RNI NO. KARKAN/2006/27779|Saturday, October 19, 2024
You are here: Home » breaking news » ಬೆಳಗಾವಿ:ಆನಂದ ಅಪ್ಪುಗೋಳ ವಿರುದ್ಧ ಮತ್ತೊಂದು ವಂಚನೆ ಪ್ರಕರಣ

ಬೆಳಗಾವಿ:ಆನಂದ ಅಪ್ಪುಗೋಳ ವಿರುದ್ಧ ಮತ್ತೊಂದು ವಂಚನೆ ಪ್ರಕರಣ 

ಆನಂದ ಅಪ್ಪುಗೋಳ ವಿರುದ್ಧ ಮತ್ತೊಂದು ವಂಚನೆ ಪ್ರಕರಣ

ಬೆಳಗಾವಿ ಅ 30 : ಇಲ್ಲಿಯ ಸಂಗೊಳ್ಳಿ ರಾಯಣ್ಣ ಸೊಸೈಟಿಯ ಅಧ್ಯಕ್ಷ ಹಾಗೂ ಚಿತ್ರ ನಿರ್ಮಾಪಕ ಆನಂದ ಅಪ್ಪುಗೋಳ ವಿರುದ್ಧ ಮತ್ತೊಂದು ವಂಚನೆ ಪ್ರಕರಣ ಕೇಳಿ ಬಂದಿದೆ

ಬೆಳಗಾವಿ ಜಿಲ್ಲೆ ಹಾಗೂ ಉತ್ತರ ಕರ್ನಾಟಕ ಭಾಗದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸೊಸೈಟಿ ನಡೆಸಲು ಕಟ್ಟಡ ಬಾಡಿಗೆ ಕೊಟ್ಟ ಮಾಲೀಕರಿಗೆ ಕಳೆದ ಒಂದೂವರೆ ವರ್ಷದಿಂದ ಬಾಡಿಗೆ ಹಣ ನೀಡದೇ ವಂಚಿಸಿದ ಆರೋಪಕ್ಕೆ ಆನಂದ ಅಪ್ಪುಗೋಳ ಗುರಿಯಾಗಿದ್ದಾರೆ. ಸುಮಾರು 50ಕ್ಕೂ ಅಧಿಕ ಶಾಖೆಗಳ ಕಚೇರಿಗಳ ಬಾಡಿಗೆ ಸಂದಾಯ ಮಾಡಲಾಗಿಲ್ಲ. ಸಾಲ ಪಡೆದು ಲಕ್ಷಾಂತರ ರೂ. ವೆಚ್ಚ ಮಾಡಿ ಕಟ್ಟಿದ ಕಟ್ಟಡಕ್ಕೆ ಬಾಡಿಗೆ ಬರದೇ ಕಂಗಾಲಾಗಿರುವ ಮಾಲೀಕರು ಇದೀಗ ಕೋರ್ಟ್ ಮೊರೆ ಹೋಗಿದ್ದಾರೆ.

ಕಟ್ಟಡ ಸೀಜ್​ ಮಾಡಿದ ಪೊಲೀಸರು!

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸೊಸೈಟಿಯ ಬಹುಕೋಟಿ ಠೇವಣಿ ವಂಚನೆ ಪ್ರಕರಣ ಸಂಬಂಧ ಅಪ್ಪುಗೋಳ ಒಡೆತನದ ಎಲ್ಲ ಸೊಸೈಟಿಗಳನ್ನು ಪೊಲೀಸರು ಸೀಜ್​ ಮಾಡಿದ್ದಾರೆ. ಕಳೆದ ಒಂದು ವರ್ಷದಿಂದ ಸೊಸೈಟಿಗಳ ಕಚೇರಿಗೆ ಬೀಗ ಜಡಿಯಲಾಗಿದೆ. ಸೊಸೈಟಿ ನಡೆಸಲು ಸಹಕಾರ ನಿಬಂಧಕರು ನೀಡಿದ ಅನುಮತಿ ಪತ್ರದ ಆಧಾರದ ಮೇಲೆ ಈ ಎಲ್ಲ ಮಾಲೀಕರು ಕಟ್ಟಡ ಬಾಡಿಗೆ ನೀಡಿದ್ದಾರೆ. ಸೊಸೈಟಿಯಲ್ಲಿನ ಪಿಠೋಪಕರಣ, ಪ್ರಮುಖ ದಾಖಲೆಗಳನ್ನು ವಶಪಡಿಸಿಕೊಳ್ಳುವ ಜತೆಗೆ ಕಚೇರಿಗಳಿಗೂ ಬೀಗ ಜಡಿಯಲಾಗಿದೆ. ಕಟ್ಟಡಗಳಿಗೆ ಬೀಗ ಹಾಕಿರುವ ಕಾರಣ ಇತ್ತ ಬಾಡಿಗೆ ಹಣವೂ ಮಾಲೀಕರಿಗೆ ಬರುತ್ತಿಲ್ಲ ಹಾಗೂ ಮತ್ತೊಬ್ಬರಿಗೂ ಬಾಡಿಗೆ ಕೊಡಲೂ ಅವಕಾಶ ದೊರಕಿಸಿಕೊಡಲಾಗುತ್ತಿಲ್ಲ. ಪೊಲೀಸರ ಈ ಕ್ರಮ ಕಟ್ಟಡ ಮಾಲೀಕರ ಆಕ್ರೋಶಕ್ಕೆ ಕಾರಣವಾಗಿದೆ.

ಮಾಲೀಕರಿಗೂ ಕೋಟ್ಯಂತರ ರೂಪಾಯಿ ವಂಚನೆ

ಹೆಚ್ಚಿನ ಬಡ್ಡಿ ಆಮೀಷವೊಡ್ಡಿ ಆನಂದ ಅಪ್ಪುಗೋಳ ಅವರು ಸಾವಿರಾರು ಗ್ರಾಹಕರಿಂದ ತಮ್ಮ ಸೊಸೈಟಿಯಲ್ಲಿ ಇರಿಸಿಕೊಂಡಿದ್ದ ಠೇವಣಿ ಹಣ ಗ್ರಾಹಕರಿಗೆ ಮರಳಿಸದೇ ದುರುಪಯೋಗ ಪಡಿಸಿಕೊಂಡಿರುವುದು ಲೆಕ್ಕಪರಿಶೋಧಕರು ನೀಡಿದ ವರದಿಯಲ್ಲಿ ಬೆಳಕಿಗೆ ಬಂದಿದೆ. ಗ್ರಾಹಕರಿಗೆ ಠೇವಣಿ ಹಣ ನೀಡದೇ ವಂಚಿಸಿರುವ ಆರೋಪ ಎದುರಿಸುತ್ತಿರುವ ಆನಂದ ಅಪ್ಪುಗೋಳ ಅವರು ಇದೀಗ ಕಟ್ಟಡ ಮಾಲೀಕರಿಗೆ ಬಾಡಿಗೆ ಹಣ ನೀಡದೇ ಕೋಟ್ಯಂತರ ರೂ. ವಂಚಿಸಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಮಾಲೀಕರಾದ ಅಕ್ಬರಸಾಬ್ ಪಾಶ್ಚಾಪುರಿ ಸೇರಿದಂತೆ ನಾಲ್ಕು ಜನ ಕಟ್ಟಡ ಮಾಲೀಕರು ಕೋರ್ಟ್ ಮೊರೆ ಹೋಗಿದ್ದಾರೆ. ಉಳಿದ ಮಾಲೀಕರು ಕೂಡ ಕೋರ್ಟ್ ಮೆಟ್ಟಿಲೇರಲು ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ.

ಈ ಕುರಿತು ‘ಈನಾಡು ಇಂಡಿಯಾ’ ಜತೆಗೆ ಮಾತನಾಡಿದ ಸರ್ಕಾರಿ ಸಹಾಯಕ ಅಭಿಯೋಜಕ ಮಹಾಂತೇಶ ಚಳಕೊಪ್ಪ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸೊಸೈಟಿಯ ಶಾಖೆಗಳನ್ನು ನಡೆಸಲು ಉತ್ತರ ಕರ್ನಾಟಕ ಭಾಗದಲ್ಲಿ ಆನಂದ ಅಪ್ಪುಗೋಳ ಅವರು ಬಾಡಿಗೆ ರೂಪದಲ್ಲಿ ಕಟ್ಟಡ ಪಡೆದಿದ್ದರು. ವಂಚನೆ ಪ್ರಕರಣ ಬೆಳಕಿಗೆ ಬರುತ್ತದ್ದಂತೆ ದಾಖಲೆಗಳ ಜತೆಗೆ ತನಿಖಾಧಿಕಾರಿಗಳು ಕಟ್ಟಡಗಳಿಗೂ ಬೀಗ ಜಡಿದಿದ್ದಾರೆ. ಈ ಕುರಿತು ಮಾಲೀಕರು ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದು, ವಿಚಾರಣೆ ಹಂತದಲ್ಲಿದೆ. ಇದರಲ್ಲೆ ವಂಚನೆ ಪ್ರಕರಣ ನಡೆದ ಹಿನ್ನೆಲೆಯಲ್ಲಿ ಮಾಲೀಕರಿಗೆ ಬಾಡಿಗೆ ಮಳಿಗೆ ಬಿಡುಗಡೆಗೊಳಿಸದಂತೆ ತಕರಾರು ಅರ್ಜಿ ಸಲ್ಲಿಸಲಾಗಿದೆ ಎಂದರು.

Related posts: