ಆರೋಗ್ಯಯುತ ಜೀವನ ನಡೆಸಲು ಸಾಧ್ಯ; ಸುಧೀರ ನಾಯರ್ 

ಸ್ವಚ್ಛ ಪರಿಸರದಿಂದ ಆರೋಗ್ಯಯುತ ಜೀವನ ನಡೆಸಲು ಸಾಧ್ಯ; ಸುಧೀರ ನಾಯರ್

ಮೂಡಲಗಿ ಅ 10 : ನಮ್ಮ ಸುತ್ತಮುತ್ತಲಿನಲ್ಲಿ ಪರಿಶುದ್ದ ವಾತವರಣ ನಿರ್ಮಿಸಿಕೊಳ್ಳುವುದು ನಮ್ಮ ಆದ್ಯ ಕರ್ತವ್ಯವಾಗಿದೆ. ನಾವು ಸ್ವಚ್ಛತೆಗೆ ಆದ್ಯತೆ ನೀಡಿದಲ್ಲಿ ನಮ್ಮ ಆರೋಗ್ಯಕ್ಕೆ ಪ್ರಾಶಸ್ತ್ಯ ಕೊಟ್ಟಂತಾಗುತ್ತದೆ. ಸ್ವಚ್ಛ ಪರಿಸರದಿಂದ ಆರೋಗ್ಯಯುತ ಜೀವನ ನಡೆಸಲು ಸಾಧ್ಯ ಎಂದು ಗಾರ್ಡನ್ ಅಭಿವೃದ್ದಿ ಸಂಸ್ಥೆಯ ಅಧ್ಯಕ್ಷ ಸುಧೀರ ನಾಯರ್ ಹೇಳಿದರು.
ಅವರು ಪಟ್ಟಣದ ದುರ್ಗದೇವಿ ನಗರದಲ್ಲಿರುವ ದುರ್ಗದೇವಿ ಗುಡಿಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಹಾಗೂ ಪ್ರಗತಿ ಬಂಧು ಸ್ವ_ಸಹಾಯ ಸಂಘಗಳ ಆಶ್ರಯದಲ್ಲಿ ಹಮ್ಮಿಕೊಂಡ “ನಮ್ಮ ಊರು ನಮ್ಮ ಶ್ರದ್ದಾ ಕೇಂದ್ರ” ಎಂಬ ಶುಚಿತ್ವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಭಕ್ತರು ಧಾರ್ಮಿಕ ನಂಬಿಕೆ, ನೆಮ್ಮದಿಯನ್ನು ಕಂಡುಕೊಳ್ಳಲೂ ದೇವಾಸ್ಥಾನಗಳಿಗೆ ಬರುವಾಗ ಅಲ್ಲಿ ಸ್ವಚ್ಛತೆ ಕಾಪಾಡುವುದು ಪ್ರತಿಯೊಬ್ಬ ಪ್ರಜೆಯ ಕರ್ತವ್ಯವಾಗಿದೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯವರ ಜೊತೆಗೆ ಸ್ಥಳೀಯ ಸಂಘ ಸಂಸ್ಥೆಗಳು, ಸಾರ್ವಜನಿಕರು ಭಾಗಿಯಾಗಿ ಎಲ್ಲ ಸಮುದಾಯದ ದೇವಸ್ಥಾನ, ಧಾರ್ಮಿಕ ಕೇಂದ್ರಗಳ ಜೊತೆಗೆ ನಮ್ಮ ಸುತ್ತಮುತ್ತಲಿನ ವಾತವರಣದ ಸ್ವಚ್ಛತೆಗೆ ಮುಂದಾಗಬೇಕು. ಇಂತಹ ಕಾರ್ಯಕ್ರಮಗಳೂ ಕೇವಲ ಒಂದು ದಿನಕ್ಕೆ ಸೀಮಿತವಾಗದೇ ನಿರಂತರವಾಗಿ ನಡೆದಲ್ಲಿ ಸ್ವಚ್ಚ ಭಾರತ ಕನಸು ನನಸಾಗುವುದರಲ್ಲಿ ಸಂಶಯವಿಲ್ಲ ಎಂದರು.
ಶ್ರೀ ಧರ್ಮಸ್ಥಳ ಗ್ರಾಮಭಿವೃದ್ದಿ ಯೋಜನೆಯ ಯೋಜನಾಧಿಕಾರಿ ದೇವರಾಜ್ ಮಾತನಾಡಿ, ಶ್ರೀ ಧರ್ಮಸ್ಥಳ ಕ್ಷೇತ್ರವೂ ದೇಶದಲ್ಲೆ ಅತ್ಯುನ್ನತ ಸ್ವಚ್ಛ ಧಾರ್ಮಿಕ ನಗರಿ ಎಂಬ ಪ್ರಶಸ್ತಿಗೆ ಭಾಜನವಾದ ಹಿನ್ನಲೆಯಲ್ಲಿ ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆಯವರ ಮಾರ್ಗ ದರ್ಶನದಂತೆ ರಾಜ್ಯದ ಎಲ್ಲ ಶ್ರದ್ದಾ ಕೇಂದ್ರಗಳು ಸ್ವಚ್ಛವಾಗಿರಬೇಕೆನ್ನುವ ಉದ್ದೇಶದಿಂದ “ನಮ್ಮ ಊರು ನಮ್ಮ ಶ್ರದ್ದಾ ಕೇಂದ್ರ ಎಂಬ ಮಹತ್ವದ ಯೋಜನೆ ಹಮ್ಮಿಕೊಂಡಿದ್ದಾರೆ. ಶ್ರದ್ದಾ ಕೇಂದ್ರ ಸ್ವಚ್ಛತಾ ಕಾರ್ಯಕ್ರಮಕ್ಕೆ ಗ್ರಾಮಮಟ್ಟದಲ್ಲಿ ಸಮಿತಿ ರಚನೆ ಮಾಡಲಾಗಿದ್ದು ಈಗಾಗಲೇ ನಲ್ಲಾನಟ್ಟಿ, ರಾಜಾಪೂರ, ನಾಗನೂರು, ಕುಲಗೋಡ, ಕೌಜಲಗಿ ಹಾಗೂ ಮೂಡಲಗಿ ವಲಯ ಸೇರಿದಂತೆ 58ಕಡೆಗಳಲ್ಲಿ ಆ.15ವರಗೆ ಯೋಜನೆಯ ಪ್ರಗತಿ ಬಂಧು ಸ್ವ_ಸಹಾಯ ಸಂಘಗಳ ಸದಸ್ಯರೊಂದಿಗೆ ಎಲ್ಲ ದೇವಾಲಯಗಳನ್ನು ಸ್ವಚ್ಛಗೊಳಿಸಲಾಗುವುದು ಎಂದರು.
ಪುರಸಭೆ ಸದಸ್ಯೆ ಭೀಮವ್ವ ಪೂಜೇರಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆಯವರು ಧಾರ್ಮಿಕ ಕೇಂದ್ರಗಳ ಸ್ವಚ್ಛತೆಗೆ ಆದ್ಯತೆ ನೀಡಿರುವುದು ಉತ್ತಮ ಬೆಳವಣಿಗೆಯಾಗಿದೆ. ನಾವೆಲ್ಲರೂ ಈ ಕಾರ್ಯದಲ್ಲಿ ಕೈಜೋಡಿಸಿ ಈ ಯೋಜನೆಯನ್ನು ಯಶಸ್ವಿಗೊಳಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ರಾಜು ಪೂಜೇರಿ, ಮೇಲ್ವಿಚಾರಕ ಎಂ.ಕಲ್ಮೇಶ, ಸೇವ ಪ್ರತಿನಿಧಿ ಪ್ರಿಯಾಂಕ ಹಾಗೂ ಪ್ರಗತಿ ಬಂಧು ಸ್ವ_ಸಹಾಯ ಸಂಘಗಳ ಸದಸ್ಯರು ಭಾಗಿಯಾಗಿದ್ದರು.
ಮೇಲ್ವಿಚಾರಕ ಎಂ.ಕಲ್ಮೇಶ ನಿರೂಪಿಸಿ. ಸ್ವಾಗತಿಸಿದರು. ಸೇವ ಪ್ರತಿನಿಧಿ ಸವಿತಾ ವಂದಿಸಿದರು.

Related posts: