ಗೋಕಾಕ:ಮಹಾನ್ ವ್ಯಕ್ತಿಗಳ ತತ್ವಾದರ್ಶ ಬೆಳೆಸಿಕೊಳ್ಳಬೇಕು : ಜಿ.ಎಂ.ಕಮತ
ಮಹಾನ್ ವ್ಯಕ್ತಿಗಳ ತತ್ವಾದರ್ಶ ಬೆಳೆಸಿಕೊಳ್ಳಬೇಕು : ಜಿ.ಎಂ.ಕಮತ
ಗೋಕಾಕ ಸೆ 6 : ಭಾರತೀಯ ಇತಿಹಾಸ ಪರಂಪರೆಯಲ್ಲಿ ಗುರುವಿಗೆ ಅಧಿಕ ಮಹತ್ವವಿದೆ. ಗುರುವಿಗೆ ಕ್ರಿಯಾತ್ಮಕ ಶಕ್ತಿಯಿದ್ದು, ಇಂದಿನ ಶಿಕ್ಷಕರು ತಮ್ಮ ತಮ್ಮ ಕರ್ತವ್ಯಗಳನ್ನು ನಿಷ್ಠೆ-ಪ್ರಾಮಾಣಿಕತೆಯಿಂದ ನಿಭಾಯಿಸಿದರೆ ಜಗತ್ತಿನಲ್ಲಿ ಸರ್ವಶ್ರೇಷ್ಠ ಸಮಾಜ ನಿರ್ಮಿಸಲು ಸಾಧ್ಯವೆಂದು ಪ್ರಾಚಾರ್ಯ ಜಿ.ಎಂ.ಕಮತ ಅಭಿಪ್ರಾಯಿಸಿದರು.
ಮರಡಿಮಠದ ಶ್ರೀ ಕಾಡಸಿದ್ಧೇಶ್ವರ ಶಿಕ್ಷಣ ಸಮಿತಿಯ ಶ್ರೀ ಅದೃಶ್ಯ ಗುರುಸಿದ್ದೇಶ್ವರ ಪದವಿ ಮಹಾವಿದ್ಯಾಲಯದಲ್ಲಿ ಬುಧವಾರ ಜರುಗಿದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಮುಖ್ಯ ಅತಿಥಿಯಾಗಿ ಸಾಹಿತಿ ಪ್ರೊ. ರಾಜು ಕಂಬಾರ ಮಾತನಾಡಿ, ಜಗತ್ತಿನಲ್ಲಿ ಗುರುವಿಗೆ ಉನ್ನತ ಸ್ಥಾನಮಾನವಿದೆ. ಗುರುವು ಸರ್ವಶ್ರೇಷ್ಠನಾಗಿದ್ದು, ಮಕ್ಕಳಿಗೆ ಉತ್ತಮ ಸಂಸ್ಕಾರ ಕಲಿಸುವ ಮಹಾನ್ ಶಿಲ್ಪಿಯಾಗಿದ್ದಾನೆ. ಶಿಲ್ಪಿಯ ಜ್ಞಾನ ಮತ್ತು ಕ್ರಿಯೆಯ ಶಕ್ತಿಯ ಸ್ವರೂಪವಾದ ಶಿಲ್ಪದಂತೆ ವಿದ್ಯಾರ್ಥಿಗಳು ಗುರುವಿನ ಸನ್ಮಾರ್ಗದಲ್ಲಿ ಬೆಳೆದು ವಿಶ್ವದ ಮಾನ್ಯತೆ ಪಡೆದುಕೊಂಡಾಗ ಗುರುಶಿಲ್ಪಿಗೆ ಬದುಕಿನ ಸಾರ್ಥಕತೆ ದೊರೆತಂತಾಗುತ್ತದೆ. ಇಂದಿನ ವಿದ್ಯಾರ್ಥಿಗಳು ಗುರು-ಹಿರಿಯರನ್ನು ಗೌರವಿಸುವ ಮೂಲಕ ಡಾ. ಸರ್ವಪಲ್ಲಿ ರಾಧಾಕೃಷ್ಣನ್, ಎ.ಪಿ.ಜೆ. ಅಬ್ದುಲ್ ಕಲಾಂ ನಂಥಹ ಮಹಾನ್ ವ್ಯಕ್ತಿಗಳ ತತ್ವಗಳನ್ನು ಬೆಳೆಸಿಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಇನ್ನೊರ್ವ ಅತಿಥಿಗಳಾದ ಪ್ರೊ. ವಿ.ಎಂ.ಮಾಳವದೆ ಮಾತನಾಡಿ, ವಿದ್ಯಾರ್ಥಿಗಳಲ್ಲಿಯ ಅಜ್ಞಾನ ಅಳಿಸಿ ಸುಜ್ಞಾನ ಬೆಳೆಸುವ ಮಹಾನ್ ಅಕ್ಷರಕಾಯಕ ಯೋಗಿ ಗುರುವಾಗಿದ್ದಾನೆ. ಗುರುವಿನ ಜ್ಞಾನದ ಬೆಳಕಿನಲ್ಲಿ ವಿದ್ಯಾರ್ಥಿಗಳು ಉತ್ತಮ ಸಂಸ್ಕಾರವಂತರಾಗಿ ಬಾಳಬೇಕೆಂದು ಹೇಳಿದರು.
ಗುರುವಿಗೆ ವಿನಯತೆ ವಿಧೇಯತೆಯಿಂದ ವಿದ್ಯಾರ್ಥಿಗಳು ನಡೆದುಕೊಳ್ಳಬೇಕು. ಗುರುವಿನ ಮಹತ್ವವನ್ನು ಅರಿತುಕೊಂಡು ನಡೆದರೆ ಮಾತ್ರ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಯಶಸ್ವಿಯಾಗಲು ಸಾಧ್ಯವೆಂದು ಪ್ರೊ. ಎಸ್.ಎಚ್.ತಿಪ್ಪಣ್ಣವರ ಹೇಳಿದರು. ಗುರುವಿನ ಮಹತ್ವ ಕುರಿತು ವಿದ್ಯಾರ್ಥಿಗಳಾದ ಕು.ಭಾಗ್ಯಶ್ರೀ ಶಿಳ್ಳಿ, ಕು.ಸುರೇಶ ಅಂಬಲಿ ಅನಿಸಿಕೆಗಳನ್ನು ಹೇಳಿದರು.
ಪ್ರಾಚಾರ್ಯ ಜಿ.ಎಂ. ಕಮತ ಅವರು ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಶಿಕ್ಷಕರಿಗಾಗಿ ವಿವಿಧ ಮನರಂಜನಾ ಕಾರ್ಯಕ್ರಮಗಳನ್ನು ವಿದ್ಯಾರ್ಥಿಗಳು ಆಯೋಜಿಸಿದ್ದರು.
ಕಾರ್ಯಕ್ರಮದಲ್ಲಿ ಪ್ರೊ. ಕೆ.ಎನ್.ಕಾಂಬಳೆ, ಪ್ರೊ. ಅಶ್ವಿನಿ ಹಳೇಮನಿ, ಪ್ರೊ. ನಿಶಾ ಕಾಂಬಳೆ, ಪ್ರೊ. ಜೆ.ವಿ.ಕಡಗದ ಉಪಸ್ಥಿತರಿದ್ದರು. ಕಾಲೇಜಿನ ಎಲ್ಲ ವಿದ್ಯಾರ್ಥಿ ಪ್ರತಿನಿಧಿಗಳು, ವಿದ್ಯಾರ್ಥಿಗಳು ಭಾಗವಹಿಸಿದ್ದರು.
ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ವಿದ್ಯಾರ್ಥಿ ಮುಖ್ಯ ಪ್ರತಿನಿಧಿ ರವಿ ನಾಯ್ಕ ಸ್ವಾಗತಿಸಿದರು. ಕು. ಪ್ರತಿಭಾ ಮಾದಗೌಡ್ರ ಹಾಗೂ ಕು.ಪರಶುರಾಮ ಕಿತ್ತೂರ ನಿರೂಪಿಸಿದರು. ಕು. ರುಕ್ಮವ್ವ ಪರಸಪ್ಪಗೋಳ ವಂದಿಸಿದರು.